ಟರ್ಕಿ: 148 ಭಾರತೀಯ ವಿದ್ಯಾರ್ಥಿಗಳಿಂದ ನೆರವಿಗೆ ಮೊರೆ

Update: 2016-07-16 15:05 GMT

ಹೊಸದಿಲ್ಲಿ,ಜು.16: ಟರ್ಕಿಯಲ್ಲಿ ವಿಫಲ ಕ್ಷಿಪ್ರ ಕ್ರಾಂತಿಯ ಬಳಿಕ ಆ ರಾಷ್ಟ್ರದಲ್ಲಿ ಸಿಕ್ಕಿ ಹಾಕಿಕೊಂಡಿರುವ 148 ಭಾರತೀಯ ವಿದ್ಯಾರ್ಥಿಗಳು ಮತ್ತು 38 ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ ಮತ್ತು ಜು.18ರಿಂದ ತಂಡಗಳಲ್ಲಿ ಭಾರತಕ್ಕೆ ಮರಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಶನಿವಾರ ಟ್ವೀಟಿಸಿದ್ದಾರೆ.
ಜು.11ರಿಂದ ಆರಂಭಗೊಂಡು ಜು.18ರವರೆಗೆ ನಡೆಯಲಿರುವ 2016ರ ವಿಶ್ವ ಶಾಲಾ ಚಾಪಿಯನ್‌ಶಿಪ್‌ಗಾಗಿ ತಾವು ಟರ್ಕಿಯ ವಾಯುವ್ಯ ಪ್ರಾಂತ್ಯ ಟ್ರಾಬ್ಝಾನ್‌ನಲ್ಲಿರುವುದಾಗಿ ವಿದ್ಯಾರ್ಥಿಗಳು ವಾಟ್ಸಾಪ್ ಮೂಲಕ ಭಾರತೀಯ ಟಿವಿ ವಾಹಿನಿಗಳಿಗೆ ಕಳುಹಿಸಿರುವ ಸಂದೇಶದಲ್ಲಿ ತಿಳಿಸಿದ್ದಾರೆ.
ಮೂರು ಗಂಟೆಗಳ ಹಿಂದೆ ನಮ್ಮ ಹೆತ್ತವರು ಕರೆ ಮಾಡಿ ಅಂಕಾರಾದಲ್ಲಿ ಬಾಂಬ್ ಸ್ಫೋಟ ನಡೆದಿದೆ ಎಂದು ತಿಳಿಸಿದ್ದಾರೆ. ಆದರೆ ನಾವಿರುವಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ತಮಿಳುನಾಡಿನ ವಿದ್ಯಾರ್ಥಿಗಳ ಗುಂಪೊಂದು ವೀಡಿಯೊ ಸಂದೇಶದಲ್ಲಿ ತಿಳಿಸಿದೆ.
ನಾವು ಜು.18ರಂದು ಅಂಕಾರಾಕ್ಕೆ ತೆರಳಿ,ಬಳಿಕ ಭಾರತಕ್ಕೆ ವಿಮಾನವನ್ನು ಹತ್ತಲು ಇಸ್ತಾಂಬುಲ್‌ಗೆ ಪ್ರಯಾಣಿಸಬೇಕಾಗಿದೆ. ನಾವು ಸುರಕ್ಷಿತವಾಗಿ ತಾಯ್ನಿಡಿಗೆ ಮರಳಲು ನೆರವಾಗುವಂತೆ ಭಾರತ ಸರಕಾರವನ್ನು ಕೋರುತ್ತಿದ್ದೇವೆ ಎಂದು ತಮಿಳ್ ಸೆಲ್ವಿ ರಾಜಧಾನಿ ಅಂಕಾರಾದಿಂದ 700ಕಿ.ಮೀ.ದೂರದ ಟ್ರಾಬ್ಝಾನ್‌ನಿಂದ ದೂರವಾಣಿ ಮೂಲಕ ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಸದ್ಯಕ್ಕೆ ನಾವು ಸುರಕ್ಷಿತರಾಗಿದ್ದೇವೆ. ಆದರೆ ಟಿವಿ ಲಭ್ಯವಿಲ್ಲದ್ದರಿಂದ ಏನು ನಡೆಯುತ್ತಿದೆ ಎನ್ನುವುದು ನಮಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಕಾರ್ಯಕ್ರಮ ಮುಂದುವರಿಯುವ ಬಗ್ಗೆ ಅನಿಶ್ಚಿತತೆಯಿರುವುದರಿಂದ ತನಗೆ ಚಿಂತೆಯಾಗಿದೆ ಎಂದು ತಮಿಳ್ ಸೆಲ್ವಿ ತಂದೆ ವೆಂಕಟೇಶ ಹೇಳಿದರು. ಅಶಾಂತಿ ತಾಂಡವಿಸಿರುವ ಸ್ಥಳದಿಂದ ಸುಮಾರು 400 ಕಿ.ಮೀ.ದೂರದಲ್ಲಿ ಈ ವಿದ್ಯಾರ್ಥಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News