ಮೊದಲ ಪ್ರಯತ್ನದಲ್ಲೇ ಸಿಎ

Update: 2016-07-24 10:06 GMT

ಬಹುತೇಕ ವಿದ್ಯಾರ್ಥಿಗಳಿಗೆ ಚಾರ್ಟರ್ಡ್ ಅಕೌಂಟನ್ಸಿ ಅಂತಿಮ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಪಾಸಾಗುವುದು ಕಷ್ಟದ ಕೆಲಸ. ಆದರೆ ಪೂಜಾ ವಾಹ್‌ಗೆ ಈ ಹಾದಿ ಇನ್ನೂ ಕಷ್ಟವಾಗಿತ್ತು. ಹಾಗಿದ್ದರೂ ಅಸಾಧ್ಯ ಕನಸನ್ನು ನನಸಾಗಿಸಲು ಆಕೆ ಹಿಂಜರಿಯಲಿಲ್ಲ. ತಮ್ಮ ಕುಟುಂಬದಲ್ಲೇ ಎಸ್‌ಎಸ್‌ಸಿ ಪರೀಕ್ಷೆ ಪಾಸಾದ ಮೊದಲ ವ್ಯಕ್ತಿ ಪೂಜಾ. ಅದು ಆಕೆಯ ಪ್ರಾಥಮಿಕ ಗುರಿಯಾಗಿತ್ತು. ನಂತರ ಪದವಿ, ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಮತ್ತು ಈಗ ಸಿಎ ಪರೀಕ್ಷೆ ಪಾಸಾಗಿದ್ದಾರೆ.

ಪೂಜಾ ತನ್ನ ಸಾಧನೆಗೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಸರ್ಕಾರೇತರ ಸಂಘಟನೆ ಆಕಾಂಕ್ಷ ಫೌಂಡೇಶನಿಗೆ ಧನ್ಯವಾದ ಹೇಳುತ್ತಾರೆ. 26 ವರ್ಷದ ಪೂಜಾ ಸಂಗಮವಾಡಿಯ ಕೊಳೆಗೇರಿಯಲ್ಲಿ ತನ್ನ ಎಂಟು ಮಂದಿಯ ಕುಟುಂಬದ ಜೊತೆಗೆ ಬಾಡಿಗೆ ಮನೆಯಲ್ಲಿದ್ದಾರೆ. ಆಕೆಯ ತಂದೆ ಶಿವಾಜಿನಗರದಲ್ಲಿ ಜ್ಯೂಸ್ ಮಳಿಗೆ ಹೊಂದಿದ್ದಾರೆ.

ಪೂಜಾಳ ನಾಲ್ವರು ಹಿರಿಯ ಸಹೋದರಿಯರು ಚಿಕ್ಕವಯಸ್ಸಲ್ಲೇ ಮದುವೆಯಾಗಿದ್ದಾರೆ. ಇಬ್ಬರು ಸಹೋದರರು ಶಾಲೆ ಬಿಟ್ಟಿದ್ದಾರೆ. ಆದರೆ ಪೂಜಾ ತನ್ನ ಓದನ್ನು ನಿಲ್ಲಿಸದೆ, ತಂದೆಯನ್ನು ಮದುವೆ ಮಾಡದೆ ಇರುವಂತೆ ಒಪ್ಪಿಸಿದ್ದಳು. 15 ವರ್ಷದಲ್ಲೇ ಪೂಜಾಗೆ ಮದುವೆಗೆ ಸಿದ್ಧತೆ ನಡೆದಾಗ ಆಕೆ ಒಪ್ಪಿರಲಿಲ್ಲ. ನಾನು ಹೆತ್ತವರ ನಿರ್ಧಾರಕ್ಕೆ ವಿರೋಧಿಸಿ ಓದುವುದಾಗಿ ಹೇಳಿದೆ. ನನ್ನ ಸಹೋದರಿಯರ ಕಷ್ಟದ ಜೀವನ ನೋಡಿದ್ದೆ. ಹೀಗಾಗಿ ಹೆತ್ತವರ ಜೊತೆ ನಿತ್ಯವೂ ಜಗಳವಾಡುತ್ತಿದ್ದೆ. ಹತ್ತನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದೆ. ಹೀಗಾಗಿ ತಂದೆ ಮುಂದೆ ಓದಲು ಅನುಮತಿ ಕೊಟ್ಟರು. ನಂತರ ನನ್ನನ್ನು ಮದುವೆಯಾಗುವಂತೆ ಎಂದೂ ಒತ್ತಾಯಿಸಲಿಲ್ಲ ಎನ್ನುತ್ತಾರೆ ಪೂಜಾ.

ಕಡಿಮೆ ಆದಾಯವಿರುವ ದೊಡ್ಡ ಕುಟುಂಬದಲ್ಲಿ ಕಠಿಣ ಶ್ರಮ ಹಾಕದೆ ಸಾಧನೆ ಸಾಧ್ಯವಿಲ್ಲ ಎನ್ನುವುದು ಆಕೆಗೆ ಗೊತ್ತಿತ್ತು. ಅರೆಕಾಲಿಕ ಕೆಲಸ ಮಾಡುತ್ತಲೇ ಕಾಲೇಜು ಮುಗಿಸಿದ್ದರು. ಬಿಕಾಂ ಮತ್ತು ಎಂಕಾಂನ್ನು ಡಿಸ್ಟಿಂಕ್ಷನಲ್ಲಿ ಪಾಸಾದಾಗ ಸಿಎ ಬಗ್ಗೆ ಆಕಾಂಕ್ಷ ಫೌಂಡೇಶನಿನಿಂದ ತಿಳಿದು ಬಂತು. ಆರಂಭದಲ್ಲಿ ಈ ಕಠಿಣ ಪರೀಕ್ಷೆ ಪಾಸಾಗುವ ಧೈರ್ಯವಿರಲಿಲ್ಲ. ಆದರೆ ಸಂಘಟನೆಯ ಅನುದಾನ ಆಕೆಯ ಖಾಸಗಿ ಪಾಠಕ್ಕೆ ಬಲ ನೀಡಿತ್ತು. ಆಕಾಂಕ್ಷ ಫೌಂಡೇಶನ್ ನನಗೆ ಎರಡನೇ ಮನೆ. ನನ್ನ ಶಾಲಾ ಕಲಿಕೆಗೆ ಅವರು ನೆರವಾಗಿದ್ದಾರೆ. ಸಿಎ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸಾಗಬೇಕು ಎಂದು ನಿರ್ಧರಿಸಿದ್ದೆ. ಅದು ಸುಲಭವಲ್ಲ ಎಂದು ತಿಳಿದರೂ ಕಷ್ಟಪಟ್ಟು ಯಶಸ್ಸು ಪಡೆದೆ ಎನ್ನುತ್ತಾರೆ.

ಪೂಜಾ ಈಗ ಅಕೌಂಟಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಸ್ವಂತ ಪ್ರಾಕ್ಟೀಸ್ ಬದಲಾಗಿ ಕಾರ್ಪೋರೇಟ್ ಉದ್ಯೋಗ ಹುಡುಕುವ ಗುರಿ ಹೊಂದಿದ್ದಾರೆ. ನಿರ್ದಿಷ್ಟ ಆದಾಯದ ಖಚಿತತೆ ಇರುವ ಕಾರಣ ನನಗೆ ಉದ್ಯೋಗವೇ ಬೇಕು. ನನ್ನ ಕುಟುಂಬದ ಜೀವನಮಟ್ಟ ಸುಧಾರಿಸುವ ಹೊಣೆ ನನ್ನ ಮೇಲಿದೆ. ಅವರ ಬೆಂಬಲದಿಂದಲೇ ನಾನು ಈ ಸಾಧನೆ ಮಾಡಿರುವೆ ಎನ್ನುತ್ತಾರೆ ಪೂಜಾ.

ಆಕಾಂಕ್ಷ ಫೌಂಡೇಶನ್‌ಗೆ ಪೂಜಾಳ ಬಗ್ಗೆ ಹೆಮ್ಮೆ ಇದೆ. ಹಲವು ಸವಾಲುಗಳ ನಡುವೆಯೂ ತನ್ನ ಕನಸನ್ನು ಆಕೆ ಬಿಡಲಿಲ್ಲ ಎನ್ನುತ್ತಾರೆ ಸಂಘಟನೆಯ ಹಿರಿಯ ನಿರ್ದೇಶಕ ಚಿತ್ರಾ ಪಂಡಿತ್

ಕೃಪೆ:timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News