ನಿಶ್ಚಿತಾರ್ಥ ಮುರಿದವರು ಅದರ ಖರ್ಚು ಭರಿಸಬೇಕು: ಸುಪ್ರೀಂಕೋರ್ಟ್

Update: 2016-07-23 03:20 GMT

ಹೊಸದಿಲ್ಲಿ, ಜು.23: ನಿಶ್ಚಿತಾರ್ಥದಲ್ಲಿ ಭರ್ಜರಿ ಉಂಡು ತೇಗಿ, ಕೊನೆಗೆ ಮದುವೆ ನಿರಾಕರಿಸುವ ಉಡಾಳರು ಇನ್ನು ದಂಡ ತೆರಬೇಕಾಗುತ್ತದೆ. ಹೀಗೆ ನಿಶ್ಚಿತಾರ್ಥ ಮುರಿದವರು ನಿಶ್ಚಿತಾರ್ಥದ ಸಂಪೂರ್ಣ ಖರ್ಚು ಭರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮೂರು ವರ್ಷಗಳ ಕಾನೂನು ವ್ಯಾಜ್ಯದ ಬಳಿಕ ಕೊನೆಗೂ ನಿಶ್ಚಿತಾರ್ಥದ ಖರ್ಚು ಭರಿಸುವ ಪರಿಸ್ಥಿತಿ ನಿಶ್ಚಿತಾರ್ಥ ಮುರಿದ ದಿಲ್ಲಿಯ ಒಂದು ಕುಟುಂಬಕ್ಕೆ ಬಂದಿದೆ.

ಘಟನೆ ಹೀಗಿದೆ. 2012ರಲ್ಲಿ ದಿಲ್ಲಿಯ ಸರಕಾರಿ ವೈದ್ಯರೊಬ್ಬರು ತಮ್ಮ ಮಗನ ವಿವಾಹಕ್ಕೆ ನಿರ್ಧರಿಸಿದರು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಮಗನಿಗೆ ಮಹಾರಾಷ್ಟ್ರ ಥಾಣೆಯ ಕನ್ಯೆಯನ್ನು ಗೊತ್ತುಪಡಿಸಿದರು. ದಿಲ್ಲಿಯಲ್ಲಿ 2012ರ ಜೂನ್ 8ರಂದು ಅದ್ಧೂರಿಯಾಗಿ ರೋಕಾ (ನಿಶ್ಚಿತಾರ್ಥ) ನಡೆಯಿತು. ಭಾವೀ ಅಳಿಯನ ಕುಟುಂಬ ಹಾಗೂ ಸ್ನೇಹಿತರ ಮನೋರಂಜನೆಗಾಗಿ ವಧುವಿನ ಕಡೆಯವರು ಧಾರಾಳವಾಗಿ ಖರ್ಚು ಮಾಡಿದರು.
ಆದರೆ ವಧುವಿನ ಕಡೆಯವರು ಸತ್ಯಾಂಶ ಮುಚ್ಚಿಟ್ಟಿದ್ದಾರೆ ಎಂಬ ನೆಪ ನೀಡಿ, ವರನ ಕಡೆಯವರು ನಿಶ್ಚಿತಾರ್ಥ ಮುರಿದರು. ವಧುವಿನ ಕಡೆಯವರು ಹುಡುಗ ಹಾಗೂ ಆತನ ತಂದೆ ವಿರುದ್ಧ ಥಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದರು.

ತಂದೆ- ಮಗ ನಿರೀಕ್ಷಣಾ ಜಾಮೀನು ಕೋರಿದರು. ಮಧ್ಯಸ್ಥಿಕೆ ಬಳಿಕ 1.5 ಲಕ್ಷ ರೂಪಾಯಿಗಳನ್ನು ಹುಡುಗಿಯ ಕಡೆಯವರಿಗೆ ನೀಡುವಂತೆ ಸೂಚಿಸಲಾಯಿತು. ಆದರೆ ನಿಶ್ಚಿತಾರ್ಥಕ್ಕೆ ತಾವು 4.5 ಲಕ್ಷ ರೂಪಾಯಿ ವೆಚ್ಚ ಮಾಡಿದ್ದೇವೆ ಎಂದು ವಧುವಿನ ಕುಟುಂಬ ಪ್ರತಿಪಾದಿಸಿತು. ಅದರೆ ವಿಚಾರಣಾ ನ್ಯಾಯಾಲಯ, ವಧುವಿನ ಕುಟುಂಬಕ್ಕೆ ಪರಿಹಾರ ನೀಡುವಂತೆ ತೀರ್ಪು ನೀಡಿತು. ವರನ ಕಡೆಯವರು ಹಣ ನೀಡಿದರೂ, ವಧುವಿನ ಕಡೆಯವರು ಪ್ರಕರಣ ವಾಪಾಸು ಪಡೆಯಲಿಲ್ಲ.

ಪ್ರಕರಣ ರದ್ದು ಮಾಡುವಂತೆ ಕೋರಿ ವರ ಸಲ್ಲಿಸಿದ ಅರ್ಜಿಯನ್ನು ಮುಂಬೈ ಹೈಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News