ಕಲ್ಲಿದ್ದಲು ಕಂಪೆನಿಗಳ ದುರಾಸೆ: ಆದಿವಾಸಿ ಹಕ್ಕುಗಳಿಗೆ ಚ್ಯುತಿ

Update: 2016-07-14 17:13 GMT

ಭಾರತೀಯ ಕಾನೂನುಗಳ ಹುಳುಕುಗಳ ದುರ್ಲಾಭ ಪಡೆದು ದೇಶದ ಕಲ್ಲಿದ್ದಲು ಕಂಪೆನಿಗಳು ಹೊಸ ಖನಿಜ ಕೊಳ್ಳೆಹೊಡೆಯಲು ಭೂಸ್ವಾಧೀನ ಮಾಡಿಕೊಳ್ಳುತ್ತಿವೆ. ಹೀಗೆ ಕಾನೂನುಬಾಹಿರವಾಗಿ ಸ್ವಾಧೀನ ಮಾಡಿಕೊಳ್ಳುವಾಗ ಅಲ್ಲಿ ವಾಸವಿರುವ ದೇಶೀಯ ಅಥವಾ ಆದಿವಾಸಿ ಸಮುದಾಯಗಳ ಹಕ್ಕುಗಳನ್ನು ದಮನಿಸುತ್ತಿವೆ ಎನ್ನುವುದನ್ನು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಬಿಡುಗಡೆ ಮಾಡಿದ ಅಧ್ಯಯನ ವರದಿ ಬಹಿರಂಗಪಡಿಸಿದೆ. ಮಾನವಹಕ್ಕು ಸಂಘಟನೆಯು ಇತ್ತೀಚೆಗೆ ಅಧ್ಯಯನ ವರದಿ ಬಿಡುಗಡೆ ಮಾಡಿದ್ದು, ಕಾನೂನು ದೌರ್ಬಲ್ಯಗಳನ್ನು ಇಂಥ ಕಂಪೆನಿಗಳು ಹೇಗೆ ಬಳಕೆ ಮಾಡಿಕೊಂಡು ಅಲ್ಲಿ ವಾಸಿಸುವ ಆದಿವಾಸಿಗಳಿಗೆ ಭೂಸ್ವಾಧೀನ ಮತ್ತು ಪುನರ್ವಸತಿ ಸೌಲಭ್ಯಗಳನ್ನು ಹೇಗೆ ನಿರಾಕರಿಸುತ್ತಿವೆ ಎನ್ನುವುದನ್ನು ವಿಸ್ತೃತವಾಗಿ ವಿವರಿಸಿದೆ. ಇಂಥ ಯೋಜನೆಗಳನ್ನು ಗಣಿಗಾರಿಕೆ ಕಂಪೆನಿಗಳು ಮುಂದಿಟ್ಟಾಗ ಭಾರತದ ವಿವಿಧ ರಾಜ್ಯ ಸರಕಾರಗಳು ಮತ್ತು ಕೇಂದ್ರದ ಪರಿಸರ ಸಚಿವಾಲಯ ಕಂಪೆನಿಯ ಪರವಾಗಿ ನಿಲುವು ತಳೆಯುವ ಆಘಾತಕಾರಿ ಅಂಶ ಕೂಡಾ ಬಹಿರಂಗವಾಗಿದೆ.

ಅದೇ ಕಥೆ
‘‘ನಮ್ಮ ಸಾಂಪ್ರದಾಯಿಕ ಭೂಮಿ, ಹಕ್ಕು ಮತ್ತು ಸಂಪನ್ಮೂಲಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಮ್ಮನ್ನು ವ್ಯವಸ್ಥಿತವಾಗಿ ಹೊರಗಿಡಲಾಗುತ್ತದೆ ಎನ್ನುವುದು ಈ ಭಾಗದ ಆದಿವಾಸಿ ಸಮುದಾಯಗಳ ಅಳಲು. ಹಲವು ಮಂದಿ ಪರಿಹಾರ ಮತ್ತು ಪುನರ್ವಸತಿಗೆ ವರ್ಷಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ’’ ಎಂದು ವಿವರಿಸಿದೆ.
1973ರಿಂದೀಚೆಗೆ ಭಾರತ ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ ಹಾಗೂ ಅದರ ಉಪ ಕಂಪೆನಿಗಳು 14 ಸಾವಿರ ಆದಿವಾಸಿಗಳು ಸೇರಿದಂತೆ 87 ಸಾವಿರ ಮಂದಿಯನ್ನು ಸ್ಥಳಾಂತರಿಸಿವೆ ಎಂದು ವರದಿ ಹೇಳಿದೆ.
ಭಾರತದ ಬಹುತೇಕ ಕಲ್ಲಿದ್ದಲು ನಿಕ್ಷೇಪ ಜಾರ್ಖಂಡ್, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿವೆ. ದೇಶದ ಒಟ್ಟು ಜನಸಂಖ್ಯೆಯ ನಾಲ್ಕನೆ ಒಂದರಷ್ಟು ಬುಡಕಟ್ಟು ಮಂದಿ ಈ ರಾಜ್ಯಗಳಲ್ಲಿದ್ದಾರೆ. ಈ ಕಾರಣದಿಂದ ಕಲ್ಲಿದ್ದಲು ಕಂಪೆನಿಗಳು ಇಂಥ ಆದಿವಾಸಿಗಳ ಭೂಮಿಯನ್ನು ಸುಲಭವಾಗಿ ಸ್ವಾಧೀನಪಡಿಸಿಕೊಳ್ಳುತ್ತಿವೆ. ಅಂದರೆ ಆದಿವಾಸಿಗಳ ಗಮನಕ್ಕೆ ಬಾರದಂತೆ ಅವರ ಭೂಮಿ ಆಪೋಶನವಾಗಿರುತ್ತದೆ.
ಉದಾಹರಣೆಗೆ ಛತ್ತೀಸ್‌ಗಢದ ಕುಸ್ಮುಂಡಾ ಎಂಬ ಪ್ರದೇಶದ ಮಹೇಂದ್ರ ಸಿಂಗ್ ಕನ್ವರ್ ಅವರ ಕಥೆ ಕೇಳಿ. ಇವರನ್ನು 2014ರಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂದರ್ಶಿಸಿತ್ತು. ಕುಸ್ಮುಂಡಾ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಕಲ್ಲಿದ್ದಲು ನಿಕ್ಷೇಪವಿದೆ. ತನ್ನ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು, ಕಲ್ಲಿದ್ದಲು ಸಚಿವಾಲಯ, 2009ರಲ್ಲಿ ನಾಲ್ಕು ಗ್ರಾಮಗಳನ್ನು ಗಣಿಗಾರಿಕೆಗಾಗಿ ಸ್ವಾಧೀನಪಡಿಸಿಕೊಳ್ಳುವ ನೋಟಿಸ್ ನೀಡಿತು. ಅದರಲ್ಲಿ ಕನ್ವರ್ ವಾಸಿಸುವ ಪದಾನಿಯಾ ಗ್ರಾಮವೂ ಒಂದು.
‘‘ನಮಗೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಯಾವ ನೋಟಿಸ್ ಕೂಡ ತಲುಪಿಲ್ಲ. ಆದರೆ ನಮ್ಮ ಭೂಮಿ ಕೋಲ್ ಇಂಡಿಯಾದ ಉಪಘಟಕವಾದ ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ವಶದಲ್ಲಿದೆ ಎನ್ನುವುದು ನಮಗೆ ಇತ್ತೀಚೆಗೆ ಗೊತ್ತಾಗಿದೆ. ಆದರೆ ನಮಗೆ ಯಾವಾಗ ಪರಿಹಾರ ಸಿಗುತ್ತದೆ ಎನ್ನುವುದು ತಿಳಿಯದು’’ ಎಂದು ಕನ್ವರ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಹೀಗೆ ಭೂಸ್ವಾಧೀನದ ಬಗ್ಗೆ ತಿಳಿಯದ ವ್ಯಕ್ತಿ ಕನ್ವರ್ ಮಾತ್ರ ಅಲ್ಲ. 2014ರಲ್ಲಿ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ತನ್ನ ಉತ್ಪಾದನೆಯನ್ನು ನಾಲ್ಕುಪಟ್ಟು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿ, ಸುಮಾರು 13 ಸಾವಿರ ವಾಸತಾಣಗಳನ್ನೊಳಗೊಂಡ ಹಲವು ಗ್ರಾಮಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಹೇಳಿತ್ತು. ಈ ಸಂಬಂಧ ಕಲ್ಲಿದ್ದಲು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, 30 ದಿನಗಳ ಒಳಗಾಗಿ ಜನತೆಗೆ ಆಕ್ಷೇಪಗಳನ್ನು ಸಲ್ಲಿಸಬೇಕು ಎಂದು ಸೂಚಿಸಿತ್ತು. ಆದರೆ ಈ ಐದು ಗ್ರಾಮಗಳ ಬಹುತೇಕ ಮಂದಿಗೆ ಈ ನೋಟಿಸ್ ಗಮನಕ್ಕೇ ಬಂದಿಲ್ಲ.
‘‘ಸ್ವಾಧೀನ ನೋಟಿಸನ್ನು ಗ್ರಾಮಪಂಚಾಯತ್ ಕಚೇರಿಯ ಗೋಡೆಗೆ ಅಂಟಿಸಲಾಗಿದೆ. ಇದನ್ನು ನಾವು ಹೇಗೆ ಆಕ್ಷೇಪಿಸಲು ಸಾಧ್ಯ’’ ಎಂದು ಆಮ್‌ಗಾಂವ್ ಗ್ರಾಮದ ವಿದ್ಯಾ ವಿನೋದ್ ಮಹಾಂತ ಹೇಳುತ್ತಾರೆ. ಆದರೆ ಇತರ ಕೆಲವರು ತಮ್ಮ ಆಕ್ಷೇಪಗಳಿಗೆ ಸ್ಪಂದನೆ ಸಿಕ್ಕಿದೆ ಎಂದು ಹೇಳುತ್ತಾರೆ.

ಕಾನೂನು ದೋಷ
ಕಲ್ಲಿದ್ದಲು ನಿಕ್ಷೇಪ ಇರುವ ಕ್ಷೇತ್ರಗಳ (ಸ್ವಾಧೀನ ಮತ್ತು ಅಭಿವೃದ್ಧಿ) ಕಾಯ್ದೆ-1957ರ ಅನ್ವಯ ಸರಕಾರಕ್ಕೆ ಭೂಸ್ವಾಧೀನಕ್ಕೆ ಅಧಿಕಾರ ಇದೆ. ಹೀಗೆ ಭೂಸ್ವಾಧೀನಕ್ಕೆ ಸರಕಾರ ಮಾಡಬೇಕಿರುವ ಏಕೈಕ ಕೆಲಸ ಎಂದರೆ, ಭೂಸ್ವಾಧೀನದ ಉದ್ದೇಶದ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡುವುದು.
‘‘ತೊಂದರೆಗೀಡಾಗುವ ಸಮುದಾಯದ ಸಲಹೆ ಪಡೆಯುವ ಅಗತ್ಯವಿಲ್ಲ ಅಥವಾ ಅಂತಾರಾಷ್ಟ್ರೀಯ ಕಾನೂನುಗಳ ಅನುಗುಣವಾಗಿ ಅವರಿಂದ ಮುಕ್ತ, ಮುಂಚಿತ ಹಾಗೂ ಮಾಹಿತಿ ನೀಡಿ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ’’ ಎಂದು ವರದಿ ವಿವರಿಸಿದೆ.
ಇಂತಹ ಸ್ವಾಧೀನಕ್ಕೆ ಆಕ್ಷೇಪಿಸುವ ಮತ್ತು ಪರಿಹಾರದ ಹಕ್ಕುದಾವೆ ಸಲ್ಲಿಸುವ ವ್ಯಕ್ತಿಗಳು, ತಮ್ಮ ಲಿಖಿತ ಆಕ್ಷೇಪಗಳನ್ನು ಕಲ್ಲಿದ್ದಲು ಸಚಿವಾಲಯ ಸೂಚಿಸುವ ಪ್ರಾಧಿಕಾರಕ್ಕೆ 30 ದಿನಗಳ ಒಳಗಾಗಿ ಸಲ್ಲಿಸಬೇಕಾಗುತ್ತದೆ. ಇಷ್ಟಾಗಿಯೂ ಸ್ವಾಧೀನ ಮಾಡಿಕೊಳ್ಳಬೇಕೇ ಬೇಡವೇ ಎನ್ನುವುದನ್ನು ಅಂತಿಮವಾಗಿ ಸರಕಾರ ನಿರ್ಧರಿಸುತ್ತದೆ.
‘‘ಸಚಿವಾಲಯ ಅಧಿಕೃತ ಗಜೆಟ್‌ನಲ್ಲಿ ಅಧಿಸೂಚನೆ ಹೊರಡಿಸುವುದರಿಂದ ಎದುರಾಗುವ ಸಮಸ್ಯೆ ಎಂದರೆ, ಇದರಿಂದ ತೊಂದರೆಗೀಡಾಗುವ ಮಂದಿ ದೂರದ ಬೆಟ್ಟಗುಡ್ಡಗಳಲ್ಲಿ ಇರುತ್ತಾರೆ. ಅವರಿಗೆ ಈ ಪ್ರಕಟಣೆ ಗಮನಕ್ಕೆ ಬಂದಿರುವುದಿಲ್ಲ. ಇದಕ್ಕಿಂತ ಹೆಚ್ಚಾಗಿ ಈ ಗ್ರಾಮಗಳಲ್ಲಿ ಇರುವ ಬಹಳಷ್ಟು ಮಂದಿ ಅಕ್ಷರಸ್ಥರಲ್ಲ ಹಾಗೂ ಕಾನೂನುಬದ್ಧವಾಗಿ ಪುನರ್ವಸತಿ ಹಾಗೂ ಪರಿಹಾರ ಪಡೆಯುವ ಹಕ್ಕಿನ ಬಗ್ಗೆ ಇವರಿಗೆ ಕಲ್ಪನೆಯೂ ಇಲ್ಲ’’ ಎಂದು 2007ರಲ್ಲಿ ಸಂಸದೀಯ ಸಮಿತಿ ಹೇಳಿದೆ.
‘‘ಕಲ್ಲಿದ್ದಲು ನಿಕ್ಷೇಪ ಕ್ಷೇತ್ರಗಳ ಕಾಯ್ದೆಯ ಅನ್ವಯ, ಇಂಥ ಭೂಸ್ವಾಧೀನ ಪ್ರಕ್ರಿಯೆಗಿಂತ ಮೊದಲು ಮಾನವ ಹಕ್ಕು ಪರಿಣಾಮದ ಮೌಲ್ಯಮಾಪನಕ್ಕೆ ಅಧ್ಯಯನವನ್ನು ನಡೆಸಬೇಕು’’ ಎಂದು ವರದಿ ಹೇಳುತ್ತದೆ. ಈ ಸ್ವಾಧೀನದಿಂದ ತೊಂದರೆಗೀಡಾಗುವ ಭೂಮಾಲಕರಲ್ಲದವರ ಸಲಹೆ ಪಡೆಯುವುದು ಅಗತ್ಯವಿಲ್ಲ. ಉದಾಹರಣೆಗೆ, ಸ್ವಾಧೀನಕ್ಕೆ ಒಳಗಾಗುವ ಜಮೀನನ್ನೇ ಜೀವನಾಧಾರವಾಗಿ ಹೊಂದಿರುವ ಭೂರಹಿತ ಕಾರ್ಮಿಕರನ್ನು ಸಂಪರ್ಕಿಸಬೇಕಾಗಿಲ್ಲ. ಇದರ ಜತೆಗೆ ಬಲಾತ್ಕಾರದ ಒಕ್ಕಲೆಬ್ಬಿಸುವಿಕೆ ಬಗ್ಗೆ ಕೂಡಾ ಯಾವುದೇ ರಕ್ಷಣೆ ಇಲ್ಲ
ಈ ಕಾಯ್ದೆಯು ಸಮುದಾಯಗಳ ಉಳುಮೆ ಹಕ್ಕಿನ ಸಂರಕ್ಷಣೆಯನ್ನೂ ಕಡೆಗಣಿಸಿದೆ. ಇದು ಕೋಲ್ ಇಂಡಿಯಾ ಲಿಮಿಟೆಡ್‌ಗೆ, ತಮ್ಮ ಕಾರ್ಯಾಚರಣೆಯಿಂದ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದ್ದರೂ, ಅದನ್ನು ಮುಂದುವರಿಸಲು ಕಾನೂನು ತಳಹದಿಯನ್ನು ನಿರ್ಮಿಸಿಕೊಟ್ಟಿದೆ

ನಿರ್ಬಂಧಗಳ ನಿರ್ಲಕ್ಷ
ಭೂಸ್ವಾಧೀನಕ್ಕೆ ಮುನ್ನ ತೊಂದರೆಗೀಡಾಗುವ ಜನರ ಜತೆ ಚರ್ಚಿಸಬೇಕು ಎನ್ನುವುದನ್ನು ಕಾನೂನು ಸ್ಪಷ್ಟಪಡಿಸಿದ್ದರೂ, ಇವುಗಳನ್ನು ಪಾಲಿಸುವುದಿಲ್ಲ ಎಂದು ವರದಿ ಹೇಳಿದೆ.
‘‘ಪರಿಸರ (ಸಂರಕ್ಷಣಾ) ಕಾಯ್ದೆ- 1986ರ ಅನ್ವಯ, ಕಂಪೆನಿ ಗಳು ಇಂಥ ತೊಂದರೆಗೀಡಾಗುವ ಜನರ ಜತೆ ಚರ್ಚಿಸಿ, ಅವರ ಕಳಕಳಿಯನ್ನು ಆಲಿಸಬೇಕು. ಆದರೆ ಇದನ್ನು ಕಾಟಾಚಾರಕ್ಕೆ ಮಾಡಲಾಗುತ್ತದೆ. ಇದರ ಜತೆಗೆ ಪರಿಸರ ಪರಿಣಾಮದ ಮೌಲ್ಯಮಾಪನ ಅಧಿಸೂಚನೆ ಹೇಳುವಂತೆ, ಹೀಗೆ ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ಮುನ್ನ ಈ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಇದರ ಜತೆಗೆ ಕಂಪೆನಿಯು ಕರಡು ಪರಿಸರ ಪರಿಣಾಮ ಮೌಲ್ಯಮಾಪನ ವರದಿಯನ್ನು ಜಿಲ್ಲಾ ಅಧಿಕಾರಿಗಳಿಗೆ ಸಲ್ಲಿಸಬೇಕು. ಇದನ್ನು ಅಧಿಕಾರಿಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಮಾಡಬೇಕು. ಇದರಿಂದ ಸಾರ್ವಜನಿಕರು, ಉದ್ದೇಶಿತ ಯೋಜನೆಯ ಅಪಾಯಗಳ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯ ವಾಗುತ್ತದೆ. ಆದರೆ ಈ ವರದಿಯನ್ನು ಯಾರೂ ಅರ್ಥ ಮಾಡಿ ಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ರೀತಿಯಲ್ಲಿ ವರದಿಗಳನ್ನು ಸಿದ್ದಪಡಿಸಲಾಗುತ್ತದೆ’’ ಎನ್ನುವುದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಆರೋಪ.
ಇಂತಹ ವರದಿಗಳು ಸಾಮಾನ್ಯವಾಗಿ ತೀರಾ ತಾಂತ್ರಿಕ ಭಾಷೆ ಯನ್ನು ಒಳಗೊಂಡಿರುತ್ತವೆ. ದುರದೃಷ್ಟದ ವಿಷಯವೆಂದರೆ, ಕಂಪೆನಿ ಯಾಗಲೀ, ಮಾಲಿನ್ಯ ನಿಯಂತ್ರಣ ಮಂಡಳಿಯಾಗಲೀ ಅಥವಾ ಇತರ ಯಾವುದೇ ಪ್ರಾಧಿಕಾರಗಳಾಗಲೀ, ಇದನ್ನು ಸರಳವಾಗಿ ನೀಡಬೇಕು ಎಂಬ ಕಡ್ಡಾಯ ಇಲ್ಲ. ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನವನ್ನಂತೂ ಬಹುತೇಕ ಕೈಗೊಳ್ಳುವುದೇ ಇಲ್ಲ
‘‘ಇತ್ತ್ತೀಚೆಗಿನ ವರ್ಷಗಳಲ್ಲಿ, ಎಲ್ಲ ಸರಕಾರಗಳು, ಕೆಲ ಗಣಿಗಾರಿಕೆ ಕಂಪೆನಿಗಳ ಸಾರ್ವಜನಿಕ ಅಹವಾಲು ಸ್ವೀಕಾರವನ್ನು ದುರ್ಬಲಗೊಳಿಸುವ ಮೂಲಕ ಸ್ಥಳೀಯ ಸಮುದಾಯಗಳನ್ನು ಅಪಾಯದ ಅಂಚಿಗೆ ತಳ್ಳುತ್ತವೆ’’ ಎಂದು ವರದಿ ಹೇಳಿದೆ.
‘‘ಪರಿಸರ ಪರಿಣಾಮ ಮೌಲ್ಯಮಾಪನ ವರದಿಯನ್ನು ಪರಿಸರ ಇಲಾಖೆಯ ಒಪ್ಪಿಗೆ ನೀಡಲು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಆದರೆ ಬಹುತೇಕ ಪ್ರಕರಣಗಳಲ್ಲಿ, ಇಂಥ ವರದಿಗಳನ್ನು ಕಂಪೆನಿಗಳೇ ಆಯ್ಕೆ ಮಾಡಿ ಪಾವತಿ ಮಾಡುವ ಸಲಹಾ ಸಂಸ್ಥೆಗಳೇ ಸಿದ್ದಪಡಿಸುತ್ತವೆ. ಇಂಥ ಮೌಲ್ಯಮಾಪನ ಒಂದು ದೊಡ್ಡ ಪ್ರಹಸನ’’ ಎಂದು ಹಿಂದಿನ ಪರಿಸರ ಖಾತೆ ಸಚಿವರು ಅಭಿಪ್ರಾಯಪಟ್ಟಿದ್ದರು.
‘‘ಇದನ್ನು ನಾನು ಬಹಿರಂಗವಾಗಿ ಒಪ್ಪಿಕೊಳ್ಳುತ್ತೇನೆ. ನಮ್ಮ ವ್ಯವಸ್ಥೆಯಲ್ಲಿ, ಯೋಜನೆಯನ್ನು ಆರಂಭಿಸುವ ವ್ಯಕ್ತಿ, ಮೌಲ್ಯಮಾಪನ ವರದಿಯನ್ನೂ ತಯಾರಿಸುತ್ತಾನೆ’’ ಎಂದು ಸಚಿವರು ಹೇಳಿದ್ದಾಗಿ ವರದಿ ಸ್ಪಷ್ಟಪಡಿಸಿದೆ.

ಕನಿಷ್ಠ ಸ್ಪಂದನೆ
ಕುಸ್ಮುಂಡಾದಲ್ಲಿ ಛತ್ತೀಸ್‌ಗಢ ಪರಿಸರ ಸಂರಕ್ಷಣಾ ಮಂಡಳಿ 2008ರ ಆಗಸ್ಟ್‌ನಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ ಆಯೋಜಿಸಿತು. ಇದರಲ್ಲಿ ಗಣಿಗಾರಿಕೆ ಸಾಮರ್ಥ್ಯವನ್ನು ವಾರ್ಷಿಕ 10 ರಿಂದ 15 ದಶಲಕ್ಷ ಟನ್ ಹೆಚ್ಚಿಸುವ ಸಲುವಾಗಿ ಗಣಿಗಾರಿಕೆ ವಿಸ್ತರಿಸುವ ಬಗ್ಗೆ ಚರ್ಚಿಸಲು ಈ ಸಭೆ ಆಯೋಜಿಸಲಾಗಿತ್ತು. ಮಂಡಳಿ ಸ್ಥಳೀಯ ಪತ್ರಿಕೆಗಳಲ್ಲಿ ಈ ಸಂಬಂಧ ನೋಟಿಸ್ ಕೂಡಾ ಪ್ರಕಟಿಸಿತು. ಜಿಲ್ಲಾ ಕಚೇರಿಗೆ ಒಂದು ಪ್ರತಿಯನ್ನೂ ರವಾನಿಸಿತು. ಆದರೂ ಇಲ್ಲಿ ಶೇ. 33ರಷ್ಟು ಮಂದಿ ಅನಕ್ಷರಸ್ಥರಾಗಿರುವುದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಇಷ್ಟೇ ಅಲ್ಲದೇ, ಸಭೆಯಲ್ಲಿ ಪಾಲ್ಗೊಂಡ ಗ್ರಾಮಸ್ಥರ ಕಳಕಳಿಗೆ ಕನಿಷ್ಠ ಸ್ಪಂದನೆಯೂ ದೊರಕಿಲ್ಲ’’ ಎನ್ನುವುದನ್ನು ವರದಿ ಉಲ್ಲೇಖಿಸಿದೆ.
‘‘ಪುನರ್ವಸತಿ, ಗಣಿಗಾರಿಕೆಯಿಂದ ಕೃಷಿ ಭೂಮಿಗೆ ಆಗುವ ಹಾನಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಾವು ಕಳವಳ ವ್ಯಕ್ತಪಡಿಸಿದ್ದೆವು. ಆದರೆ ಛತ್ತೀಸ್‌ಗಢ ಪರಿಸರ ಸಂರಕ್ಷಣಾ ಮಂಡಳಿ ಅಧಿಕಾರಿಗಳು ಇವನ್ನು ಅಪ್ರಸ್ತುತ ಎಂದು ತಿರಸ್ಕರಿಸಿದರು’’ ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಸಭೆಯ ಅಧಿಕೃತ ದಾಖಲೆಯ ಪ್ರಕಾರ, ಹಲವು ವಿಷಯಗಳನ್ನು ಇಲ್ಲಿ ಎತ್ತಲಾಯಿತಾದರೂ, ಸ್ಥಳೀಯರ ಕಳಕಳಿಗೆ ಸ್ಪಂದಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹಾಲಿ ಇರುವ ಗಣಿಗಾರಿಕೆ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ 2014ರಲ್ಲಿ ನಡೆದ ಇನ್ನೊಂದು ಅಹವಾಲು ಸ್ವೀಕಾರ ಸಭೆಯಲ್ಲಿ ಅಮ್ನೆಸ್ಟಿ ಪ್ರತಿನಿಧಿ ಭಾಗವಹಿಸಿದ್ದರು. ಈ ಸಭೆಗೆ ಭಾರೀ ಪ್ರಮಾಣದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸ್ಥಳೀಯರು ಹೆಚ್ಚು ಮಾತನಾಡದಂತೆ ತಡೆಯಲು ಅವರಿಗೆ ಮೊದಲೇ ಸೂಚನೆ ನೀಡಲಾಗಿತ್ತು. ಮಾತನಾಡಲು ಅವಕಾಶ ಸಿಕ್ಕಿದವರು, ವಾಯು ಗುಣಮಟ್ಟ ಮತ್ತು ಅಂತರ್ಜಲ ಮಾಲಿನ್ಯದ ಬಗೆಗಿನ ಪರಿಣಾಮವನ್ನು ತಿರುಚಲಾಯಿತು. ಇಡೀ ಸಭೆಯಲ್ಲಿ ಒಬ್ಬ ಮಾತ್ರ ವಿಸ್ತರಣೆ ಪರವಾಗಿದ್ದ. ಆತ ಕೋಲ್ ಇಂಡಿಯಾದ ಉದ್ಯೋಗಿ ಎಂದು ವರದಿ ಹೇಳಿದೆ.

ಕಳವಳಕ್ಕೆ ನಿರ್ಲಕ್ಷ್ಯ
ಇಷ್ಟಾಗಿಯೂ ಫೆಬ್ರವರಿಯಲ್ಲಿ ಪರಿಸರ ಸಚಿವಾಲಯವು ಗಣಿಗಾರಿಕೆ ವಿಸ್ತರಣೆಗೆ ಅನುಮತಿ ನೀಡಿತು. ಈ ಕುರಿತು ಎದ್ದಿದ್ದ ಎಲ್ಲ ಕಳಕಳಿಗಳನ್ನು ನಿರ್ಲಕ್ಷಿಸಿತು. ಈ ನಿರ್ಧಾರಕ್ಕೆ ಕಾರಣ ಏನು ಎಂಬ ಬಗ್ಗೆ ಉತ್ತರಿಸಲು ಸಚಿವಾಲಯದ ಅಧಿಕಾರಿಗಳು ನಿರಾಕರಿಸಿದ್ದಾರೆ.
ಸಾರ್ವಜನಿಕ ಅಹವಾಲು ಸ್ವೀಕಾರ ಹಾಗೂ ಅದರ ವಿವರಗಳನ್ನು ಸಮಗ್ರವಾಗಿ ನೀಡಬೇಕು ಎಂದು ಕಾನೂನಿನಲ್ಲಿ ಕಡ್ಡಾಯ ಮಾಡಿರುವುದನ್ನು ಗಣಿಗಾರಿಕೆಗೆ ಇರುವ ಅಧಿಕಾರಶಾಹಿಯ ತಡೆ ಎಂದು ಪರಿಗಣಿಸಲಾಗುತ್ತದೆಯೇ ವಿನಃ ಜನರ ನೈಜ ಕಳಕಳಿಯನ್ನು ಬಗೆಹರಿಸಲು ಇರುವ ವ್ಯವಸ್ಥೆ ಎಂದು ಪರಿಗಣಿಸುವುದಿಲ್ಲ.
‘‘ಒಂದು ಭೂಮಿಯ ಹಕ್ಕುಪತ್ರ ನೀಡುವುದು ನನಗೆ ಮುಖ್ಯವೇ ಅಥವಾ ರಾಜ್ಯ ಸರಕಾರದ ಯೋಜನೆಯನ್ನು ಪರಿವರ್ತಿಸುವುದು ಮುಖ್ಯವೇ’’ ಎಂದು ನಿವೃತ್ತ ವಿಭಾಗೀಯ ಅರಣ್ಯಾಧಿಕಾರಿ ಪ್ರಶ್ನಿಸುತ್ತಾರೆ. ‘‘ಸ್ಥಳೀಯರ ಹಕ್ಕುಗಳಿಗಾಗಿ ನಾನು ಅಭಿವೃದ್ಧಿಯನ್ನು ತಡೆಯುವಂತಿಲ್ಲ’’ ಎನ್ನುವುದು ಅವರ ಅಭಿಮತ.
‘‘ಭಾರತೀಯ ಅಧಿಕಾರಿಗಳು ಹಾಗೂ ಕಂಪೆನಿಗಳು ಸಂಕೀರ್ಣವಾದ ನುಣುಚಿಕೊಳ್ಳಲು ಅವಕಾಶ ಇರುವ ಕಾನೂನನ್ನು ಬಳಸಿಕೊಂಡು, ಸ್ಥಳೀಯ ಸಮುದಾಯ ತಲೆತಲಾಂತರದಿಂದ ಬಳಸಿಕೊಂಡು ಬಂದ ಸಂಪನ್ಮೂಲಗಳ ಹಕ್ಕುಗಳನ್ನು ನಿರಾಕರಿಸಿದ್ದಾರೆ. ದೇಶೀಯ ಕಾನೂನುಗಳನ್ನು ಉಲ್ಲಂಘಿಸಿರುವುದು ಮಾತ್ರವಲ್ಲದೆ, ಆದಿವಾಸಿ ಸಮುದಾಯಗಳ ಮಾನವ ಹಕ್ಕುಗಳ ಕಾನೂನಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಹೊಣೆಗಾರಿಕೆಯನ್ನೂ ಕಡೆಗಣಿಸಿದ್ದಾರೆ’’ ಎಂದು ವರದಿ ಅಭಿಪ್ರಾಯಪಟ್ಟಿದೆ.

Writer - ಮಾಯಾಂಕ್ ಜೈನ್

contributor

Editor - ಮಾಯಾಂಕ್ ಜೈನ್

contributor

Similar News