ಕಾಶ್ಮೀರದಲ್ಲಿ 10ನೆ ದಿನಕ್ಕೆ ಕಾಲಿಟ್ಟ ಕರ್ಫ್ಯೂ

Update: 2016-07-17 08:33 GMT

 ಶ್ರೀನಗರ, ಜು.17: ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ಬಳಿಕ ನಡೆದ ಹಿಂಸಾಚಾರದಲ್ಲಿ 41ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಕಾಶ್ಮೀರ ಕಣಿವೆಯಲ್ಲಿ 10ನೆ ದಿನವಾದ ರವಿವಾರವೂ ಕರ್ಫ್ಯೂ ಮುಂದುವರಿಸಲಾಗಿದೆ. ದಿನಪತ್ರಿಕೆಗಳು ಹಾಗೂ ಮೊಬೈಲ್ ಇಂಟರ್‌ನೆಟ್ ಮೇಲಿನ ನಿರ್ಬಂಧ ಮುಂದುವರಿದಿದೆ.

‘‘ಕಾಶ್ಮೀರ ಕಣಿವೆಯ ಎಲ್ಲ 10 ಜಿಲ್ಲೆಗಳಲ್ಲಿ ಕರ್ಫ್ಯೂ ಮುಂದುವರಿಯಲಿದೆ. ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಓಡಾಡಲು ಅವಕಾಶ ನೀಡುವಂತೆ ಭದ್ರತಾ ಪಡೆಗಳಿಗೆ ಸೂಚಿಸಲಾಗಿದೆ. ಏರ್‌ಪೋರ್ಟ್‌ಗೆ ತೆರಳುವ ಜನರಿಗೆ ಯಾವುದೇ ತೊಂದರೆ ನೀಡಲಾಗುತ್ತಿಲ್ಲ. ವಿಮಾನ ಟಿಕೆಟ್‌ಗಳನ್ನು ಕರ್ಫ್ಯೂ ಪಾಸ್ ಆಗಿ ಪರಿಗಣಿಸಲಾಗಿದೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಎಲ್ಲ ಆಂಗ್ಲ ಪತ್ರಿಕೆಗಳು ಸತತ ಎರಡನೆ ದಿನವಾದ ರವಿವಾರ ಪ್ರಕಟಣೆಯನ್ನು ಸ್ಥಗಿತಗೊಳಿಸಿವೆ. ಜು.19ರ ತನಕ ದಿನಪತ್ರಿಕೆಗಳನ್ನು ಪ್ರಕಟಿಸದಂತೆ ಪತ್ರಿಕೆಯ ಮಾಲಕರಿಗೆ ಸೂಚಿಸಲಾಗಿದೆ ಎಂದು ರಾಜ್ಯ ಸರಕಾದ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಎಲ್ಲ ಟಿವಿ ಚಾನಲ್ ಹಾಗೂ ಭಾರತದ ಎರಡು ಖಾಸಗಿ ಚಾನಲ್‌ಗಳನ್ನು ಪ್ರಸಾರ ಮಾಡುವುದಿಲ್ಲ ಎಂದು ಕೇಬಲ್ ನಿರ್ವಾಹಕರು ಒಪ್ಪಿಕೊಂಡ ಬಳಿಕ ರಾಜ್ಯದಲ್ಲಿ ಕೇಬಲ್ ಟಿವಿ ನಿರ್ವಹಣೆಗೆ ಅವಕಾಶ ನೀಡಲಾಗಿದೆ.

ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ಮೊಬೈಲ್ ಫೋನ್ ಇಂಟರ್‌ನೆಟ್ ಹಾಗೂ ಕಾಲ್ ಆಪರೇಶನ್ ವಿರುದ್ಧ ನಿಷೇಧವನ್ನು ಮುಂದುವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News