ಕಾದಂಬರಿ
-- ಅಜ್ಜಿಯ ಜೊತೆಗಿನ ಮಾತಿನ ತುಡಿತ --
‘‘ಎಲ್ಲಿ ಬರ್ತಾರೆ, ಸತ್ತವರು ಮತ್ತೆ ಬರ್ತಾರಾ? ಇವರಿಗೆ ಭ್ರಮೆ. ಅಜ್ಜನ ಮೇಲೆ ಇವರಿಗೆ ತುಂಬಾ ಪ್ರೀತಿ. ಅಜ್ಜನಿಗೂ ಹಾಗೆಯೇ ಇವರೆಂದರೆ ಪ್ರಾಣ. ಇವರು ಹೇಳುವುದು ಅಜ್ಜ ಸಾಯಲಿಲ್ಲ, ಅವರ ಕೋಣೆಯಲ್ಲಿಯೇ ಇದ್ದಾರೇಂತ. ಅದಕ್ಕೆ ನನ್ನೊಬ್ಬಳನ್ನು ಬಿಟ್ಟು ಯಾರನ್ನೂ ಆ ಕೋಣೆಗೆ ಹೋಗಲು ಬಿಡುವು ದಿಲ್ಲ. ಅವರ ಮಕ್ಕಳು ಕೂಡಾ ಆ ಕೋಣೆಗೆ ಹೋಗುವುದಿಲ್ಲ. ಹೋದರೆ ಅಜ್ಜಿ ಬಯ್ತಿರೆ.’’
ಐಸು ಒಂದು ಲೋಟದಲ್ಲಿ ಹಾಲು ಹಿಡಿದುಕೊಂಡು ಅಜ್ಜಿಯ ಕೋಣೆಗೆ ಹೋದಾಗ ಅವರು ಏನೋ ಯೋಚಿಸುತ್ತಾ ಗಂಭೀರವಾಗಿ ಕುಳಿತಿದ್ದರು.
‘‘ಅಜ್ಜೀ... ತಿಂಡಿ ತಂದಿದ್ದೇನೆ, ಕೈ ತೊಳೆದು ಬನ್ನಿ’’
‘‘................’’
‘‘ನಿಮಗಿಷ್ಟವಾದ ಮೂಡೆ, ತೆಂಗಿನಕಾಯಿ ಹಾಲು ಮಾಡಿದ್ದೇನೆ’’
‘‘................’’
‘‘ಏನಜ್ಜೀ... ರಾತ್ರಿ ಭಾರೀ ಜೋರು ಮಾತು ಕೇಳ್ತಾ ಇತ್ತು. ಅಜ್ಜ ಬಂದಿದ್ದರಾ...?’’
‘‘ಹೂಂ...’’
ಕಳೆದ 24 ಗಂಟೆಗಳಲ್ಲಿ ಅಜ್ಜಿಯ ಬಾಯಿಯಿಂದ ಮೊದಲ ಬಾರಿಗೆ ಉತ್ತರ ಹೊರಬಂದಿತ್ತು.
‘‘ಏನಂತೆ...?’’
‘‘...............’’
‘‘ಮೊಮ್ಮಗಳ ಬಗ್ಗೆ ಏನಾದರೂ ಹೇಳಿದರಾ...?’’
‘‘ಹಾಂ... ಈ ದಿನ ಮಧ್ಯಾಹ್ನ ನೈಚೋರು (ತುಪ್ಪದೂಟ) ಮಾಡಬೇಕು. ಕುರಿ ಮಾಂಸ ತರಿಸಬೇಕು. ಹೋಗು ಈಗಲೇ ತರಿಸು’’
‘‘ಅಜ್ಜ ಹೇಳಿದ್ದಾ...?’
‘‘ಹೂಂ...’’
‘‘ಮೊಮ್ಮಗಳಿಗಾ...?’’
‘‘...............’’
‘‘ಜೋರಾಗಿ ಅಳ್ತಾ ಇದ್ದೀರಲ್ಲಾ ಯಾಕೆ, ಅಜ್ಜ ಏನಾದರೂ ಅಂದ್ರಾ?’’
‘‘ಅದೆಲ್ಲ ನಿನಗೇಕೆ. ನಮ್ಮ ಗಂಡ-ಹೆಂಡತಿ ವಿಷಯ ಎಲ್ಲ ನಿನಗೆ ಹೇಳಬೇಕಾ?’’ ಅಜ್ಜಿ ಒಮ್ಮೆ ಅವಳನ್ನು ದುರುಗುಟ್ಟಿ ನೋಡಿ ಎದ್ದು ಕೈ ತೊಳೆಯಲು ಹೋದರು.
ಮುಗುಳು ನಗುತ್ತಾ ಬಂದ ಐಸುಳನ್ನು ನೋಡಿದ ತಾಹಿರಾ, ‘‘ಹೇಗಿದ್ದಾರೆ ಅಜ್ಜಿ’’ ಕೇಳಿದಳು.
‘‘ಚೆನ್ನಾಗಿದ್ದಾರೆ. ಆದರೆ ಇಂದಂತೂ ಮಾತನಾಡುವ ಸಾಧ್ಯತೆ ಇಲ್ಲ. ನಾಳೆ ನೋಡುವಾ’’ ಎಂದಳು.
‘‘ನಿನ್ನೆ ರಾತ್ರಿ ಬಗ್ಗೆ ಕೇಳಿದಿರಾ...?’’
‘‘ಹೂಂ... ಅಜ್ಜ ಬಂದಿದ್ದರಂತೆ... ಏನು ಹೇಳಿದರೂಂತ ಕೇಳಿದ್ದಕ್ಕೆ, ‘ನಮ್ಮ ಗಂಡ-ಹೆಂಡತಿ ವಿಷಯ ಎಲ್ಲ ನಿನಗೆ ಹೇಳಬೇಕಾ’ ಎಂದು ಜೋರು ಮಾಡಿದರು. ಮತ್ತೆ ಈ ದಿನ ಮಧ್ಯಾಹ್ನ ನಿನಗೆ ನೈಚೋರು, ಕುರಿಮಾಂಸ ಮಾಡಲಿಕ್ಕೆ ಹೇಳಿದ್ದಾರಂತೆ’’
‘‘ಯಾರು ಅಜ್ಜನಾ...?’’
‘ಹೂಂ...’’
‘‘ಮಾಮಿ, ಒಮ್ಮೆ ಅಜ್ಜಿಯನ್ನು ಡಾಕ್ಟರ್‌ಗೆ ತೋರಿಸಿದರೇನು?’’ ಸ್ವಲ್ಪಯೋಚಿಸಿದ ತಾಹಿರಾ ಕೇಳಿದಳು.
‘‘ಅಜ್ಜ ತೀರಿಕೊಂಡ ಮೇಲೆ ಅವರು ಈ ಮನೆಯ ಹೊಸಿಲು ದಾಟಿದವರಲ್ಲ. ಇನ್ನು ಅವರು ಡಾಕ್ಟರ್‌ರಲ್ಲಿಗೆ ಬರ್ತಾರಾ? ನಿನ್ನ ಒಬ್ಬ ದೊಡ್ಡಪ್ಪಒಬ್ಬ ಮನೋವೈದ್ಯರನ್ನು ಭೇಟಿಯಾಗಿ ಇವರ ವಿಷಯ ಎಲ್ಲ ಹೇಳಿದರಂತೆ. ಅದಕ್ಕೆ ವೈದ್ಯರು, ಅಜ್ಜ ಇನ್ನೂ ಬದುಕಿದ್ದಾರೆ ಎಂದು ಅವರು ನಂಬಿದ್ದಾರೆ. ಅದೇ ಗುಂಗಿನಲ್ಲಿದ್ದಾರೆ. ಅವರನ್ನು ಆ ಗುಂಗಿನಿಂದ ಹೊರ ತಂದರೆ ಮತ್ತೆ ಅವರು ಹೆಚ್ಚು ಸಮಯ ಬದುಕುವುದು ಕಷ್ಟ. ಅವರಿಂದ ಯಾರಿಗೂ ತೊಂದರೆ ಇಲ್ಲ ಎಂದ ಮೇಲೆ ಹಾಗೆ ಇರಲಿ. ಏನಾದರೂ ತೊಂದರೆ ಆದರೆ ಮತ್ತೆ ನೋಡೋಣ ಅಂದರಂತೆ. ನೆನಪಿನ ಶಕ್ತಿಯಾ ಗಲಿ, ತಿಳುವಳಿಕೆಯಾಗಲಿ ಯಾವುದರಲ್ಲೂ ಅಜ್ಜಿಗೆ ಯಾವ ತೊಂದರೆಯೂ ಇಲ್ಲ. ಎಲ್ಲ ವಿಷಯದಲ್ಲೂ ಸಹಜವಾಗಿಯೇ ಇದ್ದಾರೆ. ಅಜ್ಜನ ನೆನಪಾದಾಗ ಮಾತ್ರ ಸ್ವಲ್ಪ ವಿಚಲಿತರಾಗುತ್ತಾರೆ. ಅದಕ್ಕೆ ಅವರು ಅಜ್ಜನನ್ನು ಅತೀ ಹೆಚ್ಚು ಪ್ರೀತಿಸುತ್ತಿದ್ದುದೇ ಕಾರಣಾಂತ ವೈದ್ಯರೂ ಹೇಳಿದರಂತೆ. ಅವರು ಅಜ್ಜನನ್ನು ಎಷ್ಟು ಹಚ್ಚಿಕೊಂಡಿದ್ದಾರೆ ಎಂದರೆ ಅಜ್ಜ ತೀರಿಕೊಂಡಾಗ ಅವರು ಒಂದು ತೊಟ್ಟು ಕಣ್ಣೀರೂ ಹಾಕಿರಲಿಲ್ಲ. ನನ್ನ ಗಂಡ ಸಾಯಲಿಲ್ಲ. ಅವರು ಸಾಯಲಿಕ್ಕೆ ಸಾಧ್ಯವೇ ಇಲ್ಲಾಂತ ಹೇಳುತ್ತಾ ಇದ್ದರು. ಈಗಲೂ ಹಾಗೆಯೇ ಹೇಳ್ತಿದ್ದಾರೆ. ಆ ಕೋಣೆಯಲ್ಲಿ ಅವರು ಅವರದೇ ಆದ ಲೋಕವೊಂದನ್ನು ಸೃಷ್ಟಿಸಿಕೊಂಡಿದ್ದಾರೆ. ಕೋಣೆಯ ಹೊರಗೆ ಬಂದಾಗ ಸ್ವಲ್ಪಸರಿ ಇರ್ತಾರೆ.’’
ತಾಹಿರಾ ಮೂಡೆಯನ್ನು ಅದ್ದಿ ಅದ್ದಿ ತಿನ್ನುತ್ತಿದ್ದರೂ ಅವಳ ತಲೆ ತುಂಬಾ ಅಜ್ಜಿಯೇ ತುಂಬಿಕೊಂಡಿದ್ದರು. ರಾತ್ರಿಯ ಅವರ ಮಾತು, ಅಳು, ನರಳಾಟ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತ್ತಿತ್ತು.
‘‘ಏನೂ ಯೋಚಿಸುತ್ತಾ ಇದ್ದಿಯಾ...?’
‘‘ಹಾಂ...’’
‘‘ಮೂಡೆ ಚೆನ್ನಾಗಿದೆಯಾ...?’’
‘‘ಹೂಂ...’’
‘‘ನಿನ್ನಮ್ಮ ಹೀಗೆ ಮೂಡೆ-ಹಾಲು ಮಾಡ್ತಾರಾ...?’’
‘‘ಇಲ್ಲ, ಇದನ್ನು ನಾನು ಮೊದಲನೇ ಸಲ ತಿನ್ನುತ್ತಿರುವುದು. ಇಡ್ಲಿ, ಸಾಂಬಾರು, ಚಟ್ನಿ ಹೋಟೆಲ್‌ನಲ್ಲಿ ತಿಂದಿದ್ದೇನೆ. ಈ ರೀತಿಯ ಮೂಡೆ ಹಾಲು ತಿಂದೇ ಇಲ್ಲ. ತುಂಬಾ ಚೆನ್ನಾಗಿದೆ.’’
‘‘ಮಾಮಿ, ನನಗೆ ಅಜ್ಜಿಯನ್ನು ನೋಡ್ಲೇಬೇಕು ಅನಿಸುತ್ತೆ. ಇಬ್ಬರೂ ಒಟ್ಟಿಗೆ ಹೋಗಿ ಮಾತಾಡಿಸಿ ಕೊಂಡು ಬರೋಣ’’
‘‘ಬೇಡಮ್ಮಾ, ಈಗ ಹೋದ್ರೂ ಅವರು ಮಾತಾಡೋಲ್ಲ. ಮತ್ತೆ ಅವರು ಏನಾದ್ರೂ ಅಂದ್ರೆ ನೀನು ನೊಂದುಕೊಳ್ತಿಯಾ’’
‘‘ಮತ್ತೆ ಅವರು ಬೆಳಗ್ಗೆ ನನ್ನ ಕೋಣೆಗೆ ಬಂದು ನನ್ನ ತಲೆ ಸವರಿ, ಮುತ್ತಿಕ್ಕಿ ಅಳುತ್ತಿದ್ದರಲ್ಲಾ, ಯಾಕೆ?’’
‘‘ಕರುಳ ಬಳ್ಳಿ, ರಕ್ತ ಸಂಬಂಧಾಂತ ಹೇಳುವುದು ಅದಕ್ಕೆ. ಅದು ಸತ್ತ ಮೇಲೂ ಕಳಚಿ ಹೋಗುವುದಿಲ್ಲ. ಅವರಿಂದ ಆಗುವ ಸಂತೋಷವೂ ಹಾಗೆಯೇ, ನೋವೂ ಹಾಗೆಯೇ ಅದನ್ನು ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ. ನೋವು ಇದೆಯಲ್ಲ ಅದಂತೂ ಇನ್ನೂ ಭೀಕರ. ಅದು ನಮ್ಮ ಕೊನೆಯುಸಿರಿರುವ ತನಕ ನೆರಳಿನಂತೆ ನಮ್ಮೆಂದಿಗೇ ಇರುತ್ತದೆ. ಗೆದ್ದಲು ಹುಳದಂತೆ ಕೊರೆಯುತ್ತಾ, ಒಮ್ಮಾಮ್ಮೆ ಹಾವಿನಂತೆ ಹೆಡೆಯೆತ್ತಿ ಬುಸುಗುಡುತ್ತಾ ನಮ್ಮನ್ನು ಹಿಂಡಿ ಹಿಪ್ಪೆಮಾಡಿ ಬಿಡುತ್ತದೆ. ಆಗ ನಾವಂತೂ ಅಸಹಾಯಕತೆಯಿಂದ ಏನೂ ಮಾಡಲಾಗದೆ ಮರುಗಿ, ಸೊರಗಿ, ಸೋತು ಹೋಗುತ್ತೇವೆ. ಒಮ್ಮೆಮ್ಮೆ ಆ ನೋವು ನಮ್ಮೆಳಗೆ ಬೆಂಕಿಯಂತೆ ಉರಿದು ಮನಶ್ಶಾಂತಿಯನ್ನೇ ಸುಟ್ಟು ಬೂದಿ ಮಾಡಿ ಬಿಡುತ್ತದೆ.’’
‘‘ಅಂತಹ ಅನ್ಯಾಯ ನಾನು ಅಜ್ಜಿಗೆ ಏನು ಮಾಡಿದ್ದೇನೆ ಮಾಮಿ, ಅಷ್ಟು ದೂರದಿಂದ ಅವರನ್ನು ನೋಡಲೆಂದೇ ಬಂದಿಲ್ಲವಾ?’’
‘‘ನೀನೇನೂ ಮಾಡಿಲ್ಲಮ್ಮಾ, ಬಂಗಾರದಂತಹ ಹುಡುಗಿ ನೀನು. ಆದರೆ ನಿನ್ನನ್ನು ನೋಡಿದ ತಕ್ಷಣ ಅವರಿಗೆ ಹಳೆಯದೆಲ್ಲ ನೆನಪಾಗಿ ಬಿಡುತ್ತೆ. ಅವರೀಗ ನೋವಿನಿಂದ ಒದ್ದಾಡ್ತಾ ಇದ್ದಾರೆ. ಸ್ವಲ್ಪದಿನ ಹೀಗೆಯೇ ನೀನು ಅವರ ಮುಂದೆ ಇದ್ದರೆ ಅವರು ಸರಿಯಾಗ್ತಾರೆ. ಸ್ವಲ್ಪಸಹನೆ ವಹಿಸು. ಎಲ್ಲ ಸರಿಯಾಗುತ್ತೆ’’ ಎಂದು ತಾಹಿರಾಳನ್ನು ಸಮಾಧಾನಪಡಿಸಿದಳು ಐಸು.
ತಾಹಿರಾ ಕೈತೊಳೆದು ಬಂದು ಐಸುಳ ಪಕ್ಕ ಕುಳಿತಳು. ಇಬ್ಬರು ಕೂಡಿ ಮಧ್ಯಾಹ್ನದ ಅಡುಗೆ ತಯಾರಿ ನಡೆಸಿದರು. ಐಸು ಅಡುಗೆ ಮಾಡುವುದನ್ನು ಕುತೂಹಲದಿಂದ ನೋಡುತ್ತಿದ್ದರೂ ತಾಹಿರಾಳ ಮನಸ್ಸು ತುಂಬಾ ಅಜ್ಜಿಯೇ ತುಂಬಿ ಬಿಟ್ಟಿದ್ದರು.
ಮಧ್ಯಾಹ್ನ ಊಟ ಮಾಡಿ ಮಲಗಿ ದವಳಿಗೂ ನಿದ್ದೆ ಹತ್ತಿರ ಸುಳಿಯಲಿಲ್ಲ. ಈ ನಡುವೆ ಒಂದೆರಡು ಸಲ ಅಜ್ಜಿಯ ಕೋಣೆಯ ಬಳಿ ಹೋಗಿ ಬಂದಳು. ಮುಚ್ಚಿದ ಬಾಗಿಲ ಹಿಂದೆ ಯಾವುದೇ ಶಬ್ದ ಕೇಳಿ ಬರಲಿಲ್ಲ.
ಹೀಗೆ ಒಂದು ವಾರ ಕಳೆಯಿತು. ಪ್ರತಿದಿನ ಅಜ್ಜಿಯ ಅಪ್ಪಣೆಯಂತೆ ಐಸು ತಾಹಿರಾಳಿಗೆ ನೈಯಪ್ಪ, ಗುಳಿಯಪ್ಪ, ಎಲೆಪ್ಪಹೀಗೆ ನಾನಾ ತರದ ಅಪ್ಪಗಳು, ಮೀನು ಸಾರು, ನೈಚೋರು, ಕೋಳಿಸಾರು ಮಾಡಿ ಬಡಿಸಿದಳು. ಅವಳು ಸಾಕು ಸಾಕು ಎನ್ನುವಷ್ಟು ಒತ್ತಾಯಿಸಿ ತಿನ್ನಿಸಿದಳು. ಹಾಲು ಪಾಯಸ ಕುಡಿಸಿದಳು. ಎಣ್ಣೆ ಹಚ್ಚಿ ಬಿಸಿ ನೀರ ಸ್ನಾನ ಮಾಡಿಸಿದಳು. ತಲೆ ಬಾಚಿ ಹೂ ಮುಡಿದಳು. ತನ್ನ ಪಕ್ಕವೇ ಮಲಗಿಸಿಕೊಂಡಳು. ತಾಹಿರಾಳಿಗೆ ಇದೆಲ್ಲವೂ ಒಂದು ಹೊಸ ಅನು ಭವ. ಹೊಸತೊಂದು ಲೋಕವೇ ಅವಳ ಮುಂದೆ ತೆರೆದುಕೊಂಡಿತ್ತು. ಆದರೆ ಅಜ್ಜಿ ಒಂದು ದಿನವೂ ಅವಳ ಜೊತೆ ಮಾತನಾಡಲಿಲ್ಲ. ಮುಖ ಕೊಟ್ಟು ನೋಡಲಿಲ್ಲ. ಯಾರಿಗಾಗಿ ಅವಳು ಆ ಮನೆಗೆ ಬಂದಿದ್ದಳೋ ಅವರಿಂದಲೇ ಅವಳು ನೋವನುಭವಿಸುವಂತಾಗಿತ್ತು.
ಪ್ರತಿದಿನ ರಾತ್ರಿಯೂ ಅಜ್ಜಿಯ ಕೋಣೆಯಲ್ಲಿ ರಣರಂಗವೇ ನಡೆಯುತ್ತಿತ್ತು. ಅವರ ಮಾತು, ಅಳು, ನರಳಾಟ ಕೇಳುವಾಗ ತಾಹಿರಾಳ ಹೃದಯವೇ ಕಿತ್ತು ಬರುವಂತಾಗುತ್ತಿತ್ತು.
ಅಂದು ಬೆಳಗ್ಗೆ ಎದ್ದವಳೇ ತಾಹಿರಾ, ‘‘ಮಾಮಿ, ನಾನು ಇಂದು ರಾತ್ರಿ ಬಸ್ಸಿಗೆ ಹೋಗ್ತೇನೆ’’ ಎಂದಳು.
‘‘ಏನು ಅವಸರ?’’
‘‘ಒಂದು ವಾರದಲ್ಲಿ ಬರ್ತೇನೆಂತ ಹೇಳಿ ಬಂದಿದ್ದೇನೆ. ಈಗಲೇ ಎಂಟು ದಿನಗಳಾಯಿತು. ಅಮ್ಮ ಗಾಬರಿಯಾಗ್ತಾರೆ’’
‘‘ಗಾಬರಿಯಾಗ್ತಾಳಾ?’’ ಐಸುಗೆ ನಗು ಬಂತು.
‘‘ಹೌದು ಹೇಳಿದ ಸಮಯಕ್ಕೆ ಮನೆಯಲ್ಲಿಲ್ಲದಿದ್ದರೆ ಮತ್ತೆ ನನ್ನನ್ನು ಎಲ್ಲಿಗೂ ಕಳಿಸೋದಿಲ್ಲ’’
‘‘ಅಷ್ಟು ಕಾಳಜಿ, ಭಯ ಇದೆಯಾ ನಿನ್ನ ಬಗ್ಗೆ ನಿನ್ನ ಅಮ್ಮನಿಗೆ’’ ಆ ಮಾತಿನಲ್ಲಿರುವ ವ್ಯಂಗ್ಯವನ್ನು ತಾಹಿರಾ ಗಮನಿಸಲಿಲ್ಲ.
‘‘ಹೂಂ...’’
‘‘ಇನ್ನು ಯಾವಾಗ ಬರ್ತಿ?’’
‘‘ಒಂದು ಹತ್ತು ದಿನ ಬಿಟ್ಟು ಬರ್ತೇನೆ. ಬಂದರೆ ಒಂದು ತಿಂಗಳು ಇಲ್ಲೇ ಇರ್ತೇನೆ’’
‘‘ಸರಿ, ಇನ್ನೊಂದು ತಿಂಗಳು ಬಿಟ್ಟು ಬಕ್ರೀದ್. ಹಬ್ಬದ ದಿನ ಇಲ್ಲೇ ಇದ್ದು ಇಲ್ಲೇ ಹಬ್ಬ ಗಡದ್ದಾಗಿ ಆಚರಿಸುವಾ. ಹಬ್ಬಕ್ಕೆ ನಿನ್ನ ದೊಡ್ಡಮ್ಮ, ದೊಡ್ಡಪ್ಪನವರು, ಅವರ ಮಕ್ಕಳು ಎಲ್ಲಾ ಬರ್ತಾರೆ. ನೀನು ಆಗ ಇಲ್ಲಿದ್ದರೆ ಎಲ್ಲರನ್ನೂ ನೋಡಬಹುದು’’
‘‘ಆಯಿತು ಮಾಮಿ ಖಂಡಿತಾ ಬರ್ತೇನೆ.’’ ‘‘ನೀವು ಮನೆಯಲ್ಲಿ ಹಬ್ಬ ಆಚರಿಸುವುದಿಲ್ಲವಾ?’’ ಐಸು ಕುತೂಹಲದಿಂದ ಕೇಳಿದಳು.
‘‘ಮನೆಯಲ್ಲಿ ಇಲ್ಲ, ಆ ದಿನ ಅಪ್ಪಹೋಟೆಲ್‌ಗೆ ಕರೆದುಕೊಂಡು ಹೋಗ್ತಾರೆ. ಮೂವರು ಕೂಡಿ ಹೋಟೆಲ್‌ನಲ್ಲಿ ಊಟ ಮಾಡುವುದು ಅದೇ ಹಬ್ಬ’’ ತಾಹಿರಾ ಹೇಳಿ ನಕ್ಕಳು.
‘‘ಹೊಸ ಬಟ್ಟೆ ಹೊಲಿಸೋದಿಲ್ವಾ?’’
‘‘ಹಬ್ಬಕ್ಕೇಂತ ಇಲ್ಲ. ನನ್ನಲ್ಲಿ ಬೇಕಾದಷ್ಟು ಬಟ್ಟೆಗಳಿವೆ’’
‘‘ಸರಿ, ಹತ್ತು ದಿನದಲ್ಲಿ ಬರ್ತಿಯಲ್ವಾ?’’
‘‘ಮಾಮಿಯಾಣೆ ಬರ್ತೇನೆ. ಆದರೆ ಅಜ್ಜಿ ಜೊತೆ ಮಾತನಾಡದೆ ನಾನು ಹೇಗೆ ಹೋಗಲಿ ಮಾಮಿ. ಏನು ಬೇಕಾದರೂ ಅನ್ನಲಿ, ಇವತ್ತು ನಾನು ಅವರ ಕೋಣೆಗೆ ಹೋಗಿ ಮಾತನಾಡುವುದೇ’’ ಎಂದಳು ತಾಹಿರಾ.
‘‘ನೀನು ಮಾತನಾಡಿದರೆ ಅವರು ಮಾತನಾಡ ಬೇಕಲ್ಲ’’
‘‘ಅವರು ಮಾತನಾಡದಿದ್ದರೂ ಪರವಾಗಿಲ್ಲ, ನಾನು ಹೋಗ್ತೇನೇಂತ ಹೇಳಿ ಬರ್ತೇನೆ’’
‘‘ಈಗ ಬೇಡ. ಸಂಜೆ ಹೇಳುವಿಯಂತೆ. ಅದಕ್ಕೆ ಮೊದಲು ನಾನೊಮ್ಮೆ ಅವರಲ್ಲಿ ಹೇಳ್ತೇನೆ’’
ಮಧ್ಯಾಹ್ನ ಊಟ ಹಿಡಿದುಕೊಂಡು ಅಜ್ಜಿ ಕೋಣೆಗೆ ಹೋದಳು ಐಸು.
‘‘ನಿಮ್ಮ ಮೊಮ್ಮಗಳು ಈ ದಿನ ರಾತ್ರಿ ಬಸ್ಸಿಗೆ ಹೋಗ್ತಾಳಂತೆ’’ ಎಂದಳು.
ಅಜ್ಜಿ ಮಾತನಾಡಲಿಲ್ಲ. ಎದ್ದು ಕೈ ತೊಳೆಯಲು ಹೋದರು.
‘‘ನಾನು ಹೇಳಿದ್ದು ಕೇಳಿಸಿತಾ? ನಿಮ್ಮ ಮೊಮ್ಮಗಳು ಇವತ್ತು ರಾತ್ರಿ ಹೋಗ್ತಾಳಂತೆ’’
ಕೈತೊಳೆದು ಬಂದವರು ತಲೆ ಎತ್ತಿ ನೋಡದೆ ಬಟ್ಟಲ ಮುಂದೆ ಕುಳಿತು ಉಣ್ಣತೊಡಗಿದರು.
‘‘ಇಂದಿಗೆ ಎಂಟು ದಿನ ಆಯಿತು ಅವಳು ಬಂದು. ಒಂದು ದಿನ ಆದರೂ ಅವಳ ಜೊತೆ ಒಂದು ಮಾತು ಆಡಿದಿರಾ ನೀವು. ಆ ಮಗು ಎಷ್ಟು ನೊಂದುಕೊಂಡಿದೆ ಗೊತ್ತಾ ನಿಮಗೇ’’
‘‘...............’’
‘‘ಎಂತಹ ಕಲ್ಲು ಮನಸ್ಸಪ್ಪಾನಿಮ್ಮದು’’
ಒಮ್ಮೆಲೆ ಸರ್ಪದಂತೆ ತಲೆ ಎತ್ತಿದ ಅಜ್ಜಿ ಐಸುಳ ಮುಖವನ್ನೇ ದಿಟ್ಟಿಸಿ ನೋಡಿದರು. ಅವರ ಕಣ್ಣುಗಳು ಬೆಂಕಿ ಉಗುಳುತ್ತಿದ್ದವು.