ಇಂಡೋನೇಶ್ಯದ ಅತ್ಯುನ್ನತ ಶಿಖರವೇರಿದ ಅರುಣಿಮಾ!

Update: 2016-07-15 13:35 GMT

ಲಕ್ನೋ, ಜು.15: ಮೌಂಟ್ ಎವರೆಸ್ಟ್ ಏರುವ ಮೂಲಕ ದಾಖಲೆ ನಿರ್ಮಿಸಿದ್ದ ಕೃತಕ ಕಾಲುಗಳ ಅರುಣಿಮಾ ಸಿನ್ಹಾ, ಇಂಡೋನೇಶ್ಯದ ಅತ್ಯುನ್ನತ ಶಿಖರವನ್ನು ಆರೋಹಿಸುವ ಮೂಲಕ ತನ್ನ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿಯನ್ನು ಸೇರಿಸಿದ್ದಾರೆ.

ಅತ್ಯಂತ ಕಠಿಣವಾಗಿರುವ, 4,484 ಮೀ. ಎತ್ತರದ ಕಾರ್ಸ್ಟೆಂಝ್ ಪಿರಮಿಡ್ ಶಿಖರವನ್ನು ಅವರು ದೃಢ ಸಂಕಲ್ಪದಿಂದ ಏರಿದ್ದಾರೆಂದು ಅರುಣಿಮಾರ ಕಚೇರಿಯು ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಎಲ್ಲ ಖಂಡಗಳ ಅತ್ಯುನ್ನತ ಶಿಖರಗಳನ್ನೇರಿ, ಅಲ್ಲಿ ಭಾರತದ ಧ್ವಜವನ್ನು ಅರಳಿಸುವುದು ಅರುಣಿಮಾರ ಗುರಿಯಾಗಿದೆ. ಅವರೀಗಾಗಲೇ ಏಶ್ಯದ ಮೌಂಟ್ ಎವರೆಸ್ಟ್, ಆಫ್ರಿಕದ ಕಿಲಿಮಂಜರೊ, ಯುರೋಪ್‌ನ ಎಲ್‌ಬ್ರೂಸ್, ಆಸ್ಟ್ರೇಲಿಯದ ಕೊಸಿರ್ಕೊ, ದಕ್ಷಿಣ ಅಮೆರಿಕದ ಅರ್ಜೆಂಟೀನಾದಲ್ಲಿರುವ ಅಕನ್ಕಾಗುವ ಹಾಗೂ ಇಂಡೋನೇಶ್ಯದ ಕಾರ್ಸ್ಟೆಂಝ್ ಪಿರಮಿಡ್ (ಪುಂಕಾಕ್ ಜಯ) ಶಿಖರಗಳನ್ನು ಆರೋಹಿಸಿದ್ದಾರೆ.

1988ರಲ್ಲಿ ಜನಿಸಿರುವ ಅರುಣಿಮಾ, ಎವರೆಸ್ಟ್ ಶಿಖರ ಏರಿರುವ ಕಾಲಿಲ್ಲದ (ಕೃತಕ ಕಾಲುಗಳ) ಪ್ರಥಮ ಮಹಿಳೆ ಎನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News