ಒಪ್ಪಂದ ಉಲ್ಲಂಘಿಸಿ ಉತ್ತರಾಖಂಡ್ ಪ್ರವೇಶಿಸಿದ್ದ ಚೀನಿ ಸೈನಿಕರು

Update: 2016-07-27 13:34 GMT

ಹೊಸದಿಲ್ಲಿ,ಜು.27: ಚೀನಿ ಸೈನಿಕರು ಇತ್ತೀಚಿಗೆ ಗಡಿ ಒಪ್ಪಂದವನ್ನು ಉಲ್ಲಂಘಿಸಿ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿ ಅತಿಕ್ರಮ ಪ್ರವೇಶವನ್ನು ಮಾಡಿದ್ದು, ರಾಜ್ಯದ ಮುಖ್ಯಮಂತ್ರಿ ಹರೀಶ ರಾವತ್ ಅವರು ಬುಧವಾರ ಈ ವಿಷಯವನ್ನು ದೃಢಪಡಿಸಿದ್ದಾರೆ.
ಚಮೋಲಿ ಜಿಲ್ಲೆಯಲ್ಲಿನ 80 ಚದುರ ಮೈಲು ವಿಸ್ತೀರ್ಣದ,ಬರಹೋಟಿ ಮೈದಾನವೆಂದು ಕರೆಯಲಾಗುವ ಪ್ರದೇಶದ ಕುರಿತು ಉಭಯ ರಾಷ್ಟ್ರಗಳ ನಡುವೆ ವಿವಾದವಿದ್ದು,ಇದನ್ನು ಮಿಲಿಟರಿ ರಹಿತ ಪ್ರದೇಶವನ್ನಾಗಿ ಕಾಯ್ದುಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ.
ಚೀನಿಯರ ಅತಿಕ್ರಮಣ ಜು.19ರಂದು ಬೆಳಕಿಗೆ ಬಂದಿತ್ತು. ಚಮೋಲಿ ಜಿಲ್ಲಾಧಿಕಾರಿಗಳು,ಐಟಿಬಿಪಿ ಅಧಿಕಾರಗಳು ಮತ್ತಿತರರ ತಂಡವೊಂದು ವಿವಾದಾತ್ಮಕ ಬರಹೋಟಿ ಮೈದಾನದ ಸಮೀಕ್ಷೆಗೆಂದು ತೆರಳಿದ್ದಾಗ ಅಲ್ಲಿ ಬಿಡಾರ ಹೂಡಿದ್ದ ಶಸ್ತ್ರಸಜ್ಜಿತ ಚೀನಿ ಸೈನಿಕರು ಈ ಜಾಗ ತಮಗೆ ಸೇರಿದ್ದು ಎಂದು ಪ್ರತಿಪಾದಿಸಿ ಅವರನ್ನು ವಾಪಸ್ ತೆರಳುವಂತೆ ಸೂಚಿಸಿದ್ದರು. ನಂತರ ಚೀನಿ ಸೈನಿಕರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.
ಈ ಜಾಗವು ವಿವಾದಾತ್ಮಕವೆಂದು ಉಭಯ ರಾಷ್ಟ್ರಗಳು 1957ರಿಂದಲೇ ಒಪ್ಪಿಕೊಂಡಿದ್ದು, ವಿವಾದವಿನ್ನೂ ಮಾತುಕತೆಗಳ ಮೂಲಕ ಬಗೆಹರಿಯಬೇಕಿದೆ.
ಕಳೆದ ಕೆಲವು ವರ್ಷಗಳಲ್ಲಿ ಚೀನಿ ಸೈನಿಕರು ಆಗಾಗ್ಗೆ ಈ ಪ್ರದೇಶವನ್ನು ಅತಿಕ್ರಮಿಸುತ್ತಿದ್ದು, ವಾಯು ಉಲ್ಲಂಘನೆಗಳೂ ನಡೆದಿವೆ.
 ಚೀನಾ 1958,ಎ.19ರಂದು ತನ್ನ ನಿಯೋಗವೊಂದನ್ನು ಭಾರತದೊಂದಿಗೆ ಮಾತುಕತೆಗೆ ಕಳುಹಿಸಿದ್ದು, ಈ ಪ್ರದೇಶಕ್ಕೆ ಸೈನಿಕರನ್ನು ಕಳುಹಿಸದಿರಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿದ್ದವು. ಆದರೆ ಬರಹೋಟಿ ಮೈದಾನದ ವಿವಾದದ ಅಂತಿಮ ಇತ್ಯರ್ಥ ಕುರಿತು ಚರ್ಚೆಯನ್ನು ಉಭಯ ರಾಷ್ಟ್ರಗಳು ತಪ್ಪಿಸಿಕೊಳ್ಳುತ್ತಲೇ ಬಂದಿವೆ.
ಒಪ್ಪಂದವು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗಿನ 3,488 ಕಿ.ಮೀ.ಉದ್ದದ ಭಾರತ-ಚೀನಾ ಗಡಿಯನ್ನು ಕಾಯುತ್ತಿರುವ ಐಟಿಬಿಪಿ ಶಸ್ತ್ರಸಜ್ಜಿತವಾಗಿ ಈ ಪ್ರದೇಶವನ್ನೆಂದೂ ಪ್ರವೇಶಿಸಿಲ್ಲ ಎಂದು ಮೂಲಗಳು ತಿಳಿಸಿದವು. ಆದರೆ ಉಭಯ ರಾಷ್ಟ್ರಗಳ ಕುರಿಗಾಹಿಗಳು ತಮ್ಮ ಜಾನುವಾರುಗಳನ್ನು ಇಲ್ಲಿ ಮೇಯಿಸಲು ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News