ಮುಂಬೈ ರೈಲಿನಲ್ಲಿ ಪ್ರಚಾರ ಟ್ರಿಪ್: ಅನಿಲ್ ಕಪೂರ್‌ಗೆ ಪಶ್ಚಿಮ ರೈಲ್ವೆ ನೋಟಿಸ್

Update: 2016-07-17 18:30 GMT

ಮುಂಬೈ, ಜು.17: ಮನರಂಜನಾ ಚಾನೆಲ್ ಒಂದರಲ್ಲಿ ಪ್ರಸಾರವಾಗಲಿರುವ ತಮ್ಮ ಮುಂದಿನ ಸರಣಿ ಕಾರ್ಯಕ್ರಮ ಪ್ರಚಾರದ ಸಲುವಾಗಿ ಚರ್ಚ್‌ಗೇಟ್‌ನಿಂದ ಲೋಕಲ್ ರೈಲಿನಲ್ಲಿ ಪ್ರಯಾಣ ಮಾಡುವ ಅತ್ಯುತ್ಸಾಹ ತೋರಿದ್ದು, ಇದೀಗ ಬಾಲಿವುಡ್ ತಾರೆ ಅನಿಲ್ ಕಪೂರ್‌ಗೆ ತಿರುಗುಬಾಣವಾಗಿ ಪರಿಣಮಿಸಿದೆ.

ಈ ಸಂಬಂಧ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಗೆ ಪಶ್ಚಿಮ ರೈಲ್ವೆ ನೋಟಿಸ್ ನೀಡಿದೆ. ರೈಲಿನ ಫುಟ್‌ಬೋರ್ಡ್‌ನಲ್ಲಿ ನಿಂತು ಅನಿಲ್ ಕಪೂರ್ ಏಕೆ ಬಾಗುತ್ತಿದ್ದರು ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ. ರೈಲ್ವೆ ಕಾಯ್ದೆಯ ಪ್ರಕಾರ, ರೈಲಿನ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸುವುದು ಅಪರಾಧ ಎಂದು ಪಶ್ಚಿಮ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಶೂಟಿಂಗ್ ವೇಳೆ ಕಟ್ಟುನಿಟ್ಟಿನ ಸುರಕ್ಷತಾ ಹಾಗೂ ಭದ್ರತಾ ಕ್ರಮಗಳಿಗೆ ಬದ್ಧರಾಗಿರುವಂತೆ ಸೂಚನೆ ನೀಡಿದ್ದರೂ, 2016ರ ಜುಲೈ 14ರಂದು ಅನಿಲ್ ಕಪೂರ್, ಪ್ರೋಮೊ ಶೂಟಿಂಗ್ ವೇಳೆ ರೈಲ್ವೆ ಫುಟ್‌ಬೋರ್ಡ್ ನಲ್ಲಿ ನಿಂತುಕೊಂಡು ಬಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿನ ವೀಡಿಯೊ ದೃಶ್ಯಾವಳಿಯಿಂದ ಕಂಡುಬಂದಿದೆ. ಈ ಕಾರಣಕ್ಕೆ ಪ್ರೊಡಕ್ಷನ್ ಕಂಪೆನಿಯಾದ ಮೆಸಸ್ ಮಾರ್ಕೆಟ್‌ಮೆನ್ ಕನ್‌ಸ್ಯೂಮರ್ ಹಾಗೂ ಈವೆಂಟ್ಸ್ ಪ್ರೈವೇಟ್ ಲಿಮಿಟೆಡ್‌ಗೆ ವಿವರಣೆ ಕೇಳಲಾಗಿದೆ ಎಂದು ಪಶ್ಚಿಮ ರೈಲ್ವೆ ವಕ್ತಾರ, ರವೀಂದ್ರ ಬಾಕರ್ ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ರೈಲ್ವೆ ವತಿಯಿಂದ ಜುಲೈ 1ರಿಂದ 14ರವರೆಗೆ ಫುಟ್‌ಬೋರ್ಡ್ ಮೇಲೆ ನಿಂತು ಪ್ರಯಾಣ ಮಾಡುವುದರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ, 2,809 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News