ಸಂಸದರ ಬೇಡಿಕೆಯಂತೆ ಜಿಲ್ಲಾಧಿಕಾರಿ ‘ಮಾಪ್’ ಕೇಳಿದ್ದು ಹೀಗೆ !

Update: 2016-07-02 08:42 GMT

ಕೋಝಿಕ್ಕೋಡ್, ಜು.2: ಕೋಝಿಕ್ಕೋಡ್ ಜಿಲ್ಲಾಧಿಕಾರಿ ಪ್ರಶಾಂತ್ ಅವರ ಫೇಸ್‌ಬುಕ್ ಪೋಸ್ಟ್ ಒಂದು ವೈರಲ್ ಆಗಿ ಬಿಟ್ಟಿದೆ. ಈ ಪೋಸ್ಟ್ ನಲ್ಲಿ ಅವರು ನಕ್ಷೆ (ಮಾಪ್) ಒಂದನ್ನು ಅಪ್‌ಲೋಡ್ ಮಾಡಿದ್ದಾರೆ.ಈ ಪೋಸ್ಟ್ ಹಿಂದಿನ ಕಥೆ ಕುತೂಹಲಕಾರಿ.

ಇತ್ತೀಚೆಗೆ ಸ್ಥಳೀಯ ಕಾಂಗ್ರೆಸ್ ಸಂಸದ ಎಂ.ಕೆ. ರಾಘವನ್ ಜಿಲ್ಲಾಧಿಕಾರಿ ಪ್ರಶಾಂತ್ ಕ್ಷಮೆ ಯಾಚಿಸಬೇಕೆಂದು ಹೇಳಿದ್ದರು. ಜಿಲ್ಲಾಡಳಿತ ಉದ್ದೇಶಪೂರ್ವಕವಾಗಿ ತಮ್ಮ ಕ್ಷೇತ್ರದಲ್ಲಿ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಾದ ಯೋಜನೆಗಳ ಬಿಲ್ ಪಾವತಿಸಲು ವಿಳಂಬಿಸಿತ್ತೆಂಬುದು ಸಂಸದರ ಅಳಲಾಗಿದೆ.

ಇದಕ್ಕೆ ಬದಲಾಗಿ ಆ ಐಎಎಸ್ ಅಧಿಕಾರಿ ಮಾಡಿದ್ದೇನು ಗೊತ್ತೇ ? ಫೇಸ್‌ಬುಕ್ ನಲ್ಲಿ ‘ಮಾಪ್’ ಒಂದನ್ನು ಪೋಸ್ಟ್ ಮಾಡಿದರು. ಮಲಯಾಳಂ ಭಾಷೆಯಲ್ಲಿ ಮಾಪ್ ಎಂದರೆ ಕ್ಷಮೆಯೆಂದು ಅರ್ಥ.

ಫೇಸ್‌ಬುಕ್‌ನಲ್ಲಿ ಪ್ರಶಾಂತ್ ಅವರು ಸಾಕಷ್ಟು ಜನಪ್ರಿಯರಾಗಿರುವುದರಿಂದ ಅವರ ಈ ಪೋಸ್ಟ್ ಬಹಳ ಬೇಗನೇ ವೈರಲ್ ಆಗಿ ಬಿಟ್ಟಿತ್ತು. ಆದರೆ ಈ ಪೋಸ್ಟ್ ಯಾರನ್ನೂ ಅವಮಾನಿಸುವ ಉದ್ದೇಶ ಹೊಂದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.

‘‘ಪ್ರತಿಯೊಬ್ಬರ ಪ್ರೈವೆಸಿಯನ್ನು ಇನ್ನೊಬ್ಬರು ಗೌರವಿಸಬೇಕು. ಸರಕಾರಿ ಕಡತವೊಂದಕ್ಕೆ ಸಹಿ ಹಾಕುವುದು ಸಾಮಾಜಿಕ ತಾಣದಲ್ಲಿ ಕಮೆಂಟ್ ಪೋಸ್ಟ್ ಮಾಡಿದಷ್ಟು ಸುಲಭವಲ್ಲ,’’ಎಂದು ಪ್ರಶಾಂತ್ ಪ್ರತಿಕ್ರಿಯಿಸಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿಯೊಂದು ತಿಳಿಸಿದೆ.

ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆಯ ಕೆಲಸದ ಪುನರ್ ಪರಿಶೀಲನೆ ನಡೆಸಿದ ನಂತರವೇ ಬಿಲ್ ಗಳನ್ನು ಪಾವತಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದು ಸಂಸದರಿಗೆ ಪಥ್ಯವಾಗಿರಲಿಲ್ಲ. ಇದು ತಮ್ಮ ಅವಮಾನಕ್ಕೆ ಸಮವೆಂದು ತಿಳಿದ ಅವರು ಜಿಲ್ಲಾಧಿಕಾರಿ ಕ್ಷಮೆ ಕೋರಬೇಕೆಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News