ಶೀಲಾ ಜೂಜು!
ಶೀಲಾ ಜೂಜು!
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಮೂಲಕ ಶೀಲಾ ದೀಕ್ಷಿತ್, ಹರಕೆಯ ಕುರಿಯಾಗಲು ಏಕೆ ಒಪ್ಪಿಕೊಂಡರು ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ. ಕೆಲವರು ಇದಕ್ಕೆ ಉತ್ತರ ಕಂಡುಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾರೆ. ದಿಲ್ಲಿಯ ಮಾಜಿ ಮುಖ್ಯಮಂತ್ರಿಗೆ ನಿಕಟವಾಗಿರುವ ಮೂಲಗಳ ಪ್ರಕಾರ, ಅವರಿಗೆ ಈ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ ಪ್ರಿಯಾಂಕಾ ಗಾಂಧಿ ನೇರವಾಗಿ ಅವರ ಜತೆ ಮಾತನಾಡಿ, ಸಿಎಂ ಅಭ್ಯರ್ಥಿಯಾಗಲು, ಪಕ್ಷದ ಮುಖವಾಗಲು ಕೇಳಿಕೊಂಡಾಗ ನಿರಾಕರಿಸಲು ಸಾಧ್ಯವಾಗಲಿಲ್ಲ. ಆದರೆ ಗತವೈಭವದ ಈ ಪಕ್ಷದ ಛಿದ್ರ ಶಕ್ತಿಗಳು ಇದನ್ನು ಬೇರೆ ದೃಷ್ಟಿಯಿಂದ ನೋಡುತ್ತಿವೆ. ಶೀಲಾ ದೀಕ್ಷಿತ್ ಮುಖ್ಯವಾಹಿನಿಯಲ್ಲೇ ಉಳಿದು, ದಿಲ್ಲಿ ಮುಖ್ಯಮಂತ್ರಿ ಗಾದಿಯನ್ನು ತಮ್ಮ ಮಗ ಸಂದೀಪ್ ದೀಕ್ಷಿತ್‌ಗೆ ಉಜ್ವಲವಾಗಿಯೇ ಉಳಿಸುವಂತೆ ಮಾಡುವುದು ಅವರ ದೂರಾಲೋಚನೆ. ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕೆನ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಮಾಡುವ ಮಾತು ಕೇಳಿ ಬರುತ್ತಿದೆ. ಇದು, ಸಂದೀಪ್ ಹಾದಿಯನ್ನು ಸುಗಮಗೊಳಿಸಲಿದೆ. ದಿಲ್ಲಿ ಘಟಕದ ಕಾರ್ಯಕ್ಕೆ ಅವರು ನಿಯೋಜನೆಯಾಗುವ ಎಲ್ಲ ಸಾಧ್ಯತೆಯೂ ಇದೆ. ಸಂದೀಪ್ ದೀಕ್ಷಿತ್ ಪೂರ್ವ ದಿಲ್ಲಿಯ ಸಂಸದ. ಜನ ಕುತಂತ್ರಿ ಶೀಲಾ ಎಂದು ಹೇಳಬಹುದು. ಆದರೆ ಸತ್ಯ ಏನೆಂದು ಯಾರಿಗೂ ಖಚಿತವಾಗಿ ಗೊತ್ತಿಲ್ಲ.
ಆನಂದಿಬೆನ್ ತಲೆದಂಡ?
ನರೇಂದ್ರ ಮೋದಿ 2014ರಲ್ಲಿ ಗುಜರಾತ್ ಸಿಎಂ ಹುದ್ದೆ ತ್ಯಜಿಸಿ ರಾಷ್ಟ್ರರಾಜಕಾರಣಕ್ಕೆ ಕಾಲಿಟ್ಟ ದಿನದಿಂದ ರಾಜ್ಯದಲ್ಲಿ ಯಾವುದೂ ಸುಸೂತ್ರವಾಗಿ ಸಾಗುತ್ತಿಲ್ಲ. ಋಣಾತ್ಮಕ ಪ್ರಗತಿಯ ಕೃಷಿಕ್ಷೇತ್ರ, ಮುಚ್ಚಿಹೋದ ಹಲವು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು, ವಜ್ರದ ಉದ್ಯಮದಲ್ಲಿ ಯಾತನೆ ಹೀಗೆ ಒಂದಲ್ಲ ಒಂದು ಪ್ರತಿಕೂಲಗಳು. ಪಟೇಲರ ದಂಗೆಯ ಕಾವು ಇನ್ನೂ ತಣ್ಣಗಾಗಿಲ್ಲ. ಇದರ ಮಧ್ಯೆಯೇ ರಾಜ್ಯ ದಲಿತ ಕ್ರಾಂತಿಯಲ್ಲಿ ಸಿಕ್ಕಿಹಾಕಿಕೊಂಡಿದೆ. 2015ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲು, ರಾಜ್ಯ ಬಿಜೆಪಿ ಹಿಡಿತದಿಂದ ಕೈಜಾರುತ್ತಿರುವ ಮುನ್ಸೂಚನೆಯಂತಿದೆ. ರಾಜ್ಯದಲ್ಲಿ ಪರಿಸ್ಥಿತಿ ಕುದಿಯುವ ಹಂತಕ್ಕೆ ಬಂದಾಗ ಮೋದಿ ಮುಖ್ಯಮಂತ್ರಿ ಹುದ್ದೆಯಿಂದ ಹೊರ ನಡೆದರೇ ಎನ್ನುವುದು ಎಲ್ಲರ ಬಾಯಲ್ಲಿ ಕೇಳಿಬರುತ್ತಿರುವ ಪ್ರಶ್ನೆ. ಆದರೆ ಇದೀಗ ಎಲ್ಲ ಅಂಶಗಳೂ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರತ್ತ ನಾಟಿವೆ. ಕೆಲ ತಿಂಗಳ ಹಿಂದೆ ಆನಂದಿಬೆನ್ ಪಟೇಲ್ ಗಂಟುಮೂಟೆ ಕಟ್ಟಿಕೊಂಡು ರಾಜ್ಯಪಾಲರಾಗಿ ಹೋಗುತ್ತಾರೆ; ಅಮಿತ್ ಶಾ ಅಥವಾ ಇತರ ಯಾರಾದರೂ ಸಿಎಂ ಗದ್ದುಗೆ ಅಲಂಕರಿಸುತ್ತಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಆದರೆ ಪಟೇಲ್ ದಿಲ್ಲಿಗೆ ಹಾರಿ ಎಲ್ಲ ಗೋಜಲು ಬಿಡಿಸಿಕೊಂಡರು. ಆದರೆ ಇದೀಗ ದಲಿತ ಕ್ರಾಂತಿ ಮಾತ್ರ ಅವರ ತಲೆ ದಂಡಕ್ಕೆ ಆಗ್ರಹಿಸುತ್ತಿರುವವರಿಗೆ ಹೊಸ ಅಸ್ತ್ರವಾಗಿ ಸಿಕ್ಕಿದೆ. ಮೂಲಗಳನ್ನು ನಂಬಬಹುದಾದರೆ, ಅವರ ತಲೆದಂಡ ಕೇವಲ ತಿಂಗಳುಗಳಲ್ಲ; ವಾರಗಳಲ್ಲೇ ಆಗುತ್ತದೆ.
ಸ್ಮತಿ ನಿಯಮ
ಜಾಗ ಬದಲಾಯಿತು ಎಂಬ ಕಾರಣಕ್ಕೆ ವೇಗ ಬದಲಾಗಬೇಕಿಲ್ಲ ಎನ್ನುವುದನ್ನು ಸ್ಮತಿ ಇರಾನಿ ತಮ್ಮ ಹೊಸ ಹುದ್ದೆಯಲ್ಲಿ ನಿರೂಪಿಸಲು ಹೊರಟಿದ್ದಾರೆ. ಜವಳಿ ಖಾತೆಯ ಹೊಸ ಸಚಿವೆ ಜತೆಗಿನ ಸಂವಾದದ ವೇಳೆ ಉದ್ಯೋಗ ಭವನದ ಅಧಿಕಾರಿಗಳಿಗೆ ಲಘು ಆಘಾತ ಉಂಟಾದ್ದು ಸತ್ಯ. ಉನ್ನತ ಅಧಿಕಾರಿಗಳು ಇಲಾಖೆಯ ಮೂಲಭೂತ ಅಂಶಗಳ ಬಗ್ಗೆ ಹೊಸ ಸಚಿವೆಗೆ ಪರಿಚಯ ಮಾಡಿಕೊಡಲು ಹೊರಟಾಗ, ಇರಾನಿ ಬೆರಳ ತುದಿಯಲ್ಲೇ ಸಚಿವಾಲಯದ ಸಮಗ್ರ ಮಾಹಿತಿ ಇದ್ದುದನ್ನು ಕಂಡು ದಂಗಾದರು. ಇರಾನಿ ಮೆದು ಹಾಗೂ ಸೌಮ್ಯ; ಆದರೆ ಹಿರಿಯ ಬಾಬೂಗಳು ಮಾತ್ರ, ಎಚ್‌ಆರ್‌ಡಿ ಖಾತೆಯಲ್ಲಿ ಇರಾನಿ ತೋರಿದ ಕಾಠಿಣ್ಯವನ್ನು ಇಲ್ಲೂ ಅವರ ಮುಖದಲ್ಲಿ ಕಂಡರು. ಸಮರ್ಪಕ ತಯಾರಿ ಇಲ್ಲದೆ ಸಚಿವೆಯನ್ನು ಭೇಟಿ ಮಾಡುವಂತಿಲ್ಲ ಎಂಬ ಕಟುವಾಸ್ತವ ಕೂಡಾ ಅವರ ಅರಿವಿಗೆ ಬಂತು. ಇದೇ ವೇಳೆಗೆ ಮಾಧ್ಯಮ ಮಾತ್ರ, ಧುತ್ತನೆ ನೂತನ ಸಚಿವೆಯ ಮೇಲೆರಗಿ, ಹೊಸ ಸಚಿವಾಲಯದ ಬಗೆಗೆ ವಿವಾದಾತ್ಮಕವಾದ ಹೊಸ ಸುದ್ದಿಸ್ಫೋಟಿಸಲು ಕಾಯುತ್ತಿತ್ತು. ಆದರೆ ಮಾಧ್ಯಮದ ಅವಸರಕ್ಕೆ ಸಚಿವಾಲಯ ಸೊಪ್ಪು ಹಾಕಿಲ್ಲ.
ಅಕ್ಬರ್ ಇತಿಹಾಸ ಪಾಠ
ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿ.ಕೆ.ಸಿಂಗ್ ಹುಟ್ಟುಹಾಕಿದ ಹಲವು ವಿವಾದಗಳಲ್ಲಿ ರಾಜಧಾನಿಯ ಅಕ್ಬರ್ ರಸ್ತೆಯ ಹೆಸರನ್ನು ಮಹಾ ರಾಣಾ ಪ್ರತಾಪ್ ರಸ್ತೆ ಎಂದು ಬದಲಿಸಬೇಕು ಎಂಬ ಒತ್ತಾಯವೂ ಒಂದು. ಆದರೆ ಇದೀಗ ಸೇನೆಯ ನಿವೃತ್ತ ಮುಖ್ಯಸ್ಥರಿಗೆ ದೊಡ್ಡ ಸವಾಲು ಎದುರಾಗಿದೆ. ಅದು ಅವರ ಪಕ್ಷದ ಸಹೋದ್ಯೋಗಿ ಎಂ.ಜೆ.ಅಕ್ಬರ್ ಅವರಿಂದ. ಅದು ಕೂಡಾ ತಮ್ಮ ಪಕ್ಕದ ಆಸನಕ್ಕೆ ಬರುವ ಮೂಲಕ. ರಾಜಕಾರಣಿಯಾಗಿ ಸಿಂಗ್ ರೂಪುಗೊಳ್ಳುವ ಪ್ರಯತ್ನದಲ್ಲಿರುವಾಗಲೇ ಅಕ್ಬರ್ ಅವರ ಬಗ್ಗೆ ಬಹಳಷ್ಟು ಬರೆದಿದ್ದರು. ಇದರಲ್ಲಿ ಅವರ ಮೇಲೆ ಹೊಗಳಿಕೆಯ ಸುರಿಮಳೆಯನ್ನೇನೂ ಹರಿಸಿರಲಿಲ್ಲ. ಇದೀಗ ಆತ ಪಕ್ಕದಲ್ಲೇ ಆಸೀನರಾಗಿದ್ದಾರೆ. ಇತಿಹಾಸದ ಬುಗ್ಗೆಯಾಗಿರುವ ಅಕ್ಬರ್‌ಗೆ ಇದೀಗ ತಮ್ಮ ಸಹೋದ್ಯೋಗಿಗೆ ಲುಥೇನ್ಸ್ ನ ಮಾನ್‌ಸಿಂಗ್ ಮಾರ್ಗದ ಬಗ್ಗೆ ಪಾಠ ಮಾಡುವ ಅವಕಾಶ ಸಿಕ್ಕಿದೆ. ಹಳ್ದಿಘಾಟಿ ಯುದ್ಧದಲ್ಲಿ ಮಹಾರಾಣಾ ಪ್ರತಾಪನ ವಿರುದ್ಧ ಮೊಘಲ್ ಚಕ್ರವರ್ತಿ ಅಕ್ಬರ್ ಪರವಾಗಿ ಮಾನ್‌ಸಿಂಗ್ ಮೊಘಲ್ ಸೇನೆಯ ನೇತೃತ್ವ ವಹಿಸಿದ್ದ ಎನ್ನುವುದನ್ನು ಅಕ್ಬರ್ ಇದೀಗ ಸಿಂಗ್‌ಗೆ ನೆನಪಿಸಬೇಕು!
ಆಳ್ವಾ ನೆನಪು ಮತ್ತು ಸೋನಿಯಾ ಸಿಟ್ಟು
ತಮ್ಮ ನೆನಪುಗಳನ್ನು ದಾಖಲಿಸುವ ಪಕ್ಷದ ಮುಖಂಡರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ರೋಸಿಹೋಗಿದ್ದಾರೆ. ಇದೀಗ ಈ ಗುಂಪಿಗೆ ಹೊಸ ಸೇರ್ಪಡೆ ಮಾರ್ಗರೆಟ್ ಆಳ್ವ. ಅವರ ಆತ್ಮಚರಿತ್ರೆ ಕರೇಜ್ ಆ್ಯಂಡ್ ಕಮಿಟ್‌ಮೆಂಟ್ ಬಿಡುಗಡೆಯಾಗಿದೆ. ಪಕ್ಷದ ನಾಯಕತ್ವದ ಬಗೆಗೆ ಆಳ್ವ ಮಾಡಿರುವ ವಾಗ್ದಾಳಿಗಳು ಪಕ್ಷಕ್ಕೆ ಮುಜುಗರ ತರುವಂತಹವು. ಅಕ್ಬರ್ ರಸ್ತೆಯ ಕಟ್ಟಡ ಸಂಖ್ಯೆ 24ಕ್ಕೆ ಮಾಜಿ ಪ್ರಧಾನಿ ನರಸಿಂಹರಾವ್ ಅವರ ಪಾರ್ಥಿವ ಶರೀರವನ್ನು ತರಲು ಅವಕಾಶ ನೀಡದಿದ್ದ ಕ್ರಮವನ್ನು ಪ್ರತಿಭಟಿಸಿ ತಕ್ಷಣ ರಾಜೀನಾಮೆ ನೀಡುವ ಬಗ್ಗೆ ತಾವು ಗಂಭೀರವಾಗಿ ಯೋಚಿಸಿದ್ದಾಗಿ ಆಳ್ವ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಮನಮೋಹನ್ ಸಿಂಗ್ ಬಯಸಿದ್ದರೂ, ಸೋನಿಯಾ ಅದಕ್ಕೆ ಕಲ್ಲುಹಾಕಿದರು ಎಂದೂ ಆಳ್ವ ಕಿಡಿ ಕಾರಿದ್ದಾರೆ. ಎ.ಕೆ.ಆ್ಯಂಟನಿ ತಮ್ಮನ್ನು ಪಕ್ಷದಿಂದ ಉಚ್ಚಾಟಿಸಲು ಶಿಫಾರಸು ಮಾಡಿದ್ದನ್ನೂ ಉಲ್ಲೇಖಿಸುವ ಧೈರ್ಯ ತೋರಿದ್ದಾರೆ. ನಾಲ್ಕು ಬಾರಿ ರಾಜ್ಯಸಭೆ ಟಿಕೆಟ್ ಗಿಟ್ಟಿಸಿಕೊಂಡು, ರಾಜ್ಯಪಾಲೆ ಹುದ್ದೆ ದಕ್ಕಿಸಿಕೊಂಡು, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಆಳ್ವ ಇದೀಗ ಜನಪಥ್-10 ವಿರುದ್ಧ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ವರ್ತಿಸಲು ಹೇಗೆ ಸಾಧ್ಯವಾಗಿದೆ ಎನ್ನುವುದು ಸೋನಿಯಾ ನಿಕಟವರ್ತಿಗಳಿಗೆ ಅಚ್ಚರಿಯ ಸಂಗತಿ.