ಕಾಶ್ಮೀರದಲ್ಲಿ ಸ್ಥಳೀಯ ಪತ್ರಿಕೆಗಳು ಪುನರಾರಂಭ

Update: 2016-07-21 13:06 GMT

ಶ್ರೀನಗರ, ಜು.21: ಕಾಶ್ಮೀರ ಕಣಿವೆಯ ಸ್ಥಳೀಯ ವೃತ್ತ ಪತ್ರಿಕೆಗಳು 5 ದಿನಗಳ ಬಳಿಕ ಇಂದು ಮತ್ತೆ ಅಂಗಡಿಗಳಲ್ಲಿ ಕಾಣಿಸಿಕೊಂಡಿವೆ. ನಿನ್ನೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನಗರದ ಪತ್ರಿಕೆಗಳ ಸಂಪಾದಕರು ಹಾಗೂ ಮಾಲಕರನ್ನು ಭೇಟಿಯಾಗಿ ಮಾಧ್ಯಮದ ಮೇಲಿನ ನಿಯಂತ್ರಣಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದರು.
ಸರಕಾರ ಪ್ರಕಟನೆಯನ್ನು ತಡೆದಿದೆ ಎಂದು ಆರೋಪಿಸಿದ್ದ ಪತ್ರಿಕೆಗಳೂ ಸೇರಿದಂತೆ ಹೆಚ್ಚಿನ ಸ್ಥಳೀಯ ದಿನ ಪತ್ರಿಕೆಗಳು ಇಂದು ಪ್ರಕಟಗೊಂಡಿದ್ದು, ವಿತರಕರು ಹಾಗೂ ಮಾರಾಟಗಾರರು ತಮ್ಮ ವ್ಯಾಪಾರಕ್ಕೆ ಮರಳಿದ್ದಾರೆ.
ಪತ್ರಿಕೆಗಳು ಪ್ರಕಟನೆ ಪುನರಾರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಕೇವಲ ವ್ಯಾಪಾರದ ದೃಷ್ಟಿಯಿಂದ ಮಾತ್ರವಲ್ಲದೆ, ಗಾಳಿ ಸುದ್ದಿಗಳೇ ಸದಾ ಸದ್ದು ಮಾಡುತ್ತಿರುವ ಕಣಿವೆಯಲ್ಲಿ ಇದರಿಂದ ವಾಸ್ತವ ಮಾಹಿತಿ ಹರಡುತ್ತದೆಂಬ ಕಾರಣಕ್ಕಾಗಿಯೂ ತಮಗೆ ಸಂತೋಷವಾಗಿದೆಯೆಂದು ಪತ್ರಿಕಾ ವಿತರಕರೊಬ್ಬರು ಹೇಳಿದ್ದಾರೆ.
ಪೊಲೀಸರು ಕೆಲವು ಮುದ್ರಣಾಲಯಗಳಿಗೆ ದಾಳಿ ನಡೆಸಿ, ಪತ್ರಿಕೆ, ಪ್ಲೇಟ್‌ಗಳನ್ನು ವಶಪಡಿಸಿಕೊಂಡು ಕೆಲವು ಮಂದಿ ಮುದ್ರಣಾಲಯ ಸಿಬ್ಬಂದಿಯನ್ನೂ ಬಂಧಿಸಿದ್ದಾರೆಂಬ ಆರೋಪ ಕೇಳಿ ಬಂದ ಬಳಿಕ ಕಣಿವೆಯಲ್ಲಿ ಇಂಗ್ಲಿಷ್, ಉರ್ದು ಹಾಗೂ ಕಾಶ್ಮೀರಿ ಸಹಿತ ಹಲವು ಭಾಷಾ ಪತ್ರಿಕೆಗಳ ಮುದ್ರಣವನ್ನು ಶನಿವಾರದಿಂದ ನಿಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News