ಹತ ಉಗ್ರ ವಾನಿಯ ಸಮರ್ಥಕರಿಗೆ ಪಾಕಿಸ್ತಾನದ ಪ್ರಚೋದನೆ:ನಾಯ್ಡು

Update: 2016-07-10 15:11 GMT

ಹೊಸದಿಲ್ಲಿ,ಜು.10: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಕೊಲ್ಲಲ್ಪಟ್ಟ ಹಿಜ್ಬುಲ್ ಕಮಾಂಡಂಟ್ ಬುರ್ಹಾನ್ ವಾನಿಯ ಸಮರ್ಥಕರನ್ನು ಪಾಕಿಸ್ತಾನವು ಪ್ರಚೋದಿಸುತ್ತಿದೆ ಎಂದು ರವಿವಾರ ಇಲ್ಲಿ ಆರೋಪಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ಭಾರತವು ತನ್ನ ನೀತಿಯನ್ನು ಮರು ಪರಿಶೀಲಿಸಬೇಕಾಗುತ್ತದೆ ಎಂದು ಆ ರಾಷ್ಟ್ರಕ್ಕೆ ಎಚ್ಚರಿಕೆ ನೀಡಿದರು.

ನಮ್ಮ ನೆರೆರಾಷ್ಟ್ರದ ಪ್ರಚೋದನೆಯಿಂದ ಕೆಲವರು ತೊಂದರೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಯಾವುದೇ ಉಪಯೋಗವಿಲ್ಲ ಎಂದ ಅವರು, ಪಾಕಿಸ್ತಾನದೊಂದಿಗೆ ಕಾರ್ಯ ನಿರ್ವಹಿಸಲು ಭಾರತವು ಸಿದ್ಧವಿದೆ ಮತ್ತು ಆ ರಾಷ್ಟ್ರದೊಡನೆ ಸ್ನೇಹದಿಂದಿರಲು ಬಯಸುತ್ತದೆ. ಆದರೆ ಪಾಕಿಸ್ತಾನವು ಇಂತಹ ಕೃತ್ಯಗಳನ್ನು ಮುಂದುವರಿಸಿದರೆ ಭಾರತ ಸರಕಾರವು ತನ್ನ ನೀತಿಯ ಕುರಿತು ಮರುಚಿಂತನೆ ಮಾಡಬೇಕಾಗುತ್ತದೆ. ಪಾಕಿಸ್ತಾನವು ಇಂತಹ ತಂತ್ರಗಳನ್ನು ಕೈಬಿಡಬೇಕು ಎಂದರು.

ಕಾಶ್ಮೀರವು ಭಾರತದ ಅಖಂಡ ಭಾಗವಾಗಿದೆ ಮತ್ತು ಈ ವಿಷಯದಲ್ಲಿ ಯಾವುದೇ ಮಾತುಕತೆ ಅಥವಾ ಚರ್ಚೆಯ ಪ್ರಶ್ನೆಯೇ ಇಲ್ಲ ಎಂದು ಅವರು ಒತ್ತಿ ಹೇಳಳಿದರು.

ವಾನಿ ಓರ್ವ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಆಗಿದ್ದ. ಯಾವುದೇ ಭಾರತೀಯ ಇಂತಹ ವ್ಯಕ್ತಿಗೆ ಅನುಕಂಪ ತೋರಿಸಲು ಹೇಗೆ ಸಾದ್ಯ? ಓರ್ವ ಭಯೋತ್ಪಾದಕನನ್ನು ಸಮರ್ಥಿಸುತ್ತಿರುವ ತಥಾಕಥಿತ ಪ್ರತಿಭಟನಾಕಾರರನ್ನು ಬೆಂಬಲಿಸಲು ಕೆಲವರು ಪ್ರಯತ್ನಿಸುತ್ತಿರುವುದು ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ ಎಂದ ನಾಯ್ಡು, ಭೀತಿವಾದ ಮತ್ತು ಹಿಂಸೆಯನ್ನು ಯಾವದೇ ರೂಪದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲಿವೆ ಎಂದರು. ತನ್ಮಧ್ಯೆ ವಾನಿಯ ಹತ್ಯೆಯನ್ನು ವಿರೋಧಿಸಿ ವ್ಯಾಪಕ ಹಿಂಸಾಚಾರದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ ಹೇರಲಾಗಿದ್ದು, ಸತ್ತವರ ಸಂಖ್ಯೆ ರವಿವಾರ 19ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News