ಶ್ರಾವಣಿ ಮೇಳ ಉದ್ಘಾಟಿಸದಂತೆ ಜಾರ್ಖಂಡ್ ದಲಿತ ಸಚಿವನಿಗೆ ತಡೆ!

Update: 2016-07-23 18:26 GMT

ರಾಂಚಿ, ಜು.23: ದೇವಗಡ ಜಿಲ್ಲೆಯ ಬಾಬಾ ಬೈದ್ಯನಾಥ ದೇವಸ್ಥಾನದಲ್ಲಿ ಜು.19ರಂದು ನಡೆದ ಪ್ರಸಿದ್ಧ ಶ್ರಾವಣಿ ಉತ್ಸವವನ್ನು ಉದ್ಘಾಟಿಸುವುದರಿಂದ, ದಲಿತ ರಾಗಿರುವ ಪ್ರವಾಸೋದ್ಯಮ ಸಚಿವ ಅಮರ್ ಬಾವ್ರಿಯವರನ್ನು ‘ತಡೆಯುವ’ ಮೂಲಕ ಜಾರ್ಖಂಡ್ ಸರಕಾರವು ಅವರಿಗೆ ಅವಮಾನ ಮಾಡಿದೆಯೆಂದು ಪ್ರಧಾನ ಪ್ರತಿಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಆರೋಪಿಸಿದೆ.

ಬಿಜೆಪಿ ದೇಶಾದ್ಯಂತ ದಲಿತರನ್ನು ಅವಮಾನಿಸುತ್ತಿದೆ. ಜಾರ್ಖಂಡ್‌ನ ಬಿಜೆಪಿ ನೇತೃತ್ವದ ರಘುವರದಾಸ್ ಸರಕಾರವೂ ದಲಿತರನ್ನು ಅವಮಾನಿಸು ತ್ತಿದೆ. ರಾಜ್ಯದ ಪ್ರವಾಸೋದ್ಯಮ ಸಚಿವ ಅಮರ್ ಬಾವ್ರಿಯವರನ್ನು ಶ್ರಾವಣಿ ಮೇಳ ಉದ್ಘಾಟಿಸದಂತೆ ತಡೆಯಲಾಯಿತೆಂದು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಜೆಎಂಎಂನ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್ ರಾಂಚಿಯಲ್ಲಿಂದು ಪತ್ರಕರ್ತರೊಡನೆ ದೂರಿದರು.
ಮೊದಲು ಆಮಂತ್ರಣ ಪತ್ರಿಕೆಯಲ್ಲಿ ಬಾವ್ರಿ, ಮೇಳ ಉದ್ಘಾಟಿಸಲಿದ್ದಾರೆ ಎಂದಿತ್ತು. ಅವರು ಅವಸರದಲ್ಲಿ ಇನ್ನೊಂದು ಆಮಂತ್ರಣ ಪತ್ರ ಮುದ್ರಿಸಿ, ನಗರಾಭಿವೃದ್ಧಿ ಸಚಿವ ಸಿ.ಪಿ.ಸಿಂಗ್‌ರನ್ನು ಉದ್ಘಾಟಕರೆಂದು ಹೆಸರಿಸಿದ್ದರು. ರಾಜ್ಯ ಸರಕಾರವು ದಲಿತ ಸಮುದಾಯಕ್ಕೆ ಸೇರಿದ ತನ್ನದೇ ಸಚಿವನನ್ನು ಅವಮಾನಿಸಿದೆ ಎಂದು ಅವರು ಆಪಾದಿಸಿದರು.
ಪರಂಪರೆಯ ಪ್ರತಿ ವರ್ಷ ಮುಖ್ಯಮಂತ್ರಿ ಶ್ರಾವಣಿ ಮೇಳವನ್ನು ಉದ್ಘಾಟಿಸುತ್ತಾರೆ. ಆದರೆ, ಈ ವರ್ಷ ಜುಲೈ 19ರಂದು ನಗರಾಭಿವೃದ್ಧಿ ಸಚಿವ ಸಿಂಗ್ ಮೇಳವನ್ನು ಉದ್ಘಾಟಿಸಿದ್ದರು.
ಆಳುವ ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದೆ. ಜೆಎಂಎಂ ಅದನ್ನೊಂದು ರಾಜಕೀಯ ವಿಷಯವನ್ನಾಗಿ ಮಾಡುತ್ತಿದೆ. ಬಿಜೆಪಿ ಪ್ರತಿಯೊಂದು ಜಾತಿ ಹಾಗೂ ಮತದ ಜನರನ್ನು ಗೌರವಿಸುತ್ತದೆಂದು ಜಾರ್ಖಂಡ್ ಬಿಜೆಪಿ ವಕ್ತಾರ ಪ್ರದೀಪ್ ಸಿನ್ಹಾ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ದೇವಗಡದ ಬಾಬಾ ಬೈದ್ಯನಾಥ ದೇವಳದಲ್ಲಿ ಪ್ರತಿ ವರ್ಷ 25 ಲಕ್ಷಕ್ಕೂ ಹೆಚ್ಚು ಮಂದಿ ಶ್ರಾವಣ ತಿಂಗಳಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಭಕ್ತರು ಬಿಹಾರದ ಸುಲ್ತಾನ್‌ಗಂಜ್‌ನಿಂದ ಗಂಗಾಜಲವನ್ನೊಯ್ದು ಅಲ್ಲಿ ಅಭಿಷೇಕ ಮಾಡುತ್ತಾರೆ. ಈ ಶಿವಲಿಂಗವನ್ನು ರಾವಣನು ಸ್ಥಾಪಿಸಿದನೆಂದು ಪ್ರತೀತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News