ಕಾದಂಬರಿ
--ಐಸು ಬಿಡಿಸಿಟ್ಟ ಕುಟುಂಬ ವೃತ್ತಾಂತ --
‘‘ಅಜ್ಜಿ, ಏಳಿ, ಸ್ವಲ್ಪ ತಿಂಡಿ ತಿಂದು ಚಾ ಕುಡಿಯಿರಿ. ಇಲ್ಲದಿದ್ದರೆ ಮತ್ತೆ ತಲೆ ನೋಯುತ್ತೇಂತ ನರಳುತ್ತೀರಿ’’ ಎಂದು ಅಜ್ಜಿಯನ್ನು ಎತ್ತಿ ಗೋಡೆಗೊರಗಿಸಿ ಕುಳ್ಳಿರಿಸಿ ಅವಲಕ್ಕಿ-ಬಾಳೆಹಣ್ಣು ಕಲಸಿ ತಿನ್ನಿಸಿದಳು. ಕೊಟ್ಟದ್ದೆಲ್ಲವನ್ನೂ ಅಜ್ಜಿ ಗಬಗಬನೆ ತಿಂದರು, ಚಾ ಕುಡಿದರು. ಆದರೆ ಒಂದು ಮಾತೂ ಆಡಲಿಲ್ಲ. ಸೆರಗಿನಲ್ಲಿ ಅವರ ಬಾಯಿ ಒರೆಸಿ ಮತ್ತೆ ಮಲಗಿಸಿದಳು ಐಸು.
‘‘ಏನು ಇವತ್ತು ನಮಾಝ್ ಮಾಡಲಿಕ್ಕೆ ಇಲ್ಲವಾ?’’ ಕೇಳಿದಳು.
ಅಜ್ಜಿ ಉತ್ತರಿಸಲಿಲ್ಲ. ಅವರು ಸರಿಯಾಗಿದ್ದರೆ ಒಂದು ಹೊತ್ತಿನ ನಮಾಝ್ ಬಿಡುವವರಲ್ಲ. ಶಿಸ್ತಿನ ಸಿಪಾಯಿಯಂತೆ ಸಮಯಕ್ಕೆ ಸರಿಯಾಗಿ ನಮಾಝ್ ನಿರ್ವಹಿಸುತ್ತಿದ್ದರು.
ಐಸು ಅಡುಗೆ ಮನೆಗೆ ಬಂದಾಗ ತಾಹಿರಾ ಇನ್ನೂ ತಿನ್ನುತ್ತಿದ್ದಳು.
‘‘ಅಜ್ಜಿ ಹೇಗಿದ್ದಾರೆ ಮಾಮಿ’’
‘‘ಹಾಗೆಯೇ ಇದ್ದಾರಮ್ಮಾ, ನೀನೇನು ಅವಲಕ್ಕಿ ತಿನ್ನುತ್ತಾ ಇಲ್ಲ. ಚೆನ್ನಾಗಿಲ್ಲವಾ?’’
ತಾಹಿರಾ ಬೇಗ ಬೇಗ ಅವಲಕ್ಕಿ ತಿನ್ನತೊಡಗಿದಳು.
‘‘ಚಾ ಆರಿ ಹೋಗುತ್ತೆ. ಬೇಗ ಕುಡಿ’’
‘‘ಹೂಂ..., ಅಜ್ಜಿಗೆ ಮದ್ದು ಏನೂ ಬೇಡವಾ ಮಾಮಿ’’
‘‘ಏನೂ ಬೇಡ, ಬೆಳಗಾಗುವಾಗ ಸರಿಯಾಗ್ತಾರೆ’’
ಯಾಕೋ ಮಾಮಿ ಈಗ ಅಷ್ಟೊಂದು ಸರಿಯಾಗಿಲ್ಲ ಎನಿಸಿತು ಅವಳಿಗೆ. ಚಾ ಕುಡಿದು ಎದ್ದು ಬಂದು ಜಗಲಿಯಲ್ಲಿ ಕುಳಿತಳು. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣುವ ಹಸಿರು ತೋಟದ ಮಧ್ಯೆ ಸಾಲು ಸಾಲಾಗಿ ನಿಂತಿರುವ ತೆಂಗಿನಮರಗಳು, ನೋಡಿದಷ್ಟೂ ಅವಳಿಗೆ ಮತ್ತೆ ಮತ್ತೆ ನೋಡಬೇಕೆನಿಸಿತು.
ಅಂದು ರಾತ್ರಿಯೂ ಅಜ್ಜಿ ಸರಿಯಾಗಲಿಲ್ಲ. ಅವರಷ್ಟಕ್ಕೇ ಮಲಗಿಯೇ ಇದ್ದರು. ಯಾರೊಡನೆಯೂ ಮಾತಿಲ್ಲ-ಕತೆಯಿಲ್ಲ. ಕರೆದರೆ ‘ಹೂಂ’ ಅನ್ನುತ್ತಿದ್ದರು ಅಷ್ಟೇ. ಬಾಯಿಗೆ ಕೊಟ್ಟರೆ ಉಣ್ಣುತ್ತಿದ್ದರು. ಇಲ್ಲದಿದ್ದರೆ ಇಲ್ಲ. ರಾತ್ರಿಯೂ ಐಸು ಎರಡು ತುತ್ತು ಬಾಯಿಗೆ ಕೊಟ್ಟಳು. ಹಾಲು ಕುಡಿಸಿದಳು. ಐಸು ಮಾಡುವ ಆರೈಕೆಯನ್ನೆಲ್ಲಾ ತಾಹಿರಾ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದಳು. ತಾನೂ ಸಹಾಯ ಮಾಡುತ್ತಿದ್ದಳು.
ಅಂದು ರಾತ್ರಿ ತಾಹಿರಾಳ ಜೊತೆಯಲ್ಲೇ ಮಲಗಿದ ಐಸು ಮಾತನಾಡದೆ ಕಣ್ಣುಮುಚ್ಚಿದ್ದು ಕಂಡು ‘‘ಮಾಮಿ’’ ಎಂದು ಕರೆದಳು.
‘‘ಹೂಂ...’’
‘‘ಯಾಕೆ ಮಾಮಿ, ಆರೋಗ್ಯ ಚೆನ್ನಾಗಿಲ್ಲವಾ?’’
‘‘ಚೆನ್ನಾಗಿದ್ದೇನಮ್ಮಾ’’
‘‘ನಾನಾಗ ನಿಮ್ಮ ಗಂಡನ ಬಗ್ಗೆ ಕೇಳಿದ್ದಕ್ಕೆ ಬೇಜಾರಾ?’’
‘‘................’’
‘‘ಬೇಜಾರಾಗಿದ್ದರೆ ಕ್ಷಮಿಸಿ ಮಾಮಿ. ಬೇಡಿ, ಏನೂ ಹೇಳಬೇಡಿ’’
‘‘ಇಲ್ಲಮ್ಮಾ, ನಿನ್ನ ಮೇಲೆ ನಾನೇಕೆ ಬೇಜಾರು ಮಾಡಿಕೊಳ್ಳಲಿ. ಎಲ್ಲ ನಾನು ಪಡೆದುಕೊಂಡು ಬಂದಿದ್ದು’’ ಇಬ್ಬರು ಸ್ವಲ್ಪ ಹೊತ್ತು ಮಾತನಾಡಲಿಲ್ಲ. ಕೋಣೆ ತುಂಬಾ ಮೌನ ಆವರಿಸಿಬಿಟ್ಟಿತು.
‘‘ನಿಮ್ಮ ಗಂಡ ಇದ್ದಾರಾ ಮಾಮಿ’’ ತಾಹಿರಾ ಮತ್ತೆ ಅಳುಕುತ್ತಲೇ ಕೇಳಿದಳು.
‘‘ಗೊತ್ತಿಲ್ಲ’’
‘‘ಗೊತ್ತಿಲ್ಲ! ಹಾಗೆಂದರೆ?’’
‘‘ಬದುಕಿದ್ದಾರಾ- ಇಲ್ಲವಾ ಗೊತ್ತಿಲ್ಲ’’
‘‘ಬಿಡಿಸಿ ಹೇಳಿ ಮಾಮಿ, ನನಗೊಂದೂ ಅರ್ಥವಾಗ್ತಾ ಇಲ್ಲ’’
‘‘ಊರಿಗೆ ಹೋಗಿ ಬರ್ತೇನೆ, ಬಕ್ರೀದ್ ಹಬ್ಬಕ್ಕೆ ಬರ್ತೇನೇಂತ ಹೇಳಿ ಹೋದವರು 24 ವರ್ಷಗಳು ಕಳೆಯಿತು. ಇನ್ನೂ ಬಂದಿಲ್ಲ. ಇನ್ನು ಬರ್ತಾರೆ ಎನ್ನುವ ನಂಬಿಕೆಯೂ ನನಗಿಲ್ಲ. ಅವರು ಹೋಗುವಾಗ ನಾಸರ್ ಪುಟ್ಟ ಮಗು’’
‘‘ಹುಡುಕಲಿಲ್ಲವಾ?’’
‘‘ಎಲ್ಲ ಕಡೆ ಹುಡುಕಿಯಾಯಿತು. ಅಜ್ಜನ ಕೊನೆಯುಸಿರಿರುವವರೆಗೆ ಹುಡುಕಿಸಿದರು. ಸಿಗಲಿಲ್ಲ’’
‘‘ಅಜ್ಜ ನಿಮಗೇನಾಗಬೇಕು ಮಾಮಿ’’
ಐಸು ಅಂಗಾತ ಮಲಗಿದ್ದವಳು ಹೊರಳಿದಳು, ಮಾತನಾಡಲಿಲ್ಲ. ತಾಹಿರಾ ಕುತೂಹಲದಿಂದ ಎದ್ದು ಕುಳಿತಳು.
‘‘ನಿಮ್ಮ ಬಗ್ಗೆ ಎಲ್ಲ ಹೇಳ್ತೇನೇಂತ ಆಗ ಹೇಳಿದಿರಲ್ಲ, ಹೇಳಿ ಮಾಮಿ. ನನಗೆ ಎಲ್ಲ ತಿಳಿದುಕೊಳ್ಳಬೇಕು’’ ತಾಹಿರಾ ಅಂಗಲಾಚುವಂತೆ ಕೇಳಿದಳು.
‘‘ನನ್ನ ತಂದೆಯನ್ನು ಅಜ್ಜ ಕೆಲಸಕ್ಕೇಂತ ಗಟ್ಟದಿಂದ ಕರೆದುಕೊಂಡು ಬಂದಿದ್ದಂತೆ. ಮೊದಲು ಈ ಮನೆಯಲ್ಲಿ ತಂದೆಗೆ ಸುಪ್ರ ತೆಗೆಯುವ ಕೆಲಸ ಮಾತ್ರ ಇದ್ದದ್ದಂತೆ. ಆಮೇಲೆ ತಂದೆಯ ಪ್ರಾಮಾಣಿಕತೆ, ಕೆಲಸದ ಮೇಲಿರುವ ಶ್ರದ್ಧೆ ನೋಡಿ ಇಡೀ ಮನೆ, ತೋಟದ ಸಂಪೂರ್ಣ ಜವಾಬ್ದಾರಿಯನ್ನು ತಂದೆಗೆ ವಹಿಸಿ ಬಿಟ್ಟಿದ್ದರಂತೆ. ಅನಂತರ ಅಜ್ಜ ತಂದೆಯೊಡನೆ ಕೇಳದೆ ಯಾವುದೇ ಕೆಲಸವನ್ನೂ ಮಾಡುತ್ತಿರಲಿಲ್ಲವಂತೆ. ಅಷ್ಟೊಂದು ಪ್ರೀತಿ, ವಿಶ್ವಾಸ ಬೆಳೆದುಬಿಟ್ಟಿತ್ತಂತೆ ಅಜ್ಜನಿಗೆ ತಂದೆಯ ಮೇಲೆ. ಅವರಿಬ್ಬರ ಅನ್ಯೋನ್ಯತೆ, ಎಲ್ಲಿಗೆ ಹೋಗುವುದಿದ್ದರೂ ಇಬ್ಬರೂ ಒಟ್ಟಿಗೆ ಹೋಗುವುದು, ಬರುವುದು ನೋಡಿ ಇಡೀ ಊರೇ ಬೆರಗಾಗಿತ್ತಂತೆ. ತಂದೆಗೆ ಹತ್ತಿರದ ಬಂಧುಗಳೂಂತ ಯಾರೂ ಇರಲಿಲ್ಲವಂತೆ. ಅದಕ್ಕೆ ಅಜ್ಜನೇ ತಂದೆಗೆ ಮದುವೆ ಮಾಡಿದ್ದಂತೆ’’
‘‘ಸುಪ್ರ ತೆಗೆಯುವುದು ಎಂದರೆ ಎಂತದು ಮಾಮಿ?’’
‘‘ಸುಪ್ರ ಎಂದರೆ ಊಟ ಮಾಡುವಾಗ ಎಂಜಲು ನೆಲಕ್ಕೆ ಬೀಳದಂತೆ ಹಾಕುವ ಚಾಪೆ. ಚಾಪೆ ಮಾಡುವ ಸೋಗೆಯಿಂದಲೇ ಅದನ್ನೂ ಕೈಯಲ್ಲಿಯೇ ವೃತ್ತಾಕಾರವಾಗಿ ಹೆಣೆಯುತ್ತಿದ್ದರು. ಕೆಲವೊಮ್ಮೆ ಅದಕ್ಕೆ ಬೇರೆ ಬೇರೆ ಬಣ್ಣ ಕೊಟ್ಟು ಬಹಳ ಸುಂದರವಾಗಿ ನೇಯುತ್ತಿದ್ದರು. ಎಲ್ಲರ ಮನೆಯಲ್ಲಿಯೂ ಈ ಸುಪ್ರ ಇರುತ್ತಿತ್ತು. ಸುಪ್ರ ನೆಲಕ್ಕೆ ಹಾಸಿ, ಮರದಿಂದ ತಯಾರಿಸಿದ ಮಣೆಯಲ್ಲಿ ಸುತ್ತಲೂ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ಊಟವಾದ ಮೇಲೆ ಮಣೆ ತೆಗೆದು ಸುಪ್ರದಲ್ಲಿರುವ ಎಂಜಲನ್ನು ಹೊರಗೆ ಚೆಲ್ಲಿ, ಬಟ್ಟೆ ಒದ್ದೆ ಮಾಡಿ ಅದನ್ನು ಒರೆಸಿ ಮನೆಯಲ್ಲಿಯೇ ಒಂದು ಕಡೆ ತೂಗು ಹಾಕುತ್ತಿದ್ದರು. ತೂಗು ಹಾಕಲೆಂದೇ ಅದಕ್ಕೆ ಒಂದು ಕೈ ಇರುತ್ತಿತ್ತು. ಆಗ ಈ ಮನೆಯಲ್ಲಿ ಊರವರು, ಬಂಧುಗಳು, ನೆಂಟರೂಂತ ಪ್ರತಿ ಹೊತ್ತಿಗೂ ಊಟಕ್ಕೆ 15-20 ಜನ ಇರುತ್ತಿದ್ದರಂತೆ. ಈ ಸುಪ್ರದಲ್ಲಿ ನಾಲ್ಕು ಜನ ಕುಳಿತುಕೊಳ್ಳುವುದು, ಎಂಟು ಜನ ಕುಳಿತುಕೊಳ್ಳುವುದು... ಹೀಗೆ ಬೇರೆ ಬೇರೆ ಅಳತೆಯದ್ದು ಇರುತ್ತಿತ್ತಂತೆ. ಊಟದ ಎಲ್ಲ ವ್ಯವಸ್ಥೆ, ಜವಾಬ್ದಾರಿ ಅಜ್ಜ ತಂದೆಗೆ ವಹಿಸಿದ್ದರಂತೆ’’
‘‘ನಿಮ್ಮ ತಂದೆ ತೀರಿ ಹೋಗಿ ಎಷ್ಟು ಸಮಯವಾಯಿತು?’’
‘‘ನನಗೆ ಆಗ ಸುಮಾರು ಒಂಬತ್ತು- ಹತ್ತು ವರ್ಷವಿರಬೇಕು. ಒಂದು ದಿನ ಪೇಟೆಗೆ ಹೋಗಿದ್ದ ತಂದೆ ರಾತ್ರಿ ಹಿಂದೆ ಬರುತ್ತಿರುವಾಗ ಗದ್ದೆಯ ಪುಣಿಯಲ್ಲಿ ಹಾವು ಕಚ್ಚಿ ತೀರಿಕೊಂಡರು. ಆಗ ಅಜ್ಜನ ಅವಸ್ಥೆ ನೋಡಬೇಕಿತ್ತು. ಆಮೇಲೆ ಅವರು ಸರಿಯಾಗಲಿಕ್ಕೆ ವರ್ಷವೇ ಕಳೆದಿತ್ತು. ಅನಂತರ ಸುಮಾರು ಎರಡು ವರ್ಷ ಕಳೆದು ಕಾಯಿಲೆ ಬಂದು ಅಮ್ಮ ತೀರಿಕೊಂಡರು’’
‘‘ನಿಮ್ಮ ಅಮ್ಮ ಎಲ್ಲಿಯವರು ಮಾಮಿ’’
‘‘ಇಲ್ಲಿಯೇ ಪಕ್ಕದ ಊರು ತೋಕೂರೂಂತ. ಅಮ್ಮನಿಗೆ ಒಬ್ಬಳು ತಂಗಿ ಇದ್ದರು. ಅವರು ಒಂದೆರಡು ಸಲ ಇಲ್ಲಿಗೆ ಬಂದಿದ್ದರು. ಒಮ್ಮೆ ನಾನೂ ಅವರ ಮನೆಗೆ ಹೋಗಿದ್ದೆ. ಆಮೇಲೆ ಅವರು ಬರಲೇ ಇಲ್ಲ. ಓ ಅಲ್ಲಿ ತೋಟದ ಬದಿಯಲ್ಲಿ ನಾವು ನಡೆದುಕೊಂಡು ಬರುವಾಗ ಎಡಬದಿಯಲ್ಲಿ ಒಂದು ಮನೆಯಿದೆ ನೋಡು, ಅದರಲ್ಲಿ ಈಗ ಹಳೆಯ ಸಾಮಾನುಗಳನ್ನು ತುಂಬಿಸಿಟ್ಟಿದ್ದೇವೆ. ಆ ಮನೆ ತಂದೆಗೆ ಮದುವೆಯಾದ ಸಂದರ್ಭದಲ್ಲಿ ಅಜ್ಜ ಕಟ್ಟಿಸಿಕೊಟ್ಟಿದ್ದಂತೆ. ಆದರೆ ತಂದೆ ತಾಯಿ ಆ ಮನೆಗೆ ಮದುವೆಯಾದ ಹೊಸತರಲ್ಲಿ ರಾತ್ರಿ ಮಲಗಲು ಮಾತ್ರ ಹೋಗುತ್ತಿದ್ದರಂತೆ. ನನಗೂ ಆ ಮನೆಯಲ್ಲಿದ್ದದ್ದು ನೆನಪೇ ಇಲ್ಲ. ಅಪ್ಪ, ಅಮ್ಮ, ನಾನು ಎಲ್ಲ ಈ ಮನೆಯಲ್ಲಿಯೇ ಇದ್ದದ್ದು. ನಾನು ಚಿಕ್ಕವಳಾಗಿದ್ದಾಗ ಅದೆಷ್ಟೋ ಸಲ ಅಜ್ಜ-ಅಜ್ಜಿ ನನ್ನನ್ನು ಪಕ್ಕ ಮಲಗಿಸಿ ಕತೆ ಹೇಳುತ್ತಿದ್ದರು. ನಿದ್ದೆ ಬಂದ ಮೇಲೆ ನನ್ನನ್ನು ಎತ್ತಿ ತಂದು ತಾಯಿ ಜೊತೆ ಕೊಡುತ್ತಿದ್ದರಂತೆ.
ತಂದೆ-ತಾಯಿಯನ್ನು ಕಳೆದುಕೊಂಡ ನಾನು ಅನಾಥಳಾಗಲಿಲ್ಲ. ಅಜ್ಜ-ಅಜ್ಜಿ, ಅವರ ಮಕ್ಕಳೆಲ್ಲ ನನ್ನನ್ನು ಕಣ್ಣ ಬೊಂಬೆಯಂತೆ ನೋಡಿಕೊಂಡರು. ನನಗೆ ಯಾವುದಕ್ಕೂ ಕಡಿಮೆ ಮಾಡಲಿಲ್ಲ. ಆನಂತರ ನಾನು ಮಲಗಿಕೊಳ್ಳುತ್ತಿದ್ದುದ್ದು ಅಜ್ಜ-ಅಜ್ಜಿಯ ಮಧ್ಯೆ.
ಅಷ್ಟೊಂದು ಪ್ರೀತಿ. ಅಷ್ಟೊಂದು ಮಮತೆ ನನ್ನ ಮೇಲೆ ಅಜ್ಜ ಅಜ್ಜಿಗೆ. ಒಂದು ಕ್ಷಣ ನನ್ನನ್ನು ಕಾಣದಿದ್ದರೂ ಅಜ್ಜ ಅಜ್ಜಿಯನ್ನೂ, ಅಜ್ಜಿ- ಅಜ್ಜನನ್ನೂ ಕೂಗಿ ಕರೆದು ನನ್ನನ್ನು ಕೇಳುತ್ತಿದ್ದರು. ಊಟ ಮಾಡುವಾಗಲೂ, ತಿಂಡಿ ತಿನ್ನುವಾಗಲೂ ನಾನು ಪಕ್ಕದಲ್ಲೇ ಬೇಕು. ನನ್ನ ಬಾಯಿಗೆ ಒಂದು ತುತ್ತು ನೀಡದೆ ಅಜ್ಜನಾಗಲೀ, ಅಜ್ಜಿಯಾಗಲೀ ಊಟ ಮಾಡಿದವರಲ್ಲ... ಹೀಗೆ ನಾನು ಅಜ್ಜ -ಅಜ್ಜಿಯ ಪ್ರೀತಿಯ ಆರೈಕೆಯಲ್ಲಿ ಬೆಳೆದು ದೊಡ್ಡವಳಾದೆ.
ಹೀಗೆ ನಾನು ಬೆಳೆದು ನಿಂತಾಗ - ಎತ್ತರ ನಿಲುವಿನ, ಸುಂದರ ಮೈಕಟ್ಟಿನ ಈ ಸುರ ಸುಂದರಿಗೆ ಅಜ್ಜ ಗಂಡು ಹುಡುಕತೊಡಗಿದರು. ಎಷ್ಟು ಹುಡುಕಿದರೂ ಎಷ್ಟು ಅಲೆದರೂ ಈ ಸುಂದರಿಯ ರೂಪಕ್ಕೆ ಹೊಂದುವ ಗಂಡು ಅಜ್ಜನಿಗೆ ಸಿಗಲೇ ಇಲ್ಲ. ಒಂದಲ್ಲ ಒಂದು ಕೊರತೆ, ಒಂದಲ್ಲ ಒಂದು ಐಬು. ನೋಡಲು ಹೋದ ಗಂಡನ್ನೆಲ್ಲಾ ತಿರಸ್ಕರಿಸಿ ಸಪ್ಪೆ ಮೋರೆ ಹಾಕಿ ಹಿಂದಿರುಗುತ್ತಿದ್ದರು ಅಜ್ಜ.
ಇದೇ ಸಮಯದಲ್ಲಿ ನಮ್ಮ ಮಸೀದಿಯ ಮದ್ರಸಕ್ಕೆ ಒಬ್ಬ ಉಸ್ತಾದರು ಬಂದರು. ಅವರನ್ನು ಅಜ್ಜನ ಅಳಿಯ ಮೌಲವಿಯವರು ಕೇರಳದಿಂದ ಕರೆಸಿದ್ದರಂತೆ. ಅವರು ಬಂದ ಹೊಸದರಲ್ಲಿ ಇಡೀ ಊರು ತುಂಬಾ ಅವರ ಪಾಂಡಿತ್ಯದ ಬಗ್ಗೆ, ಅವರು ಮಕ್ಕಳಿಗೆ ಪಾಠ ಹೇಳಿಕೊಡುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗತೊಡಗಿತ್ತು. ಹೆಣ್ಣು ಮಕ್ಕಳು ಸೇರಿದಲ್ಲೆಲ್ಲಾ ಅವರ ರೂಪದ ಬಗ್ಗೆ ಮಾತಿಗಿಳಿಯುತ್ತಿದ್ದರು. ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆಂದರೆ ಪ್ರತಿ ಮನೆಯ ಕಿಟಕಿಯ ಪರದೆಗಳು ಬದಿಗೆ ಸರಿಯುತ್ತಿದ್ದವು. ಮಸೀದಿಯಲ್ಲಿ ಅವರು ಬಾಂಗ್ ಕರೆ ಕೊಟ್ಟರೆ ಇಡೀ ಊರು ಸ್ತಬ್ಧಗೊಳ್ಳುತ್ತಿತ್ತು. ಅಂತಹ ಕಂಠಸಿರಿ ಅವರದ್ದು. ಒಮ್ಮೆ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ ನಾನೂ ಕದ್ದು ಕಿಟಕಿಯಲ್ಲಿ ದೃಷ್ಟಿ ನೆಟ್ಟಿದ್ದೆ. ಅದೇ ದಿನ ನಾನು ಅವರನ್ನು ಮೊದಲ ಬಾರಿ ನೋಡಿದ್ದು. ಎತ್ತರ ನಿಲುವು, ಸುಂದರ ಮೈಕಟ್ಟು, ಗೋಧಿ ಬಣ್ಣ, ಮುಖದ ತುಂಬಾ ಪೊದೆಗಡ್ಡ, ಚಂದ್ರನಂತೆ ಹೊಳೆಯುವ ಕಣ್ಣುಗಳು, ಸುಮಾರು 23-24 ಪ್ರಾಯ ಇರಬಹುದು. ತಲೆಗೆ ಬಿಳಿ ಮುಂಡಾಸು, ಉದ್ದ ತೋಳಿನ ಬಿಳಿ ಅಂಗಿ, ಚೌಕಳಿಯ ಬಿಳಿ ಲುಂಗಿ- ಅಬ್ಬಾ... ಕಣ್ಣ ರೆಪ್ಪೆ ಮುಚ್ಚುವುದನ್ನೇ ನಾನು ಮರೆತುಬಿಟ್ಟಿದ್ದೆ.
ಆಮೇಲೆ ತಿಂಗಳು ಕಳೆಯುವುದರೊಳಗೆ ಅಜ್ಜ ಅವರನ್ನು ಒಂದು ದಿನ ಈ ಮನೆಗೆ ಊಟಕ್ಕೆ ಕರೆ ತಂದಿದ್ದರು. ಅಂದು ಮನೆಯಲ್ಲಿ ಅಜ್ಜ-ಅಜ್ಜಿ, ಅವರ ಮಕ್ಕಳಿಗೆಲ್ಲ ಅದೇನೋ ಸಂಭ್ರಮ. ಯಾರ ಕಾಲುಗಳೂ ನೆಲದ ಮೇಲೆ ನಿಲ್ಲುತ್ತಿರಲಿಲ್ಲ. ಏನೇನೋ ವಿಶೇಷ ಅಡುಗೆಗಳು, ವಿಶೇಷ ತಿಂಡಿಗಳು, ಎಲ್ಲರಿಗೂ ಕೈ ತುಂಬಾ ಕೆಲಸ. ಆದರೆ ಅಂದು ನನ್ನ ಮನಸ್ಸು, ದೇಹದೊಳಗೆಲ್ಲಾ ಏನೋ ಸಂಚಾರವಾದಂತೆ, ಹೊಸ ಆಸೆಗಳು, ಹೊಸ ಕನಸುಗಳು ಚಿಗುರಿದಂತೆ, ಅದೇನೋ ಅವ್ಯಕ್ತವಾದ ಸುಖದ ಹೊಳೆಯೊಂದು ದೇಹದಾದ್ಯಂತ ಹರಿದಂತೆ... ನನ್ನ ಹೃದಯ ಒಂದೇ ಸಮನೆ ಬಡಿದುಕೊಳ್ಳತೊಡಗಿತ್ತು. ಅಂದು ಹಲವು ಸಲ ನಾನು ಕನ್ನಡಿಯ ಮುಂದೆ ನಿಂತು ನನ್ನನ್ನೇ ನೋಡುತ್ತಾ ನಿಂತುಬಿಟ್ಟಿದ್ದೆ. ಅವರು ಊಟ ಮಾಡುವಾಗ ಮನೆಯವರೆಲ್ಲರೂ ಮರೆಯಲ್ಲಿ ನಿಂತು ಅವರ ರೂಪ, ಗಾಂಭೀರ್ಯ, ಚಲನವಲನಗಳನ್ನು ಆಶ್ಚರ್ಯದಿಂದ ನೋಡುತ್ತಿದ್ದೆವು. ಅವರ ಬಾಯಿಯಿಂದ ಉದುರುವ ಒಂದೊಂದು ಶಬ್ದವನ್ನೂ ಕಿವಿಯಾನಿಸಿ ಕೇಳುತ್ತಿದ್ದೆವು. ಇಡೀ ಮನೆಯಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಶಬ್ದ ಆವರಿಸಿಬಿಟ್ಟಿತ್ತು.
ಇದಾಗಿ ಒಂದು ತಿಂಗಳೊಳಗೆ ಅವರು ಮತ್ತೊಮ್ಮೆ ಈ ಮನೆಗೆ ಬಂದಿದ್ದರು. ಅಂದು ಬಂದದ್ದು ನನ್ನನ್ನು ಹೆಣ್ಣು ನೋಡಲು. ಇದು ತಿಳಿದಾಗ ನಾನು ಭಯ, ಆತಂಕ, ಸಂತೋಷದಿಂದ ನಲುಗಿ ಹೋಗಿದ್ದೆ. ಅಜ್ಜಿ ನನಗೆ ಸೀರೆ ಉಡಿಸಿದರು.
(ಗುರುವಾರದ ಸಂಚಿಕೆಗೆ)