ಗಡ್ಕರಿ ಕೂಲ್

Update: 2016-07-02 17:25 GMT

ಗಡ್ಕರಿ ಕೂಲ್

ಅಂತೂ ಕೇಂದ್ರ ಸಂಪುಟ ಪುನಾರಚನೆಗೆ ಕಾಲ ಕೂಡಿ ಬಂದಿದೆ. ಮೋದಿ ಸರಕಾರಕ್ಕೆ ಎರಡು ವರ್ಷಗಳು ತುಂಬಿದ ಬಳಿಕ ನಡೆಯುವ ಈ ಪ್ರಕ್ರಿಯೆಯಲ್ಲಿ ಕೆಲವು ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಹಾಗೂ ಇನ್ನು ಕೆಲವರಿಗೆ ಖೊಕ್ ದೊರೆಯಲಿದೆ. ಆದರೆ ಕೆಲವು ಸಚಿವರು ಈಗ ತಮ್ಮ ಬಗ್ಗೆ ಹಾಗೂ ತಾವು ಕೈಗೊಂಡಿದ್ದ ಕೆಲಸ ಕಾರ್ಯಗಳಿಗೆ ಅಬ್ಬರದ ಪ್ರಚಾರವನ್ನು ನೀಡುವಲ್ಲಿ ತಲ್ಲೀನರಾಗಿದ್ದಾರೆ. ಆದರೆ ಓರ್ವ ಸಚಿವ ಮಾತ್ರ ಇದಕ್ಕೆ ಹೊರತಾಗಿದ್ದಾರೆ. ಕೇಂದ್ರ ಸಾರಿಗೆ, ಹೆದ್ದಾರಿ ಮತ್ತು ಶಿಪ್ಪಿಂಗ್ ಸಚಿವ ನಿತಿನ್ ಗಡ್ಕರಿ, ಸಂಪುಟ ಪುನಾರಚನೆಯ ಬಗ್ಗೆ ಆತಂಕಗೊಂಡಿಲ್ಲ. ಅವರೀಗ ಹಾಯಾಗಿ ಯುರೋಪ್‌ನಲ್ಲಿ ತನ್ನ ಕುಟುಂಬದೊಂದಿಗೆ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ಅವರಿಗೆ ತನ್ನ ಕಾರ್ಯನಿರ್ವಹಣೆಯ ಬಗ್ಗೆ ಸಂಪೂರ್ಣ ಭರವಸೆಯಿದೆ. ಅವರು ಪ್ರಧಾನಿಯವರಿಂದ ರಜೆ ಕೇಳಿ ಪಡೆದಿದ್ದಾರೆನ್ನಲಾಗಿದೆ. ಎಲ್ಲಾ ದೃಷ್ಟಿಯಿಂದಲೂ ಅವರೀಗ ಆತ್ಮವಿಶ್ವಾಸ ತುಂಬಿರುವ ವ್ಯಕ್ತಿಯಾಗಿದ್ದಾರೆ. ಆದರೆ ಇತರ ಬಹುತೇಕ ಸಚಿವರೀಗ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.

ಜೇಟ್ಲಿಯ ನಂ.1 ಶತ್ರು

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಈಗ ಕೇಂದ್ರ ಸಂಪುಟದ ಅತ್ಯಂತ ಚಿಂತಾಗ್ರಸ್ತ ವ್ಯಕ್ತಿಯಾಗಿದ್ದಾರೆ.. ಸಂಪುಟ ಪುನಾರಚನೆ ಸಾಧ್ಯತೆಗಳ ಹಿನ್ನೆಲೆಯಲ್ಲಿ ಅವರ ಸಚಿವ ಸ್ಥಾನದ ಮೇಲೂ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ಆದಾಗ್ಯೂ ಅವರು ಮೋದಿಗೆ ತುಂಬಾ ನಿಕಟರಾಗಿರುವುದರಿಂದ ಆ ಖಾತೆಯು ಅವರ ಕೈತಪ್ಪುವ ಸಾಧ್ಯತೆ ತುಂಬಾ ವಿರಳ. ಆದರೆ ಅವರ ವಿರುದ್ಧ ಸುಬ್ರಮಣಿಯನ್ ಸ್ವಾಮಿ ನಡೆಸುತ್ತಿರುವ ಟೀಕಾಪ್ರಹಾರದ ಬಗ್ಗೆ ಗಾಢವಾದ ಪ್ರಶ್ನೆಗಳು ಉದ್ಭವಿಸಿವೆ. ಇಷ್ಟಕ್ಕೂ ಜೇಟ್ಲಿ ವಿರುದ್ಧ ಗುರಿಯಿಡುವುದಕ್ಕೆ ಸ್ವಾಮಿಗೆ ಕುಮ್ಮಕ್ಕು ನೀಡುತ್ತಿರುವ ವರು ಯಾರು?. ಈ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ಹಣಕಾಸು ಸಚಿವರು ಬಯಸಿ ದ್ದಾರೆ. ತನ್ನ ವಿರುದ್ಧ ದಾಳಿ ನಡೆಸಲು ಸ್ವಾಮಿಗೆ ಲೈಸೆನ್ಸ್ ನೀಡಿದವರು ಯಾರೆಂಬ ಬಗ್ಗೆ ಮಾಧ್ಯಮ ರಂಗದಲ್ಲಿರುವ ತನ್ನ ಖಾಸಾ ದೋಸ್ತಿಗಳಿಂದ ಮಾಹಿತಿಯನ್ನು ಕೆದಕಲು ಜೇಟ್ಲಿ ಪ್ರಯತ್ನಿಸುತ್ತಿದ್ದಾರೆ. ಇದು ಆರೆಸ್ಸೆಸ್ ಅಥವಾ ಯಾರಾದರೂ ಸರಕಾರದೊಳಗಿರುವವರ ಕೃತ್ಯವೇ ? ಅಥವಾ ಸ್ವಾಮಿ ಏಕಾಂಗಿಯಾಗಿ ನಡೆಸುತ್ತಿರುವ ದಾಳಿಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ.

ಅಖ್ತರ್‌ಗೆ ನಷ್ಟ, ಸಿಬಲ್‌ಗೆ ಲಾಭ

ಇನ್ನೊಂದು ಅವಧಿಗೆ ರಾಜ್ಯಸಭೆ ಪ್ರವೇಶಿಸುವ ಅವಕಾಶವು ಕವಿ-ಗೀತರಚನೆಕಾರ ಜಾವೇದ್ ಅಖ್ತರ್ ಅವರಿಗೆ ಕೂದಲೆಳೆಯ ಅಂತರದಲ್ಲಿ ತಪ್ಪಿಹೋಗಿದೆ. ರಾಷ್ಟ್ರಪತಿಯವರ ಕೋಟಾದಲ್ಲಿ ರಾಜ್ಯಸಭಾ ಸದಸ್ಯರಾಗಿ ನಾಮಕರಣಗೊಂಡು, ಈಗ ತಾನೆ ನಿವೃತ್ತರಾಗಿರುವ ಅಖ್ತರ್‌ಗೆ ಕಾಂಗ್ರೆಸ್ ರಾಜ್ಯಸಭಾ ಸೀಟಿನ ಕೊಡುಗೆಯನ್ನು ನೀಡಿತ್ತು. ಆದರೆ ಈ ಹಿಂದೆ ಕಾಂಗ್ರೆಸನ್ನು ಕಟುವಾಗಿ ಟೀಕಿಸಿದ್ದ ಜಾವೇದ್, ಕೊಡುಗೆಯನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅವರ ಕೆಲವು ಆಪ್ತರು, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದರು. ಆದರೆ ಈ ಚಿಂತನೆಗೆ ‘ನಂ.10 ಜನಪಥ’ದಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತೆನ್ನಲಾಗಿದೆ. ಈ ಹೊತ್ತಿಗೆ, ಸಹಮತದ ನಿರ್ಧಾರವೊಂದು ಏರ್ಪಟ್ಟು, ಕಪಿಲ್‌ಸಿಬಲ್ ಅವರು ಸಮಾಜವಾದಿ ಹಾಗೂ ಇತರ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಕಾಂಗ್ರೆಸ್‌ನಿಂದ ರಾಜ್ಯಸಭಾ ಟಿಕೆಟ್ ಪಡೆಯುವಲ್ಲಿ ಸಫಲರಾದರು.

ರಾಹುಲ್ ಆಗಮನಕ್ಕಾಗಿ ಕಾಯುತ್ತಿರುವವರು!

ಪರಿಸ್ಥಿತಿ ನಿರ್ಣಾಯಕ ಹಂತವನ್ನು ತಲುಪಿದಾಗ ರಾಹುಲ್‌ಗಾಂಧಿ ರಜೆಗೆ ತೆರಳಲು ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಕಾಂಗ್ರೆಸಿಗರು, ರಾಹುಲ್ ಯಾವ ಸ್ಥಳಗಳಲ್ಲಿ ರಜಾ ದಿನಗಳನ್ನು ಕಳೆಯುತ್ತಾರೆಂಬ ಬಗ್ಗೆ ಊಹಾಪೋಹಗಳಲ್ಲಿ ನಿರತರಾಗಿರುತ್ತಾರೆ(ಈ ಬಾರಿ ಅವರು ಲಂಡನ್‌ಗೆ ತೆರಳಿದ್ದಾರೆಂಬ ಬಗ್ಗೆ ವದಂತಿಗಳಿವೆ). ಆದಾಗ್ಯೂ, ರಾಹುಲ್ ಅವರ ಪುನಾರಾಗಮನದ ದಿನಾಂಕವನ್ನು ತಿಳಿದುಕೊಳ್ಳಲು ಪಕ್ಷದ ನಾಯಕರು ಕಾತುರರಾಗಿದ್ದಾರೆ. ಎಐಸಿಸಿ ಪುನಾರಚನೆಗೊಳ್ಳಲಿರುವ ಹಿನ್ನೆಲೆಯಲ್ಲಿ ರಾಹುಲ್ ಅವರ ಆಗಮನದ ದಿನಾಂಕವು ಹೆಚ್ಚಿನ ಮಹತ್ವವನ್ನು ಪಡೆದಿದೆ. ರಾಹುಲ್ ತನ್ನ ತಾಯಿಯ ಹೆಜ್ಜೆಯನ್ನು ಅನುಸರಿಸಲಿದ್ದಾರೆಯೇ ಹಾಗೂ ತಮ್ಮ ಮೇಲೆ ನಂಬಿಕೆಯಿಡುವರೇ ಎಂಬುದನ್ನು ತಿಳಿದುಕೊಳ್ಳಲು ಪಕ್ಷದಲ್ಲಿನ ಹಿರಿಯ ತಲೆಗಳು ಬಯಸುತ್ತಿವೆ. ಇನ್ನು ಪಕ್ಷದ ಯುವನಾಯಕರು, ವಯೋವೃದ್ಧರನ್ನು ಮೂಲೆಗೆ ಸರಿಸಿ, ಪಕ್ಷಕ್ಕೆ ಹೊಸ ರಕ್ತವನ್ನು ತುಂಬಲು ಇದು ಸಕಾಲವೆಂದು ಭಾವಿಸಿದ್ದಾರೆ. ಆದರೆ ರಾಹುಲ್ ಬಾಬಾ ಯಾವಾಗ ವಾಪಸಾಗುತ್ತಾರೆಂಬುದೇ ಈಗ ಉದ್ಭವಿಸಿರುವ ಮುಖ್ಯ ಪ್ರಶ್ನೆಯಾಗಿದೆ.

ಬಾಪ್ ಬೇಟೆ ಕಿ ಲಡಾಯಿ

ಉತ್ತರಪ್ರದೇಶದ ಯಾದವ್ ಕುಟುಂಬದಲ್ಲಿ ಭುಗಿಲೆದ್ದ ಇನ್ನೊಂದು ಭಿನ್ನಮತದ ಬೆಂಕಿಯನ್ನು ನಂದಿಸಲಾಗಿದೆ. ಸಮಾಜವಾದಿ ಪಕ್ಷದೊಂದಿಗೆ ಕಾಮಿ ಏಕ್ತಾದಳದ ವಿಲೀನಗೊಂಡಿರುವುದು ಈ ಸಂಘರ್ಷಕ್ಕೆ ಮುಖ್ಯ ಕಾರಣವಾಗಿದೆ. ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಖಿಲೇಶ್ ಯಾದವ್ ತನ್ನ ತಂದೆ ಹಾಗೂ ಪಕ್ಷದ ವರಿಷ್ಠರಾದ ಮುಲಾಯಂ ಸಿಂಗ್ ಯಾದವ್ ವಿರುದ್ಧ ಧ್ವನಿಯೆತ್ತಿರುವುದು ಪಕ್ಷದ ಕಾರ್ಯಕರ್ತರಿಗೆ ಕೇಳಿಸಿದೆ. ಕ್ಯೂಇಡಿ ಪಕ್ಷದ ವಿಲೀನಕ್ಕೆ ಸಂಬಂಧಿಸಿ, ಅದರಲ್ಲೂ ಮುಖ್ಯವಾಗಿ ಪ್ರಸ್ತುತ ಜೈಲಿನಲ್ಲಿರುವ ಮುಖ್ತಾರ್ ಅನ್ಸಾರಿಯವರ ಸೇರ್ಪಡೆಯ ವಿಚಾರವಾಗಿ ತಂದೆ-ಮಗನ ನಡುವೆ ಜಟಾಪಟಿಯಾಗಿತ್ತು. ಅನ್ಸಾರಿಯವರನ್ನು ಪಕ್ಷಕ್ಕೆ ಸೇರಿಸಿದರೆ ತಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲೂ ಸಿದ್ಧನಿರುವುದಾಗಿ ಅಖಿಲೇಶ್, ತನ್ನ ತಂದೆಗೆ ಬೆದರಿಕೆ ಕೂಡಾ ಹಾಕಿದ್ದರು. ಇದರಿಂದ ಸಿಡಿಮಿಡಿಗೊಂಡ ಮುಲಾಯಂ ಬಿರುಗಾಳಿಯಂತೆ ಸಿಎಂ ಕೊಠಡಿಯಿಂದ ಹೊರಬಂದಿದ್ದರು. ಆದರೆ ಇದು ಅಮಿತ್ ಶಾಗೆ ಒಳ್ಳೆಯ ಸುದ್ದಿಯೇನೂ ಅಲ್ಲ. ಮಾಯಾವತಿಗೆ ತಲೆನೋವುಂಟಾಗುವ ರೀತಿಯಲ್ಲಿ ಹೋರಾಡಬಲ್ಲ, ಏಕೀಕೃತ ಸಮಾಜವಾದಿ ಪಕ್ಷವನ್ನು ಅವರು ಬಯಸುತ್ತಿದ್ದಾರೆ. ಒಂದು ವೇಳೆ ಮುಸ್ಲಿಮರು ಸಮಾಜವಾದಿ ಪಕ್ಷದಲ್ಲಿಯೇ ಉಳಿದುಕೊಂಡರೆ, ಬಿಜೆಪಿಗೆ ಮುಂದಿನ ವರ್ಷದ ಚುನಾವಣೆಯಲ್ಲಿ ಜಯಗಳಿಸುವ ಅವಕಾಶವಿದೆ. ಒಂದು ವೇಳೆ ಮುಸ್ಲಿಮರು, ಮಾಯಾವತಿಯನ್ನು ಬೆಂಬಲಿಸಿದರೆ, ಬಿಜೆಪಿಯ ಆಟ ಮುಗಿದಂತೆ. ಹೀಗಾಗಿ ತಂದೆ-ಮಗನ ಸಂಬಂಧ ಚೆನ್ನಾಗಿರಬೇಕೆಂದು ಅಮಿತ್ ಶಾ ಪ್ರಾರ್ಥಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News