ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಸಂಘಟಿತ ಹೋರಾಟಕ್ಕಿಳಿಯಬೇಕಾಗಿದೆ
ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಎಂಬಾತ ದಲಿತ ನಾಯಕಿ, ಮಾಜಿ ಮುಖ್ಯಮಂತ್ರಿ ಮಾಯಾವತಿಯವರನ್ನು ವೇಶ್ಯೆಗಿಂತಲೂ ಕೀಳೆಂದು ಬಣ್ಣಿಸಿದ ಘಟನೆಗೆ ದೇಶದೆಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಕೆಲವು ದಿನಗಳ ಹಿಂದೆ ಗುಜರಾತಿನ ಉನಾದಲ್ಲಿ ದಲಿತರನ್ನು ಅರೆಬೆತ್ತಲೆಗೊಳಿಸಿ ಥಳಿಸಿದ ಅಮಾನುಷ ಪ್ರಕರಣ ನಡೆದಿದೆ. ಮುಂಬೈನ ಅಂಬೇಡ್ಕರ್ ಭವನವನ್ನು ನೆಲಸಮಗೊಳಿಸಿದ ಬೆನ್ನಲ್ಲೆ ನಡೆದಿರುವ ಈ ಘಟನೆಗಳಿಂದ ರೊಚ್ಚಿಗೆದ್ದ ದಲಿತರು ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಾಮೂಹಿಕ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇದೇ ವೇಳೆ ಸಂಘ ಪರಿವಾರದ ಕೆಲವು ಉನ್ನತ ನಾಯಕರ ಬಾಯಲ್ಲಿ ಖಂಡನೆಯ ಮಾತುಗಳು ಕೇಳಿಬಂದಿವೆ. ಆದರೆ ಇವೆೆಲ್ಲ ಬರೀ ಮೊಸಳೆ ಕಣ್ಣೀರು ಹೊರತು ಪ್ರಾಮಾಣಿಕ ನಡೆಗಳಲ್ಲ; ಇವು ಇನ್ನಷ್ಟು ಹಾನಿಯನ್ನು ತಪ್ಪಿಸಲೆಂದು ದಲಿತರ ಮೂಗಿಗೆ ತುಪ್ಪಸವರುವ ಕ್ರಮಗಳು; ಇದರ ಹಿಂದೆ ಇರುವುದು ಬರೀ ಚುನಾವಣಾ ಲೆಕ್ಕಾಚಾರ ಮಾತ್ರ ಎಂಬುದನ್ನು ದಲಿತರು ಅರಿಯಬೇಕು. ಅಂದು ಬಾಬಾ ಸಾಹೇಬರನ್ನು ತೆಗಳುತ್ತಿದ್ದ ಮಂದಿ ಇಂದು ಅವರ ಭಾವಚಿತ್ರಕ್ಕೆ ಹಾರ ಹಾಕಿ ಮೆರವಣಿಗೆಯಲ್ಲಿ ಒಯ್ಯುತ್ತಿರುವುದು, ಬೌದ್ಧ ಬಿಕ್ಕುಗಳ ಓಲೈಕೆಯಲ್ಲಿ ತೊಡಗಿರುವುದೆಲ್ಲ ಒಂದು ದೊಡ್ಡ ಕಪಟ ನಾಟಕದ ಭಾಗವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಉತ್ತರ ಪ್ರದೇಶವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ದಲಿತ ವೋಟುಗಳನ್ನು ಸೆಳೆಯಲು ಎಲ್ಲಾ ರೀತಿಯ ತಂತ್ರ, ಕುತಂತ್ರಗಳನ್ನು ಪ್ರಯೋಗಿಸುತ್ತಿರುವ ಸಂಘ ಪರಿವಾರಕ್ಕೆ ಈಗ ತೀವ್ರ ಹಿನ್ನಡೆ ಆಗಿರುವುದರಿಂದ ವೋಟ್ ಬ್ಯಾಂಕ್‌ಗೆ ಸಂಭಾವ್ಯ ಹಾನಿಯನ್ನು ತಪ್ಪಿಸಲೆಂದು ಈ ಕಸರತ್ತುಗಳಲ್ಲಿ ತೊಡಗಿದೆ ಎಂಬುದನ್ನು ಮನಗಾಣಬೇಕು. ವರದಿಗಳ ಪ್ರಕಾರ ದಯಾಶಂಕರ್ ಸಿಂಗ್‌ರನ್ನು ಅಮಾನತುಗೊಳಿಸ ಲಾಗಿದೆ. ಆದರೆ ಒಬ್ಬಿಬ್ಬರು ದಯಾಶಂಕರ್‌ಗಳ ತಲೆದಂಡದಿಂದ ಪ್ರಯೋಜನವೇನೂ ಇಲ್ಲ. ಅದರಿಂದ ಮೂಲತಃ ಕೇಸರಿ ಪಾಳಯದ ಮನಃಸ್ಥಿತಿ ಬದಲಾಗದು. ದಯಾಶಂಕರ್‌ರ ಮಾತುಗಳು ಇಡೀ ಕೇಸರಿ ಪಾಳಯದ ಮನದಾಳದ ಭಾವನೆಗಳ ಅಭಿವ್ಯಕ್ತಿಯಾಗಿದೆ. ಹೊಟ್ಟೆಯೊಳಗೆ ಕುದಿಯುತ್ತಿರುವ ಈ ಹಾಲಾಹಲ ಆಗೊಮ್ಮೆ ಈಗೊಮ್ಮೆ ಹೊರಬೀಳುತ್ತಿರುತ್ತದೆ. ಈಗ ಉತ್ತರ ಪ್ರದೇಶ, ಗುಜರಾತ್‌ಗಳಲ್ಲಿ ಆಗಿರುವುದೂ ಅದೇ. ಕಳೆದ ಸೆಪ್ಟಂಬರ್‌ನಲ್ಲಿ ಆರೆಸ್ಸೆಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯವನ್ನು ಇನ್ನೆಷ್ಟು ಕಾಲ ಮುಂದುವರಿಸಬೇಕು ಎಂಬುದರ ಬಗ್ಗೆ ಮತ್ತೆ ನಿರ್ಣಯಿಸಬೇಕಾಗಿದೆ ಎಂದು ಹೇಳಿದ್ದರು. ಸಂವಿಧಾನದ ಜಾಗದಲ್ಲಿ ಮನುಸ್ಮತಿಯನ್ನು ಜಾರಿಗೆ ತರಲು ಉದ್ದೇಶಿಸುತ್ತಿರುವ ಸಂಘ ಪರಿವಾರ ಜಾತಿಪದ್ಧತಿಯನ್ನು ಎಂದೂ ಕೈಬಿಡದು. ಏಕೆಂದರೆ ಜಾತಿಪದ್ಧತಿ ಅದರ ಕನಸಿನ ಬ್ರಾಹ್ಮಣಶಾಹಿ ಹಿಂದೂ ರಾಷ್ಟ್ರದ ಒಂದು ಮುಖ್ಯ ಭಾಗವಾಗಿದೆ. ಜಾತಿ ಪದ್ಧತಿ ಮೂಲಕ ದಲಿತರು, ಹಿಂದುಳಿದವರನ್ನೂ ಕೋಮುವಾದದ ಮೂಲಕ ಅಲ್ಪಸಂಖ್ಯಾತರನ್ನು ಎರಡನೆ, ಮೂರನೆ ದರ್ಜೆಯ ಪ್ರಜೆಗಳಾಗಿ ಮಾಡುವುದೇ ಅದರ ಗುರಿ. ಇಂಥವರಿಗೆ ಈಗ ದಲಿತರು ಮತ್ತು ಹಿಂದುಳಿದವರು ಬೇಕಾಗಿರುವುದು ಏಣಿಯ ಒಂದು ಮೆಟ್ಟಲಾಗಿ. ಕೇವಲ ಅಲ್ಪಸಂಖ್ಯಾತರನ್ನು ಬಗ್ಗುಬಡಿಯುವ ಕಾಲಾಳು ಪಡೆಗಳಾಗಿ ಮತ್ತು ವೋಟ್ ಬ್ಯಾಂಕ್ ಆಗಿ. ಇವರಿಗೆ ವಿಧಿಸಲಾದ ಕರ್ತವ್ಯಗಳೆಂದರೆ ಅಲ್ಪಸಂಖ್ಯಾತರ ಮೇಲೆ ಹಿಂಸಾಕೃತ್ಯಗಳನ್ನು ಎಸಗುವುದು ಮತ್ತು ಬಲಿಪಶುಗಳಾಗಿ ಜೈಲು ಸೇರುವುದು. ಇವತ್ತು ಜೈಲಿನೊಳಗಿರುವವರ ಪೈಕಿ ಸುಮಾರು ಶೇಕಡಾ 53ರಷ್ಟು ಮಂದಿ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮರೇ ಆಗಿದ್ದರೆ ಇನ್ನೊಂದು ಕಡೆ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯಾಗುವುದು ತೀರಾ ತೀರಾ ವಿರಳವಾಗಿರುವ ಕಟು ಸತ್ಯ ನಮ್ಮ ಮುಂದಿದೆ. ಹಿಂದೂ ರಾಷ್ಟ್ರ ಬಂದರೂ ದಲಿತರ ಗುಲಾಮಗಿರಿ ಮುಂದುವರಿಯಲಿದೆ ಮಾತ್ರವಲ್ಲ ಮೀಸಲಾತಿ ಮತ್ತಿತರ ಸವಲತ್ತುಗಳು ಇಲ್ಲವಾಗಲಿವೆ.