ಸಂಸದರ ಪ್ರಯತ್ನ, ಪೊಲೀಸರ ದಕ್ಷತೆಯಿಂದ ವಿಫಲವಾದ ಕೋಮು ಗಲಭೆಯ ಸಂಚು

Update: 2016-06-29 17:57 GMT

ಮಲೇರ್ಕೋಟ್ಲಾ, ಜೂ.29: ಇತ್ತೀಚೆಗೆ ಪವಿತ್ರ ಕುರ್‌ಆನ್ ಗ್ರಂಥಕ್ಕೆ ಬೆಂಕಿ ಹಚ್ಚಿ ಕೋಮು ಗಲಭೆ ಸೃಷ್ಟಿಸುವ ಸಂಚೊಂದು ಸ್ಥಳೀಯ ಸಂಸದರ ವಿಶೇಷ ಪ್ರಯತ್ನ ಹಾಗೂ ಪಂಜಾಬ್ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ವಿಫಲಗೊಂಡಿದೆ. ಕುರ್‌ಆನ್‌ಗೆ ಬೆಂಕಿ ಹಚ್ಚಿ ಕೋಮುದ್ವೇಷ ಹರಡಲು ಪಿತೂರಿ ನಡೆಸಿದ್ದ ಉದ್ಯಮಿ ವಿಜಯ್ ಕುಮಾರ್ ಹಾಗೂ ಆತನ ಇಬ್ಬರು ಸಹಚಚರನ್ನು ಪೊಲೀಸರು ಬುಧವಾರ ಬಂಧಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.ಜನಪ್ರತಿನಿಧಿಗಳು ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ನಡೆಸದೆ ಜನರ ಜಡುವೆ ಪರಸ್ಪರ ಸೌಹಾರ್ದ ಮೂಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಹಾಗೂ ಪೊಲೀಸರು ದಕ್ಷವಾಗಿ ಕಾರ್ಯನಿರ್ವಹಿಸಿದರೆ ಸಮಾಜವಿರೋಧಿಗಳನ್ನು ಸದೆಬಡಿಯಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಮಲೇರ್ಕೋಟ್ಲಾ ಪಂಜಾಬ್‌ನ ಏಕೈಕ ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶ. ಹಿಂದಿನಿಂದಲೂ ಈ ಪ್ರದೇಶ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿದೆ. 1947ರ ದೇಶವಿಭಜನೆಯ ಭಾರೀ ಹಿಂಸಾಚಾರದ ಸಂದರ್ಭದಲ್ಲೂ ಮಲೇರ್ಕೋಟ್ಲಾ ಬಹುತೇಕ ಶಾಂತಿಯುತವಾಗಿತ್ತು. ಇಂತಹ ಪ್ರದೇಶದಲ್ಲಿ ಕೋಮುದ್ವೇಷ ಹರಡಲು ಪೂರ್ವಾಗ್ರಹಪೀಡಿತ ಉದ್ಯಮಿ ವಿಜಯ್ ಕುಮಾರ್ ಸಂಚು ಹೂಡಿದ್ದ. ಇದರ ಭಾಗವಾಗಿ ಆತ ಇನ್ನಿಬ್ಬರು ಸಹಚರರೊಂದಿಗೆ ಸೇರಿ ಕುರ್‌ಆನ್‌ಗೆ ಬೆಂಕಿ ಹಚ್ಚಿದ್ದ.

ಆದರೆ, ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯ ಸಂಸದ ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್, ಶಾಂತಿ ಸುವ್ಯವಸ್ಥೆ ಕಾಪಾಡಲು ಜನರ ಮನಮುಟ್ಟುವಂತೆ ಮನವಿ ಮಾಡಿದರು. ಈ ಕೃತ್ಯದ ಹಿಂದೆ ರಾಜಕೀಯ ಸಂಚಿದೆ. ಈ ಪ್ರದೇಶದ ಸೌಹಾರ್ದವನ್ನು ಕೆಡಿಸುವ ಉದ್ದೇಶದಿಂದ ಈ ಕೃತ್ಯ ನಡೆದಿದೆ. ಹಾಗಾಗಿ ಇದನ್ನು ಯಶಸ್ವಿಯಾಗಲು ಬಿಡಬೇಡಿ, ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಪ್ರಾಮಾಣಿಕ ಕಳಕಳಿಯೊಂದಿಗೆ ಅವರು ಜನರನ್ನು ವಿನಂತಿಸಿದರು. ಇದೇ ಸಂದರ್ಭದಲ್ಲಿ ಪೊಲೀಸರೂ ತಡಮಾಡದೆ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದರಿಂದ ಸಂಭಾವ್ಯ ಅನಾಹುತವೊಂದು ತಪ್ಪಿಹೋಗಿದೆ.

ಸಂಸದರ ಭಾಷಣದ ವೀಡಿಯೊ ನೋಡಿ

Full View

ಕೃಪೆ:catchnews.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News