’ಬಿಜೆಪಿಯಿಂದ ಮೋಸ, ನನ್ನ ಮಗಳನ್ನು ನನ್ನಿಂದ ದೂರ ಮಾಡಿದರು’

Update: 2016-07-07 04:37 GMT

ವಾರಣಾಸಿ, ಜು.7: ಮಿಡ್ನಾಪುರದ ಅಪ್ನಾ ದಳ ಸಂಸದೆ ಅನುಪ್ರಿಯಾ ಪಾಟೀಲ್ ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೂತನ ಸಚಿವೆಯ ತಾಯಿ ಹಾಗೂ ಪಕ್ಷಾಧ್ಯಕ್ಷೆ ಕೃಷ್ಣಾ ಪಟೇಲ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗಳನ್ನು ನನ್ನಿಂದ ದೂರ ಮಾಡುವ ಮೂಲಕ ನಮ್ಮ ಪಕ್ಷಕ್ಕೆ ವಿಶ್ವಾಸ ದ್ರೋಹ ಎಸಗಿದೆ ಎಂದು ಅವರು ದೂರಿದ್ದಾರೆ.

ಬಿಜೆಪಿ ನಮ್ಮನ್ನು ಕುರ್ಮಿ ಜನಾಂಗದ ಮತ ಸೆಳೆಯಲು ಕಳೆದ ವಿಧಾನಸಬಾ ಚುನಾವಣೆಯಲ್ಲಿ ಬಳಸಿಕೊಂಡಿತ್ತು. ಇದೀಗ ನಮ್ಮ ಕುಟುಂಬವನ್ನು ಒಡೆದಿದೆ ಎಂದು ಅವರು ಸಿಟ್ಟು ಹೊರಹಾಕಿದ್ದಾರೆ. ಅಪ್ನಾದಳ ನಾಯಕತ್ವ ಸಂಬಂಧ ತಾಯಿ-ಮಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು.

ಕೃಷ್ಣಾ ಪಟೇಲ್ ಕಳೆದ ವರ್ಷ ಅನುಪ್ರಿಯಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಆಕೆಯನ್ನು ಸಚಿವೆ ಮಾಡುವ ಮುನ್ನ ಬಿಜೆಪಿ ನಮ್ಮ ಜತೆ ಮಾತುಕತೆಯನ್ನೂ ನಡೆಸಿಲ್ಲ. ನಮ್ಮ ಮೈತ್ರಿ ಪಕ್ಷವಾಗಿ ಅದು ಈ ಸಂಬಂಧ ಚರ್ಚೆ ನಡೆಸಬೇಕಿತ್ತು. ನಾವು ಇನ್ನು ಮುಂದೆ ಎನ್‌ಡಿಎ ಕೂಟದಲ್ಲಿ ಇರುವುದಿಲ್ಲ. ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ಕೃಷ್ಣಾ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಸಂಸ್ಥಾಪಕ ಸೋನೆಲಾಲ್ ಪಟೇಲ್ ಅವರ ಪರಂಪರೆಗೆ ಮಸಿ ಬಳಿಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News