ಕಾದಂಬರಿ

Update: 2016-07-27 17:13 GMT

-- ಅಜ್ಜಿಯ ಕೆನ್ನೆಗೆ ಮೊಮ್ಮಗಳ ಹೂಮುತ್ತು --
ಅಂದು ನಾನು ಮೊದಲ ಬಾರಿಗೆ ಸೀರೆ ಉಟ್ಟಿದ್ದೆ. ಮೈತುಂಬಾ ಆಭರಣ ತೊಡಿಸಿದ್ದರು. ಮಲ್ಲಿಗೆ ಹೂ ಮುಡಿಸಿದ್ದರು. ಕಣ್ಣಿಗೆ ಕಾಡಿಗೆ ಹಚ್ಚಿ, ದೃಷ್ಟಿ ಬೊಟ್ಟು ಇಟ್ಟಿದ್ದರು. ಆಮೇಲೆ ನನ್ನೆದುರು ನಿಂತು ನನ್ನನ್ನು ಕಣ್ತುಂಬ ನೋಡಿ, ದೃಷ್ಟಿ ತೆಗೆದು ನನ್ನ ಹಣೆಯನ್ನು ಚುಂಬಿಸಿದ್ದರು. ಆಗಲೇ ಅವರ ಕಣ್ಣು ಕೊಳವಾಗಿದ್ದನ್ನು ನಾನು ನೋಡಿದ್ದು. ‘‘ಯಾಕಜ್ಜೀ’’ ಎಂದು ನಾನು ಆತಂಕದಿಂದ ಕೇಳಿದಾಗ ಉತ್ತರಿಸದೆ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಾ, ನನ್ನನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿ ಒಂದು ಕುರ್ಚಿಯಲ್ಲಿ ಕುಳ್ಳಿರಿಸಿ ಹೋದರು. ಆನಂತರ ಅವರು ಬರುವಾಗ ಅವರ ಹಿಂದೆ ಉಸ್ತಾದ್, ಅವರ ಹಿಂದೆ ಅಜ್ಜ ಇದ್ದರು. ನೆಲ ನೋಡುತ್ತಿದ್ದ ನನ್ನ ಮುಖವನ್ನು ಅಜ್ಜಿ ಮೇಲಕ್ಕೆತ್ತಿದರು. ಆಗ ಬೆಳದಿಂಗಳ ಕೋಲ್ಮಿಂಚೊಂದು ನನ್ನೆದುರು ನಿಂತಿತ್ತು.
ಮತ್ತೆ ತಿಂಗಳು ಕಳೆಯುವುದರೊಳಗೆ ಉಸ್ತಾದ್‌ರೊಂದಿಗೆ ನನ್ನ ಮದುವೆ ನಡೆದಿತ್ತು. ಇಡೀ ಊರಿಗೆ ಊರೇ ಮದುವೆಗೆ ನೆರೆದಿತ್ತು. ಅಜ್ಜ-ಅಜ್ಜಿಯ ಸಂಭ್ರಮವಂತೂ ಮುಗಿಲು ಮುಟ್ಟಿತ್ತು.

ಆನಂತರ ನಾಲ್ಕು ವರ್ಷ ನಾನು ಅನುಭವಿಸಿದ ಸುಖ, ಸಂತೋಷ, ಸಂಭ್ರಮ ಬಹುಶಃ ಈ ಲೋಕದಲ್ಲಿ ಬೇರೆ ಯಾವ ಹೆಣ್ಣೂ ಅನುಭವಿಸಿರಲಿಕ್ಕಿಲ್ಲ. ಮಸೀದಿ ಯಿಂದ ಮನೆಗೆ 2-3 ಫರ್ಲಾಂಗ್‌ನಷ್ಟು ಅಂತರ. ನಾನೂ-ಅವರೂ ಅಜ್ಜನ ಮನೆಯಲ್ಲಿಯೇ ಇದ್ದು ಬಿಟ್ಟೆವು. ನಾವು ಅಜ್ಜನೇ ಕಟ್ಟಿಸಿಕೊಟ್ಟ ಪಕ್ಕದಲ್ಲಿಯೇ ಇರುವ ಮನೆಗೆ ಹೋಗುತ್ತೇವೆ ಎಂದರೂ ಅಜ್ಜ-ಅಜ್ಜಿ ಬಿಡಲಿಲ್ಲ. ನಾವು ಹಗಲೆಲ್ಲ ಈ ಮನೆಯಲ್ಲಿದ್ದು ರಾತ್ರಿ ಮಲಗಲು ಆ ಮನೆಗೆ ಹೋಗುತ್ತಿದ್ದೆವು. ಅವರು ನನ್ನನ್ನು ಪ್ರೀತಿಯ ಕಡಲಲ್ಲಿ ತೇಲಿಸಿಬಿಟ್ಟಿದ್ದರು. ನಮ್ಮ ಪ್ರೀತಿ, ಸಂತೋಷ ಕಂಡು ಅಜ್ಜ-ಅಜ್ಜಿ ಮೂಕರಾಗಿಬಿಟ್ಟಿದ್ದರು. ಅವರಿಗೆ ಅವರ ಊರಿನಲ್ಲಿ ಒಬ್ಬ ಅಕ್ಕ ಬಿಟ್ಟರೆ ಬೇರೆ ಯಾರೂ ಇಲ್ಲ ಎಂದಿದ್ದರು. ಮದುವೆಗೆ ಅವರ ಕಡೆಯಿಂದ ಯಾರೂ ಬಂದಿರಲಿಲ್ಲ. ಆ ನಾಲ್ಕು ವರ್ಷ ಅವರು ಈ ಮನೆ ಬಿಟ್ಟು ಕದಲಲಿಲ್ಲ. ಒಂದು ರಾತ್ರಿಯೂ ನನ್ನಿಂದ ದೂರ ಇದ್ದವರಲ್ಲ. ಈ ನಡುವೆ ನಾನು ಗರ್ಭಿಣಿಯಾದೆ. ನನ್ನ ಸೀಮಂತವನ್ನು ಅಜ್ಜ ಬಹಳ ವಿಜೃಂಭಣೆಯಿಂದ ಮಾಡಿದ್ದರು. ಗಂಡು ಮಕ್ಕಳೇ ಇಲ್ಲದ ಈ ಮನೆಯಲ್ಲಿ ನನಗೆ ಗಂಡು ಮಗುವಾಗಿದ್ದು ಕಂಡು ಅಜ್ಜ-ಅಜ್ಜಿ ಮಗುವಿನಂತಾಗಿಬಿಟ್ಟಿದ್ದರು.

‘‘ಒಂದು ದಿನ.... ಆಗ ನನ್ನ ಮಗುವಿಗೆ ಆರು ತಿಂಗಳು...’’
ಐಸು ಮತ್ತೆ ಮಾತನಾಡಲಿಲ್ಲ. ಅಂಗಾತ ಬಿದ್ದು ಕೊಂಡಿದ್ದವಳ ಕಣ್ಣುಗಳು ರೆಪ್ಪೆಮುಚ್ಚದೆ ಎತ್ತಲೋ ದಿಟ್ಟಿಸುತ್ತಿತ್ತು. ಅವಳ ತಲೆ ಪಕ್ಕ ಗಲ್ಲಕ್ಕೆ ಕೈಯೂರಿ ಬಂಡೆಕಲ್ಲಿನಂತೆ ಕುಳಿತಿದ್ದ ತಾಹಿರಾ ಎಚ್ಚೆತ್ತವಳಂತೆ ‘‘ಮಾಮೀ...’’ ಎಂದು ಕರೆದಳು.
ಐಸು ಓಗೊಡಲಿಲ್ಲ.
ಮತ್ತೆ ‘‘ಮಾಮೀ...’’ ಎಂದಳು
ಈಗಲೂ ಐಸು ಉತ್ತರಿಸಲಿಲ್ಲ. ಮರದ ಕೊರಡಿನಂತೆ ಬಿದ್ದುಕೊಂಡಿದ್ದ ಅವಳಲ್ಲಿ ಚಲನೆಯೇ ಇರಲಿಲ್ಲ. ತಾಹಿರಾಳಿಗೆ ಭಯವಾಯಿತು. ಅವಳು ಐಸುಳ ಭುಜ ಹಿಡಿದು ಅಲುಗಾಡಿಸುತ್ತಾ ‘‘ಮಾಮೀ...’’ ಎಂದು ಜೋರಾಗಿ ಕೂಗಿದಳು. ಕತ್ತು ತಿರುಗಿಸಿ ತಾಹಿರಾಳನ್ನೇ ದಿಟ್ಟಿಸಿ ನೋಡಿದ ಐಸುಳ ಕಣ್ಣುಗಳೀಗ ಒದ್ದೆಯಾಗಿತ್ತು.
ಆಗ ನನ್ನ ಮಗು ನಾಸರ್ ಪುಟ್ಟ ಮಗು. ಒಂದು ರಾತ್ರಿ ಅವರು ನನ್ನಲ್ಲಿ ಹೇಳಿದರು, ‘‘ನಾಳೆ ನನಗೊಮ್ಮೆ ಊರಿಗೆ ಹೋಗಿ ಬರಬೇಕು. ನಾನು ಊರಿಗೆ ಹೋಗದೆ ನಾಲ್ಕು ವರ್ಷಗಳಾಗುತ್ತಾ ಬಂತು’’
‘‘ನಾಳೆನೇ ಹೋಗಬೇಕಾ?’’ ನಾನು ಕೇಳಿದೆ
‘‘ಹೌದು ನಾಳೆನೇ ಹೋಗಬೇಕು. ಒಂದು ವಾರದಲ್ಲಿ ಬರುತ್ತೇನೆ. ಬಕ್ರೀದ್ ಹಬ್ಬಕ್ಕೆ ಇಲ್ಲಿರ್ತೇನೆ’’
‘‘ಏನು ಅಷ್ಟು ಅವಸರ?’’
‘‘................’’
‘‘ನಾಳೆನೇ ಯಾಕೆ ಹೋಗಬೇಕು. ಎರಡು ದಿನ ಬಿಟ್ಟು ಹೋಗಬಾರದೇ?’’
‘‘ಇಲ್ಲ, ನಾಳೆನೇ...’’ ಅವರ ಮಾತಿನಲ್ಲಿ ಎಂದಿನ ಪ್ರೀತಿ ಇರಲಿಲ್ಲ.
ಮಗುವನ್ನು ಅವರ ಪಕ್ಕ ಮಲಗಿಸಿದೆ. ಅವರು ಗಮನಿಸಲಿಲ್ಲ. ಎಂದಿನಂತೆ ಪ್ರೀತಿ ತೋರಲಿಲ್ಲ. ಅವರ ಮುಖದ ತುಂಬಾ ದುಗುಡ ತುಂಬಿದಂತಿತ್ತು. ರಗ್ಗು ಹೊದ್ದು ಮಲಗಿದವರು ಮತ್ತೆ ಮಾತನಾಡಲಿಲ್ಲ. ಆ ರಾತ್ರಿ ನಾನು ನಿದ್ರಿಸಲಿಲ್ಲ. ನಾನು ಅವರನ್ನು ಗಮನಿಸುತ್ತಲೇ ಇದ್ದೆ. ಅವರು ಹೊರಳಾಡುತ್ತಲೇ ಇದ್ದರು.

ಬೆಳಿಗ್ಗೆದ್ದು ಮಸೀದಿಗೆ ಹೋಗಿ ಬಂದವರೇ ಅಜ್ಜನಿಗೆ ಹೇಳಿ ಹೊರಟರು. ಹೊರಟೇ ಬಿಟ್ಟರು. ಅಂದು ಹೋದವರನ್ನು ಆಮೇಲೆ ನಾನು ನೋಡಿಲ್ಲ... ದಿಗ್ಗನೆ ಎದ್ದು ಕುಳಿತ ಐಸುಳ ತುಟಿ ಅದುರುತ್ತಿತ್ತು. ಧ್ವನಿ ನಡುಗುತ್ತಿತ್ತು. ‘‘ಹೌದು, ಅಂದು ಹೋದವರು ಆಮೇಲೆ ಮರಳಲೇ ಇಲ್ಲ. ಎಲ್ಲಿಗೆ ಹೋದರು, ಯಾಕೆ ಹೋದರು ಒಂದೂ ಗೊತ್ತಿಲ್ಲ. ಅಜ್ಜ ಹುಡುಕದ ಜಾಗ ಇಲ್ಲ. 24 ವರ್ಷ ... 24 ವರ್ಷಗಳಿಂದ ನಾನು ಅವರ ದಾರಿ ಕಾಯುತ್ತಿದ್ದೇನಮ್ಮಾ... ದಾರಿ ಕಾಯುತ್ತಿದ್ದೇನೆ...’’ ಮೊಣಕಾಲ ಮಧ್ಯೆ ತನ್ನ ಮುಖವನ್ನು ಹುದುಗಿಸಿ ಐಸು ಬಿಕ್ಕಿ ಬಿಕ್ಕಿ ಅಳತೊಡಗಿದಳು. ತಾಹಿರಾಳಿಗೂ ದುಃಖ ತಡೆಯಲಾಗಲಿಲ್ಲ. ಐಸುಳ ಹೆಗಲ ಮೇಲೆ ತಲೆ ಒರಗಿಸಿದವಳೇ ಮಾಮಿಯನ್ನು ಸಮಾಧಾನಪಡಿಸತೊಡಗಿದಳು.
ಅಜ್ಜಿ ಕೋಣೆಯಲ್ಲಿ ಕೆಮ್ಮುವುದು ಕೇಳಿಸಿತು. ಐಸು ಸೆರಗಿನಿಂದ ಕಣ್ಣೊರೆಸಿಕೊಂಡವಳೇ ದಿಗ್ಗನೆದ್ದು ಅತ್ತ ಧಾವಿಸಿದಳು.
ಅಜ್ಜಿ ಎರಡು ಕಾಲನ್ನು ಮಂಚದ ಕೆಳಗೆ ಇಳಿಬಿಟ್ಟು, ಎರಡು ಕೈಯನ್ನು ಬೆನ್ನ ಹಿಂದೆ ಊರಿ ಆಧಾರವಾಗಿಟ್ಟುಕೊಂಡು ಕುಳಿತಿದ್ದರು.
‘‘ಏನಜ್ಜೀ, ನಿದ್ದೆ ಬರುತ್ತಿಲ್ಲವಾ...?’’
ಅಜ್ಜಿ ಮತ್ತೆ ಕೆಮ್ಮಿದರು... ಕೆಮ್ಮು ಜಾಸ್ತಿಯಾಗತೊಡಗಿತು... ಐಸು ಅಜ್ಜಿಯ ಭುಜ ಹಿಡಿದು ಎದೆ ನೇವರಿಸತೊಡಗಿದಳು. ಬಿಸಿ ನೀರು ಕುಡಿಸಿದಳು. ಅಜ್ಜಿಯ ಕೆಮ್ಮು ಕಡಿಮೆಯಾಗಲಿಲ್ಲ. ಹಿಟ್ಟಿನಂತೆ ಉಂಡೆ ಉಂಡೆಯಾಗಿ ಕಫ ಹೊರಬರತೊಡ ಗಿತು. ಐಸು ಬಾಯಿಗೆ ಬೆರಳು ಹಾಕಿ ಕಫವನ್ನೆಲ್ಲ ಹೊರತೆಗೆದು ಉಗುಳುದಾನಿಗೆ ಹಾಕಿದಳು. ಅದಾಗಲೇ ತಾಹಿರಾ ಬಂದು ಅಜ್ಜಿಯ ಪಕ್ಕ ನಿಂತಿದ್ದಳು.
‘‘ಏನಾಯಿತು ಮಾಮಿ ಅಜ್ಜಿಗೆ’’ ಅವಳ ಮಾತಿನ ತುಂಬಾ ಗಾಬರಿಯಿತ್ತು.
‘‘ಏನಿಲ್ಲ. ಶೀತ ಆಗಿದೆಯಲ್ಲ ಅದಕ್ಕೆ ಕೆಮ್ಮು. ಕಫ ತುಂಬಾ ಇದೆ. ಓ ಅಲ್ಲಿ ಅಮೃತಾಂಜನ ಇದೆ ತಂದು ಸ್ವಲ್ಪಬೆನ್ನಿಗೆ ಸವರು’’ ಎಂದರು.
ತಾಹಿರಾ ಅಜ್ಜಿಯ ಬೆನ್ನಿಗೆ, ಎದೆಗೆ ಅಮೃಂತಾಜನ ಸವರಿದಳು. ಕೆಮ್ಮು ಸ್ವಲ್ಪ ಸ್ವಲ್ಪಕಮ್ಮಿಯಾಗುತ್ತಾ ಬಂತು. ಅಜ್ಜಿ ತುಂಬಾ ಆಯಾಸವಾದಂತಿದ್ದರು, ಏದುಸಿರು ಬಿಡುತ್ತಿದ್ದರು.
‘‘ಅಜ್ಜೀ...’’ ಐಸು ಕರೆದಳು.
‘‘ಸ್ವಲ್ಪ ಶುಂಠಿ, ಕರಿಮೆಣಸು ಕಷಾಯ ತರಲಾ?’’ ಅಜ್ಜಿ ತಲೆ ಎತ್ತಿ ಅವಳನ್ನೇ ನೋಡಿದರು. ಆ ನೋಟದಲ್ಲಿ ಏನಾದರೂ ಆಗಬಹುದು ಬೇಗ ಕೊಡು ಎಂಬ ಬೇಡಿಕೆ ಇತ್ತು. ಅಜ್ಜಿಯ ಕಣ್ಣು, ಮನಸು, ಮುಖದ ಭಾಷೆಗಳೆಲ್ಲ ಐಸುಳಿಗೆ ಮಾತ್ರ ಅರ್ಥವಾಗುವುದು. ಅವಳು ತಾಹಿರಾಳಿಗೆ ಅಜ್ಜಿಯನ್ನು ನೋಡಿಕೊಳ್ಳುವಂತೆ ಹೇಳಿ ಅಡುಗೆ ಮನೆಗೆ ನಡೆದಳು.
ಅಜ್ಜಿ ತಲೆ ತಗ್ಗಿಸಿ ಕುಳಿತು ಬಹಳ ಪ್ರಯಾಸದಿಂದ ಉಸಿ ರೆಳೆದು ಬಿಡುತ್ತಿದ್ದರು. ಅವರ ಎದೆಗೂಡಿನಿಂದ ಗುಂಯ್... ಗುಂಯ್... ಸ್ವರ ಹೊಮ್ಮುತ್ತಿತ್ತು. ತಾಹಿರಾಳಿಗೆ ಆತಂಕವಾಯಿತು. ಅವಳು ಅಜ್ಜಿಯ ಮುಖವನ್ನು ಎತ್ತಿ ಹಿಡಿದು ತನ್ನತ್ತ ತಿರುಗಿಸಿಕೊಂಡು ‘ಅಜ್ಜೀ’ ಎಂದು ಕರೆದಳು. ಅಜ್ಜಿಯ ಕಣ್ಣುಗಳು ‘ಏನು’ ಎಂಬಂತೆ ಅವಳನ್ನೇ ನೋಡಿತು. ತಾಹಿರಾ ಅವರ ಮುಖವನ್ನು ತನ್ನ ಮುಖಕ್ಕೆ ಒತ್ತಿ ಹಿಡಿದುಕೊಂಡು ‘‘ಅಜ್ಜಿ... ಏನಾಗ್ತಿದೆ ನನ್ನ ಅಜ್ಜಿಗೆ’’ ಕೇಳಿದಳು. ಅಜ್ಜಿ ಮಾತನಾಡಲಿಲ್ಲ.

‘‘ಅಜ್ಜೀ... ಅಜ್ಜೀ... ಅಜ್ಜೀ...’’ ಅವಳ ಕಣ್ಣಲ್ಲಿ ನೀರು ಜಿನುಗಿತು. ಕ್ಷಣ ಮಾತ್ರದಲ್ಲಿ ಬೆನ್ನ ಹಿಂದೆ ಊರಿದ್ದ ಅಜ್ಜಿಯ ಕೈ ಅವಳ ಕೊರಳಿಗೆ ಮಾಲೆಯಾಗಿತ್ತು. ತಾಹಿರಾ ಪುಟ್ಟ ಮಗುವಿನಂತೆ ಅವರ ತೋಳ ಬಂದಿಯಾಗಿ ಬಿಕ್ಕುತ್ತಿದ್ದಳು. ಐಸು ಕೋಣೆಗೆ ಬಂದಾಗ ಎರಡು ಜೀವಗಳು ಬೆಸೆದುಕೊಂಡು ಲೋಕವನ್ನೇ ಮರೆತಂತೆ ಕುಳಿತಿತ್ತು. ಐಸು ಕಷಾಯವನ್ನು ಅಲ್ಲೇ ಇಟ್ಟು ಅವರನ್ನೇ ನೋಡುತ್ತಾ ನಿಂತುಬಿಟ್ಟಳು.
‘‘ಸಂಬಂಧಗಳು ಎಷ್ಟು ಪವಿತ್ರವಾದದ್ದು. ಅದೆಂದೂ ಮುರಿದು ಹೋಗುವುದಿಲ್ಲ, ಹೋಗಬಾರದು’’ ಅವಳಿಗರಿವಿಲ್ಲದಂತೆಯೇ ನುಡಿದವಳ ದೇಹದಿಂದ ನಿಟ್ಟುಸಿರೊಂದು ಹೊರಬಿತ್ತು.

‘‘ಅಜ್ಜೀ...’’ ಐಸುಳ ಕರೆಗೆ ಎಚ್ಚೆತ್ತ ತಾಹಿರಾ, ಒದ್ದೆಯಾಗಿದ್ದ ಅಜ್ಜಿಯ ಕೆನ್ನೆಯನ್ನು ತನ್ನ ಅಂಗೈಯಿಂದ ಒರೆಸಿದವಳು ಅಜ್ಜಿಯ ಕೆನ್ನೆಗೆ ಮುತ್ತಿಕ್ಕಿದಳು. ಅವಳ ಮುತ್ತಿನಿಂದ ಪುಳಕಿತರಾದ ಅಜ್ಜಿ ಮೊಮ್ಮಗಳ ಮುಖವನ್ನೇ ದಿಟ್ಟಿಸಿದರು. ‘‘ಅಜ್ಜೀ...’’ ಮತ್ತೆ ಕರೆದಳು ಐಸು. ಅವಳ ಮನಸು ಇಂದು ಬಹಳ ಹಗುರವಾಗಿತ್ತು. ಖುಷಿಯಿಂದ ಪುಳಕಿತಗೊಂಡಿತ್ತು.
‘‘ಅಜ್ಜೀ, ಇನ್ನು ಕಷಾಯದ ಅಗತ್ಯ ಇಲ್ಲಾಂತ ಕಾಣುತ್ತೆ ಅಲ್ಲವಾ?’’ ಮುಗುಳು ನಗುತ್ತಾ ಕೇಳಿದಳು ಐಸು.
‘‘ಇಲ್ಲಿ ಕೊಡಿ ಮಾಮಿ, ನಾನು ಕುಡಿಸುತ್ತೇನೆ ಅಜ್ಜಿಗೆ’’ ಎಂದು ಲೋಟವನ್ನು ತೆಗೆದುಕೊಂಡು ಅಜ್ಜಿಯ ತುಟಿಗಿರಿಸಿದಳು ತಾಹಿರಾ. ಅಜ್ಜಿ ಅದನ್ನು ಹಾಲು ಕುಡಿದಂತೆ ಒಂದೇ ಗುಟುಕಿಗೆ ಕುಡಿದುಬಿಟ್ಟರು.
‘‘ಅಜ್ಜಿ, ಇನ್ನು ಮಲಗಿ, ಗಂಟೆ 12 ಆಯಿತು’’ ಐಸು ಅಜ್ಜಿಯನ್ನು ಮಲಗಿಸಿದಳು. ಅಜ್ಜಿ ಗೆಲುವಾಗಿರುವುದನ್ನು ಕಂಡು ಅವಳಿಗೆ ಸಮಾಧಾನವಾಗಿತ್ತು. ಅಜ್ಜಿಯ ಕಣ್ಣುಗಳು ಈಗಲೂ ಮೊಮ್ಮಗಳನ್ನು ನೋಡಿ ಸಂಭ್ರಮ ಪಡುತ್ತಿತ್ತು.
ಐಸು ತಾಹಿರಾಳನ್ನು ಕರೆದುಕೊಂಡು ಕೋಣೆಯ ಹೊರಗೆ ಬಂದು ಬಾಗಿಲೆಳೆದಳು. ತಮ್ಮ ಕೋಣೆಗೆ ಬಂದ ಇಬ್ಬರನ್ನೂ ಮೌನ ಆವರಿಸಿಬಿಟ್ಟಿತ್ತು.
‘‘ತಾಹಿರಾ, ನೀನಿಲ್ಲಿ ಮಲಗಮ್ಮಾ, ನಾನಲ್ಲಿ ಹೊರಗೆ ಮಲಗುತ್ತೇನೆ. ಇಲ್ಲಿ ಮಲಗಿದರೆ ಅಜ್ಜಿ ಕರೆದರೆ ಕೇಳುವುದಿಲ್ಲ’’
‘‘ಬೇಡ ಮಾಮಿ, ನಾನೂ ನಿಮ್ಮ ಜೊತೆ ಮಲಗುತ್ತೇನೆ’’
‘‘ಹೂಂ... ಮಲಗು’’ ಎಂದವಳೇ ಐಸು ತಾಹಿರಾಳ ಪಕ್ಕದಲ್ಲೇ ಮಂಚದಲ್ಲಿ ಬಿದ್ದುಕೊಂಡಳು. ಅವಳಿಗೆ ಈಗ ಮಾತು ಬೇಡವಾಗಿತ್ತು. ಅವಳ ಹೃದಯದಲ್ಲಿ ಈಗ ಅಗ್ನಿ ಪರ್ವತವೊಂದು ಉರಿಯುತ್ತಿತ್ತು. ಎಷ್ಟು ನಂದಿಸಲು ಪ್ರಯತ್ನಿಸಿದರೂ ಅದು ಮತ್ತೆ ಮತ್ತೆ ಭಗ್ಗನೆ ಉರಿದು ಅವಳ ನೆಮ್ಮದಿಯನ್ನು ಸುಟ್ಟು ಬೂದಿ ಮಾಡುತ್ತಿತ್ತು.
‘‘ಮಾಮೀ...’’
‘‘................’’
‘ಮಾಮೀ...’’ ತಾಹಿರಾ ಮತ್ತೆ ಕರೆದಳು.

ಉತ್ತರವಿಲ್ಲ. ಮಾಮಿಗೆ ನಿದ್ದೆ ಬಂದಿರಬೇಕೆಂದು ಅವಳು ಸುಮ್ಮನಾದಳು. ಅವಳಿಗೆ ನಿದ್ದೆ ಬರಲಿಲ್ಲ. ಅಜ್ಜಿ ಇಂದು ಅವಳ ನಿದ್ದೆಯನ್ನು ಹಾಳು ಮಾಡಿ ಬಿಟ್ಟಿದ್ದರು.
‘‘ತಾಹಿರಾ...’’
ತಾಹಿರಾ ಮಲಗಿದಲ್ಲಿಂದಲೇ ಕತ್ತೆತ್ತಿ ಐಸುಳನ್ನು ನೋಡಿದಳು.
‘‘ಮಾಮಿ ನಿಮಗಿನ್ನೂ ನಿದ್ದೆ ಬರಲಿಲ್ಲವಾ?’’
‘‘ತಾಹಿರಾ, ನಾನೊಂದು ಮಾತು ಹೇಳುತ್ತೇನೆ. ಯಾಕೆ, ಏನು ಎಂದು ನೀನು ಯಾವ ಪ್ರಶ್ನೆಯನ್ನು ಕೇಳಬಾರದು, ಹೇಳಲಾ?’’

ತಾಹಿರಾ ಎದ್ದು ಕುಳಿತವಳು ‘‘ಹೇಳಿ ಮಾಮಿ, ಏನು ಮಾಮಿ ಅದು. ನಾನು ಏನೂ ಕೇಳುವುದಿಲ್ಲ, ಹೇಳಿ ಮಾಮಿ’’ ಅವಳ ಕಣ್ಣಲ್ಲಿ ಕುತೂಹಲವಿತ್ತು. ಕೆಲಹೊತ್ತು ಐಸು ಮಾತನಾಡಲಿಲ್ಲ.
‘‘ನೀನು ಅಜ್ಜಿಯ ಹತ್ತಿರ ನಿನ್ನ ತಾಯಿಯ ಬಗ್ಗೆ ಏನೂ ಕೇಳಬಾರದು, ಏನೂ ಹೇಳಬಾರದು. ತಪ್ಪಿಯೂ ಅವಳ ಹೆಸರನ್ನೂ ಹೇಳಬಾರದು’’
‘‘ಯಾಕೆ ಮಾಮಿ?’’
‘‘ನಿನ್ನಲ್ಲಿ ಹೇಳಿದ್ದಲ್ಲವಾ... ಪ್ರಶ್ನೆ ಕೇಳಬಾರದೂಂತ’’
ತಾಹಿರಾ ತಪ್ಪಿಬಂದ ಮಾತಿಗಾಗಿ ಬಾಯಿಯ ಮೇಲೆ ಕೈಯಿಟ್ಟುಕೊಂಡಳು. ಮತ್ತೆ ಕೋಣೆ ತುಂಬಾ ಮೌನ ಆವರಿಸಿತು.

                                                                                                                     (ರವಿವಾರದ ಸಂಚಿಕೆಗೆ)              

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News