ಸಿನೆಮಾ ನಿರ್ಮಾಣ ಹುಚ್ಚಿನಲ್ಲಿ ಹಣಕ್ಕಾಗಿ ಸಂಬಂಧಿಕ ಮಹಿಳೆಯನ್ನು ಕೊಂದ ಭೂಪ!

Update: 2016-07-28 12:01 GMT

ಆಲತ್ತೂರ್,ಜುಲೈ 28: ಗ್ರಹಿಣಿಯನ್ನು ಉಸಿರುಗಟ್ಟಿಸಿ ಕೊಂದ ಬಳಿಕ ಮೃತದೇಹವನ್ನು ಗೋಣಿಗೆ ತುಂಬಿ ಕಸದ ರಾಶಿಗೆ ಎಸೆದ ಪ್ರಕರಣದಲ್ಲಿ ಗ್ರಹಿಣಿಯ ಸಂಬಂಧಿಕ ಹಾಗೂ ಚಿತ್ರಕಥೆ ರಚನಕಾರನಾದ ಚೆಂತಾಮರ ಎಂಬಾತನನ್ನು ಆಲತ್ತೂರ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಚಿತಲಿ ಚೆಂಙಾಡ್ ಶಿವರಾಮನ್‌ರ ಪತ್ನಿ ಪ್ರೀತಿ(39) ಎಂಬವರ ಕೊಲೆ ಆರೋಪದಲ್ಲಿ ಚೆಂತಾಮರನನ್ನು ಬಂಧಿಸಲಾಗಿದ್ದು ಅವನ ವರ್ತನೆಯಲ್ಲಿ ಆರಂಭದಿಂದಲೇ ಪೊಲೀಸರಿಗೆ ಸಂದೇಹವಿತ್ತು ಎನ್ನಲಾಗಿದೆ.ಮೊದಲೇ ಆತನನ್ನು ಪೊಲೀಸರು ಪ್ರಶ್ನಿಸಿದ್ದರೂ ಪೊಲೀಸರನ್ನು ದಾರಿ ತಪ್ಪಿಸುವಲ್ಲಿ ಆತ ಯಶಸ್ವಿಯಾಗಿದ್ದ. ಅಂತಿಮವಾಗಿ ವೈಜ್ಞಾನಿಕ ಪುರಾವೆಗಳ ಆಧಾರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದರು ಎಂದು ವರದಿಯಾಗಿದೆ.
   ಸಿನೆಮಾ ನಿರ್ಮಿಸಲು ಹಣಕ್ಕಾಗಿ ಚೆಂತಾಮರ ಗ್ರಹಿಣಿಯನ್ನು ಕೊಲೆಗೈದನೆಂದು ಪೊಲೀಸರು ಹೇಳಿದ್ದಾರೆ. ಹಲವುಬಾರಿ ಚೆಂತಾಮರನು ಸಂಬಂಧಿಕಳೂ ಆದ ಪ್ರೀತಿಯವರಿಂದ ಸಾಲ ಪಡೆದಿದ್ದ. ಸಾಲಪಾವತಿಸುವಂತೆ ಪ್ರೀತಿ ಅವನಲ್ಲಿ ಒತ್ತಾಯಿಸಿದ್ದು ಚೆಂತಾಮರನನ್ನು ಕೋಪಗೊಳ್ಳುವಂತೆ ಮಾಡಿತ್ತು. ಜೊತೆಗೆ ಮತ್ತಷ್ಟು ಹಣ ಲಪಟಾಯಿಸಬೇಕೆಂಬ ಉದ್ದೇಶದಿಂದ ಪ್ರೀತಿಯನ್ನು ಕೊಲೆಗೈದಿದ್ದಾನೆ. ಪ್ರೀತಿಯನ್ನು ಅತ್ಯಾಚಾರವೆಸಗಿದ್ದಾನೆಯೇ ಎಂದು ಪೊಲೀಸರ ತನಿಖೆ ನಡೆಯುತ್ತಿದ್ದು ಶವ ಪರೀಕ್ಷೆಯ ವರದಿ ಬಂದ ಬಳಿಕ ಇದು ಬಹಿರಂಗವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಜುಲೈ ಹದಿನಾಲ್ಕರಂದು ಚೆಂಙಾಡ್‌ನ ಮನೆಯಲ್ಲಿ ಪುತ್ರಿ ಸ್ಮ್ರತಿಯೊಂದಿಗೆ ವಾಸವಿದ್ದ ಪ್ರೀತಿ ನಿಗೂಢವಾಗಿ ಕಾಣೆಯಾಗಿದ್ದರು. ಪ್ರೀತಿಯ ಪತಿ ಶಿವರಾಮನ್ ಗಲ್ಫ್ ಉದ್ಯೋಗಿಯಾಗಿದ್ದಾರೆ.

ಶಾಲೆ ಬಿಟ್ಟು ಸ್ಮ್ರತಿ ಮನೆಗೆ ಬಂದಾಗ ಅಮ್ಮ ಕಾಣೆಯಾಗಿದ್ದು ಅವಳ ಗಮನಕ್ಕೆ ಬಂದಿತ್ತು. ಕೂಡಲೆ ಅವಳು ಸಂಬಂಧಿಕರಿಗೂ ಪೊಲೀಸರಿಗೂ ದೂರು ನೀಡಿದ್ದಳು. ನಂತರ ತನಿಖೆ ನಡೆಸಿದ ಪೊಲೀಸರು ಪೊಳ್ಳಾಚ್ಚಿ ಮೀನಾಕ್ಷಿಪುರಂ ರಸ್ತೆಯ ವಳಂದಾಯಿ ಮರತ್ ಎಂಬಲ್ಲಿ ಕಸದ ರಾಶಿಯಲ್ಲಿ ಗೋಣಿಯಲ್ಲಿ ಕಟ್ಟಿಹಾಕಿದ ಸ್ಥಿತಿಯಲ್ಲಿ ಪ್ರೀತಿಯ ಮೃತದೇಹವನ್ನು ಜುಲೈ 26 ತಾರೀಕಿನಂದು ಪತ್ತೆಹಚ್ಚಿದ್ದರು. ಸಿನೆಮಾ, ಡಾಕ್ಯುಮೆಂಟರಿ ಚಿತ್ರಕಥೆ ರಚಿಸುವ ಚೆಂತಾಮರ ಚಿತ್ರಕತೆ ಬರೆದ ಮೂರು ಚಿತ್ರಗಳು ಈಗಾಗಲೇ ನಿರ್ಮಾಣ ಹಂತದಲ್ಲಿವೆ. ಇದರಲ್ಲಿ ಒಂದು ಪ್ರಸಿದ್ಧ ನಿರ್ದೇಶಕರಿಗಾಗಿ ಆತ ಚಿತ್ರಕತೆ ರಚಿಸಿದ ಸಿನೆಮಾವೂ ಒಳಗೊಂಡಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಸಿನೆಮಾ ವ್ಯಾಮೋಹ ಅವನನ್ನು ಕೊಲೆಕೃತ್ಯಕ್ಕೆ ಪ್ರೇರೆಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ.

   ಪತ್ನಿಮತ್ತು ಒಂದು ಮಗು ಇರುವ ಚೆಂತಾಮರ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ಊರಿಗೆ ಮರಳಿದ ಬಳಿಕ ಕೃಷಿಮತ್ತು ಚಿತ್ರಕಥೆ ರಚನೆಯ ಕೆಲಸವನ್ನು ಮಾಡುತ್ತಿದ್ದ ಎನ್ನಲಾಗಿದೆ. ಘಟನೆಯ ದಿವಸ ಬೆಳಗ್ಗೆ ಹನ್ನೊಂದು ಗಂಟೆಗೆ ಪ್ರೀತಿಯ ಮನೆಗೆ ಹೋದ ಚೆಂತಾಮರ ಅಡುಗೆ ಕೋಣೆಗೆ ಹೋಗಿ ಪ್ರೀತಿಯನ್ನು ಹಿಂಬಂದಿಯಿಂದ ಆಕ್ರಮಿಸಿದ್ದ. ಗೋಡೆಗೆ ತಲೆ ಬಡಿದು ಕೆಳಗುರುಳಿ ಬಿದ್ದ ಪ್ರೀತಿಯನ್ನುಉಸಿರುಗಟ್ಟಿಸಿ ಸಾಯಿಸಿದ್ದ. ನಂತರ ಪ್ರೀತಿಯ ಕೈಕಾಲುಗಳನ್ನು ಕಟ್ಟಿ ಮೃತದೇಹವನ್ನು ಗೋಣಿಯೊಳಗೆ ತುಂಬಿ ತಾನು ತಂದಿದ್ದ ಸ್ಕೂಟರ್‌ನ ಎದುರುಗಡೆ ಇಟ್ಟುಕೊಂಡು ಕಸದ ರಾಶಿ ಇದ್ದ ಸ್ಥಳದಲ್ಲಿಎಸೆದು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ಕದ್ದಿದ್ದ ಆತ ಅದನ್ನು ಮನೆಯ ಬಳಿ ತೆಂಗಿನ ಬುಡದಲ್ಲಿ ಹೂತಿರಿಸಿದ್ದ ಹಾಗೂ ಅದರಲ್ಲಿ ಎರಡು ಬಳೆಗಳನ್ನು ಪಾಲಕ್ಕಾಡ್‌ಜ್ಯುವೆಲ್ಲರಿಯಲ್ಲಿ ಮಾರಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
  ನೆರೆಮನೆಯವರು ಪ್ರೀತಿಯ ಮನೆಯ ವರಾಂಡದಲ್ಲಿ ಒಂದು ಸ್ಕೂಟರ್ ಇತ್ತು ಎಂದು ಸಾಕ್ಷಿ ನುಡಿದಿದ್ದು ಕೊಲೆಗಾರನ ಪತ್ತೆಗೆ ಹೆಚ್ಚು ಸಹಕಾರಿಯಾಗಿತ್ತು. ಸ್ಕೂಟರ್‌ಗೆ ಅಂಟಿದ್ದ ರಕ್ತದ ಕಲೆಗಳನ್ನು ಸರ್ವಿಸ್ ಸ್ಟೇಶನ್‌ವೊಂದರಲ್ಲಿ ಚೆಂತಾಮರ ತೊಳೆಸಿದ್ದಾನೆ ಎಂಬ ಮಾಹಿತಿಯೂ ಪೊಲೀಸರಿಗೆ ತಿಳಿದು ಬಂದಿತ್ತು. ಘಟನೆ ನಡೆದ ಸಮಯದಲ್ಲಿ ತಾನು ಊರಲ್ಲೇ ಇರಲಿಲ್ಲ ಎಂದು ಹೇಳಿ ಪೊಲೀಸರನ್ನುಆತ ಮೊದಲು ದಾರಿತಪ್ಪಿಸಲು ಯಶಸ್ವಿಯಾಗಿದ್ದರೂ ಸಾಕ್ಷ್ಯಗಳು ಅವನ ವಿರುದ್ಧವಿದ್ದವು. ಜೊತೆಗೆ ಸಂಬಂಧಿಕಳಾದ ಮಹಿಳೆಯೊಬ್ಬರಲ್ಲಿ ತಾನೂ ಊರಲ್ಲೇ ಇಲ್ಲ ಎಂದು ಸಾಕ್ಷಿ ನುಡಿಯಲು ಹೇಳಿದ್ದ. ಆದರೆ ಆ ಮಹಿಳೆ ಸತ್ಯವನ್ನೆ ಹೇಳಿದ್ದಳು ಹಾಗೂ ಚೆಕ್‌ಪೋಸ್ಟ್‌ನಲ್ಲಿದ್ದ ಸಿಸಿಟಿವಿಯಲ್ಲಿ ಆತನ ಸ್ಕೂಟರಿನ ಚಿತ್ರಗಳು ಮೂಡಿದ್ದವು ಇವೆಲ್ಲ ಸಾಕ್ಷ್ಯಗಳು ಚಾಣಾಕ್ಷ ಕೊಲೆಗಡುಕ ಚೆಂತಾಮರನನ್ನು ಸೆರೆಹಿಡಿಯಲು ನೆರವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News