ಶಾಂತಿಕಾಪಾಡಿ: ಕಾಶ್ಮೀರ ಜನತೆಗೆ ಪ್ರಧಾನಿ ಮನವಿ

Update: 2016-07-12 14:59 GMT

ಹೊಸದಿಲ್ಲಿ, ಜು.12: ಕಳೆದ ನಾಲ್ಕು ದಿನಗಳಿಂದ ಭೀಕರ ಹಿಂಸಾಚಾರದಿಂದ ತತ್ತರಿಸಿರುವ ಕಾಶ್ಮೀರ ಕಣಿವೆಯಲ್ಲಿ ಶಾಂತಿಯನ್ನು ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ ಜಮ್ಮುಕಾಶ್ಮೀರದ ಜನತೆಗೆ ಮಂಗಳವಾರ ಮನವಿ ಮಾಡಿದ್ದಾರೆ. ತನ್ನ ಆಫ್ರಿಕ ಪ್ರವಾಸವನ್ನು ಮುಗಿಸಿ, ಮಂಗಳವಾರ ಸ್ವದೇಶಕ್ಕೆ ವಾಪಾಸಾಗಿರುವ ಪ್ರಧಾನಿ ಇಂದು ಬೆಳಗ್ಗೆ ಹೊಸದಿಲ್ಲಿಯಲ್ಲಿ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಕಾಶ್ಮೀರ ಪರಿಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಿದರು. ಕಳೆದ ವಾರ ಹಿಝ್ಭುಲ್ ಮುಜಾಹಿದ್ದೀನ್ ಉಗ್ರ ಬುರ್‌ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 24 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿರುವ ಬಗ್ಗೆ ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.
     ಸಭೆಯ ಬಳಿಕ ಪ್ರಧಾನಿ ಕಾರ್ಯಾಲಯದ ವ್ಯವಹಾರಗಳ ಸಹಾಯಕ ಸಚಿವ ಜೀತೇಂದ್ರ ಸಿಂಗ್ ಸುದ್ದಿಗಾರರ ಜೊತೆ ಮಾತನಾಡುತ್ತಾ‘‘ ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವ ಮೂಲಕ ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಹಜತೆಯತ್ತ ಮರಳುವಂತೆ ಮಾಡಲು ಸಹಕರಿಸಬೇಕೆಂದು ಪ್ರಧಾನಿಯವರು ಜಮ್ಮುಕಾಶ್ಮೀರದ ಜನತೆಗೆ ಮನವಿ ಮಾಡಿದ್ದಾರೆ. ನಿರಪರಾಧಿಗಳು ಗಲಭೆಗೆ ಬಲಿಪಶುಗಳಾಗಬಾರದು’’ ಎಂದು ಅವರು ಆಶಿಸಿದ್ದಾರೆ ಎಂದು ಹೇಳಿದರು.
  ಅಮರನಾಥ ಯಾತ್ರೆಯ ಪ್ರಗತಿಯ ಬಗ್ಗೆ ಪ್ರಧಾನಿ ಸಭೆಯಲ್ಲಿ ತೃಪ್ತಿ ವ್ಯಕ್ತಪಡಿಸಿದರು.ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಸಂಬಂಧಿಸಿ ರಾಜ್ಯಕ್ಕೆ ಬೇಕಾದ ಸಕಲ ನೆರವನ್ನು ಕೇಂದ್ರವು ಒದಗಿಸುವುದಾಗಿ ಅವರು ಭರವಸೆ ನೀಡಿದರು. ಮೂರು ದಿನಗಳ ಸತತ ಹಿಂಸಾಚಾರದ ಬಳಿಕ ಬೂದಿಮುಚ್ಚಿದ ಕೆಂಡದಂತಿರುವ ಜಮ್ಮುಕಾಶ್ಮೀರದ ಪ್ರಸಕ್ತ ಸನ್ನಿವೇಶದ ಬಗ್ಗೆ ಪ್ರಧಾನಿ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು ಹಾಗೂ ರಾಜ್ಯದಲ್ಲಿ ಕಾನೂನು,ಸುವ್ಯವಸ್ಥೆಯ ಸ್ಥಾಪನೆಗೆ ಸೂಕ್ತ ಮಾರ್ಗದರ್ಶನಗಳನ್ನು ನೀಡಿದರೆಂದು ಅಧಿಕೃತ ಮೂಲಗಳು ತಿಳಿಸಿವೆ.ಸಭೆಯಲ್ಲಿ ಪ್ರಧಾನಿಗೆ ಕಾಶ್ಮೀರ ಪರಿಸ್ಥಿತಿಯ ಬಗ್ಗೆ ವಿಸ್ತೃತವಾದ ವಿವರಗಳನ್ನು ನೀಡಲಾಯಿತೆಂದು ಅವು ಹೇಳಿವೆ.
 ಕೇಂದ್ರ ಗೃಹ ಸಚಿವ ರಾಜ್‌ನಾಥ್‌ಸಿಂಗ್, ವಿತ್ತ ಸಚಿವ ಅರುಣ್‌ಜೇಟ್ಲಿ, ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್, ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವ ಜೀತೇಂದ್ರ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವರ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಮತ್ತಿತರರು ಭಾಗವಹಿಸಿದ್ದರು.
ಸೋಮವಾರದಂದು ಸಚಿವರಾದ ಪಾರಿಕ್ಕರ್ ಹಾಗೂ ಜೇಟ್ಲಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ತುರ್ತು ಸಭೆ ನಡೆಸಿ ಕಾಶ್ಮೀರ ಹಿಂಸಾಚಾರದ ಬಗ್ಗೆ ಚರ್ಚಿಸಿದ್ದರು. ಕಾಶ್ಮೀರ ಕಣಿವೆಯಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಜಾರಿಗೆ ತರಲು ಕೈಗೊಳ್ಳಲಾದ ಕ್ರಮಗಳ ಬಗ್ಗೆ ಕೇಂದ್ರೀಯ ಭದ್ರತಾ ಸಂಸ್ಥೆಗಳ ಮುಖ್ಯಸ್ಥರ ಅವರಿಗೆ ಸಭೆಯಲ್ಲಿ ಮಾಹಿತಿ ನೀಡಿದ್ದರು.
 ಅಮರನಾಥ ಯಾತ್ರಿಕರಿಗೆ ಭದ್ರತೆಯನ್ನು ಖಾತರಿಪಡಿಸಲು ಹಾಗೂ ಗಡಿಯಾಚೆಯಿಂದ ಉಗ್ರರ ಒಳನುಸುಳುವಿಕೆನ್ನು ತಡೆಯಲು ಭದ್ರತಾಪಡೆಗಳ ಕಾವಲನ್ನು ಬಿಗಿಗೊಳಿಸುವಂತೆ ಭದ್ರತಾಪಡೆಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News