ಕಾದಂಬರಿ
-- ಚಲನೆ ಮರೆತ ಅಜ್ಜಿಯ ದೇಹ --
ಮಗ ಬಾಯಿ ತೆರೆದರೆ ಮತ್ತೆ ಅದನ್ನು ಬಂದ್ ಮಾಡ್ಲಿಕ್ಕೆ ತುಂಬಾ ಕಷ್ಟ ಎಂದು ತಿಳಿದಿದ್ದ ಐಸು ಮತ್ತೆ ಅಲ್ಲಿ ನಿಲ್ಲಲಿಲ್ಲ. ಸೀದಾ ಅಡುಗೆ ಮನೆಗೆ ಬಂದವಳಿಗೆ ತಾಹಿರಾ ಮೂಲೆಯಲ್ಲಿ ತಲೆತಗ್ಗಿಸಿ ಮುದುಡಿ ನಿಂತದ್ದು ಕಂಡು ಕರುಳು ಚುರುಕ್ಕೆಂದಿತು.
‘‘ಯಾಕಮ್ಮಾ ಹಾಗೆ ನಿಂತಿದ್ದೀ, ಅವನು ಮಾತನಾಡಿದ್ದು ಕೇಳಿಸಿತಾ? ಅವನು ಹಾಗೆಯೇ ವಟವಟಾಂತ ಒದರ್ತಾನೇ ಇರ್ತಾನೆ. ಮಾತಿನಲ್ಲೇ ಕಣ್ಣು, ಕರುಳು ಎಲ್ಲವನ್ನೂ ಕುಕ್ಕಿ ಹೊರತೆಗೆಯುತ್ತಾನೆ. ಇವನ ತಂದೆಯೂ ಹಾಗೆಯೇ ಶವಕ್ಕೆ ಚುಚ್ಚುವುದೆಂದರೆ ಅವರಿಗೆ ಬಹಳ ಇಷ್ಟ. ಹೆಂಗಸರ ಮನಸ್ಸು ಇವರಿಗೆ ಅರ್ಥವಾಗುವುದಿಲ್ಲ. ನೀನು ಬೇಸರ ಮಾಡಿಕೊಳ್ಳ ಬೇಡಮ್ಮಾ’’ ಐಸು ಅವಳ ಹತ್ತಿರ ಹೋಗಿ ತಲೆ ಸವರಿ, ಗಲ್ಲ ಹಿಡಿದೆತ್ತಿದಳು. ತಾಹಿರಾಳ ಕಣ್ಣು ಕೊಳವಾಗಿತ್ತು. ತುಟಿ ಅದುರಿತು. ಅವಳು ಐಸುಳನ್ನು ಅಪ್ಪಿ ಹಿಡಿದು ಬಿಕ್ಕತೊಡಗಿದಳು.
‘‘ಸಾರಿ... ಸಾರಿಯಮ್ಮಾ... ನಾನು ಅವಳಿಗೆ ಹೇಳಿದ್ದಲ್ಲ. ಅಜ್ಜಿಯ ಮೇಲಿನ ಪ್ರೀತಿಯಿಂದ ಹೇಳಿದ್ದು... ಸಾರಿ...’’ ನಾಸರ್ ಅಡುಗೆ ಕೋಣೆಯ ಬಾಗಿಲಲ್ಲಿ ನಿಂತು ಚಡಪಡಿಸತೊಡಗಿದ.
‘‘ಇಲ್ಲಿಗೂ ಬಂದಿಯಾ... ಹೋಗೋ ಇಲ್ಲಿಂದ... ನಿನ್ನ ಕೆಲಸ ಆಯಿತಲ್ಲ, ಇನ್ನು ನೀನು ಹೊರಡು...’’ ಐಸು ತಾಹಿರಾಳನ್ನು ತಬ್ಬಿಕೊಂಡೇ ಅವನಿಗೆ ಗದರಿಸಿದಳು.
‘‘ಬೇಡ ಮಾಮಿ, ನನ್ನಿಂದಾಗಿ ನೀವು ಜಗಳ ಮಾಡಬೇಡಿ. ಪ್ಲೀಸ್...’’ ತಾಹಿರಾ ಗೋಗರೆದಳು. ನಾಸರ್ ಅಲ್ಲಿಂದ ತನ್ನ ಕೋಣೆಗೆ ಹೋದ.
ಹೊರಗೆ ಆಟೋ ಬಂದು ನಿಂತ ಸದ್ದು ಕೇಳಿಸಿತು. ನಾಸರ್ ‘‘ಅಜ್ಜೀ...’’ ಎಂದು ಕರೆಯುತ್ತಾ ಅವರ ಕೋಣೆಗೆ ನಡೆದ. ಅಜ್ಜಿ ಹಾಸಿಗೆಯ ಮೇಲೆ ಮರಗಟ್ಟಿದವರಂತೆ ಅಂಗಾಂತ ಬಿದ್ದುಕೊಂಡಿದ್ದರು.
‘‘ಅಜ್ಜೀ...’’ ನಾಸರ್ ಕರೆದ.
ಅಜ್ಜಿ ಮಿಸುಕಾಡಲಿಲ್ಲ
‘‘ಅಜ್ಜೀ ನಾನು ಹೋಗ್ತೇನೆ’’
‘‘................’’
‘‘ಅಜ್ಜೀ... ನಾನು ಕರೆದದ್ದು ಕೇಳಿಸುತ್ತಾ’’
ಅಜ್ಜಿ ಮಾತನಾಡಲಿಲ್ಲ. ಅವರ ಕಣ್ಣುಗಳು ಏನನ್ನೋ ದಿಟ್ಟಿಸುತ್ತಿದ್ದವು. ನಾಸರ್ ಅವರ ಪಕ್ಕದಲ್ಲಿ ಕುಳಿತು ಅವರ ಭುಜ ಹಿಡಿದು ಕುಲುಕುತ್ತಾ ‘‘ಅಜ್ಜೀ...’’ ಎಂದ.
ಅಜ್ಜಿಯ ದೇಹದಲ್ಲಿ, ಕಣ್ಣಿನಲ್ಲಿ ಯಾವುದೇ ಚಲನೆ ಇಲ್ಲ. ನಾಸರ್ ಗಾಬರಿಯಿಂದ ‘‘ಅಮ್ಮಾ...’’ ಎಂದು ಕೂಗಿದ. ಐಸು ಓಡೋಡಿ ಬಂದಳು. ಅವಳ ಹಿಂದೆ ತಾಹಿರಾ.
‘‘ಏನೋ.. ಏನಾಯಿತೋ..’’
‘‘ಅಮ್ಮಾ... ಅಜ್ಜಿ ಮಾತಾಡ್ತಾ ಇಲ್ಲ’’
‘‘ಅಜ್ಜೀ...’’ ಐಸು ಅವರ ಬಳಿ ಕುಳಿತು ಗಲ್ಲ ತಟ್ಟಿ ಕರೆದಳು.
ಅಜ್ಜಿಯ ದೇಹದಲ್ಲಿ ಚಲನೆಯೇ ಇಲ್ಲ. ತಾಹಿರಾ ದೊಪ್ಪನೆ ನೆಲದಲ್ಲಿ ಕುಸಿದು ಕುಳಿತು ಐಸುಳ ಕಾಲು ಗಳನ್ನು ತಬ್ಬಿ ಹಿಡಿದು ಅಳತೊಡಗಿದಳು. ‘‘ಅಳಬೇಡಮ್ಮಾ... ಅಜ್ಜಿಗೆ ಏನೂ ಆಗಿಲ್ಲ. ಈಗ ಸರಿ ಹೋಗ್ತಾರೆ. ನೀನು ಹೋಗಿ ಒಂದು ಲೋಟ ನೀರು ತೆಗೆದುಕೊಂಡು ಬಾ’’ ಎಂದಳು.
ತಾಹಿರಾ ಅಡುಗೆ ಮನೆಗೆ ಓಡಿದಳು.
‘‘ನೀನು ಅಜ್ಜಿಯ ಪಾದ ಸ್ವಲ್ಪತಿಕ್ಕು’’
ನಾಸರ್ ಪಾದ ತಿಕ್ಕುತ್ತಿದ್ದಂತೆಯೇ ತಾಹಿರಾ ನೀರು ಹಿಡಿದು ಬಂದಳು. ಗಾಬರಿ ತುಂಬಿದ ಅವಳ ಕಣ್ಣುಗಳಲ್ಲಿ ಇನ್ನೂ ನೀರು ತುಂಬಿಕೊಂಡಿತ್ತು. ಮುಖ ಆತಂಕದಿಂದ ಬಿಳುಚಿಕೊಂಡಿತ್ತು.
ಐಸು ಅವಳ ಕೈಯಿಂದ ನೀರಿನ ಪಾತ್ರೆ ತೆಗೆದು ಅಜ್ಜಿಯ ಮುಖ ತೊಳೆದು, ಅವರ ಕಿವಿಯ ಪಕ್ಕ ಬಾಗಿ ‘‘ಅಜ್ಜೀ...’’ ಎಂದಳು.
ಅಜ್ಜಿ ಎಚ್ಚರವಾಗಲಿಲ್ಲ.
ಅಜ್ಜೀ, ನಾನು ಕರೆಯುವುದು ಕೇಳಿಸ್ತಾ ಇದೆಯಾ... ಅಜ್ಜೀ... ಅಜ್ಜೀ...’’ ಎಂದು ಕೂಗಿ ಕರೆದಳು.
ಸ್ವಲ್ಪ ಹೊತ್ತು- ಅಜ್ಜಿಯ ಕಣ್ಣುಗಳಲ್ಲಿ ಚಲನೆಯುಂಟಾ ಯಿತು. ಅವರು ಮೆಲ್ಲನೆ ಕತ್ತು ತಿರುಗಿಸಿ ನಿದ್ದೆಯಿಂದ ಎಚ್ಚೆತ್ತವರಂತೆ ಐಸುಳ ಮುಖವನ್ನೇ ‘‘ಏನು?’’ ಎಂಬವರಂತೆ ನೋಡಿದರು.
‘‘ಏನಜ್ಜಿ ನೀವು, ನಮ್ಮನ್ನೆಲ್ಲ ಹೆದರಿಸಿ ಬಿಟ್ಟಿರಲ್ಲ. ಎಲ್ಲಿಗೆ ಹೋಗಿದ್ರಿ ಇಷ್ಟು ಹೊತ್ತು’’
ಅಜ್ಜಿ ಅವಳ ಮುಖವನ್ನೇ ಸ್ವಲ್ಪಹೊತ್ತು ದಿಟ್ಟಿಸಿ ನೋಡಿ ಏನೂ ಆಗದವರಂತೆ ತಿರುಗಿ ಮಲಗಿದರು.
‘‘ಅಜ್ಜಿ ನಾಸರ್ ಹೋಗ್ತಿದ್ದಾನೆ. ನಿಮ್ಮತ್ರ ಹೇಳಲಿಕ್ಕೆ ಬಂದಿದ್ದಾನೆ’’
ಅಜ್ಜಿ ಈಗಲೂ ತುಟಿ ಬಿಚ್ಚಲಿಲ್ಲ.
ನಾಸರ್ ಅವರ ಮುಖದ ಹತ್ತಿರ ಬಾಗಿ ‘‘ಅಜ್ಜೀ, ನಾನು ಹೋಗ್ತೇನೆ. ಸುಮ್ಮನೆ ಏನೇನೋ ಯೋಚಿಸುತ್ತಾ ಮಲಗಬೇಡಿ. ಎದ್ದು ಕೋಲೂರಿ ಸ್ವಲ್ಪ ಆಚೀಚೆ ನಡೆಯಿರಿ. ನಾನು ಬರ್ತೇನೆ’’ ಎಂದ
ಅಜ್ಜಿ ಈಗಲೂ ಮಾತನಾಡಲಿಲ್ಲ.
‘‘ಅಮ್ಮಾ ನಾನು ಬರ್ತೇನೆ. ಸ್ವಲ್ಪಹೊತ್ತು ಅಜ್ಜಿಯ ಹತ್ತಿರವೇ ಇರಿ. ಕುಡಿಯಲು ಏನಾದರೂ ಕೊಡಿ. ನನಗೆ ಹೊತ್ತಾಯಿತು’’ ಎಂದು ಹೊರಟವನು ಒಮ್ಮೆ ನಿಂತು ತಾಹಿರಾಳ ಮುಖ ನೋಡಿದ. ಅವಳ ಕಣ್ಣುಗಳಲ್ಲಿ ಇನ್ನೂ ಗಾಬರಿ ತುಂಬಿಕೊಂಡಿತ್ತು. ಅವನು ಅವಳ ಹತ್ತಿರ ಬಂದು ‘‘ಹೆದರಿದಿಯಾ?’’ ಕೇಳಿದ
ಅವಳು ತಲೆತಗ್ಗಿಸಿದಳು.
‘‘ಅಜ್ಜಿಗೆ ಏನೂ ಆಗೋಲ್ಲ, ಹೆದರಬೇಡ’’ ಎಂದವನೇ ಹೊರಟು ಹೋದ.
ತಾಹಿರಾ ಅಜ್ಜಿಯ ಕಾಲು ಪಕ್ಕ ಕುಳಿತು ಅವರ ಪಾದ ತಿಕ್ಕತೊಡಗಿದಳು.
‘‘ಮಾಮಿ, ಅಜ್ಜಿಗೆ ಏನಾಗಿದೆ?’’
‘‘ಏನಿಲ್ಲಮ್ಮಾ, ಒಮ್ಮಾಮ್ಮೆ ಹಾಗೆಯೇ. ಏನೇನೋ ಕನಸು ಕಾಣ್ತಾ ಇರ್ತಾರೆ. ಯಾವುದೋ ಲೋಕದಲ್ಲಿರ್ತಾರೆ. ಎಷ್ಟು ಕರೆದರೂ ಮಾತನಾ ಡೋದಿಲ್ಲ. ಸ್ವಲ್ಪ ಹೊತ್ತು ಮತ್ತೆ ಸರಿಯಾಗ್ತಾರೆ’’ ಎನ್ನುತ್ತಾ, ‘‘ನಾನು ಈಗ ಬಂದೆ. ಅಜ್ಜಿಯನ್ನು ನೋಡಿಕೋ’’ ಎಂದು ಮಗನ ಹಿಂದೆ ನಡೆದರು.
ತಾಹಿರಾ ಅಜ್ಜಿಯ ಪಾದ ತಿಕ್ಕುವುದನ್ನು ಬಿಟ್ಟು ತಲೆ ಪಕ್ಕ ಹೋಗಿ ಕುಳಿತಳು. ಅವರ ಮುಖವನ್ನೇ ಬಗ್ಗಿ ನೋಡಿದಳು. ಸುಕ್ಕು ಕಟ್ಟಿದ್ದರೂ ಸುಂದರವಾದ ಮುಖ. ಅವಳು ಅವರ ತಲೆ ಸವರಿದಳು. ಬಿಚ್ಚಿಕೊಂಡಿದ್ದ ಅವರ ತಲೆ ಕೂದಲನ್ನು ಒಟ್ಟು ಸೇರಿಸಿ ಕಟ್ಟಿದಳು. ಅವರ ಕೈಯನ್ನು ತನ್ನ ಕೈಗೆ ತೆಗೆದು ಕೆನ್ನೆಗೊತ್ತಿಕೊಂಡಳು. ಕಿವಿಯಲ್ಲಿ ನೇತಾಡುತ್ತಿದ್ದ ಓಲೆ, ಆಭರಣಗಳನ್ನು, ಕತ್ತಿನಲ್ಲಿದ್ದ ನಾಣ್ಯ ಪೋಣಿಸಿದಂತ ಸರ, ಕೈಗಳಿಗೆ ತೊಡಿಸಿದ್ದ ದಪ್ಪಬಳೆಗಳು ಎಲ್ಲವನ್ನೂ ಒಂದೊಂದಾಗಿ ಮುಟ್ಟಿ ನೋಡಿದಳು. ಎಲ್ಲ ಹಳೆಯ ಕಾಲದವು. ಅಜ್ಜ ಮಾಡಿಸಿಕೊಟ್ಟಿರಬೇಕು. ಅವಳು ಅವರ ಕಿವಿಯ ಹತ್ತಿರ ಬಗ್ಗಿ ‘‘ಅಜ್ಜೀ...’’ ಎಂದು ಕರೆದಳು. ಅಜ್ಜಿ ಮಾತನಾಡಲಿಲ್ಲ. ಸ್ವಲ್ಪ ಜೋರಾಗಿಯೇ ‘‘ಅಜ್ಜೀ...’’ ಎಂದು ಕೂಗಿದಳು. ಅಜ್ಜಿ ಸ್ವಲ್ಪ ನರಳಿದರು ಅಷ್ಟೆ, ಕಣ್ಣು ತೆರೆಯಲಿಲ್ಲ. ಅಜ್ಜಿಯ ಮುಖವನ್ನೇ ನೋಡುತ್ತಾ ಕುಳಿತವಳಿಗೆ ಆಟೋ ಹೋದ ಸದ್ದು ಕೇಳಿಸಿತು. ಕಿಟಕಿಯಲ್ಲಿ ಇಣುಕಿ ನೋಡಿದಳು, ಹೊರಗೆ ಏನೂ ಕಾಣಿಸಲಿಲ್ಲ. ಆಗಲೇ ಅವಳಿಗೆ ನಾಸರ್ ಹೇಳಿದ ಮಾತು ನೆನಪಾಯಿತು. ‘‘ಅಜ್ಜಿ ಈಗ ಸ್ವಲ್ಪ ನೆಮ್ಮದಿಯಿಂದಿದ್ದಾರೆ. ಅವರ ನೆಮ್ಮದಿ ಹಾಳು ಮಾಡಲಿಕ್ಕೆ ಬಿಡಬೇಡ ಅಷ್ಟೇ’’. ಹಾಗಾದರೆ ನಾನು ಬಂದ ಮೇಲೆ ಅಜ್ಜಿಯ ನೆಮ್ಮದಿ ಹಾಳಾಗಿದೆಯೇ? ನನ್ನಿಂದ ಈ ಮನೆಯ ನೆಮ್ಮದಿ ಹಾಳಾ ಗಿದೆಯೇ...? ಅವಳಿಗೆ ಒಮ್ಮೆಲೆ ದುಃಖ ಉಕ್ಕಿ ಬಂತು... ಆಗಲೇ ಐಸು ಒಳಗೆ ಬರುತ್ತಿರುವುದು ಕಂಡು ಅವಳು ಮುಖ ತಿರುಗಿಸಿದಳು.
‘‘ಅಜ್ಜಿ ಎಚ್ಚರವಾಗಿದ್ದಾರಾ?’’ ಐಸು ಕೇಳಿದಳು.
‘‘ಇಲ್ಲ’’
ಐಸು ಅಲ್ಲೇ ಇದ್ದ ತಂಬಿಗೆಯ ನೀರಿಗೆ ಕೈ ಮುಳುಗಿಸಿ ಒಂದೆರಡು ಬಾರಿ ಅಜ್ಜಿಯ ಮುಖ ಸವರಿದಳು. ತನ್ನ ಸೆರಗಿನಲ್ಲಿ ಮುಖ ಒರೆಸುತ್ತಾ ‘‘ಅಜ್ಜೀ... ಅಜ್ಜೀ...’’ ಎಂದು ಜೋರಾಗಿ ಕರೆದಳು.
ಮೆಲ್ಲನೆ ಕಣ್ಣು ಬಿಟ್ಟ ಅಜ್ಜಿ, ಸುತ್ತಲೂ ನೋಡ ತೊಡಗಿದರು.
‘‘ಅಜ್ಜೀ... ಗಂಟೆ ಎರಡಾಯಿತು. ಊಟ ಮಾಡೋದಿಲ್ವ?’’
‘‘...............’’
ಐಸು ಅಜ್ಜಿಯನ್ನು ಎತ್ತಿ ಗೋಡೆಗೊರಗಿಸಿ ಕುಳ್ಳಿರಿಸಿದಳು. ಅವರ ಮುಖಕ್ಕೆ ಮತ್ತೆ ನೀರು ಹಾಕಿದಳು. ಅಜ್ಜಿ ಮತ್ತೇರಿದವರಂತೆ ಕುಳಿತಿದ್ದರು. ಅವರ ಕತ್ತು ವಾಲುತ್ತಿತ್ತು. ಐಸು ಹೋಗಿ ಒಂದು ಲೋಟದಲ್ಲಿ ಎಳನೀರು ತಂದು ಅಜ್ಜಿಯ ಬಾಯಿಗೆ ಹಿಡಿದಳು. ಅಜ್ಜಿ ಅದನ್ನು ಗಟಗಟನೆ ಕುಡಿದು ಅರೆತೆರೆದ ಕಣ್ಣುಗಳಿಂದ ಆಚೆ-ಈಚೆ ನೋಡತೊಡಗಿದರು.
‘‘ಇದು ಇನ್ನು ಬೇಗ ಸರಿಯಾಗುವ ಲಕ್ಷಣವಿಲ್ಲ’’ ಎಂದು ಅಜ್ಜಿಯನ್ನು ಮಲಗಿಸಿದ ಐಸು, ‘‘ಬಾ, ನಾವು ಊಟ ಮಾಡುವ’’ ಎಂದು ಕೋಣೆಯಿಂದ ಹೊರಗೆ ನಡೆದಳು. ಅವಳನ್ನು ಹಿಂಬಾಲಿಸಿದ ತಾಹಿರಾ ‘‘ಮಾಮಿ, ನಾನು ಬಂದದ್ದರಿಂದ ಅಜ್ಜಿಗೆ ಹೀಗಾಯಿತಾ?’’ ಕೇಳಿದಳು.
‘‘ಯಾರು ಹೇಳಿದ್ದು ಹಾಗೆ, ಅವರಿಗೆ ತಿಂಗಳಿಗೊಮ್ಮೆ ಯಾದರೂ ಹೀಗೆ ಎಚ್ಚರ ತಪ್ಪುತ್ತೆ. ಮತ್ತೆ ಸರಿಯಾಗ್ತಾರೆ’’
‘‘ಯಾಕೆ ಹಾಗೆ ಆಗುತ್ತೆ ಮಾಮಿ’’
‘‘ಪ್ರಾಯ ಆಯ್ತಲ್ಲ ಅದಕ್ಕೆ. ನೀನು ಸುಮ್ಮನೆ ಏನೇನೋ ಯೋಚನೆ ಮಾಡಬೇಡ’’ ಎಂದು ಬಡಿಸಿ ಒಟ್ಟಿಗೆ ಊಟಕ್ಕೆ ಕುಳಿತರು. ತಾಹಿರಾಳಿಗೆ ಯಾಕೋ ಸರಿಯಾಗಿ ಊಟ ಸೇರಲಿಲ್ಲ. ಅವಳ ಕಿವಿಯಲ್ಲಿ ನಾಸರ್ ಹೇಳಿದ ಮಾತು ಮತ್ತೆ ಮತ್ತೆ ಗುಂಯ್‌ಗುಡುತ್ತಿತ್ತು.
‘‘ಯಾಕಮ್ಮಾ ಊಟ ಮಾಡ್ತಾ ಇಲ್ಲ, ಎತ್ತಿನ ಮಾಂಸ ಇಷ್ಟವಿಲ್ಲವಾ?’’ ಕೇಳಿದಳು.
‘‘ಹಾಗೇನಿಲ್ಲ ಮಾಮಿ, ನಾನು ಈಗ ತಿಂಡಿ ತಿಂದಿದ್ದಲ್ಲವಾ, ಅದಕ್ಕೆ ಹಸಿವಿಲ್ಲ’’
‘‘ಹಾಗಾದರೆ ಏಳು, ಕೈ ತೊಳೆದು ಸ್ವಲ್ಪಮಲಗು’’
ಅಷ್ಟು ಹೇಳಿದ್ದೇ ತಡ ತಾಹಿರಾ ಕೈ ತೊಳೆದು ಕೋಣೆಗೆ ಹೋಗಿ ಬಿದ್ದುಕೊಂಡಳು. ಐಸು ಊಟ ಮುಗಿಸಿ ಒಮ್ಮೆ ಅಜ್ಜಿಯ ಕೋಣೆಗೆ ಇಣುಕಿ ಬಂದು ತಾಹಿರಾಳ ಹಾಸಿಗೆಯಲ್ಲಿಯೇ ಮಲಗಿದಳು.
ಮತ್ತೆ ತಾಹಿರಾಳಿಗೆ ಎಚ್ಚರವಾದಾಗ ಸಂಜೆಯಾಗಿತ್ತು. ಎದ್ದವಳೇ ಸೀದಾ ಅಡುಗೆ ಮನೆಯತ್ತ ನಡೆದಳು.
‘‘ಏನಮ್ಮಾ, ಒಳ್ಳೆಯ ನಿದ್ದೇನಾ... ಗೊರಕೆ ಹೊಡೆಯುತ್ತಿದ್ದೆ’’ ಮೀನಿಗೆ ಮಸಾಲೆ ಹಾಕುತ್ತಿದ್ದ ಐಸು ತಾಹಿರಾಳ ಮುಖ ನೋಡಿ ನಕ್ಕಳು.
ತಾಹಿರಾ ಸ್ಟೂಲು ಎಳೆದು ಅವಳ ಪಕ್ಕ ಕುಳಿತು ‘‘ಹೌದು ಮಾಮಿ, ನಮ್ಮ ಮನೆಯಲ್ಲಿ ನನಗೆ ರಾತ್ರಿ ಮಲಗಿದರೂ ಸರಿಯಾಗಿ ನಿದ್ದೆ ಬರುವುದಿಲ್ಲ. ಇಲ್ಲಿ ಯಾಕೆ ಹೀಗೆ ನಿದ್ದೆ ಬರುತ್ತೆ?’’
‘‘ನೀನು ಪ್ರಯಾಣ ಮಾಡಿ ಬಂದಿದ್ದಿ ನೋಡು ಅದಕ್ಕೆ. ಮತ್ತೆ ಇದು ಹಳ್ಳಿಯಲ್ಲವಾ, ಇಲ್ಲಿ ಯಾವಾ ಗಲೂ ತಂಪು ಇರುತ್ತೆ. ನಿಶ್ಶಬ್ದ ಇರುತ್ತೆ. ಅದಕ್ಕೆ ಒಳ್ಳೆ ನಿದ್ದೆ ಹಿಡಿಯುತ್ತೆ’’
‘‘ಮಾಮಿ, ಅಜ್ಜಿ ಹೇಗಿದ್ದಾರೆ?’’
‘‘ಸ್ವಲ್ಪಸರಿಯಾಗಿದ್ದಾರೆ. ನಾನೇ ಎರಡು ತುತ್ತು ಬಾಯಿಗೆ ಉಣಿಸಿದೆ. ಈಗ ಮಲಗಿದ್ದಾರೆ’’
‘‘ಮಾಮಿ ನಿಮಗೆಷ್ಟು ಮಕ್ಕಳು?’’
‘‘ಒಬ್ಬನೇ ಮಗ’’
‘‘ನಿಮ್ಮ ಗಂಡ ಎಲ್ಲಿದ್ದಾರೆ?’’
ಪ್ಲೇಟ್‌ಗೆ ಕಲಸಿದ ಅವಲಕ್ಕಿ-ಬಾಳೆಹಣ್ಣು ಹಾಕಿ ಅವಳ ಕೈಗೆ ಕೊಟ್ಟ ಐಸು, ಚಾ ಮಾಡಲು ಒಲೆಯ ಮುಂದೆ ನಿಂತಳು.
ಐಸು ಮಾತನಾಡದ್ದು ಕಂಡು ತಾಹಿರಾ ಮತ್ತೆ ಕೇಳಿದಳು ‘‘ಮಾಮಿ ನಿಮ್ಮ ಗಂಡ ಇಲ್ಲವಾ?’’
ಐಸು ಈಗಲೂ ಮಾತನಾಡಲಿಲ್ಲ.
‘‘ಹೇಳಿ ಮಾಮಿ, ನನಗೆ ಈ ಮನೆಯ ಬಗ್ಗೆ, ನಿಮ್ಮ ಬಗ್ಗೆ ಎಲ್ಲ ತಿಳಿದುಕೊಳ್ಳಬೇಕೂಂತ ಆಸೆ. ಅದಕ್ಕಾಗಿಯೇ ನಾನು ಬಂದದ್ದು, ಆದರೆ ನೀವು ಏನೂ ಹೇಳುತ್ತಿಲ್ಲ’’ ತಾಹಿರಾ ಮುನಿಸು ತೋರಿದಳು.
‘‘ಈಗ ಬೇಡಮ್ಮಾ, ಮತ್ತೆ ರಾತ್ರಿ ಮಲಗುವಾಗ ಎಲ್ಲ ಹೇಳ್ತೇನೆ’’ ಈಗ ಅಜ್ಜಿಗೆ ಚಾ ಕೊಡಬೇಕು’’ ಎಂದು ಒಂದು ತಟ್ಟೆಯಲ್ಲಿ ಸ್ವಲ್ಪ ಅವಲಕ್ಕಿ-ಬಾಳೆಹಣ್ಣು ಹಿಡಿದುಕೊಂಡು ಹೊರಟಳು. ತಾಹಿರಾ ‘‘ಮಾಮಿ ನಾನೂ ಬರ್ತೇನೆ’’ ಎಂದಾಗ ಅವಳ ಮಾತಿಗೆ ಕಿವಿಗೊಡದೆ ಐಸು ಸೀದಾ ಅಜ್ಜಿಯ ಕೋಣೆಗೆ ನಡೆದಳು. ತಾಹಿರಾಳಿಗೆ ಪಿಚ್ಚೆನಿಸಿತು. ಐಸು ಅಜ್ಜಿ ಕೋಣೆಗೆ ಬಂದಾಗ ಅವರು ಮಲಗಿಯೇ ಇದ್ದರು. ಐಸು ‘‘ಅಜ್ಜೀ’’ ಎಂದು ಕರೆದಾಗ ಅವರು ಕಣ್ಣು ಬಿಟ್ಟು ಅವಳನ್ನೇ ಅಪರಿಚಿತರಂತೆ ದಿಟ್ಟಿಸಿ ನೋಡಿದರು.
(ರವಿವಾರದ ಸಂಚಿಕೆಗೆ)