ಹೊಸ ರುಚಿಯ ಅನುಭವ ನೀಡಿದ ಹಲಸಿನ ಹಬ್ಬ

Update: 2016-07-02 18:44 GMT

ಘಮಘಮ ಪರಿಮಳ ಬೀರುವ ವಿವಿಧ ಜಾತಿಯ ಹಲಸಿನ ಹಣ್ಣುಗಳು, ಬಾಯಲ್ಲಿ ನೀರುಣಿಸುವ ಹಲಸಿನ ಖಾದ್ಯಗಳು, ಹೊಸ ರುಚಿಯ ಅನುಭವ ನೀಡುವ ಹಲಸಿನ ವಿವಿಧ ತಿಂಡಿತಿನಿಸುಗಳು, ಹಲಸಿನ ಕಾಫಿ ಪುಡಿ, ವಿವಿಧ ಜಾತಿಯ ಹಲಸಿನ ಗಿಡಗಳು ಇಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆರಂಭಗೊಂಡ ಎರಡು ದಿನಗಳ ಹಲಸಿನ ಹಬ್ಬದಲ್ಲಿ ಜನಾಕರ್ಷಣೆಗೊಂಡವು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಪಕೇರಿ ಹೋಬಳಿಯ ರೈತರಾದ ಮುನಿರಾಜು ಕಾಚಳ್ಳಿ, ನಟರಾಜ್, ರಮೇಶ್, ಕೃಷ್ಣಪ್ಪ, ನಾಗರಾಜಪ್ಪ ತಂದ ಸುಮಾರು ಮೂರು ಟನ್ ತೂಕದ 500ಕ್ಕೂ ಅಧಿಕ ವಿವಿಧ ಜಾತಿಯ ಅತ್ಯಂತ ಸಿಹಿಯಾದ ಹಲಸುಗಳಿಗೆ ಮೇಳ ದಲ್ಲಿ ಹೆಚ್ಚಿನ ಬೇಡಿಕೆಗಳು ಕಂಡುಬಂದವು. ಜನ ಮುಗಿಬಿದ್ದು ಹಲಸಿನ ರುಚಿ ನೋಡಿ ಖರೀದಿಸಿದರು. ಇವರಲ್ಲಿರುವ ಶಿವರಾತ್ರಿ ಹಲಸು, ಏಕಾದಶಿ ಹಲಸು ಹಳದಿ ಬಣ್ಣದ್ದಾದರೆ, ಚಂದ್ರ ಬಕ್ಕೆ ಹಲಸು ಕೆಂಪು ಬಣ್ಣದ್ದಾಗಿದೆ. ಅದೇ ರೀತಿ ಕೊಬ್ಬರಿ ಹಲಸು ಬಿಳಿ ಬಣ್ಣದ್ದಾಗಿದೆ. ಈ ಎಲ್ಲ ಹಲಸಿನ ಹಣ್ಣುಗಳ ವಿಶೇಷತೆ ಅಂದರೆ ಅತ್ಯಂತ ಸಿಹಿಯಾಗಿರುವುದು. ‘‘ಈ ಮೇಳದಲ್ಲಿ ನಮ್ಮ ಹಲಸಿಗೆ ಉತ್ತಮ ಬೇಡಿಕೆ ಬಂದಿದ್ದು, ಬಹುತೇಕ ಮಂದಿ ಖರೀದಿಸಿದ್ದಾರೆ. ನಮ್ಮ ಹೋಬಳಿಯಲ್ಲಿ ಸುಮಾರು ಐದು ಸಾವಿರ ರೈತರು ಹಲಸಿನ ಕೃಷಿ ಮಾಡುತ್ತಿದ್ದಾರೆ. ಇವುಗಳನ್ನು ಲಾಲ್‌ಬಾಗ್ ಮಾರುಕಟ್ಟೆಗೆ, ಮಂಗಳೂರಿನ ಕಾಮತ್ ಐಸ್‌ಕ್ರೀಮ್‌ಗೆ ಹಾಗೂ ವಿವಿಧ ಖಾದ್ಯ ಗಳನ್ನು ತಯಾರಿಸಲು ಕೊಡುತ್ತಿದ್ದೇವೆ’’ ಎನ್ನುತ್ತಾರೆ ರೈತ ನಟರಾಜ್. ಗಿಡ, ಖಾದ್ಯಗಳಿಗೆ ಬೇಡಿಕೆ:
ಬಂಟ್ವಾಳ ಬಿ.ಸಿ. ರೋಡಿನ ನರೇಂದ್ರ, ತನ್ನ ಮೂವರು ಗೆಳೆಯರೊಂದಿಗೆ ಸ್ಥಾಪಿಸಿರುವ ಸಣ್ಣ ಫ್ಯಾಕ್ಟರಿಯಲ್ಲಿ ತಯಾರಿಸಿರುವ ಹಲಸಿನ ವಿವಿಧ ಖಾದ್ಯಗಳನ್ನು ಈ ಮೇಳದಲ್ಲಿ ಇರಿಸಿದ್ದರು. ಹಲಸಿನ ಚಿಪ್ಸ್, ಮಾಂಬಳ, ಹಲ್ವ, ಹಪ್ಪಳ, ಬರ್ಫಿಗಳಿಗೆ ಜನರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ‘‘ಮಾರಾಟಕ್ಕೆ ತಂದಿರುವ ಎಲ್ಲ ಖಾದ್ಯಗಳು ಖಾಲಿಯಾಗಿವೆ. ಮೊದಲ ಅರ್ಧ ದಿನದಲ್ಲೇ 7-8 ಸಾವಿರ ರೂ. ವ್ಯವಹಾರ ಮಾಡಿದ್ದೇವೆ’’ ಎಂದು ನರೇಂದ್ರ ತಿಳಿಸಿದರು.
ಬ್ರಹ್ಮಾವರ ಪೇತ್ರಿ ಚೇರ್ಕಾಡಿಯ ಕೆ.ಎಸ್. ಪ್ರಸಾದ್ ಅವರ ಅನ್ನಪೂರ್ಣ ಪ್ಲಾಂಟ್‌ಟೆಕ್‌ನಿಂದ ಗಂಲೆಸ್, ಮಟ್ಟಂ, ಸರ್ವಋತು, ಚಂದ್ರ ಬಕ್ಕೆ, ರುದ್ರಾಕ್ಷಿ, ಜೇನು ಬಕ್ಕೆ ಹಲಸಿನ ಗಿಡಗಳನ್ನು ಇಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಇವರು ಆರಂಭದಲ್ಲಿ ನೂರು ಗಿಡಗಳನ್ನು ಮೇಳದಲ್ಲಿ ಇರಿಸಿದ್ದರು. ಆದರೆ ಜನರ ಬೇಡಿಕೆ ನೋಡಿ ಮತ್ತೆ ಒಂದಷ್ಟು ಗಿಡಗಳನ್ನು ತರಿಸಿದ್ದಾರೆ. ಅದೂ ಕೂಡ ಮಾರಾಟವಾಗಿವೆ. ಹಲಸಿನ ಗಿಡಗಳ ಖರೀದಿಯಲ್ಲೂ ಜನ ಹೆಚ್ಚಿನ ಉತ್ಸಾಹ ವ್ಯಕ್ತಪಡಿಸಿದ್ದಾರೆ.
‘ಕಸಿ ಕಟ್ಟಿ ನಾವು ಕೂಡ ಹಲಸಿನ ಗಿಡವನ್ನು ಬೆಳೆಸುತ್ತೇವೆ. ಹೆಚ್ಚಿನ ಬೇಡಿಕೆ ಬಂದರೆ ಹೊರಗಿನಿಂದ ತಂದು ಮಾರುತ್ತೇವೆ. ಮೊದಲ ದಿನ ಮಧ್ಯಾಹ್ನವೇ 150 ಹಲಸಿನ ಗಿಡಗಳು ಮಾರಾಟವಾಗಿವೆ.’ ಎಂದು ಕೆ.ಎಸ್.ಪ್ರಸಾದ್ ಹರ್ಷದಿಂದ ನುಡಿದರು.

ಹೊಸ ರುಚಿ ನೀಡಿದ ತಿನಿಸು:
ಕಾರ್ಕಳ ಸಾಣೂರಿನ ಶಂಕರ ಪ್ರಭು ಹಾಗೂ ಪ್ರಸಾದ್ ಅವರು ಸ್ಥಳದಲ್ಲೇ ಬಿಸಿಬಿಸಿ ಹಲಸಿನ ತಿಂಡಿತಿನಿಸುಗಳನ್ನು ಮಾಡಿ ಮಾರಾಟ ಮಾಡುತ್ತಿದ್ದರು. ಪದಾರ್ಥಕ್ಕೆ ಬಳಸುವ ಉಪ್ಪಿನಲ್ಲಿ ಹಾಕಿ ಇಟ್ಟ ಹಲಸಿನ ಸೊಳೆ, ಉಪ್ಪು ನೀರಿನಲ್ಲಿ ಬೇಯಿಸಿದ ಹಲಸಿನ ಹಣ್ಣಿನ ಬೀಜ ವಿಶೇಷ ವಾಗಿತ್ತು. 40ರೂ.ನಿಂದ 100ರೂ.ವರೆಗಿನ ಇವುಗಳ ಪ್ಯಾಕೆಟ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ಅದೇ ರೀತಿ ಹಲಸಿನ ಬೀಜದ ಚಟ್ಟಂಬಡೆ, ಹಣ್ಣಿನ ಜಾಮ್, ಮುಳುಕ, ಪತ್ತೋಳಿ, ಜ್ಯೂಸ್, ಕೇಸರಿಬಾತ್, ಬೋಂಡ, ಪೋಡಿ, ಹಲಸಿನ ಬೀಜದ ಹುಡಿಯಿಂದ ಮಾಡುವ ಬನ್ಸ್, ಚಪಾತಿ ಮೇಳದಲ್ಲಿ ವಿಶೇಷ ಆಕರ್ಷಣೆ ಯಾಗಿ ಜನತೆಗೆ ಹೊಸ ರುಚಿಯ ಅನುಭವ ನೀಡಿತು. ‘‘ಇವುಗಳನ್ನು ನಮ್ಮ ಅತ್ತೆಯಿಂದ ಕಲಿತದ್ದು. ಇಂದು ಇದಕ್ಕೆ ಬಹುಬೇಡಿಕೆ ಬರುತ್ತಿರುವುದರಿಂದ ಇದೇ ವ್ಯವಹಾರವನ್ನು ನಾವು ನಡೆಸುತ್ತಿದ್ದೇವೆ. ಮೇಳ ದಲ್ಲಿಯೂ ಈ ತಿಂಡಿಗಳಿಗೆ ಜನ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸಿ ರುಚಿ ಸವಿದಿದ್ದಾರೆ’’ ಎಂದು ಶಂಕರ ಪ್ರಭು ಅವರ ಪತ್ನಿ ನಂದಿನಿ ಪ್ರಭು ಪತ್ರಿಕೆಗೆ ತಿಳಿಸಿದರು.

ಜಾಗತಿಕವಾಗಿ ಇಂದು ಹಲಸಿನ ಬಗ್ಗೆ ಹೊಸ ಕುತೂಹಲ ಮೂಡಿದೆ. ಭಾರತದಲ್ಲಿ ಕೇರಳ ಮತ್ತು ಕರ್ನಾಟಕದಲ್ಲಿ ಹಲಸಿಗೆ ಹೆಚ್ಚಿನ ಪ್ರಾಮುಖ್ಯತೆ ಲಭಿಸುತ್ತಿದೆ. ಕೇರಳದಲ್ಲಿ ಇದರ ಬಗ್ಗೆ ಈಗಾಗಲೇ ಸಾಮೂಹಿಕ ಜಾಗೃತಿ ಬಂದಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಈ ಎರಡು ರಾಜ್ಯಗಳಲ್ಲಿ 100ಕ್ಕೂ ಅಧಿಕ ಹಲಸಿನ ಮೇಳಗಳು ನಡೆದಿವೆ. ಕರ್ನಾಟಕದಲ್ಲಿ ಹಲಸಿನ ಖಾದ್ಯ ಗಳನ್ನು ತಯಾರಿಸುವ ತರಬೇತಿ ಕೇಂದ್ರಗಳ ಕೊರತೆಯಿದೆ. ಈ ಬೆಳೆಯನ್ನು ಇಲ್ಲಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಕೇರಳದ ತ್ರಿಶೂರು ಹಾಗೂ ಕಣ್ಣೂರಿನಲ್ಲಿರುವ ಹಲಸಿನ ಸಂರಕ್ಷಣಾ ಪೂರ್ವ ಕೇಂದ್ರಗಳು ಸ್ಥಾಪನೆಯಾಗಬೇಕಾಗಿದೆ.
-ಶ್ರೀಪಡ್ರೆ, ಸಂಪಾದಕರು, ಅಡಿಕೆ ಪತ್ರಿಕೆ

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News