ಸಣ್ಣ ಸಮುದಾಯದವರು ರಾಜ್ಯಭಾರ ಮಾಡಬೇಕೆಂದವರು ಅರಸು -ಸಿ.ಕೆ.ಜಾಫರ್ ಶರೀಫ್
ಕೇಂದ್ರದ ಮಾಜಿ ರೈಲ್ವೆ ಮಂತ್ರಿ ಸಿ.ಕೆ.ಜಾಫರ್ ಶರೀಫ್ ಮೂಲತಃ ಚಳ್ಳಕೆರೆಯವರು. ಜಾಫರ್ 10 ವರ್ಷದ ಹುಡುಗನಾಗಿದ್ದಾಗಲೇ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದವರು. ಪ್ರಾಥಮಿಕ ಶಾಲೆಯ ಗುರುಗಳಾದ ಗುರುಪಾದಪ್ಪರ ಆಣತಿಯಂತೆ ಸ್ವಾತಂತ್ರ ಹೋರಾಟಗಾರರೊಂದಿಗೆ ರ್ಯಾಲಿಯಲ್ಲಿ ಭಾಗವಹಿಸಿ ಹೋರಾಟದ ಓನಾಮ ಅರಿತಿದ್ದವರು. ಬುದ್ಧಿ ಬೆಳೆದಂತೆ ಕಾಂಗ್ರೆಸ್‌ನ ತತ್ವ ಸಿದ್ಧಾಂತಗಳಿಗೆ ಮಾರುಹೋಗಿ ಯೂತ್ ಕಾಂಗ್ರೆಸ್ ಸೇರಿ, ಪ್ರಧಾನಿ ನೆಹರೂ ಕಣ್ಣಿಗೆ ಬಿದ್ದರು. ಕೃಷ್ಣ ಮೆನನ್ ಗುಂಪಿನಲ್ಲಿ ಗುರುತಿಸಿಕೊಂಡರು. ಆಗ ಪರಿಚಯವಾದ ಇಂದಿರಾ ಗಾಂಧಿಯವರು, ಮತ್ತವರ ಆಪ್ತ ಕಾರ್ಯದರ್ಶಿ ಯಶಪಾಲ್ ಕಪೂರ್, ಅಂದಿನ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸಾದಿಕ್ ಅಲಿಯವರ ಸಂಪರ್ಕ ಸಾಧಿಸಿ, ರಾಜಕೀಯದಲ್ಲಿ ಹಂತ ಹಂತವಾಗಿ ಬೆಳೆದರು. ಚಳ್ಳಕೆರೆಯ ಬಡ ಮುಸ್ಲಿಂ ಕುಟುಂಬದಲ್ಲಿ ನವೆಂಬರ್ 3, 1933ರಂದು ಹುಟ್ಟಿದ ಜಾಫರ್ ಶರೀಫ್, ಅಮ್ಮನ ಅಕ್ಕರೆಯಲ್ಲಿ ಬೆಳೆದು, ಬ್ರಾಹ್ಮಣ ಹುಡುಗರ ಜೊತೆ ಕೂಡಿ ಆಡಿ, ಕೃಷಿಯಲ್ಲಿ ಕಷ್ಟಪಟ್ಟು ಬದುಕನ್ನು ರೂಪಿಸಿಕೊಂಡವರು. ತಿಂಗಳಿಗೆ ನೂರು ರೂ. ಸಂಬಳದ ಕೆಲಸಕ್ಕೆ ಕಾಂಗ್ರೆಸ್ ಕಚೇರಿಯನ್ನೇ ಮನೆಯನ್ನಾಗಿ ಮಾಡಿಕೊಂಡವರು.
ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ, ಅವರ ಶಿಷ್ಯರಾಗಿ ಸೇವಾದಳದ ಸದಸ್ಯರಾಗಿದ್ದವರು. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ, ನಿಜಲಿಂಗಪ್ಪನವರನ್ನು ತೊರೆದು ಇಂದಿರಾ ಪರ ನಿಂತವರು. ದೇವರಾಜ ಅರಸು ಅವರಿಗೆ ಹತ್ತಿರವಾದವರು. 1971ರ ಲೋಕಸಭಾ ಚುನಾವಣೆಯ ಮೂಲಕ ಮೊತ್ತ ಮೊದಲ ಬಾರಿಗೆ ಒಕ್ಕಲಿಗರ ಪ್ರಾಬಲ್ಯವುಳ್ಳ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ ಅಲ್ಪಸಂಖ್ಯಾತ ಸಮುದಾಯದ ಜಾಫರ್ ಶರೀಫ್, ಲಿಂಗಾಯತರ ಎಂ.ವಿ.ರಾಜಶೇಖರಮೂರ್ತಿಯನ್ನು ಸೋಲಿಸಿ ಸಂಸತ್ತನ್ನು ಪ್ರವೇಶಿಸಿದರು. ಅಲ್ಲಿಂದ ಶುರುವಾದ ಅವರ ಗೆಲುವಿನ ಯಾತ್ರೆ, ನಿರಂತರವಾಗಿ 8 ಬಾರಿ ಕರ್ನಾಟಕವನ್ನು ಪ್ರತಿನಿಧಿಸಿದವರು. ಮೊದಲಿಗೆ 1980ರಲ್ಲಿ ರೈಲ್ವೆ ರಾಜ್ಯ ಮಂತ್ರಿಯಾಗಿ ನಂತರ ನೀರಾವರಿ, ಕಲ್ಲಿದ್ದಲು ಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಕ್ಯಾಬಿನೆಟ್ ಸಚಿವರಾಗಿ ರೈಲ್ವೆ ಇಲಾಖೆಗೆ ಕಾಯಕಲ್ಪ ತಂದು, ಹೊಸ ಯೋಜನೆಗಳ ಮೂಲಕ ದೇಶದ ಜನತೆ ನೆನಪಿಸಿಕೊಳ್ಳುವಂತಹ ಕೆಲಸ ಮಾಡುವವರೆಗೂ ಮುಂದುವರಿದಿತ್ತು.
ಕೆಲಸ ಕೊಡಿಸಿದ ಅರಸು
ದೇವರಾಜ ಅರಸು ಮೈಸೂರು ಮಹಾರಾಜರ ವಂಶಸ್ಥರು, ಹಳೆ ಮೈಸೂರು ಸಂಸ್ಥಾನದವರು. ನಿಜಲಿಂಗಪ್ಪನವರ ಸರಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. ಆವತ್ತಿನಿಂದ ಅವರ-ನಮ್ಮ ಬಾಂಧವ್ಯ ಬೆಳೆಯಿತು. ನಾವಿಬ್ಬರೂ ಒಂದೇ ಭಾವನೆ ಇದ್ದಂತಹ ವ್ಯಕ್ತಿಗಳಾ ಗಿದ್ದೆವು. ಈ ರಾಜ್ಯವನ್ನು ದೊಡ್ಡ ಸಮುದಾಯಗಳೇ ಏಕೆ ರಾಜ್ಯ ಭಾರ ಮಾಡಬೇಕು, ಸಣ್ಣ ಸಮುದಾಯಗಳು ಏಕೆ ರಾಜ್ಯಭಾರ ಮಾಡಬಾರದು ಎಂಬ ಪ್ರಶ್ನೆ ನಮ್ಮಿಬ್ಬರಲ್ಲೂ ಅನೇಕ ಸಲ ಚರ್ಚೆಗೆ ಬಂದಿದ್ದುಂಟು. ಅದರ ಅರ್ಥ ಯಾವುದೇ ದೊಡ್ಡ ಸಮು ದಾಯ ಸಣ್ಣ ಸಮುದಾಯವನ್ನು ಪುರಸ್ಕರಿಸಲಿಲ್ಲ, ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತಲ್ಲ; ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶಗಳು ಸಿಗಬೇಕು ಎನ್ನುವುದು ಅರಸು ಅವರ ವಾದವಾಗಿತ್ತು. ಸಿಕ್ಕಾಗ ಸರಿಯಾಗಿ ಬಳಸಿಕೊಂಡು ಎಲ್ಲ ಸಮುದಾಯದವರಿಗೂ ಅಧಿಕಾರ ಹಂಚಿದರು. ಹಾಗೆ ನೋಡಿದರೆ ಅರಸು ಅವರದು ಪುಟ್ಟ ಸಮುದಾಯ. ಅದು ನಿಮಿತ್ತ ಮಾತ್ರ. ಆದರೆ ಅವರ ಯೋಚನೆ, ದೂರ ದರ್ಶಿತ್ವ, ಆಡಳಿತದ ಅನುಭವ ಎಲ್ಲರಿಗಿಂತ ಮಿಗಿಲಾಗಿತ್ತು. ಹಿಂದುಳಿದವರ ಬಗೆಗಿನ ಅವರ ನೋಟವೇ ವಿಭಿನ್ನವಾಗಿತ್ತು. ಎಲ್ಲ ಸಮುದಾಯದವರೂ ರಾಜ್ಯಭಾರ ಮಾಡಬೇಕು, ಅಧಿಕಾರದ ಸ್ಥಾನಗಳನ್ನು ಅಲಂಕರಿಸಬೇಕು, ಆ ಮೂಲಕ ಆ ಸಮುದಾಯಗಳ ಅಭಿವೃದ್ಧಿಯಾಗಬೇಕು ಎನ್ನುತ್ತಿದ್ದರು. ನಾನಾಗ ಕಷ್ಟದಲ್ಲಿದ್ದೆ. ಮನೆ ತುಂಬಾ ಜನ. ಸಾಲದು ಅಂತ ನನ್ನ ಜೊತೆ ಶೇಕ್ ಹೈದರ್ ಮತ್ತು ಸುಬ್ರಹ್ಮಣ್ಯ ಎಂಬ ನನ್ನ ಗೆಳೆಯರು ಬೇರೆ ನಮ್ಮ ಮನೆಯಲ್ಲಿಯೇ ಇದ್ದರು. ದುಡಿಮೆ ಇಲ್ಲ. ಕೈಗೆ ಸಿಕ್ಕ ಕೆಲಸ ಮಾಡಿಕೊಂಡಿದ್ದೆ.
ಸಾರಿಗೆ ಮಂತ್ರಿಯಾಗಿದ್ದ ಅರಸು ಒಂದು ದಿನ ಎದುರಿಗೆ ಸಿಕ್ಕರು, ‘‘ಹೇಗಿದ್ದೀಯಾ, ಜೀವನಕ್ಕೆ ಏನಾದ್ರು ಮಾಡಿಕೊಂಡಿದ್ದೀಯಾ, ಯಾರಾದ್ರು ಇದ್ರೆ ಕಳಿಸು, ಕೆಲಸ ಕೊಡಿಸೋಣ’’ ಎಂದರು. ಬಡವರು, ಕಷ್ಟ ಅಂದರೆ ಅರಸು ಒಂದು ಕೈ ಮುಂದೆ. ನಾನು ತಕ್ಷಣ ಶೇಕ್ ಹೈದರ್ ಮತ್ತು ಸುಬ್ರಹ್ಮಣ್ಯರನ್ನು ಕಳಿಸಿದೆ. ಅಲ್ಲಿಯೇ ಅಪ್ಲಿಕೇಷನ್ ಫಾರಂ ಫಿಲ್ ಮಾಡಿಸಿ ಸಾರಿಗೆ ಇಲಾಖೆಯಲ್ಲಿ ಕೆಲಸ ಕೊಡಿಸಿಯೇ ಬಿಟ್ಟರು. ಚಿಕ್ಕ ವಯಸ್ಸಿನಲ್ಲೇ ನೆಹರೂ, ಇಂದಿರಾ, ಶಾಸ್ತ್ರಿಯವರನ್ನು ಬಹಳ ಹತ್ತಿರದಿಂದ ನೋಡುವ, ಅವರೊಂದಿಗೆ ಬೆರೆಯುವ ಭಾಗ್ಯ ನನ್ನದಾಗಿತ್ತು. ಹಾಗಾಗಿ ಅವರ ಪ್ರಭಾವಕ್ಕೆ ಒಳಗಾಗಿ, ಯೂತ್ ಕಾಂಗ್ರೆಸ್ ಸೇರಿದೆ, ಸೇವಾದಳದಲ್ಲಿದ್ದೆ, ಆನಂತರ 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ಇಂದಿರಾರ ಪರ ವಾಲಿದೆ. ಅಲ್ಲಿ ದೇವರಾಜ ಅರಸರೊಂದಿಗೆ ಸೇರಿ ಕೆಲಸ ಮಾಡುವ ಅವಕಾಶ ಸಿಕ್ಕಿತು.
ಅಲ್ಪಸಂಖ್ಯಾತರಿಗೆ ಟಿಕೆಟ್
1970ರಲ್ಲಿ, ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ, ದೇವರಾಜ ಅರಸು ಅಡ್ಹಾಕ್ ಸಮಿತಿಯ ಕನ್ವೀನರ್ ಆಗಿದ್ದರು. ಕಾಂಗ್ರೆಸ್ ಎರಡು ಗುಂಪಾಗಿ ಇಬ್ಭಾಗವಾಗಿದ್ದಾಗ, ಮೂರು ಉಪ ಚುನಾವಣೆಗಳು ಎದುರಾದವು. ಹೊಸಪೇಟೆ, ಹುನಗುಂದ ಮತ್ತು ಶಿವಾಜಿನಗರ. ಇದಾದ ನಂತರ ಬೆಂಗಳೂರು ಕಾರ್ಪೊರೇಶನ್ ಎಲೆಕ್ಷನ್. ಅದು ದೇವರಾಜ ಅರಸು ಅವರಿಗೆ ಅಗ್ನಿಪರೀಕ್ಷೆಯ ಕಾಲ. ಚುನಾವಣೆಗಳು ಎದುರಾದಾಗ ಸಾಮಾನ್ಯವಾಗಿ ನಾಯಕರು ದಿಲ್ಲಿಯತ್ತ ಮುಖ ಮಾಡುವುದು ಸಹಜ. ಅದೇ ರೀತಿ ದೇವರಾಜ ಅರಸು ಕೂಡ ದಿಲ್ಲಿಗೆ ಹೋದರು. ಅವರಿಗೆ ಸಿಕ್ಕಿದ್ದು ಕೇವಲ 5 ಸಾವಿರ ಮಾತ್ರ. ಅದು ಅವರು ದಿಲ್ಲಿಗೆ ಹೋಗಿಬರುವ ಖರ್ಚಿಗೆ ಸಮನಾಯಿತು. ಆಮೇಲೆ ವರ್ಕಿಂಗ್ ಪ್ರೆಸಿಡೆಂಟ್ ಆಗಿದ್ದ ಕೊಲ್ಲೂರು ಮಲ್ಲಪ್ಪನವರು ಹೋದರು. ಬರಿಗೈಲಿ ಬಂದರು.
ಅಲ್ಪಸಂಖ್ಯಾತರನ್ನು ಕಂಡರೆ ಅರಸುಗೆ ಪ್ರೀತಿ. ಮುಸ್ಲಿಮರು ಎಂದರೆ, ಸ್ವಲ್ಪ ಹೆಚ್ಚೆನ್ನುವಷ್ಟು ಆದರ. ನಮ್ಮನೆ ಹತ್ತಿರದ ಕೋಲ್ಸ್ ಪಾರ್ಕ್‌ನ ಬಡ ಕುಟುಂಬದಿಂದ ಬಂದ ಹಮೀದ್ ಷಾನನ್ನು ಅರಸು ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ಮಾಡಿದ್ದರು. ಈ ಹಮೀದ್ ಷಾ ನನ್ನ ಪರಿಚಯದವ. ನನಗೆ ಹೈಕಮಾಂಡ್‌ನ ಯಶಪಾಲ್ ಕಪೂರ್, ಸಾದಿಕ್ ಅಲಿ ಮತ್ತು ಇಂದಿರಾ ಗಾಂಧಿಯವರ ನಿಕಟ ಸಂಪರ್ಕವಿದೆ ಎಂಬುದು ಇವನಿಗೆ ತಿಳಿದಿತ್ತು. ಒಂದು ದಿನ ಬಂದು ನನ್ನನ್ನು ಹಿಡಿದುಕೊಂಡ. ನಾನು ಏನು ಹೇಳಿದರೂ ಬಿಡಲಿಲ್ಲ. ಏನಾದರೂ ಮಾಡಿ, ಎಲೆಕ್ಷನ್ ಖರ್ಚಿಗೆ ಕಾಸು ಕೊಡಿಸಿ ಅಂದ. ಆಯ್ತು ಅಂತ ಮಾತು ಕೊಟ್ಟೆ. ಅದನ್ನೇ ಹೋಗಿ ಆತ ಅರಸುಗೆ ಹೇಳಿದ.
ತಕ್ಷಣವೇ ಅರಸು ಅವರು ನನ್ನನ್ನು ಪಾರ್ಟಿ ಆಫೀಸಿಗೆ ಕರೆಸಿದರು. ಯಶಪಾಲ್ ಜೊತೆ ಮಾತಾಡಿಸಿ ಎಂದರು. ನಾನು ಅವರ ಮುಂದೆಯೇ ಯಶಪಾಲ್‌ಗೆ ಫೋನ್ ಮಾಡಿ ಕೊಟ್ಟೆ. ಮಾತನಾಡಿದರು. ಅರಸು, ಮಲ್ಲಪ್ಪನವರು ದಿಲ್ಲಿಗೆ ಬರೋದು ಬೇಡ ಎಂದು ಹೇಳಿ ಶರೀಫ್ ಕಳಿಸಿ ಎಂದಿದ್ದರು. ನಾನು ಹೋಗಿ ‘‘ನೋಡಿ, ಮೂರು ಉಪಚುನಾವಣೆ ಇದೆ, ಮುಂದಕ್ಕೆ ಬೆಂಗಳೂರು ಕಾರ್ಪೊರೇಶನ್ ಎಲೆಕ್ಷನ್ ಬೇರೆ ಇದೆ, ಪಾರ್ಟಿ ಗಟ್ಟಿಯಾಗಿ ನೆಲೆಯೂರಬೇಕಾದರೆ, ಈ ಚುನಾವಣೆಯನ್ನು ನಾವು ಗೆಲ್ಲಲೇಬೇಕು’’ ಎಂದೆ. ಅದಕ್ಕವರು 75 ಸಾವಿರ ಕೊಟ್ಟರು. ದುಡ್ಡು ಸಿಕ್ಕ ತಕ್ಷಣ ಅರಸರಿಗೆ ಫೋನ್ ಮಾಡಿದೆ, ಅವರು ಫಿಯಟ್ ಕಾರ್ ಹಾಕಿಕೊಂಡು ನನ್ನ ರಿಸೀವ್ ಮಾಡಿಕೊಳ್ಳಲು ಏರ್‌ಪೋರ್ಟಿಗೆ ಬಂದಿದ್ದರು. ನಂತರ ಆ ಹಣದಲ್ಲಿ, 60 ಸಾವಿರವನ್ನು ಉಪಚುನಾವಣೆಗೆ ಇಟ್ಟುಕೊಂಡು, 15 ಸಾವಿರದಲ್ಲಿ ಬೆಂಗಳೂರು ಕಾರ್ಪೊರೇಶನ್ ಎಲೆಕ್ಷನ್ ಮಾಡಿದರು. ಅರಸು ಅವರ ಅದೃಷ್ಟ ಚೆನ್ನಾಗಿತ್ತು 3 ಉಪಚುನಾವಣೆ, ಬೆಂಗಳೂರು ಕಾರ್ಪೊರೇಶನ್ ಎಲೆಕ್ಷನ್- ಎರಡನ್ನೂ ಗೆದ್ದರು.
ಅಭ್ಯರ್ಥಿ ಮತ್ತು ದುಭಾಷಿ
ಮೊದಲಿನಿಂದಲೂ ಹೈಕಮಾಂಡ್, ಇಂದಿರಾ ಗಾಂಧಿ ಜೊತೆ ನಿಕಟ ಸಂಪರ್ಕವಿದ್ದುದರಿಂದ 1971ರ ಲೋಕಸಭಾ ಚುನಾವಣೆಯಲ್ಲಿ, ಕನಕಪುರದಿಂದ ಸ್ಪರ್ಧಿಸಲು ನನಗೆ ಟಿಕೆಟ್ ಸಿಕ್ಕಿತು. ಅಭ್ಯರ್ಥಿಯಾದೆ. ಅಲ್ಲಿಂದಲೇ ನನ್ನ ರಾಜಕೀಯ ಜೀವನ ಆರಂಭವಾಗಿದ್ದು. ಕೆಂಗಲ್ ಹನುಮಂತಯ್ಯನವರು ಶಿಕ್ಷಣತಜ್ಞ ಕರಿಯಪ್ಪನವರನ್ನು ನಿಲ್ಲಿಸಬೇಕೆಂದುಕೊಂಡಿದ್ದರು. ಆದರೆ ದೇವರಾಜ ಅರಸು ಮತ್ತು ಅಝೀಝ್ ಸೇಠ್ ಬೆಂಬಲಿಸಿದ್ದರಿಂದ, ಇಂದಿರಾ ಗಾಂಧಿ ನನ್ನ ಪರವಾಗಿದ್ದರಿಂದ ನನಗೆ ಟಿಕೆಟ್ ಸಿಕ್ಕಿತು. ಇಂದಿರಾ ಗಾಂಧಿ ಹಾಸನಕ್ಕೆ ಬಂದಿದ್ದಾಗ, ಕೆಲವು ಕಾಂಗ್ರೆಸ್ಸಿಗರು ನನ್ನ ವಿರುದ್ಧ ಚಾಡಿ ಹೇಳಿ ಟಿಕೆಟ್ ತಪ್ಪಿಸಲು ನೋಡಿದ್ದರು. ಆದರೆ ಅಝೀಝ್‌ಸೇಠ್‌ರಿಂದಾಗಿ, ಅವರ ಬೇಳೆಕಾಳು ಬೇಯಲಿಲ್ಲ. ಅವತ್ತಿನ ಚುನಾವಣೆಯಲ್ಲಿ ನನ್ನ ಎದುರಾಳಿಯಾಗಿದ್ದವರು, ನನ್ನ ಗುರು ನಿಜಲಿಂಗಪ್ಪನವರ ಅಳಿಯ ಎಂ. ವಿ. ರಾಜಶೇಖರ ಮೂರ್ತಿ. ನನ್ನ ಪರ ಕನಕಪುರದ ಕರಿಯಪ್ಪನವರು ಗಟ್ಟಿಯಾಗಿ ನಿಂತರು. ಇಂದಿರಾ ಗಾಂಧಿಯವರು ಎಲ್ಲಾ ಕಡೆ ಬಂದು ಭಾಷಣ ಮಾಡಿದರು. ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡುವ ಕೆಲಸ ನನ್ನದಾ ಗಿತ್ತು. ಚನ್ನಪಟ್ಟಣದ ಬಹಿರಂಗ ಸಭೆಯಲ್ಲಿ ಇಂದಿರಾ ಗಾಂಧಿಯವರು, ‘‘ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರಿಗೂ ಅವಕಾಶ ಸಿಗಬೇಕು.
ಆ ಅವಕಾಶ ಬಹುಸಂಖ್ಯಾತರ ಸಹಾನುಭೂತಿ, ಸೌಹಾರ್ದತೆ ಮತ್ತು ಪ್ರೋತ್ಸಾಹದಿಂದ ಮಾತ್ರ ಸಾಧ್ಯ. ಅಂತಹ ವಾತಾವರಣ ಇಲ್ಲಿದೆ. ಅದಕ್ಕಾಗಿ ಶರೀಫ್‌ರನ್ನು ಅಭ್ಯರ್ಥಿಯನ್ನಾಗಿಸಲಾಗಿದೆ. ಇವರನ್ನು ಗೆಲ್ಲಿಸಿಕೊಡಿ, ಈ ಕ್ಷೇತ್ರದ ಹೊಣೆಯನ್ನು ನಾನು ವಹಿಸಿಕೊಂಡು, ಅವರ ಮೂಲಕ ಕೆಲಸ ಮಾಡಿಸುತ್ತೇನೆ’’ ಎಂದರು. ನನಗೆ ಚುನಾವಣಾ ಖರ್ಚಿಗೆಂದು ದೇವರಾಜ ಅರಸು, ಕೆಂಗಲ್ ಹನುಮಂತಯ್ಯ, ಕೊಲ್ಲೂರು ಮಲ್ಲಪ್ಪ, ಅಝೀಝ್ ಸೇಠ್ ಎಲ್ಲರೂ ಸೇರಿ ಒಂದು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಕೊಟ್ಟರು. ನಾನಾಗ ಬಡವ, ನನ್ನ ಹತ್ತಿರ ಏನೂ ಇರಲಿಲ್ಲ. ನಾನು ಆ ಹಣವನ್ನು ತೆಗೆದುಕೊಂಡು ಹೋಗಿ ಕರಿಯಪ್ಪನವರ ಕೈಗಿಟ್ಟೆ. ಆ ಪುಣ್ಯಾತ್ಮ ಎಷ್ಟು ನಾಜೂಕಾಗಿ ಖರ್ಚು ಮಾಡಿದರೆಂದರೆ, ಅದರಲ್ಲೂ 18,750 ರೂ. ಉಳಿಸಿ ವಾಪಸ್ ಕೊಟ್ಟರು. ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿಕೊಟ್ಟರು. ಅಂತಹ ವ್ಯಕ್ತಿಗಳು ನನ್ನ ಬೆಂಬಲಕ್ಕಿಲ್ಲದಿದ್ದರೆ ಇವತ್ತು ನಾನು ಈ ಸ್ಥಿತಿಯಲ್ಲಿರಲು ಸಾಧ್ಯವೇ ಆಗುತ್ತಿರಲಿಲ್ಲ.
ವರ್ಗಾವಣೆಗೆ ಬಯ್ದ ಅರಸು
1972ರ ವಿಧಾನಸಭಾ ಚುನಾವಣೆಯಲ್ಲಿ ದೇವರಾಜ ಅರಸರ ನೇತೃತ್ವದಲ್ಲಿ ಇಂದಿರಾ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಕಂಡು ಅಧಿಕಾರ ಹಿಡಿಯಿತು. ಪುಟ್ಟ ಸಮುದಾಯದಿಂದ ಬಂದ ಅರಸು ಮುಖ್ಯಮಂತ್ರಿಯಾಗುವ ಮೂಲಕ, ಅಂತಹ ಸಮುದಾಯಗಳಲ್ಲಿ ಮಿಂಚಿನ ಸಂಚಲನ ಉಂಟುಮಾಡಿದರು. ಅಷ್ಟೇ ಅಲ್ಲ, ಸಣ್ಣಪುಟ್ಟ ಜಾತಿಗಳಿಂದ ಬಂದವರನ್ನು ಶಾಸಕರು, ಮಂತ್ರಿಗಳನ್ನಾಗಿ ಮಾಡಿ ಪ್ರಜಾಪ್ರಭುತ್ವಕ್ಕೆ ಬೆಲೆ ತಂದರು. ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಬದ್ಧತೆ ಇರುವ ರಾಜಕಾರಣಿ ಎನ್ನಿಸಿಕೊಂಡರು. ಆಡಳಿತದಲ್ಲಿ ಬದಲಾವಣೆ ತರಲು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು. ಸರಕಾರಿ ಅಧಿಕಾರಿಗಳು ವರ್ಗಾವಣೆಗಾಗಿ ಜಾತಿ, ಹಣ ಮತ್ತು ಲಾಬಿ ಬಳಸಿದರೆ ಕೆಂಡಾಮಂಡಲರಾಗುತ್ತಿದ್ದರು. ಕೋಲಾರದ ಲೋಕಸಭಾ ಸದಸ್ಯ, ಸ್ನೇಹಿತ ಜಿ.ವೈ.ಕೃಷ್ಣನ್, ತನ್ನ ಅಳಿಯ ಐಎಎಸ್ ಅಧಿಕಾರಿ ಮುನಿಸ್ವಾಮಿಯ ವರ್ಗಾವಣೆ ವಿಷಯ ಮಾತನಾಡಲು, ಮುಖ್ಯಮಂತ್ರಿ ದೇವರಾಜ ಅರಸರನ್ನು ಕಾಣಲು ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದ.
ನಾವಿಬ್ಬರೂ ಎಂಪಿಗಳು. ನಮ್ಮದೇ ಪಕ್ಷದ ಸರಕಾರವಿದೆ. ಅರಸು ನಮ್ಮವರೇ ಎಂಬುದು ನಮ್ಮ ಭಾವನೆ. ಬೆಳಗ್ಗೆಯೇ ಬಾಲಬ್ರೂಯಿಗೆ ಹೋದೆವು. ನಮ್ಮನ್ನು ನೋಡಿ ಆತ್ಮೀಯವಾಗಿಯೇ ಬರಮಾಡಿಕೊಂಡ ಅರಸು, ‘‘ಏನು ವಿಷಯ’’ ಎಂದರು. ಜಿ.ವೈ. ಕೃಷ್ಣನ್, ‘‘ನಮ್ಮ ಅಳಿಯನಂದೊಂದು ಟ್ರಾನ್ಸ್‌ವರ್ ಇತ್ತು...’ ಎಂದರಷ್ಟೆ. ಅದೆಲ್ಲಿತ್ತೋ ಸಿಟ್ಟು, ಮುಖವೆಲ್ಲ ಕೆಂಪಾಯಿತು. ಕೃಷ್ಣನ್‌ರಿಗೆ ಹಿಗ್ಗಾಮುಗ್ಗಾ ಬಯ್ದರು. ಅವರ ಅಳಿಯ ಮುನಿಸ್ವಾಮಿಗೂ ಉಗಿದರು. ಸರಕಾರಿ ಅಧಿಕಾರಿಗಳು ಎಂದರೆ ಸೇವೆಗೆ ನಿಯೋಜಿಸಲ್ಪಟ್ಟವರು. ಸರಕಾರ ಎಲ್ಲಿ ಹಾಕುತ್ತದೋ ಅಲ್ಲಿ ಹೋಗಿ ಕೆಲಸ ಮಾಡಬೇಕು. ಹೋಗದೆ, ಹೀಗೆ ಯಾರ್ಯಾರಿಂದಲೋ ಪ್ರಭಾವ, ಒತ್ತಡ, ಶಿಫಾರಸು ಮಾಡಿಸಿದರೆ ನನಗೆ ಆಗುವುದಿಲ್ಲ ಎಂದರು. ಒಂದೈದು ನಿಮಿಷದಲ್ಲಿ ಅಲ್ಲಿನ ವಾತಾವರಣವೇ ಬೇರೆಯಾಗಿಹೋಯಿತು. ನಾವು ಯಾವುದೋ ಮಹಾಪರಾಧ ಮಾಡಿದ ಅಪರಾಧಿಗಳಂತೆ ಕುಗ್ಗಿಹೋದೆವು. ನನಗೇಕೋ ಇದು ಸರಿ ಕಾಣಲಿಲ್ಲ. ಕೃಷ್ಣನ್ ನನ್ನ ಸ್ನೇಹಿತ, ಅವನ ಜೊತೆ ನಾನು ಹೋಗಿದ್ದೇನೆ. ಅವನಿಗೆ ಬಯ್ದರೆ, ಅದು ನನಗೂ ಬಯ್ದಂತೆಯೇ ಎಂದು ಭಾವಿಸಿದ ನಾನು, ‘‘ನಾವು ಬೇರೆ ಯಾರೋ ಅಲ್ಲ, ಪಕ್ಷದ ಮುಖಂಡರು, ಆದರೆ ಆಗುತ್ತೆ ಅನ್ನಿ, ಇಲ್ಲ ಅಂದರೆ ಆಗಲ್ಲ ಅನ್ನಿ, ಅದು ಬಿಟ್ಟು ಹೀಗೆ ಬಾಯಿಗೆ ಬಂದಂತೆ ಬಯ್ಯುವುದು ಏಕೆ, ನಮಗೇನು ಮರ್ಯಾದೆ ಇಲ್ಲ್ಲವೇ?’’ ಎಂದು ಹೇಳಿ ಅಲ್ಲಿಂದ ಹೊರಡಲು ಅಣಿಯಾದೆವು. ತಕ್ಷಣ ಅರಸು ತಣ್ಣಗಾದರು, ವೌನವಾದರು. ಆಮೇಲೆ ಏನನ್ನಿಸಿತೋ, ಮೆದು ಮಾತಿನಲ್ಲಿ ‘‘ಅದು ಹೇಗೆ ಹೋಗ್ತೀರಿ, ಬನ್ನಿ ಇಲ್ಲಿ’’ ಎಂದು ಆತ್ಮೀಯವಾಗಿ ಕರೆದು ತಿಂಡಿ ತಿನ್ನಿಸಿ, ಕಾಫಿ ಕುಡಿಸಿ, ‘ಅವನಿಗೆ ಹೇಳಿ, ಸರಕಾರಿ ನೌಕರಿ ಅಂದರೆ, ಎಲ್ಲಿ ಹಾಕುತ್ತೋ ಅಲ್ಲಿ ಹೋಗಿ ಸೇವೆ ಸಲ್ಲಿಸಬೇಕು ಅಂತ’’ ಎಂದು ವರ್ಗಾವಣೆ ಮಾಡಿದರು.