ಇಸ್ಲಾಮ್‌ಗೆ ತದ್ವಿರುದ್ಧ ಐಸಿಸ್

Update: 2016-07-07 18:01 GMT

ಲಕ್ನೋ, ಜು.7: ಬಾಂಗ್ಲಾದೇಶದಲ್ಲಿ ವಾರದೊಳಗೆ 2 ಭಯೋತ್ಪಾದಕ ದಾಳಿಗಳು ನಡೆದ ಬಳಿಕ, ಭಾರತದ ಹಿರಿಯ ಮುಸ್ಲಿಂ ವಿದ್ವಾಂಸ ರೊಬ್ಬರು ಭಯೋತ್ಪಾದನೆಯನ್ನು ಖಂಡಿಸಿದ್ದು, ಐಎಸ್‌ಐಎಸ್ಸನ್ನು (ಐಸಿಸ್) 'ಅನ್-ಇಸ್ಲಾಮಿಕ್' ಎಂದು ಕರೆದಿದ್ದಾರೆ.

ಗುರುವಾರ ನಡೆದ ಈದ್ ಸಾಮೂಹಿಕ ಪ್ರಾರ್ಥನೆಯ ವೇಳೆ ವಿದ್ವಾಂಸರ ಗುಂಪೊಂದು ಐಸಿಸ್ ಹಾಗೂ ಭಯೋತ್ಪಾದನೆಯ ವಿರುದ್ಧ ಪ್ರಬಲ ಸಂದೇಶವೊಂದನ್ನು ಕಳುಹಿಸಿದೆಯೆಂದು ಲಕ್ನೊದ ಅತಿದೊಡ್ಡ ಪ್ರಾರ್ಥನಾ ಮೈದಾನ ಈದ್ಗಾದ ಇಮಾಂ ವೌಲಾನಾ ಖಾಲಿದ್ ರಶೀದ್ ಫರಂಗಿ ಮಹ್ಲಿ ತಿಳಿಸಿದ್ದಾರೆ.
ಐಸಿಸ್ ಇಸ್ಲಾಂಗೆ ವಿರುದ್ಧವಾಗಿದೆ ಹಾಗೂ ಮಾನವತೆಗೆ ವಿರುದ್ಧವಾಗಿದೆಯೆಂದು ತಾವು ಹೇಳಿದ್ದೇವೆ. ಐಸಿಸ್ ಮುಸ್ಲಿಂ ಆಗಿರಲು ಸಾಧ್ಯವಿಲ್ಲ. ಅವರ ಭಯೋತ್ಪಾದನಾ ಚಟುವಟಿಕೆ ಸಂಪೂರ್ಣವಾಗಿ ಅನ್-ಇಸ್ಲಾಮಿಕ್ ಎಂದು ತಾವು ಘೋಷಿಸಿದ್ದೇವೆಂದು ಅವರು ಹೇಳಿದ್ದಾರೆ.
ಭಯೋತ್ಪಾದನಾ ಗುಂಪಿನ ಸಿದ್ಧಾಂತವು ಚಲಾವಣೆಯಿಲ್ಲ ದುದಾಗಿದೆಯೆಂದು ವೌಲಾನಾ ಮಹ್ಲಿ ತಿಳಿಸಿದ್ದಾರೆ.
ಮೊದಲ ಬಾರಿಗೆ ಮಸೀದಿಯಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವುದರೊಂದಿಗೆ ಅವರು ಈದ್ಗಾದಲ್ಲಿ ದೊಡ್ಡ ಬದಲಾವಣೆಯೊಂದಕ್ಕೆ ಚಾಲನೆ ನೀಡಿದ್ದಾರೆ.
ಲಕ್ಷಾಂತರ ಜನರು ಇಂದಿಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತಾವು ಶಾಂತಿಗಾಗಿ ಹಾಗೂ ವಿಶ್ವದಲ್ಲಿ ಭಯೋತ್ಪಾದನೆಯ ಅಂತ್ಯಕ್ಕಾಗಿ ಪ್ರಾರ್ಥಿಸಿದ್ದೇವೆಂದು ವೌಲಾನಾ ಮಹ್ಲಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಶಾಂತಿಯ ತನ್ನ ಸಂದೇಶವನ್ನು ಒತ್ತಿ ಹೇಳಿದ ಅವರು, ಅನೇಕ ಮಂದಿ ಮುಸ್ಲಿಮೇತರರೂ ಈದ್ ಪ್ರಾರ್ಥನೆಗಳಲ್ಲಿ ಭಾಗವಹಿಸಿ, ಮುಸ್ಲಿಮರಿಗೆ ಶುಭಾಶಯ ಕೋರಿದ್ದಾರೆಂದು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ವಾರದೊಳಗೆ ನಡೆದ 2ನೆಯ ಭಯೋತ್ಪಾದಕ ದಾಳಿಯಲ್ಲಿ ನಾಲ್ವರು ಸಾವಿಗೀಡಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಢಾಕಾದಿಂದ 140 ಕಿ.ಮೀ. ದೂರದ, ರಾಜ್ಯದಲ್ಲೇ ಅತಿ ದೊಡ್ಡ ಈದ್ ಸಮಾವೇಶ ನಡೆಯುವ ಕಿಶನ್‌ಗಂಜ್‌ನಲ್ಲಿ ಈ ದಾಳಿ ನಡೆದಿದೆ.
ಭಯೋತ್ಪಾದಕರು ಪೊಲೀಸ್ ಚೌಕಿಯೊಂದರ ಮೇಲೆ ಬಾಂಬೆಸೆದು, ಪೊಲೀಸ್ ಒಬ್ಬನನ್ನು ಕತ್ತಿಯಿಂದ ಕಡಿದು ಕೊಂದಿದ್ದಾರೆ.
ಕಳೆದ ವಾರ ಢಾಕಾದ ಜನಪ್ರಿಯ, ಕೆಫೆಯೊಂದರ ಮೇಲೆ ದಾಳಿ ಮಾಡಿದ್ದ ಭಯೋತ್ಪಾದಕರು 20 ಮಂದಿಯನ್ನು ಥಳಿಸಿ ಕೊಂದಿದ್ದರು. ಅವರಲ್ಲಿ 18 ಮಂದಿ ವಿದೇಶಿಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News