ಭಾರತದಲ್ಲಿ ಕುಂಠಿತ ಬೆಳವಣಿಗೆಯ ಅತ್ಯಂತ ಹೆಚ್ಚಿನ ಮಕ್ಕಳು: ಅಧ್ಯಯನ

Update: 2016-07-26 15:42 GMT

ಹೊಸದಿಲ್ಲಿ,ಜು.26: ಭಾರತದಲ್ಲಿ ಐದು ವರ್ಷಕ್ಕಿಂತ ಕೆಳಗಿನ ವಯೋಮಾನದ ಸುಮಾರು 48 ಮಿಲಿಯನ್ ಅಥವಾ ಪ್ರತಿ ಐವರಲ್ಲಿ ಇಬ್ಬರು ಮಕ್ಕಳು ಕುಂಠಿತ ಬೆಳವಣಿಗೆಯನ್ನು ಹೊಂದಿದ್ದಾರೆ ಎಂದು ನೂತನ ಅಧ್ಯಯನವೊಂದು ಹೇಳಿದೆ. ತನ್ಮೂಲಕ ಎರಡನೇ ಅತ್ಯಂತ ಹೆಚ್ಚಿನ ಜನಸಂಖ್ಯೆಯ ದೇಶವಾಗಿರುವ ಹಾಗೂ ನೈರ್ಮಲ್ಯದ ಸಮಸ್ಯೆಯಿರುವ ಭಾರತವು ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಕುಂಠಿತ ಬೆಳವಣಿಗೆಯ ಮಕ್ಕಳನ್ನು ಹೊಂದಿರುವ ದೇಶವಾಗಿದೆ ಎಂದು ಅದು ಬೆಟ್ಟು ಮಾಡಿದೆ.
ಭಾರತವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಯಲು ಶೌಚ ಪದ್ಧತಿಯನ್ನು ಹೊಂದಿದೆ ಎಂದು ಅಪೌಷ್ಟಿಕತೆಗೆ ಶೌಚಾಲಯಗಳ ಕೊರತೆ ಮತ್ತು ಅಶುದ್ಧ ನೀರಿನ ಕೊಡುಗೆಯ ಕುರಿತು ಅಂತಾರಾಷ್ಟ್ರೀಯ ಸಂಸ್ಥೆ ವಾಟರ್‌ಏಡ್ ನಡೆಸಿರುವ ಅಧ್ಯಯನವು ಹೇಳಿದೆ. ಕುಂಠಿತ ಬೆಳವಣಿಗೆಗೂ ಬಯಲು ಶೌಚಕ್ಕೂ ಗಾಢ ನಂಟಿದೆ ಎಂದಿರುವ ಅದು, ಇದು ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಭಾವನಾತ್ಮಕ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ ಎಂದಿದೆ.
ವರದಿಯು ಸಿದ್ಧಪಡಿಸಿರುವ ಪಟ್ಟಿಯಲ್ಲಿ ನೈಜೀರಿಯಾ(10.3 ಮಿ.ಮಕ್ಕಳು) ಮತ್ತು ಪಾಕಿಸ್ತಾನ(9.8 ಮಿ.ಮಕ್ಕಳು) ಭಾರತದ ನಂತರದ ಸ್ಥಾನಗಳಲ್ಲಿವೆ.
ಶೇಕಡಾವಾರು ಲೆಕ್ಕದಲ್ಲಿ ಆಗ್ನೇಯ ಏಷ್ಯಾದ ಟಿಮೋರ್-ಲೆಸ್ಟೆ ಮೊದಲ ಸ್ಥಾನದಲ್ಲಿದೆ. ಅಲ್ಲಿ ಶೇ.58 ರಷ್ಟು ಮಕ್ಕಳು ಕುಂಠಿತ ಬೆಳವಣಿಗೆಯನ್ನು ಹೊಂದಿದ್ದಾರೆ. ವಿಶ್ವಾದ್ಯಂತ ಐದು ವರ್ಷಕ್ಕಿಂತ ಕೆಳಗಿನ 159 ಮಿ.(ಪ್ರತಿ ನಾಲ್ವರಲ್ಲಿ ಒಂದು ಮಗು) ಮಕ್ಕಳು ಕುಂಠಿತ ಬೆಳವಣಿಗೆಯನ್ನು ಹೊಂದಿದ್ದಾರೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News