ಕರ್ಫ್ಯೂ ನಡುವೆ ಪ್ರಾಣ ಪಣಕಿಟ್ಟು ಪಂಡಿತ ಕುಟುಂಬಕ್ಕೆ ಆಹಾರ ತಲುಪಿಸಿದ ಮುಸ್ಲಿಂ ದಂಪತಿ

Update: 2016-07-12 04:56 GMT

ಶ್ರೀನಗರ, ಜು.12: ಪ್ರತಿಕೂಲ ವಾತಾವರಣದ ನಡುವೆಯೂ ತಮ್ಮ ಪ್ರಾಣವನ್ನೇ ಪಣಕಿಟ್ಟು ಮಾನವೀಯತೆ ಮೆರೆದು ಕರ್ಫ್ಯೂವಿನ ನಡುವೆಯೂ ಪಂಡಿತ ಕುಟುಂಬಕ್ಕೆ ಆಹಾರ ಒದಗಿಸಿದ ಮುಸ್ಲಿಮ್ ದಂಪತಿಯ ಕಥೆಯಿದು. ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯಿಂದ ಭುಗಿಲೆದ್ದ ಹಿಂಸೆಯಿಂದ ರಾಜ್ಯದ ಅರ್ಧಕ್ಕಿಂತಲೂ ಹೆಚ್ಚಿನ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲ್ಪಟ್ಟಿರುವಾಗ ಮುಸ್ಲಿಮ್ ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಕೆಲವು ಆಹಾರ ಸಾಮಗ್ರಿಗಳೊಂದಿಗೆ ಮುಂದೆ ಸಾಗುತ್ತಿರುವುದು ಕಂಡು ಬಂದಿತ್ತು. ಮೊದಲ ನೋಟಕ್ಕೆ ಝುಬೇದಾ ಬೇಗಮ್ ಎಂಬ ಆ ಮಹಿಳೆ ಹಾಗೂ ಆಕೆಯ ಪತಿ ತಮಗೋಸುಗ ಆಹಾರ ಸಾಮಗ್ರಿ ಇಷ್ಟೊಂದು ಕಷ್ಟ ಪಟ್ಟು ಕರ್ಫ್ಯೂ ನಡುವೆಯೂ ಕೊಂಡು ಹೊಗುತ್ತಿರಬಹುದೆಂದು ಯಾರಾದರೂ ಅಂದಾಜಿಸಬಹುದಾಗಿತ್ತು. ಆದರೆ ಈ ದಂಪತಿ ಜೆಹ್ಲೂಮ್ ನದಿಯಾಚೆಯಿರುವ ಝುಬೇದಾರ ಆತ್ಮೀಯ ಗೆಳತಿಯ ಕುಟುಂಬಕ್ಕೆ  ಇದನ್ನೆಲ್ಲಾ ಕೊಂಡೊಯ್ಯುತ್ತಿದ್ದರು.

``ಆಕೆ ಬೆಳಿಗ್ಗೆ ನನಗೆ ಕರೆ ಮಾಡಿ ಆಹಾರ ಸಾಮಗ್ರಿಯ ಕೊರತೆಯಿಂದ ಸಮಸ್ಯೆಯಾಗಿದೆ ಎಂದು ವಿವರಿಸಿದ್ದಳು. ಮೇಲಾಗಿ ಅವರ ಮನೆಯಲ್ಲಿ ಅಸೌಖ್ಯದಿಂದಿರುವ ವೃದ್ಧೆಯೊಬ್ಬರೂ ಇದ್ದಾರೆ. ಅಲ್ಲಿಗೆ ತಲುಪುವುದು ಕಷ್ಟವಾದರೂ ಪ್ರಯತ್ನಿಸುತ್ತಿದ್ದೇವೆ,'' ಎಂದು ಝುಬೇದಾ ಹೇಳಿದರು.

ಆದರೆ ಅವರು ಪಟ್ಟ ಕಷ್ಟವೆಲ್ಲಾ ಅವರು ಜವಾಹರ್ ನಗರದಲ್ಲಿರುವ ದಿವಾನ್ ಚಂದ್ ಅವರ ನಿವಾಸಕ್ಕೆ ಆಗಮಿಸಿದಾಗ ಮರೆತು ಹೋಗುವಷ್ಟು ಆತ್ಮೀಯ ಸ್ವಾಗತ ಅಲ್ಲಿ ಅವರಿಗೆ ದೊರೆತಿತ್ತು. ದಿವಾನ್ ಚಂದ್ ಆಕಾಶವಾಣಿಯಲ್ಲಿ ಉದ್ಯೋಗದಲ್ಲಿದ್ದರೆ ಝುಬೇದಾ ಕೆಲಸ ಮಾಡುವ ಶಾಲೆಯಲ್ಲಿಯೇ ಅವರ ಪತ್ನಿ ಶಿಕ್ಷಕಿಯಾಗಿದ್ದರು. ಕರ್ಫ್ಯೂವಿನಿಂದಾಗಿ ಆಹಾರ ಸಾಮಗ್ರಿ ದೊರೆಯದೆ ಕಂಗಾಲಾಗಿದ್ದ ಅವರ ಕುಟುಂಬ ಝುಬೇದಾರಲ್ಲಿ ಸಹಾಯ ಯಾಚಿಸಿತ್ತು.

ಈ ಮುಸ್ಲಿಮ್ ದಂಪತಿ ಮೆರೆದ ಮಾನವೀಯತೆ  ಎಲ್ಲರ ಕಣ್ಣನ್ನೂ ತೆರೆಸುವಂತಹುದ್ದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News