ರಾಷ್ಟ್ರಪತಿಯ ಬೆಂಗಾವಲು ವಾಹನ ಅಪಘಾತ

Update: 2016-07-15 18:00 GMT

ಡಾರ್ಜಿಲಿಂಗ್, ಜು.15: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಬೆಂಗಾವಲು ವಾಹನವೊಂದು ಡಾರ್ಜಿಲಿಂಗ್‌ನಲ್ಲಿಂದು ಕಮರಿಗೆ ಉರುಳಿದೆ. ಕಾರಿನಲ್ಲಿದ್ದ ಎಲ್ಲ 6 ಮಂದಿ ಭದ್ರತಾ ಸಿಬ್ಬಂದಿಯನ್ನು ಕಾರ್ಯಾಚರಣೆಯೊಂದರಲ್ಲಿ ರಕ್ಷಿಸಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು.

ರಾಷ್ಟ್ರಪತಿ ಮುಖರ್ಜಿ ಡಾರ್ಜಿಲಿಂಗ್‌ನ ಮೂರು ದಿನಗಳ ಪ್ರವಾಸದಲ್ಲಿದ್ದರು. ಅವರಿಗಾಗಿ ಬ್ಯಾನರ್ಜಿ ಬೆಟ್ಟದ ಕೆಳಗಿನ ಬಗ್ಡೋಗ್ರಾದಲ್ಲಿ ಭೋಜನ ಕೂಟವೊಂದನ್ನು ಏರ್ಪಡಿಸಿದ್ದರು. ಅದಕ್ಕಾಗಿ ಡಾರ್ಜಿಲಿಂಗ್‌ನಿಂದ ಅಲ್ಲಿಗಾಗಮಿಸುತ್ತಿದ್ದ ರಾಷ್ಟ್ರಪತಿಯ ವೈಹಾಳಿಯ ಸ್ವಲ್ಪ ಹಿಂದೆಯೇ ಬ್ಯಾನರ್ಜಿಯವರೂ ಬೆಂಗಾವಲು ವಾಹನಗಳ ಜೊತೆ ಬರುತ್ತಿದ್ದರು.
ರಕ್ಷಣಾ ಕಾರ್ಯ ನಡೆದ ಬಳಿಕ ರಾಷ್ಟ್ರಪತಿಯ ಟ್ವಿಟರ್ ಖಾತೆಯ ಬರಹವೊಂದು, ರಾಷ್ಟ್ರಪತಿ ಸಹಿತ ಪ್ರತಿಯೊಬ್ಬರೂ ಕ್ಷೇಮವಾಗಿದ್ದಾರೆಂದು ತಿಳಿಸಿದೆ.
ಸೊನಾಡಾದಲ್ಲಿ ಕಡಿದಾದ ತಿರುವೊಂದರಲ್ಲಿ ಕಾರು ನಿಯಂತ್ರಣ ತಪ್ಪಿ ಕಮರಿಗುರುಳಿತ್ತು. ಪ್ರದೇಶದಲ್ಲಿ ದಟ್ಟ ಮಂಜು ಕವಿದಿತ್ತು.
ಮುಖರ್ಜಿಯವರ ಪುತ್ರಿ ಶರ್ಮಿಷ್ಠಾ ಹಾಗೂ ಪುತ್ರ ಅಭಿಜಿತ್ ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು. ರಕ್ಷಿಸಲಾಗಿರುವ 6 ಮಂದಿ ಭದ್ರತಾ ಸಿಬ್ಬಂದಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಲ್ಪ ಸಮಯ ನಿಂತ ಬಳಿಕ ವಾಹನಗಳ ಉದ್ದನೆಯ ಸಾಲು ಕುರ್ಸೆವೋಂಗ್‌ನತ್ತ ಸಾಗಿದ್ದು, ಬಗ್ಡೋಗ್ರಾದಲ್ಲಿ ಮುಖರ್ಜಿ ಹಾಗೂ ಮಮತಾ ಮತ್ತೆ ಭೇಟಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News