"ಕಾರ್ಗಿಲ್ ಸಂದರ್ಭದಲ್ಲಿ ಪಾಕ್ ಮೇಲೆ ಬಾಂಬ್ ದಾಳಿಗೆ ಮುಂದಾಗಿತ್ತು ಭಾರತೀಯ ವಾಯು ಪಡೆ "

Update: 2016-07-20 04:43 GMT

ಹೊಸದಿಲ್ಲಿ,ಜು.20: ಭಾರತೀಯ ವಾಯುಪಡೆ 1999ರ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಪಾಕಿಸ್ತಾನದ ಆಯಕಟ್ಟಿನ ಮತ್ತು ಪ್ರಮುಖ ಪ್ರದೇಶಗಳ ಮೇಲೆ ಬಾಂಬ್‌ದಾಳಿ ನಡೆಸಲು ವಿಸೃತ ಯೋಜನೆಯನ್ನು ರೂಪಿಸಿತ್ತು, ಭಾರತೀಯ ನೌಕಾಪಡೆಯ ಗುರಿ ಕರಾಚಿ ಬಂದರು ಆಗಿತ್ತು ಎಂಬ ಅಂಶ ಬಹಿರಂಗವಾಗಿದೆ.

ಆದರೆ ಈ ರೂಪುರೇಷೆಗಳ ಅನುಷ್ಠಾನಕ್ಕೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅವಕಾಶ ನೀಡಲಿಲ್ಲ. ಮೇ 25ರಂದು ನಡೆದ ಭದ್ರತೆ ಕುರಿತ ಸಂಪುಟ ಸಮಿತಿ ಅಂದಿನ ವಾಯುಪಡೆಯ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಎ.ವೈ.ಟಿಪ್ನಿಸ್ ಅವರಿಗೆ ಸ್ಪಷ್ಟ ಸೂಚನೆ ನೀಡಿ, ಪಾಕಿಸ್ತಾನದ ಒಳಹೊಕ್ಕಿ ಬಾಂಬ್ ದಾಳಿ ನಡೆಸುವುದು ಬಿಡಿ; ಯಾವುದೇ ಕಾರಣಕ್ಕೂ ನಮ್ಮ ಯುದ್ಧವಿಮಾನಗಳು ಗಡಿ ನಿಯಂತ್ರಣ ರೇಖೆಯ ಸರಹದ್ದು ಮೀರಿ ಹೋಗಬಾರದು ಎಂದು ಹೇಳಿತ್ತು. ಈ ಸಂದರ್ಭದಲ್ಲಿ ಟಿಪ್ನಿಸ್ ಅವರು, ಗಡಿನಿಯಂತ್ರಣ ರೇಖೆಯನ್ನು ಸ್ವಲ್ಪಮಟ್ಟಿಗೆ ಉಲ್ಲಂಘಿಸಿ, ಆಯಕಟ್ಟಿನ ಜಾಗವನ್ನು ವಶಕ್ಕೆ ಪಡೆದಿದ್ದ ಪಾಕಿಸ್ತಾನಿ ಸೈನಿಕರ ವಿರುದ್ಧ ಹೋರಾಡಲು  ವೈಯಕ್ತಿಕ ನೆಲೆಯಲ್ಲಿ ಕೂಡಾ ಅನುಮತಿ ಕೋರಿದ್ದರು.

"ವಾಯುಪಡೆ ಎಲ್‌ಒಸಿಯನ್ನು ಸ್ವಲ್ಪಮಟ್ಟಿಗೆ ಮೀರಿ ಮುನ್ನಡೆಯಲು ಕೋರಿದ್ದ ಅವಕಾಶವನ್ನು ಸರ್ಕಾರ ಖಡಾಖಂಡಿತವಾಗಿ ನಿರಾಕರಿಸಿತ್ತು. ವಾಜಪೇಯಿ ಸ್ವತಃ ನೇರವಾಗಿ, ದಯವಿಟ್ಟು ಎಲ್‌ಒಸಿ ಉಲ್ಲಂಘಿಸಬೇಡಿ" ಎಂದು ಆದೇಶಿಸಿದ್ದನ್ನು ಎ.ವೈ.ಟಿಪ್ನಿಸ್ ನೆನಪಿಸಿಕೊಂಡರು. ಭಾರತದ ಈ ಸ್ವಯಂ ನಿಯಂತ್ರಣದಿಂದಾಗಿ ಕಾರ್ಗಿಲ್ ಸಂಘರ್ಷ ಪೂರ್ಣ ಪ್ರಮಾಣದ ಯುದ್ಧವಾಗಿ ಪರಿವರ್ತನೆಯಾಗಲಿಲ್ಲ. ಈ ಸಂದರ್ಭದಲ್ಲಿ ಅಮೆರಿಕ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ಮೇಲೆ ಒತ್ತಡ ಹೇರಿ, ಕಾರ್ಗಿಲ್‌ನಿಂದ ಸೇನೆ ವಾಪಸು ಪಡೆಯುವಂತೆ ಸೂಚಿಸಿತ್ತು.

ಭಾರತೀಯ ಸೇನೆ ಮೇ 26ರಂದು ಆರಂಭಿಸಿದ್ದ ಪ್ರತಿದಾಳಿಗೆ ಪೂರಕವಾಗಿ, ಆಕ್ರಮಣಕಾರಿ ದಾಳಿಗೆ ವಾಯುಪಡೆ ಮುಂದಾಗಿತ್ತು. ಆದರೆ ಎಲ್ಲ ಭಾರತೀಯ ಮಿಗ್-21, ಮಿಗ್-27 ಹಾಗೂ ಮೀರಜ್-2000 ಯುದ್ಧವಿಮಾನಗಳು ಗಡಿಯೊಳಗಿನಿಂದಲೇ ದಾಳಿ ನಡೆಸಿದವು ಎಂದು ಎನ್‌ಡಿಟಿವಿಯ ವಿಶೇಷ ಕಾರ್ಯಕ್ರಮದಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News