ಬಾಂಗ್ಲಾದೇಶ ಭಯೋತ್ಪಾದಕ ದಾಳಿ: ತನಿಖೆಗಾಗಿ ಭಾರತದ ಎನ್‌ಎಸ್‌ಜಿ ತಂಡದ ಪ್ರಯಾಣ

Update: 2016-07-07 13:36 GMT

ಹೊಸದಿಲ್ಲಿ, ಜು.7: ಬಾಂಗ್ಲಾದೇಶದಲ್ಲಿ ಗುರುವಾರ ಈದ್ ಪ್ರಾರ್ಥನಾ ಸಭೆಯೊಂದರ ಮೇಲೆ ನಡೆದ ಬಾಂಬ್ ದಾಳಿ ಹಾಗೂ ಇತ್ತೀಚೆಗೆ ಅಲ್ಲಿನ ಖ್ಯಾತ ರೆಸ್ಟೋರೆಂಟ್ ಒಂದನ್ನು ಭಯೋತ್ಪಾದಕರು ವಶಪಡಿಸಿಕೊಂಡಿದ್ದ ಘಟನೆಗಳ ಕುರಿತು ‘ವಿಶ್ಲೇಷಣೆ ಹಾಗೂ ಅಧ್ಯಯನ’ ನಡೆಸುವುದಕ್ಕಾಗಿ ಭಾರತದ ರಾಷ್ಟ್ರೀಯ ಭದ್ರತಾ ಗಾರ್ಡ್‌ನ (ಎನ್‌ಎಸ್‌ಜಿ) ಅಧಿಕಾರಿಗಳ ವಿಶೇಷ ತಂಡವೊಂದು ಅಲ್ಲಿಗೆ ತೆರಳಲಿದೆ.

ಪರಿಸ್ಥಿತಿಯ ಪ್ರತ್ಯಕ್ಷ ಪರಾಮರ್ಷೆಗಾಗಿ ಭಯೋತ್ಪಾದಕ ದಾಳಿಗಳು ನಡೆದಿರುವ ಸ್ಥಳಗಳ ಭೇಟಿಗೆ ಅವಕಾಶ ನೀಡುವಂತೆ ಎನ್‌ಎಸ್‌ಜಿ ಮಾಡಿದ್ದ ಮನವಿಯನ್ನು ಬಾಂಗ್ಲಾದೇಶದ ವಿಶೇಷ ಪಡೆಗಳು ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಎನ್‌ಎಸ್‌ಜಿ ಅಧಿಕಾರಿಗಳ ತಂಡಕ್ಕೆ ಬಾಂಗ್ಲಾದೇಶಕ್ಕೆ ಹೋಗಲು ಅಧಿಕಾರ ನೀಡಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟಾನಂತರದ ವಿಶ್ಲೇಷಣೆ ಹಾಗೂ ಭಯೋತ್ಪಾದಕ ವಿರೋಧಿ ಕಾರ್ಯಚರಣೆಗಳಲ್ಲಿ ಪರಿಣತರನ್ನು ಒಳಗೊಂಡಿರುವ ಎನ್‌ಎಸ್‌ಜಿ ತಂಡವು, ಜು.1ರಂದು ಭಯೋತ್ಪಾದಕರು ಬೇಕರಿಯೊಂದನ್ನು ಸ್ವಾಧೀನಪಡಿಸಿಕೊಂಡು 22 ಮಂದಿಯ ಹತ್ಯೆ ಮಾಡಿರುವ ಘಟನೆಯನ್ನು ಅಧ್ಯಯನ ಮಾಡಲಿದೆ ಹಾಗೂ ಕಿಶನ್‌ಗಂಜ್‌ನಲ್ಲಿ ಗುರುವಾರ ನಡೆದ ಬಾಂಬ್ ದಾಳಿಯ ವಿಶ್ಲೇಷಣೆ ನಡೆಸಲಿದೆ.

ಎನ್‌ಎಸ್‌ಜಿ ತನ್ನ ಬಾಂಗ್ಲಾದೇಶದ ಸೋದ್ಯೋಗಿ ಸಂಸ್ಥೆಯೊಂದಿಗೆ ಸಮನ್ವಯದಿಂದ ಘಟನಾ ಸ್ಥಳಗಳ ಅಧ್ಯಯನ ನಡೆಸಲಿಚ್ಛಿಸಿದೆ. ಅವುಗಳ ಒಳನೋಟ ಪಡೆಯುವುದರಿಂದ ಉಭಯ ದೇಶಗಳ ನಡುವೆ ಭಯೋತ್ಪಾದನೆ ನಿಗ್ರಹ ಸಹಕಾರ ಹೆಚ್ಚುವುದಲ್ಲದೆ, ಪ್ರಮುಖ ಕಮಾಂಡೊ ಬಲದ ಕಾರ್ಯಾಚರಣೆ ಜ್ಞಾನದ ವೌಲ್ಯವರ್ಧನೆಯಾಗಲಿದೆಯೆಂದು ಅಧಿಕಾರಿಗಳು ಹೇಳಿದ್ದಾರೆ.

1984ರಲ್ಲಿ ಸ್ಥಾಪನೆಯಾಗಿರುವ ಎನ್‌ಎಸ್‌ಜಿ, ಒಕ್ಕೂಟ ಭಯೋತ್ಪಾದನಾ ವಿರೋಧಿ ಹಾಗೂ ಅಪಹರಣ ವಿರೋಧಿ ಕಮಾಂಡೊ ಕಾರ್ಯಪಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News