ಕಾದಂಬರಿ

Update: 2016-07-16 17:28 GMT

-- ಮೊಮ್ಮಗಳ ಕೈಗಳಲ್ಲಿ ಅಜ್ಜಿಯ ಬಲಗೈ! --
‘‘ಜ್ವರ ಹೇಗಿದೆ?’’
‘‘ಕಮ್ಮಿ ಇದೆ’’
‘‘ನಾನು ಹೋಗಿ ಅಜ್ಜಿಯನ್ನು ನೋಡಿಕೊಂಡು ಬರಲಾ ಮಾಮಿ’’
ಈಗ ಬೇಡ, ಅವರು ಏಳಲಿ. ಮೊದಲು ನೀನು ಬಂದ ವಿಷಯ ಅವರಿಗೆ ಹೇಳ್ತೇನೆ. ಆಮೇಲೆ ಅವರ ಪ್ರತಿಕ್ರಿಯೆ ನೋಡಿ ಹೋಗುವಿಯಂತೆ. ಈಗ ನಾವು ತಿಂಡಿ ತಿನ್ನುವ ಬಾ’’
‘‘ನಿಮ್ಮ ಮಗ...?’’
‘‘ಅವನು ಹೊರಡುವ ತಯಾರಿಯಲ್ಲಿದ್ದಾನೆ. ಈಗ ಎರಡು ಗಂಟೆಗೆ ಬಸ್ಸು’’

ತಾಹಿರಾ ಅವನೆಲ್ಲಾದರೂ ಕಾಣಿಸುತ್ತಾನೆಯೇ ಎಂದು ಗಮನಿಸುತ್ತಾ ಐಸುಳ ಹಿಂದೆ ನಡೆದಳು. ‘‘ನೀನು ಎತ್ತಿನ ಮಾಂಸ ತಿನ್ನುತ್ತಿಯಲ್ಲ. ನಾಸರ್‌ಗೆ ಎತ್ತಿನ ಮಾಂಸ, ನೈಪತ್ತಿರ್ ಎಂದರೆ ಬಹಳ ಇಷ್ಟ. ಅದಕ್ಕೆ ಮಾಡಿದ್ದು’’ ಎನ್ನುತ್ತಾ ತಾಹಿರಾಳಿಗೆ ಬಡಿಸಿ, ತಾನೂ ತಿನ್ನತೊಡಗಿದಳು ಐಸು.
‘‘ನಾಸರ್ ಹೋಗ್ತಾನಲ್ಲ ಅದಕ್ಕೆ ಮಧ್ಯಾಹ್ನದ ಅಡುಗೆ ಬೇಗ ಮಾಡಿದ್ದೇನೆ. ಇದೇ ಮಾಂಸದ ಸಾರು ಮತ್ತು ನೈಚೋರು. ನಾಡಕೋಳಿ ಮಾಡಿದ್ದೇನೆ. ಅದನ್ನು ಹುರಿದರೆ ಕೆಲಸ ಮುಗಿಯಿತು. ಆಮೇಲೆ ಕುಳಿತು ಮಾತಾಡೋಣ. ಬೇಸರ ಮಾಡಬೇಡ’’ ಎನ್ನುತ್ತಿದ್ದಂತೆಯೇ ಅಜ್ಜಿ ಕೆಮ್ಮುವುದು ಕೇಳಿಸಿತು. ಜೊತೆಗೆ, ‘‘ಅಮ್ಮಾ, ಅಜ್ಜಿ ಎದ್ದರೂಂತ ಕಾಣತ್ತೆ. ಹೋಗಿ ನೋಡು’’ ಎಂದು ನಾಸರ್ ಕರೆದು ಹೇಳುವುದು ಕೇಳಿಸಿತು. ಐಸು ಬೇಗ ಬೇಗ ತಿಂಡಿ ಮುಗಿಸಿ ‘‘ನೀನು ತಿನ್ನು ಬರ್ತೇನೆ’’ ಎಂದು ಸೆರಗಿನಿಂದ ಕೈ ಒರೆಸಿಕೊಳ್ಳುತ್ತಾ ಧಾವಿಸಿದಳು.
ಐಸು ಕೋಣೆಗೆ ಬಂದಾಗ ಅಜ್ಜಿ ಹಾಸಿಗೆಯಲ್ಲಿ ಬೆನ್ನು ಬಗ್ಗಿಸಿ ಕುಳಿತು ಕೆಮ್ಮುತ್ತಿದ್ದರು.
‘‘ಅಜ್ಜಿ ಮಧ್ಯಾಹ್ನ ಆಗುತ್ತಾ ಬಂತು. ಎಂಥ ನಿದ್ದೆ ಇದು ನಿಮ್ಮದು. ಇನ್ನೂ ಬೆಳಗ್ಗಿನ ತಿಂಡಿಯೇ ತಿಂದಿಲ್ಲ ನೀವು’’
‘‘ನಾಸರ್ ಹೋದನಾ?’’
‘‘ಇಲ್ಲ ಹೊರಡುತ್ತಾ ಇದ್ದಾನೆ. ನೀವು ಎದ್ದು ಮುಖ ತೊಳೆಯಿರಿ. ನಾನು ಗಂಜಿ ತರ್ತೇನೆ’’
‘‘ಗಂಜಿಯಾ? ಅವನಿಗೂ ಗಂಜಿಯೇ ಕೊಟ್ಟಿದ್ದಾ?’’
‘‘ಅಲ್ಲ ನೈ ಪತ್ತಿರ್ ಮಾಡಿದ್ದೇನೆ. ಮಾಂಸದ್ದು ಸುಕ್ಕ ಮಾಡಿದ್ದೇನೆ’’
‘‘ನನಗೂ ಅದೇ ಕೊಡು’’
‘‘ಜ್ವರ ಬರ್ತಿದೆಯಲ್ಲ ಅಜ್ಜಿ. ಮಾಂಸ ತಿಂದು ಮತ್ತೆ ಅಜೀರ್ಣ ಆದರೆ’’
‘‘ಏನೂ ಆಗೋದಿಲ್ಲ, ಅದೇ ಕೊಡು’’ ಎನ್ನುತ್ತಾ ಅಜ್ಜಿ ಎದ್ದು ಬಚ್ಚಲು ಕೋಣೆಗೆ ನಡೆದರು.
ಬಟ್ಟಲಲ್ಲಿ ಎರಡು ಪತ್ತಿರ್, ಸ್ವಲ್ಪಸುಕ್ಕ ಹಾಕಿ ತಂದಾಗ ಅಜ್ಜಿ ಕಾಯ್ತಿ ಕುಳಿತಿದ್ದರು. ಪಾಪ ತುಂಬಾ ಹಸಿವಾಗಿರಬೇಕು ಎಂದುಕೊಳ್ಳುತ್ತಾ ತಟ್ಟೆಯನ್ನು ಅವರ ಮುಂದಿಟ್ಟಳು ಐಸು.
‘‘ಏನು ಎರಡೇ ಪತ್ತಿರಾ?’’ ಅಜ್ಜಿ ಅವಳ ಮುಖ ನೋಡಿದರು.
‘‘ಇದೆ. ನೀವು ಇದನ್ನು ತಿನ್ನಿ, ಬೇಕಾದರೆ ತರ್ತೇನೆ’’
‘‘ಹೋಗು, ಇನ್ನೊಂದೆರಡು ತಾ’’
ಐಸುಳಿಗೆ ನಗು ಬಂತು. ಅವಳು ಹೋಗಿ ಮತ್ತೆ ನಾಲ್ಕು ಪತ್ತಿರ್ ತೆಗೆದುಕೊಂಡು ಬಂದಾಗ ಅಜ್ಜಿ ಎದ್ದು ಕೈ ತೊಳೆದುಕೊಳ್ಳುತ್ತಿದ್ದರು. ಮೊದಲು ತಂದಿದ್ದ ಪತ್ತಿರ್‌ನ ಒಂದರ್ಧ ಮಾತ್ರ ತಿಂದಿದ್ದರು.
‘‘ಇದೇನಜ್ಜಿ ತಿಂದೇ ಇಲ್ಲ ನೀವು?’’
‘‘ತಿನ್ನಲಿಕ್ಕೆ ಆಗುವುದಿಲ್ಲ, ಸಾಕು’’
‘‘ಜ್ವರ ಬಂತಲ್ಲಾ, ಬಾಯಿಗೆ ಏನೂ ಆಗುವುದಿಲ್ಲ. ಅದಕ್ಕೆ ನಾನು ಗಂಜಿ ಕುಡಿಯಿರಿ ಅಂತ ಹೇಳಿದ್ದು’’
‘‘ಏನೂ ಬೇಡ’’
‘‘ಸ್ವಲ್ಪ ಗಂಜಿ ಕುಡಿಯಿರಿ ಅಜ್ಜಿ. ಮದ್ದು ಕುಡಿಯಲಿಕ್ಕೆ ಇದೆ’’
‘‘ಏನೂ ಬೇಡ’’
‘‘ಮತ್ತೆ ಬರೀ ಹೊಟ್ಟೆಗೆ ಮದ್ದು ಕುಡಿಯುತ್ತೀರಾ?’’
‘‘...............’’
‘‘ಕಾಫಿ ಮಾಡಿ ಕೊಡ್ಲಾ?’’
‘‘ಬೇಡ, ಏನೂ ಬೇಡಾ’’
‘‘ನಿನ್ನೆ ತೆಗೆಸಿಟ್ಟ ಎಳನೀರು ಇದೆ ಕೊಡ್ಲಾ’’
‘‘ಹೂಂ...’’
ಅವಳು ಹೋಗಿ ಎಳನೀರನ್ನು ಒಂದು ಲೋಟಕ್ಕೆ ಬಗ್ಗಿಸಿ ತಂದು ಅಜ್ಜಿಯ ಮುಂದೆ ಇಟ್ಟು ಮಾತ್ರೆ ಬಿಡಿಸಿಕೊಟ್ಟಳು. ಮಾತ್ರೆಯನ್ನು ಬಾಯಿಗೆ ಹಾಕಿಕೊಂಡ ಅಜ್ಜಿ, ಎಳನೀರನ್ನೆಲ್ಲ ಒಂದೇ ಉಸಿರಿಗೆ ಕುಡಿದರು.
‘‘ಅಜ್ಜಿ, ಜ್ವರ ಬಿಟ್ಟಿದೆಯಾ?’’ ಐಸು ಅವರ ಹಣೆ, ಕತ್ತು ಮುಟ್ಟಿ ನೋಡಿದಳು. ಸ್ವಲ್ಪಬಿಸಿ ಇತ್ತು.
‘‘ಸ್ವಲ್ಪ ಕರಿಮೆಣಸು, ಶುಂಠಿ ಹಾಕಿ ಕಷಾಯ ಮಾಡಿ ಕೊಡ್ಲಾ, ಶೀತ ಕಡಿಮೆಯಾಗುತ್ತೆ’’
‘‘ಹೂಂ...’’
‘‘ಅಜ್ಜಿ, ತಾಹಿರಾ ಬಂದಿದ್ದಾಳೆ’’
ಅಜ್ಜಿ ತಲೆ ಎತ್ತಿ ಅವಳ ಮುಖ ನೋಡಿದರು.
‘‘ನಿಮ್ಮ ಮೊಮ್ಮಗಳು ತಾಹಿರಾ ಬಂದಿದ್ದಾಳೆ. ಈಗ ಬೆಳಗ್ಗೆ ಬಂದದ್ದು’’
ಅಜ್ಜಿ ಒಮ್ಮೆಲೆ ತಲೆ ತಗ್ಗಿಸಿದರು. ಮಾತನಾಡಲಿಲ್ಲ.
‘‘ಬೆಳಗ್ಗಿನಿಂದ ನೀವು ಏಳುವುದನ್ನೇ ಕಾಯ್ತಿ ಇದ್ದಾಳೆ. ನಿಮ್ಮನ್ನು ನೋಡಬೇಕಂತೆ’’
‘‘...............’’
‘‘ಬರಲಿಕ್ಕೆ ಹೇಳಲಾ’’
‘‘..............’’
‘‘ಏನು ಯೋಚಿಸುತ್ತಾ ಇದ್ದೀರಿ’’
‘‘ಏನೂ ಇಲ್ಲ’’ ಎನ್ನುತ್ತಾ ಅವರು ಹಾಸಿಗೆಯಲ್ಲಿ ಮೈ ಚಾಚಿದರು.
ಅಡುಗೆ ಮನೆಯಲ್ಲಿ ತಾನು ತಿಂದ ಬಟ್ಟಲು ತೊಳೆಯುತ್ತಿದ್ದ ತಾಹಿರಾಳನ್ನು ಕಂಡ ಐಸು ಅವಳ ಕೈಯಿಂದ ಬಟ್ಟಲು ಎಳೆದುಕೊಂಡು, ‘‘ಇಲ್ಲಿ ಕೆಲಸ ಮಾಡಲಿಕ್ಕೆ ನಾನಿದ್ದೇನೆ. ನೀನಿಲ್ಲಿ ಸುಮ್ಮನೆ ಕುಳಿತುಕೋ’’ ಎಂದು ಅಲ್ಲೇ ಇದ್ದ ಕುರ್ಚಿ ತೋರಿಸಿದಳು. ಕೋಳಿಗೆ ಮಸಾಲೆ ಹಾಕಿ ಎಣ್ಣೆಯಲ್ಲಿ ಹುರಿಯುವುದನ್ನೇ ನೋಡುತ್ತಾ ತಾಹಿರಾ ಅವಳ ಪಕ್ಕ ನಿಂತುಕೊಂಡಳು.
‘‘ಮಾಮಿ, ಅಜ್ಜಿ ತಿಂಡಿ ತಿಂದಿಲ್ಲವಾ?’’
‘‘ಜ್ವರ ಬಂದರೆ ತಿನ್ಲಿಕ್ಕೆ ಆಗುತ್ತಾ? ಎಳನೀರು ಕುಡಿದರು’’
‘‘ಈಗ ಜ್ವರ ಹೇಗಿದೆ?’’
‘‘ಕಮ್ಮಿಯಾಗಿದೆ. ಶೀತ-ಕೆಮ್ಮು ಇದೆ. ಮದ್ದು ಕೊಟ್ಟು ಬಂದೆ’’
‘‘ನಾನು ಬಂದ ವಿಷಯ ಹೇಳಿದಿರಾ?’’
‘‘ಹೂಂ’’
‘‘ಏನಂದರು’’
‘‘ತಿಂಡಿ ತಿಂದಳಾ ಕೇಳಿದರು’’ ಐಸು ಅವಳಿಗೆ ಬೇಸರವಾಗದಿರಲೆಂದು ಸುಳ್ಳು ಹೇಳಿದಳು.
‘‘ನಾನು ಹೋಗಿ ನೋಡಿ ಬರಲಾ ಮಾಮಿ’’
ಆಗಲೇ ಬಾಗಿಲ ಬಳಿ ಸದ್ದಾಯಿತು. ತಾಹಿರಾ ತಿರುಗಿ ನೋಡಿದಳು. ಅಜ್ಜಿ! ಅಜ್ಜಿ ಬಾಗಿಲಲ್ಲಿ ನಿಂತಿದ್ದರು! ಅವರ ಕಣ್ಣುಗಳು ಅವಳನ್ನು ದಿಟ್ಟಿಸಿ ನೋಡುತ್ತಿದ್ದವು.
‘‘ಅಜ್ಜೀ...’’ ತಾಹಿರಾ ಅವಳಿಗೆ ಅರಿವಿಲ್ಲದೇ ಕರೆದಳು.
ಅವರು ಮಾತನಾಡಲಿಲ್ಲ. ಅವಳನ್ನೇ ನೋಡುತ್ತಾ ಕಂಬದಂತೆ ನಿಂತೇ ಇದ್ದರು.
‘‘ಅಜ್ಜೀ...’’ ಅವಳು ಹತ್ತಿರ ಹೋಗಿ ಅವರ ಬಲಗೈಯನ್ನು ತನ್ನ ಎರಡು ಕೈಗಳಲ್ಲಿ ಹಿಡಿದುಕೊಂಡಳು. ಅಜ್ಜಿ ಒಮ್ಮೆಲೆ ಎಚ್ಚೆತ್ತುಕೊಂಡವರಂತೆ ಅವಳನ್ನು ಹತ್ತಿರ ಸೆಳೆದು ಮುಖ ಸವರಿ ‘‘ನನ್ನ ಕಂದಾ...’’ ಎಂದರು. ಅವರ ಧ್ವನಿ ನಡುಗುತ್ತಿತ್ತು. ಅವರು ಅಳುತ್ತಿದ್ದಾರೇನೋ ಅನಿಸಿತು ಅವಳಿಗೆ. ಅಷ್ಟು ಹೇಳಿದವರೇ ಮತ್ತೆ ಅಲ್ಲಿ ನಿಲ್ಲದೆ ಸೀದಾ ತನ್ನ ಕೋಣೆಗೆ ನಡೆದುಬಿಟ್ಟರು.
ಎಲ್ಲ ಮಿಂಚಿನಂತೆ, ಕನಸಿನಂತೆ ಒಂದು ಕ್ಷಣದಲ್ಲಿ ನಡೆದು ಬಿಟ್ಟಿತ್ತು. ತಾಹಿರಾ ತಿರುಗಿ ಐಸುಳನ್ನು ನೋಡಿದಾಗ ಅವಳು ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಿದ್ದಳು.
‘‘ಮಾಮಿ, ಅಜ್ಜಿ ಅಳುತ್ತಿ ದ್ದಾರಾ?’’
‘‘ಅಳು ಅಲ್ಲಮ್ಮಾ ಅದು, ಸಂತೋಷ. ನೀನು ಬಂದ ಸಂತೋಷ ತಡೆಯಲಾಗದೆ ಇಲ್ಲಿಗೆ ಬಂದದ್ದು, ನಿನ್ನ ತಬ್ಬಿ ಹಿಡಿದದ್ದು. ನಿನಗೆ ನಸೀಬು ಇಲ್ಲ ಮೋಳೇ, ನೀನು ಅವರ ಮಡಿಲಲ್ಲಿ ಬೆಳೆಯಬೇಕಿತ್ತು. ಆಗ ಗೊತ್ತಾಗ್ತಾ ಇತ್ತು ನಿನಗೆ ಅವರ ಪ್ರೀತಿ ಎಂದರೆ ಎಂತದ್ದೂಂತ. ಎಲ್ಲದಕ್ಕೂ ಪಡೆದುಕೊಂಡು ಬರಬೇಕು.’’
‘‘ಅಮ್ಮಾ, ನನಗೆ ಹೊತ್ತಾಯಿತು. ಸ್ನಾನ ಮಾಡಿ ಬರ್ತೇನೆ, ಬಡಿಸಿಡು’’
ಮಗನ ಕರೆ ಕೇಳಿ ಐಸು ಬೇಗ ಕೋಳಿ ಹುರಿದು, ಬಟ್ಟಲು ತೊಳೆದು, ಊಟದ ತಯಾರಿ ನಡೆಸಿದಳು.
‘‘ಮಾಮಿ, ನಾನು ಅಜ್ಜಿ ಬಳಿ ಹೋಗಲಾ?’’
‘‘ಈಗ ಬೇಡಮ್ಮಾ, ಅಜ್ಜಿ ಸ್ವಲ್ಪಸುಧಾರಿಸಿಕೊಳ್ಳಲಿ. ಆಮೇಲೆ ಹೋಗುವಿಯಂತೆ’’
‘‘ಅಜ್ಜಿ ಮತ್ತೆ ನನ್ನಲ್ಲಿ ಕೋಪ ಮಾಡಿಕೊಂಡರೆ’’

‘‘ಈಗ ನೀನು ಹೋದರೂ ಅಜ್ಜಿ ನಿನ್ನ ಜೊತೆ ಮಾತನಾಡೋಲ್ಲ. ಅಜ್ಜಿ ಹೇಗೇಂತ ನನಗೆ ಚೆನ್ನಾಗಿ ಗೊತ್ತು. ಬಾ, ನೀನು ನನಗೆ ಸ್ವಲ್ಪ ಸಹಾಯ ಮಾಡು. ನಾಸರ್‌ನಿಗೆ ಬಸ್ಸಿಗೆ ಹೊತ್ತಾಯಿತು. ಅವನು ಹೋಗಲಿ. ಆಮೇಲೆ ಅಜ್ಜಿಯ ಮೂಡು ನೋಡಿ ನಾನೇ ನಿನ್ನನ್ನು ಅಜ್ಜಿಯ ಕೋಣೆಗೆ ಕರೆದುಕೊಂಡು ಹೋಗುತ್ತೇನೆ’’ ಎಂದಳು ಐಸು. ಐಸು ‘ಸಹಾಯ ಮಾಡು’ ಎಂದು ಹೇಳಿದಾಗ ಅಜ್ಜಿಯನ್ನು ಮರೆತೇ ಬಿಟ್ಟಳು ತಾಹಿರಾ. ಅವಳನ್ನು ಸಹಾಯಕ್ಕೆ ಕರೆದದ್ದು ಅಷ್ಟೊಂದು ಖುಷಿಯಾಗಿತ್ತವಳಿಗೆ. ಐಸು ಜೊತೆ ಪಾತ್ರೆಗಳನ್ನೆಲ್ಲ ತೊಳೆದು, ಐಸು ಬಡಿಸಿದ್ದನ್ನೆಲ್ಲ ತಂದು ಊಟದ ಮೇಜಿನ ಮೇಲೆ ಜೋಡಿಸಿಟ್ಟಳು. ಕೊನೆಯದಾಗಿ ಹಪ್ಪಳ ತರುವಾಗ ನಾಸರ್ ಮೇಜಿನ ಮುಂದೆ ಬಂದು ಕುಳಿತಿದ್ದನ್ನು ಕಂಡು ಒಂದು ಕ್ಷಣ ನಿಂತು ಹೋಗುವುದೋ ಬೇಡವೋ ಎಂದು ಯೋಚಿಸುತ್ತಿದ್ದಂತೆ, ಐಸು ನೀರಿನ ತಂಬಿಗೆ ಹಿಡಿದುಕೊಂಡು ಬಂದವಳು ‘‘ಯಾಕೆ ನಿಂತಿದ್ದೀ... ನಾಚಿಕೆಯಾ... ಇಲ್ಲಿ ಕೊಡು’’ ಎಂದು ಅವಳ ಕೈಯಿಂದ ಹಪ್ಪಳದ ಬಟ್ಟಲು ತೆಗೆದುಕೊಂಡು ‘‘ನೀನೂ ಕುಳಿತುಕೋ, ನಾನು ಬಡಿಸುತ್ತೇನೆ’’ ಎಂದಳು.
ಒಂದು ಕ್ಷಣ ಹಾವು ತುಳಿದವಳಂತೆ ಬೆಚ್ಚಿಬಿದ್ದ ತಾಹಿರಾ ‘‘ಏ...ಯ್... ಇಲ್ಲ ಇಲ್ಲ. ನಾನೀಗ ಕುಳಿತುಕೊಳ್ಳುವುದಿಲ್ಲ. ನಾನು ನಿಮ್ಮ ಜೊತೆ ಊಟ ಮಾಡುತ್ತೇನೆ’’ ಎಂದು ತಿರುಗಿದಳು.
‘‘ಏನಮ್ಮಾ.. ಪಟ್ಟಣದಲ್ಲಿ ಬೆಳೆದಿದ್ದಿಯಾ, ಇಷ್ಟೊಂದು ಓದಿದ್ದಿಯಾ, ಇನ್ನೂ ಎಂತದು ನಾಚಿಕೆ’’
‘‘ನಾನು ನಿಮ್ಮ ಜೊತೆ ಊಟ ಮಾಡುತ್ತೇನೆ ಮಾಮಿ’’ ಎಂದು ಅಡುಗೆ ಮನೆಗೆ ನಡೆದಳು ತಾಹಿರಾ.
‘‘ಅಮ್ಮಾ... ಈ ಹುಡುಗಿ ಯಾರು ಅಂದೆ?’’
‘‘ಅಜ್ಜಿಯ ಚಿಕ್ಕ ಮಗಳು ರೊಹರಾ ಇದ್ದಾಳಲ್ಲಾ, ಅವಳ ಮಗಳು. ಹೆಸರು ತಾಹಿರಾ ಅಂತ’’
‘‘ಏನು ಬಂದದ್ದು?’’
‘‘ಅಜ್ಜಿಯನ್ನು ನೋಡಬೇಕೂಂತ ಆಸೆಯಾಯಿತಂತೆ, ಅದಕ್ಕೆ ಬಂದಿದ್ದು’’
‘‘ಏನು, ಇಷ್ಟೊಂದು ವರ್ಷಗಳ ನಂತರ ಎಂದೂ ನೋಡದ ಅಜ್ಜಿಯ ಮೇಲೆ ಇದ್ದಕ್ಕಿದ್ದಂತೆ ಮೋಹ ಹುಟ್ಟಿದ್ದು’’
‘‘ಏಯ್, ಮೆತ್ತಗೆ ಮಾತಾಡೊ. ಇವಳು ತಾಯಿ ಯಂತಹವಳಲ್ಲ, ಒಳ್ಳೆಯ ಹುಡುಗಿ. ತಾಯಿಗೆ ಹೇಳದೆ ಎಲ್ಲಿಗೋ ಗೆಳತಿಯ ಮನೆಗೆ ಹೋಗುವುದೂಂತ ಸುಳ್ಳು ಹೇಳಿ ಬಂದಿದ್ದಾಳೆ. ಅಜ್ಜಿ ಮೇಲೆ ಅಷ್ಟು ಪ್ರೀತಿ ಅವಳಿಗೆ. ಹೋದ ಸಲ ಬಂದಾಗ ಅಜ್ಜಿ ಅವಳ ಜೊತೆ ಮಾತೇ ಆಡಲಿಲ್ಲ... ಪಾಪ’’
ಅಡುಗೆ ಮನೆಗೆ ಬರುತ್ತಿದ್ದಂತೆಯೇ ತಾಯಿ-ಮಗನ ಮಾತು ಕೇಳಿ ತಾಹಿರಾಳ ಕಿವಿ ನೆಟ್ಟಗಾಯಿತು.
‘‘ಹೆತ್ತ ಮಗಳಿಗೆ ಅಮ್ಮನ ಮೇಲೆ ಇಲ್ಲದ ಪ್ರೀತಿ ಮೊಮ್ಮಗಳಿಗೆ ಹೇಗೆ ಹುಟ್ಟಿದ್ದೋ? ಅಜ್ಜನ ಮಯ್ಯತ್ತನ್ನು ಕೂಡಾ ನೋಡಲು ಬರದವರು ಈಗ ಅಜ್ಜಿ ಜೀವಂತವಾಗಿ ಇದ್ದಾರಾ ಎಂದು ನೋಡಿಕೊಂಡು ಹೋಗಲು ಬಂದಿರಬೇಕು... ಎಲ್ಲ ನಾಟಕ ಅಮ್ಮಾ’’ ನಾಸರ್‌ನ ಮಾತಿನಲ್ಲಿ ಅಸಮಾಧಾನವನ್ನು ತಾಹಿರಾ ಗುರುತಿಸಿದಳು.
‘‘ಏಯ್, ಸುಮ್ಮನೆ ತಿನ್ನೊ. ಅಧಿಕ ಪ್ರಸಂಗ ಮಾತನಾಡಬೇಡ. ಆ ಹುಡುಗಿ ಎಲ್ಲಿಯಾದರೂ ಕೇಳಿಸಿಕೊಂಡೀತು. ಮೊದಲೇ ನೊಂದಿದ್ದಾಳೆ. ತಿಂದು ಬೇಗ ಹೊರಡು’’ ಐಸುಗೆ ಕೋಪ ಬಂದಿತ್ತು.
‘‘ನೀನೇಕಮ್ಮಾ ನನ್ನ ಮೇಲೆ ಕೋಪ ಮಾಡಿ ಕೊಳ್ಳುತ್ತಿ. ನೀನೇ ಯೋಚಿಸು. ಅಜ್ಜಿ ಈಗ ಸ್ವಲ್ಪ ನೆಮ್ಮದಿಯಾಗಿದ್ದಾರೆ. ಅವರ ನೆಮ್ಮದಿಯನ್ನು ಹಾಳು ಮಾಡಲಿಕ್ಕೆ ಬಿಡಬೇಡ ಅಷ್ಟೆ. ಮತ್ತೆ ಅವರನ್ನು ನೋಡ್ಲಿಕ್ಕೆ ಯಾರೂ ಇರುವುದಿಲ್ಲ. ಮಗಳೂ ಇರುವುದಿಲ್ಲ, ಮೊಮ್ಮಗಳೂ ಇರುವುದಿಲ್ಲ’’

(ಗುರುವಾರದ ಸಂಚಿಕೆಗೆ)
 

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News