ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್

Update: 2016-07-16 17:30 GMT

ಹೊಸದಿಲ್ಲಿ, ಜು.16: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು(ಎಎಐ) ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಅಂಧೇರಿಯ ನ್ಯಾಯಾಲಯವೊಂದು ವಿಜಯ ಮಲ್ಯರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಮಲ್ಯರಿಗೆ ಇಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಹಾಗೂ ಅದಕ್ಕೆ ತಪ್ಪಿದಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಲಾಗುವುದೆಂಬ ನಿರ್ದೇಶನವನ್ನು ದಂಡಾಧಿಕಾರಿ ಎ.ಎ. ಲಾವುಲ್ಕರ್ ಮೇ 7ರಂದು ನೀಡಿದ್ದರು. ಆದರೆ, ಇಂದು ಅವರು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ.
ಮಲ್ಯರು ನೀಡಿದ್ದ ರೂ. 100 ಕೋಟಿಯ ಎರಡು ಚೆಕ್‌ಗಳು ಬೌನ್ಸ್ ಆಗಿರುವ ಸಂಬಂಧ ಕಿಂಗ್‌ಫಿಶರ್ ಏರ್‌ಲೈನ್ಸ್ ವಿರುದ್ಧ ಎಎಐ ದಾಖಲಿಸಿದ್ದ ಅರ್ಜಿಯೊಂದರ ವಿಚಾರಣೆಯನ್ನು ನ್ಯಾಯಾಲಯ ಇಂದು ನಡೆಸುತ್ತಿತ್ತು.
ಬ್ಯಾಂಕ್‌ಗಳಿಗೆ ರೂ. 9 ಸಾವಿರ ಕೋಟಿಗೂ ಹೆಚ್ಚು ಸಾಲ ಬಾಕಿಯಿರಿಸಿ ವಿದೇಶಕ್ಕೆ ಪರಾರಿಯಾಗಿರುವ ಮಲ್ಯರಿಗೆ ಮಂಜೂರು ಮಾಡಲಾಗಿರುವ ನ್ಯಾಯಾಲಯಕ್ಕೆ ಸ್ವಯಂ ಹಾಜರಾತಿಗೆ ಖಾಯಂ ವಿನಾಯಿತಿಯನ್ನು ರದ್ದುಪಡಿಸುವಂತೆ ಎಎಐ ದಾಖಲಿಸಿದ್ದ ಎರಡು ಅರ್ಜಿಗಳಲ್ಲಿ ಮನವಿ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News