ಬಾಲ್ಯ ವಿವಾಹದ ವಿರುದ್ಧ ಜಾಗೃತಿ ಮೂಡಬೇಕಾಗಿದೆ
ಅಜ್ಜಿ ಆಸೆಗೆ ನಾ ಬಲಿ..!
‘‘ನನಗೆ 14 ವರ್ಷ, ಮನೆಯೊಳಗಿಂತ ಹೆಚ್ಚಾಗಿ ಬೀದಿಯಲ್ಲಿಯೇ ಸ್ನೇಹಿತರೊಂದಿಗೆ ಆಟ ಆಡುತ್ತಿದ್ದೆ. ಆದರೆ, ಏಕಾಏಕಿ 15 ದಿನದಲ್ಲಿ ನನಗೆ ಮದುವೆ ಎಂದು ಅಮ್ಮ ಹೇಳಿದಳು. ಇದಕ್ಕೆ ಅಮ್ಮನ ವಿರೋಧವಿತ್ತು. ಆದರೆ, ಅಜ್ಜಿಗೆ ವಯಸ್ಸಾಗಿದೆ, ನಿನ್ನ ಮದುವೆ ನೋಡಬೇಕಂತೆ ಎಂದು ಅಪ್ಪ ಹೇಳಿದರು ಅಷ್ಟೆ. ಬಳಿಕ ಯಾರೂ ಮಾತನಾಡಲಿಲ್ಲ. ನನ್ನ ಮದುವೆ ಆಗಿಬಿಟ್ಟಿತು.’’
ಐದು ವರ್ಷದ ಹಿಂದೆಯೇ ಬಾಲ್ಯ ವಿವಾಹಕ್ಕೆ ಗುರಿಯಾಗಿ ಈಗ ಇಲ್ಲಿನ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಊದುಬತ್ತಿ ಮಾರಾಟ ಮಾಡುವ ಸ್ತ್ರೀಯೊಬ್ಬರು ಪತ್ರಿಕೆಗೆ ಬಾಲ್ಯ ವಿವಾಹ ಕುರಿತು ಹೇಳಿದ್ದು ಹೀಗೆ.
ಧಾರ್ಮಿಕ ನಂಬಿಕೆ, ಸಂಪ್ರದಾಯಗಳ ಕಟ್ಟುಪಾಡುಗಳಿಂದಲೇ ಕರ್ನಾಟಕದಲ್ಲಿ ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತವಾಗಿರುವ ಆತಂಕದ ವಿಷಯ ಸಾಮಾಜಿಕ ಪರಿವರ್ತನಾ ಜನಾಂದೋಲನ ಹಾಗೂ ಕ್ರೈ ಸಂಸ್ಥೆ ನಡೆಸಿರುವ ಸಮೀಕ್ಷೆಗಳಲ್ಲಿ ಬೆಳಕಿಗೆ ಬಂದಿದೆ.
ರಾಯಚೂರು, ಕಲಬ್ಗುರ್ಗಿ, ಬೆಳಗಾವಿ, ಹಾವೇರಿ, ದಾವಣಗೆರೆ ಹಾಗೂ ಬೆಂಗಳೂರು ಸೇರಿ ಒಟ್ಟು 93 ಗ್ರಾಮಗಳಲ್ಲಿ ಬಾಲ್ಯ ವಿವಾಹಕ್ಕೆ ಬಲಿಯಾದ 18-25 ವಯೋಮಾನದ ಮಹಿಳೆಯರಿಗೆ ಸಮೀಕ್ಷೆಯ ವೇಳೆಯಲ್ಲಿ ಪ್ರಶ್ನಿಸಿದಾಗ ಧಾರ್ಮಿಕ ನಂಬಿಕೆ, ಹಿರಿಯರ ಕಟ್ಟುಪಾಡುಗಳು, ಜಾತಿ, ಆಸ್ತಿ ಹಕ್ಕಿನ ನಿರಾಕರಣೆ, ಪ್ರಚೋದನೆಗಳು, ವಲಸೆ, ಸಾಲ, ಭೂಹೀನತೆ, ಶಿಕ್ಷಣದ ನಿರಾಕರಣೆ, ಹೆಣ್ಣು ಮಕ್ಕಳ ಅಭದ್ರತೆ ಸೇರಿ ಇನ್ನಿತರೆ ಕಾರಣಗಳಿಂದಲೇ ಬಾಲ್ಯ ವಿವಾಹಕ್ಕೆ ಮುಂದಾಗಿರುವುದು ಗೊತ್ತಾಗಿದೆ.
ಸಮೀಕ್ಷೆಯಲ್ಲಿ ಶೇ. 75 ರಷ್ಟು ಮಂದಿ 15ರಿಂದ 17ನೆ ವರ್ಷದಲ್ಲಿ ಮದುವೆಯಾಗಿದ್ದು, ಎಲ್ಲ ಜಾತಿಗಳಲ್ಲೂ ಬಾಲ್ಯ ವಿವಾಹ ನಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಶೇ.32ರಷ್ಟು ದಲಿತ ಕುಟುಂಬಗಳಲ್ಲಿ 15 ವರ್ಷದಲ್ಲಿಯೇ ಮದುವೆ ಮಾಡಲಾಗಿದೆ. ಇನ್ನು ಬಾಲ್ಯ ವಿವಾಹಕ್ಕೆ ಗುರಿಯಾದ ಶೇ.29ರಷ್ಟು ಪುರುಷರು ಅನಕ್ಷರಸ್ಥರಾಗಿದ್ದಾರೆ. ಒಟ್ಟು ಶೇ.15 ರಷ್ಟು ಮಂದಿ ಶಾಲೆಗೆ ಹೋಗಿಲ್ಲ. ಇದರಲ್ಲಿ ಶೇ.82 ರಷ್ಟು ಮಂದಿ 10ನೆ ತರಗತಿ ನಂತರ ಶಾಲೆ ಬಿಟ್ಟಿದ್ದಾರೆ. ಅಲ್ಲದೆ, 67 ಕುಟುಂಬಗಳ ಪ್ರಕಾರ ಬಾಲ್ಯ ವಿವಾಹಕ್ಕೆ ಬಡತನವೇ ಕಾರಣವಾಗಿದೆ.
ಬಾಲ್ಯ ವಿವಾಹಗಳ ಹೊಸ ರೂಪ: ಬಾಲ್ಯ ವಿವಾಹಗಳು ಹೊಸ ರೂಪಗಳನ್ನು ಪಡೆಯುತ್ತಿದ್ದು, ಇದರಲ್ಲಿ ಸಾಮೂಹಿಕ ವಿವಾಹಗಳು ಹಾಗೂ ಉತ್ತರ ಕರ್ನಾಟಕದ ‘ಯಾದಿ ಮೇ-ಶಾದಿ’, ಗುಜ್ಜರ್ ಮದುವೆಗಳು ಪ್ರಮುಖವಾಗಿವೆ.
ವರದಕ್ಷಿಣೆ ಪದ್ಧತಿಯ ಭಯದೊಂದಿಗೆ ಹೆಚ್ಚು ಬಾಲ್ಯವಿವಾಹಗಳು ನಡೆದಿವೆ. ಅಲ್ಲದೆ, ಸಮೀಕ್ಷೆಯ ವೇಳೆ ಶೇ.98 ರಷ್ಟು ಜನ ವರದಕ್ಷಿಣೆ ಪದ್ಧತಿಗೆ ಕಡಿವಾಣ ಹಾಕಬೇಕೆಂದು ಧ್ವನಿಗೂಡಿಸಿದ್ದಾರೆ. ಇನ್ನು ಕೆಲವರು ಮನೆಯಲ್ಲಿ ಹೆಣ್ಣುಮಕ್ಕಳಿಗೆ ಮುಕ್ತವಾದ ಪರಿಸರ ಇಲ್ಲದ ಕಾರಣದಿಂದಾಗಿಯೇ ವಿವಾಹಕ್ಕೆ ಮುಂದಾಗಿದ್ದಾರೆ.
ಬಾಲ್ಯ ವಿವಾಹದ ಪರಿಣಾಮ: ಬಾಲ್ಯ ವಿವಾಹವಾದ ಹಿನ್ನೆಲೆಯಲ್ಲಿ ಶೇ. 97 ಮಂದಿ ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟಿದ್ದಾರೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ, ಗರ್ಭಪಾತ, ಗರ್ಭ ಚೀಲಕ್ಕೆ ಪೆಟ್ಟು ಬೀಳುವುದರಿಂದ ಹೆರಿಗೆ ಸಮಯದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂದು ವೈದ್ಯಕೀಯ ಮೂಲಗಳು ದೃಢಪಡಿಸಿವೆ.
ಅದೇ ರೀತಿ, ವಿಕಲಾಂಗ ಮಕ್ಕಳು ಜನಿಸುವ ಸಂಭವ, ಲೈಂಗಿಕ ದೌರ್ಜನ್ಯ, ರಕ್ತ ಹೀನತೆ, ಶಿಶುಮರಣ, ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವುದು ಸೇರಿದಂತೆ ಇತರೆ ಪರಿಣಾಮಗಳು ಬೀರಲಿವೆ.
ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುವ ಐದನೆ ದೊಡ್ಡ ರಾಷ್ಟ್ರ ಭಾರತ ಎಂದು ಅಂತಾರಾಷ್ಟ್ರೀಯ ಬಾಲ ವಿವಾಹ ಪದ್ಧತಿ ವಿರುದ್ಧದ ಸಮೀಕ್ಷೆಗಳು ಹೇಳಿವೆ. ಅಲ್ಲದೆ, 2011ರ ಜನಗಣತಿ ಪ್ರಕಾರ 10.3 ಕೋಟಿ ಬಾಲಕಿಯರಿಗೆ ಬಾಲ್ಯ ವಿವಾಹವನ್ನು ಬಲವಂತವಾಗಿ ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಒಟ್ಟಾರೆ ಬಾಲ್ಯ ವಿವಾಹವು ಒಂದು ಗಂಭೀರ ಸಮಸ್ಯೆಯಾಗಿದ್ದು, ಮಕ್ಕಳ ಮತ್ತು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಇಂತಹ ದುಷ್ಟ ಪದ್ಧತಿಗಳಿಂದ ಮಕ್ಕಳು ನ್ಯಾಯಸಮ್ಮತ ಮತ್ತು ಸಂತೋಷಕರ ಬಾಲ್ಯ ಜೀವನದಿಂದ ವಂಚಿತರಾಗಿದ್ದು, ಇದರ ವಿರುದ್ಧ ನಾಗರಿಕ ಸಮಾಜ ಜಾಗೃತಿ ಮೂಡಿಸಲು ಮುಂದಾಗಬೇಕಿದೆ.
ಸೂಕ್ತ ಅರಿವು
ಬಾಲ್ಯ ವಿವಾಹಕ್ಕೆ ಮದ್ದು
ರಾಜ್ಯದಲ್ಲಿ ಸಂಪೂರ್ಣವಾಗಿ ಬಾಲ್ಯ ವಿವಾಹ ತಡೆಯಲು ಅರಿವು ಬೇಕಾಗಿದೆ. ಅದರಲ್ಲಿಯೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈಗಲೂ ಕದ್ದು-ಮುಚ್ಚಿ ವಿವಾಹಗಳು ನಡೆದಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಿದ್ದು, ಇದಕ್ಕೆ ಸಾರ್ವಜನಿಕರ ಆಸಕ್ತಿ ಮುಖ್ಯ.
-ಎಂ.ವೀಣಾ, ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಇಲಾಖೆ
ಶಾಲೆ ಮುಚ್ಚಬಾರದು
ಹೆಣ್ಣು ಮಕ್ಕಳಿಗೆ ಶಾಲೆಯು ಒಂದು ಸುರಕ್ಷಿತ ಸ್ಥಳವಾಗಿದ್ದು, ಬಡತನ, ಜಾತಿ, ಬಾಲ್ಯ ವಿವಾಹದ ವಿಷವರ್ತುಲವನ್ನು ಕಿತ್ತೊಗೆಯಲು ಶಿಕ್ಷಣವು ಒಂದು ಸಾಧನವಾಗಿದ್ದು, ಬಡ ಸಮುದಾಯಗಳಿಗೆ ಶಿಕ್ಷಣ ದೊರೆಯುವ ಯಾವುದೇ ಶಾಲೆಯನ್ನು ಮುಚ್ಚಬಾರದು. -ವೈ.ಮರಿಸ್ವಾಮಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ