ದೇಶವ್ಯಾಪಿ ಮಾದಕ ವಸ್ತುಗಳ ಕಬಂಧ ಬಾಹು
ರಾಜ್ಯ ಸರಕಾರ ಇದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದಿದ್ದರೂ, ಪಂಜಾಬ್‌ನಲ್ಲಿ ಮಾದಕ ವಸ್ತುಗಳ ದಂಧೆ ವ್ಯಾಪಕವಾಗಿ ಹಬ್ಬಿದೆ ಎನ್ನುವುದು ಜನಜನಿತ. ಆದರೆ ಇತ್ತೀಚೆಗೆ ಬಹಿರಂಗವಾದ ಸರಕಾರಿ ಅಂಕಿ ಅಂಶಗಳಿಂದ ಈ ಸಮಸ್ಯೆ ಕೇವಲ ಉತ್ತರ ರಾಜ್ಯಗಳಿಗಷ್ಟೇ ಸೀಮಿತವಲ್ಲ ಎನ್ನುವುದು ಸ್ಪಷ್ಟವಾಗಿದೆ.
ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಕಳೆದ ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಿದ ಅಂಕಿ ಅಂಶಗಳು, ದೇಶದಲ್ಲಿ ಮಾದಕ ವ್ಯಸನ ಹಾಗೂ ಕುಡಿತದ ಚಟದಿಂದ ಪ್ರತಿದಿನ ಹತ್ತು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆತಂಕಕಾರಿ ಅಂಶವನ್ನು ಬಹಿರಂಗಪಡಿಸಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಈ ಅಂಕಿ ಅಂಶಗಳನ್ನು ನೀಡಿದ್ದು, ಮಾದಕವಸ್ತು ಸಂಬಂಧಿ ಆತ್ಮಹತ್ಯೆಗಳಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು ಹಾಗೂ ಕೇರಳ ಅಗ್ರಸ್ಥಾನಿಗಳಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಮಾಹಿತಿಯ ಪ್ರಕಾರ, 2014ರಲ್ಲಿ ದೇಶದಲ್ಲಿ ಒಟ್ಟು 3,647 ಮಾದಕ ವಸ್ತು ಸಂಬಂಧಿ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮಹಾರಾಷ್ಟ್ರದಿಂದ ಗರಿಷ್ಠ ಎಂದರೆ 1,372 ಪ್ರಕರಣಗಳು ವರದಿಯಾಗಿವೆ. ತಮಿಳುನಾಡಿನಲ್ಲಿ 552 ಹಾಗೂ ಕೇರಳದಲ್ಲಿ 475 ಇಂಥ ಪ್ರಕರಣಗಳು ಸಂಭವಿಸಿವೆ.
ಪಂಜಾಬ್‌ನಿಂದ ಇಂಥ ಪ್ರಕರಣಗಳು ವರದಿಯಾಗಿರುವುದು ಕೇವಲ 38 ಮಾತ್ರ. ಆದಾಗ್ಯೂ ರಾಜ್ಯದಲ್ಲಿ ಸಂಭವಿಸಿದ ಮಾದಕ ವಸ್ತು ಸಂಬಂಧಿ ಆತ್ಮಹತ್ಯೆ ಪ್ರಕರಣಗಳನ್ನು ರಾಜ್ಯದ ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಕಂಡುಬರುವ ಫಲಿತಾಂಶದಂತೆ ಈ ರಾಜ್ಯದಲ್ಲಿ ಮಾದಕ ವಸ್ತು ಸಂಬಂಧಿ ಆತ್ಮಹತ್ಯೆಗಳು ರಾಷ್ಟ್ರೀಯ ಸರಾಸರಿಗಿಂತ ತೀರಾ ಕಡಿಮೆ.
ರಾಜ್ಯಗಳ ಸ್ಥಾನ
ಪಂಜಾಬ್‌ನಲ್ಲಿ 2011ರ ಜನಗಣತಿಯ ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬರುವಂತೆ 10 ಲಕ್ಷ ಮಂದಿಗೆ 1.4 ಮಂದಿ ಮಾದಕ ವ್ಯಸನದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ರಾಷ್ಟ್ರೀಯ ಸರಾಸರಿ, ಪ್ರತಿ ಹತ್ತು ಲಕ್ಷ ಮಂದಿಗೆ ಮೂವರು ಈ ವ್ಯಸನದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇರಳದಲ್ಲಿ ಮಾದಕ ವಸ್ತು ಸಂಬಂಧಿ ಆತ್ಮಹತ್ಯೆ ಪ್ರಮಾಣ ಪಂಜಾಬ್‌ನ ಹತ್ತು ಪಟ್ಟು.
ಇದೇ ವೇಳೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಮೂರು ಲಕ್ಷ ಜನಸಂಖ್ಯೆಯಲ್ಲೇ 37 ಮಂದಿ ಮಾದಕ ವಸ್ತು ಸಂಬಂಧಿ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಎಲ್ಲ ದಾಖಲೆಗಳನ್ನೂ ಮೀರುತ್ತದೆ.
ಮಹಾರಾಷ್ಟ್ರದಲ್ಲಿ ಅತ್ಯಧಿಕ ಸಂಖ್ಯೆಯ ಮಾದಕವಸ್ತು ಸಂಬಂಧಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದರೂ, ಒಟ್ಟು ಜನಸಂಖ್ಯೆಯಲ್ಲಿ ಮಾದಕವಸ್ತು ಸಂಬಂಧಿ ಆತ್ಮಹತ್ಯೆ ಮಾಡಿಕೊಳ್ಳುವ ಜನರ ಪ್ರಮಾಣವನ್ನು ಹೋಲಿಸಿದರೆ, ಈ ದರ ಕೇರಳದಲ್ಲಿ ಅತ್ಯಧಿಕ. ಅಂತೆಯೇ 12 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂಥ ಆತ್ಮಹತ್ಯೆ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಇದರಲ್ಲಿ ತೆಲಂಗಾಣ, ಹರ್ಯಾಣ, ಮಿಜೋರಾಂ ಹಾಗೂ ತ್ರಿಪುರಾ ಸೇರುತ್ತದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರತಿ 10 ಲಕ್ಷ ಮಂದಿಯ ಪೈಕಿ ಇಬ್ಬರು ಮಾತ್ರ ಈ ದಂಧೆಗೆ ವಾರ್ಷಿಕ ಬಲಿಯಾಗುತ್ತಿದ್ದಾರೆ.
ಸಮಗ್ರ ಚಿತ್ರಣ ಅಲ್ಲ
ಇಂತಹ ಆತಂಕದ ನಡುವೆಯೂ ನಿರೀಕ್ಷೆಯ ಬೆಳ್ಳಿರೇಖೆಯೊಂದಿದೆ. 2014ರಲ್ಲಿ ಮಾದಕವಸ್ತು ಸಂಬಂಧಿ ಆತ್ಮಹತ್ಯೆಗಳು ದೊಡ್ಡ ಪ್ರಮಾಣದಲ್ಲಿ ಇದ್ದರೂ, 2012 ಮತ್ತು 2013ರ ಸಾಲಿಗೆ ಹೋಲಿಸಿದರೆ ಈ ಪ್ರಮಾಣ ಕಡಿಮೆಯಾಗಿದೆ. 2012ರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಇಂಥ ಪ್ರಕರಣಗಳು ವರದಿಯಾಗಿದ್ದರೆ, ಮರು ವರ್ಷ ಇದು ಗರಿಷ್ಠ ಪ್ರಮಾಣ ಅಂದರೆ 4,500ದ ಮಟ್ಟ ತಲುಪಿತು. 2004 ರಿಂದ 2013ರ ವರೆಗಿನ ದಶಕದಲ್ಲಿ ದೇಶದಲ್ಲಿ 25,000ಕ್ಕೂ ಹೆಚ್ಚು ಮಂದಿ ಮಾದಕ ವಸ್ತು ಸಂಬಂಧಿ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಈ ಮಾದಕ ವ್ಯಸನದಿಂದಾಗಿ ವಿಶ್ವಾದ್ಯಂತ 2014ರಲ್ಲಿ ಕನಿಷ್ಠ ಎರಡು ಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ.
ಆದಾಗ್ಯೂ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಅಂಕಿ ಅಂಶಗಳು, ದೇಶದಲ್ಲಿ ಎಷ್ಟರಮಟ್ಟಿಗೆ ಈ ದಂಧೆ ಹರಡಿದೆ ಎನ್ನುವುದನ್ನು ತಿಳಿಸುವುದಿಲ್ಲ. ಇದು ಕೇವಲ ಮಾದಕವಸ್ತು ಸಂಬಂಧಿ ಕಾರಣಗಳಿಂದ ಆಗಿರುವ ಆತ್ಮಹತ್ಯೆ ಪ್ರಕರಣಗಳನ್ನಷ್ಟೇ ಕಲೆ ಹಾಕುತ್ತದೆ. ಅದು ಕೂಡಾ ಪೊಲೀಸರಿಗೆ ದೂರು ನೀಡಲಾದ, ಮಾದಕ ವ್ಯಸನ ಅಥವಾ ಕುಡಿತದ ಚಟದಿಂದಲೇ ಆತ್ಮಹತ್ಯೆ ಮಾಡಿಕೊಂಡದ್ದು ಎಂದು ನಿರೂಪಿತವಾದ ಪ್ರಕರಣಗಳಷ್ಟೇ ಇದರಲ್ಲಿ ಸೇರುತ್ತವೆ. ಆದರೆ ವಾಸ್ತವವಾಗಿ ಇಂಥ ವ್ಯಸನಕ್ಕೆ ಜೀವ ಕಳೆದುಕೊಳ್ಳುವವರ ಸಂಖ್ಯೆ, ಇದಕ್ಕಿಂತಲೂ ತೀರಾ ಅಧಿಕ. ಅಂತೆಯೇ ಮಾದಕವಸ್ತು ಬಳಸುವವರ ಸಂಖ್ಯೆ ಇದರ ಹಲವು ಪಟ್ಟು ಇರಬಹುದು.
ಇದು ಪಂಜಾಬ್‌ನಲ್ಲಿ ಮಾದಕ ವಸ್ತುಗಳ ಬಳಕೆಯ ತೀವ್ರತೆಯನ್ನು ಕೂಡಾ ಗಮನಕ್ಕೆ ತೆಗೆದುಕೊಂಡಿಲ್ಲ. ಪಂಜಾಬ್ ಸರಕಾರ ಮಾತ್ರ ಇದನ್ನು ನಿರಾಕರಿಸುತ್ತಲೇ ಬಂದಿದ್ದು, ಪರಿಸ್ಥಿತಿಯ ತೀವ್ರತೆಯನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಲೇ ಇದೆ. ಇತ್ತೀಚಿನ ವೀಡಿಯೊ ಪ್ರಚಾರವೊಂದರಲ್ಲಿ ಶಿರೋಮಣಿ ಅಕಾಲಿದಳ- ಬಿಜೆಪಿ ಮೈತ್ರಿಕೂಟ, ಹಾಕಿ ತಂಡದ ನಾಯಕನಿಂದ ಇಂಥ ದಂಧೆ ಇಲ್ಲವೇ ಇಲ್ಲ ಎಂದು ಹೇಳಿಕೆ ಕೊಡಿಸುವ ಮೂಲಕ, ಈ ಬಗೆಗೆ ಎದ್ದಿದ್ದ ಆತಂಕವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದೆ.
ಅಧಿಕೃತ ಸಮೀಕ್ಷೆಗಳ ಪ್ರಕಾರ, ರಾಜ್ಯದಲ್ಲಿ 10 ಲಕ್ಷ ಮಂದಿ ಮಾದಕವಸ್ತು ಬಳಕೆ ಮಾಡುತ್ತಿದ್ದಾರೆ ಎಂಬ ಅಂಕಿ ಅಂಶ ಬಹಿರಂಗವಾದ ಬಳಿಕವೂ, ಮಾದಕ ವಸ್ತುಗಳ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ವೈಜ್ಞಾನಿಕ ಕಾರ್ಯಕ್ರಮ ಅನುಷ್ಠಾನಗೊಳಿಸುವ ಸರಕಾರದ ಪ್ರಯತ್ನಕ್ಕೆ ತನ್ನದೇ ಅಧಿಕಾರಿಗಳಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ಒಂದು ವರದಿಯ ಪ್ರಕಾರ, ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದರೆ, ರಾಜ್ಯದ ಮಾನ ಹರಾಜಾಗುತ್ತದೆ ಮತ್ತು ಹೊರಗಿನಿಂದ ವ್ಯಾಪಕ ಟೀಕೆಗಳಿಗೆ ಕಾರಣವಾಗುತ್ತದೆ. ಈ ಕಾರಣದಿಂದ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ಮೀನಮೇಷ ಎಣಿಸುತ್ತಿದ್ದಾರೆ.