ಗಾಳಿಪಟದ ಗಾಜುಲೇಪಿತ ದಾರಕ್ಕೆ ವ್ಯಕ್ತಿಯ ಕತ್ತು ಕಟ್

Update: 2016-07-09 03:13 GMT

ಗಾಜಿಯಾಬಾದ್, ಜು.9: ಗಾಳಿಪಟದ ದಾರ ಒಬ್ಬ ಮನುಷ್ಯನನ್ನು ಕೊಲ್ಲುತ್ತದೆ ಎಂದರೆ ನಂಬಲು ಸಾಧ್ಯವೇ? ಆದರೆ ನಂಬಲೇಬೇಕು. ಸಾವು ಹೇಗೂ ಬರಬಹುದು ಎನ್ನುವುದಕ್ಕೆ ಇದು ಉದಾಹರಣೆ.

52 ವರ್ಷ ವಯಸ್ಸಿನ ಯೋಗೀಶ್ ಶರ್ಮಾ ಅವರಿಗೆ ಸಾವು ಗಾಳಿಪಟದ ಗಾಜುಪೇಪಿತ ದಾರದ ಮೂಲಕ ಬಂದಿದೆ. ಶುಕ್ರವಾರ ಗಾಳಿಪಟದ ಗಾಜುಲೇಪಿತ ದಾರವೊಂದು ಅವರ ಕತ್ತು ಕೊಯ್ದು ಹತ್ಯೆ ಮಾಡಿದೆ. ಠಾಕೂರ್‌ದ್ವಾರ ಮೇಲ್ಸೇತುವೆ ಬಳಿ ಈ ದುರಂತ ಸಂಭವಿಸಿದ್ದು, ವ್ಯಕ್ತಿಯ ಕತ್ತು ಹಾಗೂ ದೇಹ ಬೇರ್ಪಟ್ಟಿದೆ.

ನತದೃಷ್ಟ ಶರ್ಮಾ ಸಿಕಂದರಾಬಾದ್‌ನಿಂದ ಬೈಕ್‌ನಲ್ಲಿ ದಿಲ್ಲಿಯ ತಮ್ಮ ಮನೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಶರ್ಮಾ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದು, ವೌಜ್‌ಪುರ ಬಳಿ ದಿಲ್ಲಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಸಂಜೆ 5:45ರ ವೇಳೆಗೆ ಶರ್ಮಾ ಮೇಲ್ಸೇತುವೆಯಲ್ಲಿ ಬರುತ್ತಿದ್ದಾಗ, ಅವರ ಕತ್ತಿಗೆ ಗಾಳಿಪಟದ ದಾರ ಸಿಲುಕಿಹಾಕಿಕೊಂಡಿತು. ಅವರು ಕುಸಿಯುವ ಮುನ್ನ ಕೆಲ ಮೀಟರ್‌ಗಳ ವರೆಗೆ ಅವರನ್ನು ಎಳೆದೊಯ್ದಿತು ಎಂದು ನಗರದ ಎಸ್ಪಿ ಸಲ್ಮಾನ್‌ತಾಜ್ ಪಾಟೀಲ್ ಘಟನೆ ಬಗ್ಗೆ ವಿವರ ನೀಡಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ಅವರ ಕುತ್ತಿಗೆಗೆ ದಾರ ಸಿಕ್ಕಿಹಾಕಿಕೊಂಡ ತಕ್ಷಣ ಅವರ ಕತ್ತಿನಿಂದ ರಕ್ತ ಚಿಮ್ಮಿತು. ತಕ್ಷಣ ಪೊಲೀಸರಿಗೆ ಕರೆ ಮಾಡಲಾಯಿತು. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಶರ್ಮಾ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ತಕ್ಷಣ ಅವರನ್ನು ಎಂಎಂಜಿ ಆಸ್ಪತ್ರೆಗೆ ಒಯ್ಯಲಾಯಿತಾದರೂ, ಆ ವೇಳೆಗೆ ಅವರು ಮೃತಪಟ್ಟಿದ್ದರು.

ಮೃತ ವ್ಯಕ್ತಿಯ ಮೊಬೈಲ್‌ನಿಂದ ಸಂಖ್ಯೆಯನ್ನು ಹುಡುಕಿ ಶರ್ಮಾ ಅವರ ಸಂಬಂಧಿ ರಾಕೇಶ್ ಎಂಬವರಿಗೆ ಪೊಲೀಸರು ಕರೆ ಮಾಡಿದಾಗ, ಘಟನೆಯಿಂದ ದಿಗ್ಭ್ರಮೆಗೆ ಒಳಗಾದರು. ಇದೆಂಥ ಸಾವು ಎಂದು ಅವರು ಉದ್ಗರಿಸಿದರು. ವೈದ್ಯರ ಪ್ರಕಾರ, ಶರ್ಮಾ ಅವರ ಶ್ವಾಸಕೋಶದ ನಳಿಕೆ, ರಕ್ತನಾಳ ಕೂಡಾ ಕತ್ತರಿಸಿ ಹೋಗಿ, ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ.

ಸಾಮಾನ್ಯವಾಗಿ ಹತ್ತಿಯ ದಾರದಿಂದ ಗಾಳಿಪಟ ತಯಾರಿಸಲಾಗುತ್ತದೆ. ಆದರೆ ಚೀನಾ ನಿರ್ಮಿತ ಗಾಳಿಪಟಗಳ ದಾರಕ್ಕೆ ಗಾಜು ಲೇಪಿಸಲಾಗಿರುತ್ತದೆ. ಇಂಥ ದಾರವನ್ನು ನಿಷೇಧಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಗಾಳಿಪಟ ತಯಾರಿಕಾ ಕಂಪೆನಿಯ ಮಾಲಕರಾದ ವಿಶಾಲ್ ಗೋಯಲ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News