ಗೋ ರಾಜಕಾರಣದ ಎರಡು ಮುಖಗಳು

Update: 2016-07-28 18:10 GMT

ರ್ನಾಟಕದ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರು, ‘‘ಗೋಹತ್ಯೆ ಮಾಡುವವರ ಕೈ ಕಾಲು ಉಳಿಯುವುದಿಲ್ಲ’’ಎನ್ನುವ ಮಾತನ್ನಾಡಿದ್ದಾರೆ. ಭಾರತದ ದಂಡ ಸಂಹಿತೆಯ ಯಾವ ಭಾಗದಲ್ಲಿ ಗೋಹತ್ಯೆಗೆ ಕೈಕಾಲು ತೆಗೆಯುವ ಶಿಕ್ಷೆ ದಾಖಲಾಗಿದೆಯೋ ಅವರೇ ಹೇಳಬೇಕಿದೆ. ಈ ಹೇಳಿಕೆಯ ಮೂಲಕ ನೇರವಾಗಿಯೇ ಈ ದೇಶದ ದಲಿತರು ಮತ್ತು ಮುಸಲ್ಮಾನರ ಕೈ ಕಾಲು ತೆಗೆಯುವ ಮಾತನ್ನಾಡಿದ್ದಾರೆ. ಇಂತಹ ಹೇಳಿಕೆಗಳು ಸಾಮಾನ್ಯವೇನಲ್ಲ. ಬಲಪಂಥೀಯ ಸಂಘಟನೆ ಮತ್ತು ಪಕ್ಷಗಳಲ್ಲಿರುವವರು ಯಾವಾಗಲೂ ಇಂತಹ ಮಾತುಗಳನ್ನು ಸರ್ವೇ ಸಾಮಾನ್ಯವಾಗಿ ಆಡುತ್ತಿರುತ್ತಾರೆ.

ಗುಜರಾತ್‌ನಲ್ಲಿ ನಡೆಯುತ್ತಿರುವ ದಲಿತರ ಹೋರಾಟವನ್ನೂ ನಾವು ಈ ನೆಲೆಗಟ್ಟಿನಿಂದಲೇ ಅರ್ಥ ಮಾಡಿಕೊಳ್ಳಬೇಕಿದೆ. ಒಂದೆಡೆ ಚರ್ಮ ಸುಲಿದರೆ ದಲಿತರ ಮೇಲೆ ಥಳಿತ, ಕೊಲೆಗಳಾಗುತ್ತವೆ. ಮತ್ತೊಂದೆಡೆ ಅದೇ ದನದ ಚರ್ಮದ ತಮಟೆಯನ್ನು ಉತ್ಸವಗಳಲ್ಲಿ ಬಡಿಯಲೊಪ್ಪಲಿಲ್ಲವೆಂದು ದಲಿತರ ಮೇಲೆ ಹಲ್ಲೆಗಳಾಗುತ್ತವೆ. ಹೀಗೆ ಗೋ ರಕ್ಷಕರ ಎರಡು ಮುಖಗಳು ತಮಗೆ ತಾವೇ ಬಯಲಾಗುತ್ತಿದ್ದರೂ ಅಮಾಯಕರನ್ನು ಮಂಕು ಮಾಡಿ ಅವರಿಂದ ಗೋ ರಕ್ಷಣೆಗಾಗಿ ಮನುಷ್ಯನ ಜೀವ ತೆಗೆಯಲೂ ಹೇಸದಂತಹ ಸ್ಥಿತಿ ನಿರ್ಮಾಣಗೊಂಡಿವೆ. ಈ ರೀತಿಯ ಹಿಪ್ನಟೈಸ್‌ಗೊಂಡ ಒಂದು ತಳಸಮುದಾಯಗಳ ತಂಡವೇ ಗುಜರಾತ್‌ನಲ್ಲಿನ ದಲಿತರನ್ನು ಥಳಿಸಿರುವುದು ಹಾಗೂ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಶಾಂತಿಪುರದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿರುವುದು. ಶಾಂತಿಪುರದಲ್ಲಿಯಂತೂ ಬಜರಂಗ ದಳಕ್ಕೆ ಸೇರಿದವರೇ ದಲಿತರನ್ನು ದನದ ಮಾಂಸ ಸೇವಿಸಿದ್ದಕ್ಕಾಗಿ ಥಳಿಸಿದ್ದಾರೆ. ಥಳಿಸಿದವರ ಹಿನ್ನೆಲೆ ಗಮನಿಸಿದರೆ ಅವರೆಲ್ಲರೂ ಹಿಂದುಳಿದ ಜಾತಿಗೆ ಸೇರಿದವರೇ ಆಗಿದ್ದಾರೆ ಹಾಗೂ ಸಂಘ ಪರಿವಾರದ ಸಿದ್ಧಾಂತಕ್ಕೆ ಬಲಿಯಾಗಿದ್ದಾರೆ. 2002ರಲ್ಲಿ ಹರಿಯಾಣದ ಜಝ್ಝಾರ್‌ನಲ್ಲಿ ದನದ ಚರ್ಮ ಸುಲಿಯುತ್ತಿದ್ದ ದಲಿತ ಯುವಕರನ್ನು ಪೊಲೀಸ್ ಠಾಣೆಯ ಎದುರು ಸುಟ್ಟುಹಾಕಿದ್ದು, ವಿಶ್ವ ಹಿಂದೂ ಪರಿಷತ್‌ನ ಗಿರಿರಾಜ್ ಕಿಶೋರ್, ‘‘ನೂರಾರು ಜೀವಕ್ಕಿಂತಲೂ ಒಂದು ಗೋವಿನ ಜೀವಕ್ಕೆ ಹೆಚ್ಚಿನ ಮಹತ್ವವಿದೆ’’ ಎಂದಿದ್ದರು. ಕಳೆದ ವರ್ಷ ಅಖ್ಲಾಕ್‌ರನ್ನು ಕೊಂದ ಮೇಲಂತೂ ಬಲಪಂಥೀಯ ಪಡೆಗಳಿಂದ ಸಾಲು ಸಾಲು ಭಯೋತ್ಪಾದನಾ ಹೇಳಿಕೆಗಳು ಬಂದವು. ಅವು ಈ ಕೆಳಗಿನಂತಿವೆ.
ಮನೋಹರ್ ಲಾಲ್ ಖಟ್ಟರ್ (ಹರಿಯಾಣ ಮುಖ್ಯಮಂತ್ರಿ): ಮುಸ್ಲಿಮರು ಈ ದೇಶದಲ್ಲಿ ಬದುಕಬೇಕೆಂದರೆ ಗೋಮಾಂಸ ಭಕ್ಷಣೆಯನ್ನು ನಿಲ್ಲಿಸಬೇಕು.
ಸಾಕ್ಷಿ ಮಹಾರಾಜ್ (ಬಿಜೆಪಿ ಸಂಸದ): ಗೋ ಹತ್ಯೆ ಮಾಡುವವರಿಗೆ ಮರಣದಂಡನೆಯಾಗಬೇಕು.
ತುಫೈಲ್ ಚತುರ್ವೇದಿ (ಪಾಂಚಜನ್ಯ ಪತ್ರಿಕೆ ಲೇಖಕ): ವೇದಗಳು ಗೋಹತ್ಯೆ ಮಾಡುವ ಪಾಪಿಗಳನ್ನು ಕೊಲ್ಲುವಂತೆ ಹೇಳುತ್ತದೆ.
ಹೀಗೆ ಹಲವಾರು ಭಯೋತ್ಪಾದನಾ ಹೇಳಿಕೆಗಳನ್ನು ನಾವು ಕೇಳಿದ್ದೇವೆ. ಇದೇ ಸಾಲಿಗೆ ಈಶ್ವರಪ್ಪನವರ ಹೇಳಿಕೆಯೂ ಸೇರುತ್ತದೆ. ಇಂತಹ ಹೇಳಿಕೆಗಳಿಗೆ ಕಟ್ಟು ನಿಟ್ಟಿನ ಕಡಿವಾಣ ಹಾಕಬೇಕಾಗಿದೆ. ಜೊತೆಗೆ ಇಂತಹ ಹೇಳಿಕೆಗಳನ್ನು ಹೇಳುವವರು ಪ್ರಾಮಾಣಿಕವಾಗಿಯಾದರೂ ಇದ್ದಾರೆಯೇ ಎಂಬ ಪ್ರಶ್ನೆ ಬಂದಾಗ ಇದರಲ್ಲಡಗಿರುವ ವೋಟ್ ಬ್ಯಾಂಕ್ ರಾಜಕಾರಣ ಕಣ್ಣಿಗೆ ರಾಚುತ್ತದೆ. ಈ ವೋಟ್ ಬ್ಯಾಂಕ್ ರಾಜಕಾರಣ ವನ್ನು ಬಯಲುಗೊಳಿಸದಿದ್ದರೆ ಅಮಾಯಕ ಯುವಕರು ಈ ಸಂಚಿಗೆ ಬಲಿಯಾಗುತ್ತಾರೆ. ಜೀವನ ರೂಪಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ಜೈಲು ಪಾಲಾಗುತ್ತಾರೆ. ಇದಕ್ಕಾಗಿ ಗೋವನ್ನು ರಾಜಕಾರಣದ ದಾಳವಾಗಿಸಿಕೊಂಡಿರುವ ಬಲಪಂಥೀಯರ ಬಗ್ಗೆ ಹಿಂದೂ ತಳಜಾತಿಯ ಯುವಕರು ಎಚ್ಚರಿಕೆ ವಹಿಸಬೇಕಿದೆ.
 ಬಲಪಂಥೀಯರು ತಮ್ಮ ರಾಜಕೀಯ ಅಧಿಕಾರಕ್ಕಾಗಿ ಜನತೆಯನ್ನು ಹೇಗೆಲ್ಲಾ ವಂಚಿಸುತ್ತಾರೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ದೇಶದ ಮಧ್ಯ ಭಾರತ ಹಾಗೂ ಇತ್ತೀಚೆಗೆ ದಿಲ್ಲಿಯಲ್ಲಿ ಮಾತ್ರ ಇವರು ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುತ್ತಾರೆ. ಆದರೆ ಈಶಾನ್ಯ ಹಾಗೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಗೋ ಹತ್ಯೆಯ ಪರವಾಗಿ ಕೆಲಸ ಮಾಡುತ್ತಾರೆ! ಇದಕ್ಕೆ ಸಾಕ್ಷಿ ಮತ್ತದೇ ಬಲಪಂಥೀಯರ ಹೇಳಿಕೆಗಳು.
ಮುರಳೀಧರನ್ (ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ): ಕೇರಳದಲ್ಲಿ ಗೋಮಾಂಸ ನಿಷೇಧಕ್ಕೆ ಪಕ್ಷದ ಸಮ್ಮತಿ ಇಲ್ಲ. ಬೀಫ್ ನಿಷೇಧ ಮಾಡುವಂತಹ ಸನ್ನಿವೇಶ ಕೇರಳದಲ್ಲಿ ಇಲ್ಲ. ಬಿಜೆಪಿ ಈ ನಿಟ್ಟಿನಲ್ಲಿ ಯಾವುದೇ ಅಭಿಯಾನ ನಡೆಸಲು ಮುಂದಾಗುವುದಿಲ್ಲ.
ಮನೋಹರ್ ಪಾರಿಕ್ಕರ್ (ಕೇಂದ್ರ ಮಂತ್ರಿ): ಗೋಮಾಂಸ ತಿನ್ನುವುದು ವ್ಯಕ್ತಿಗತ ವಿಚಾರ. ಆ ಆಯ್ಕೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಸರಕಾರದ ಭಾಗವಾಗಿ ನಾನು ಒಂದು ಗುಂಪನ್ನು ತೃಪ್ತಿಪಡಿಸುವ ನಿಲುವು ತೆಗೆದುಕೊಳ್ಳಲಾರೆ.
ಲಕ್ಷ್ಮೀಕಾಂತ್ ಪಾರ್ಸೆಕರ್: ಗೋವಾದಲ್ಲಿ ಗೋಹತ್ಯೆ ನಿಷೇಧ ಜಾರಿಗೊಳಿಸುವುದಿಲ್ಲ. ಏಕೆಂದರೆ ಈ ರಾಜ್ಯದಲ್ಲಿ ಶೇ. 40ರಷ್ಟು ಮಂದಿ ಪ್ರತಿನಿತ್ಯ ಗೋಮಾಂಸ ಬಳಸುವುದರಿಂದ ಅವರ ಆಹಾರದ ಹಕ್ಕನ್ನು ನಾನು ಹೇಗೆ ಕಸಿದುಕೊಳ್ಳಲಿ?
ಈ ಮೇಲಿನ ಬಿಜೆಪಿ ಮುಖಂಡರ ಹೇಳಿಕೆಗಳು ಮೇಲೆ ತಿಳಿಸಿದ ಬಿಜೆಪಿ, ಬಲಪಂಥೀಯ ಮುಖಂಡರ ಹೇಳಿಕೆಗಳಿಗೆ ತದ್ವಿರುದ್ಧವಾಗಿವೆ. ಇದಕ್ಕೆ ಸ್ಪಷ್ಟ ಕಾರಣ ವೋಟ್ ಬ್ಯಾಂಕ್ ರಾಜಕಾರಣ. ಕೇರಳದಲ್ಲಿ ಒಟ್ಟು ಮಾಂಸ ಬಳಕೆಯಲ್ಲಿ ಗೋಮಾಂಸದ (ಜಾನುವಾರುಗಳು) ಪ್ರಮಾಣ ಶೇ. 50ನ್ನು ಮೀರುತ್ತದೆ. ಒಮ್ಮೆ ಬಲಪಂಥೀಯ ಸಂಘಟನೆಗಳು ದನದ ಸಾಗಾಟಗಾರರಿಗೆ ಕಿರುಕುಳ ಕೊಟ್ಟಾಗ ದನದ ಮಾಂಸ ಮಾರಾಟವನ್ನೇ ನಿಲ್ಲಿಸಲಾಗಿತ್ತು. ಅದರ ಪರಿಣಾಮವಾಗಿ ಪ್ರತಿಷ್ಠಿತ ಹೋಟೆಲ್‌ಗಳು ಒಂದು ಕೆ.ಜಿ. ದನದ ಮಾಂಸಕ್ಕೆ 320 ರೂಪಾಯಿ ಕೊಡುವಂತಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಬಲಪಂಥೀಯ ರಾಜಕಾರಣ ಗೋ ರಾಜಕಾರಣವನ್ನು ಕೇರಳದಲ್ಲಿ ಬದಿಗಿಟ್ಟಿತು.
ಗೋವಾ ವಿಚಾರಕ್ಕೆ ಬನ್ನಿ. ಬಿಜೆಪಿ ಗೋವಾದಲ್ಲಿ ಗೋ ರಾಜಕಾರಣವನ್ನು ಪಕ್ಕಕ್ಕೆ ಸರಿಸಿದ್ದರ ಪರಿಣಾಮವಾಗಿ 1994ರಲ್ಲಿ ಕೇವಲ 4 ಶಾಸಕರನ್ನು ಹೊಂದಿದ್ದು ಇಂದು 22 ಶಾಸಕರನ್ನು ಪಡೆದು ಸತತವಾಗಿ ಎರಡನೆ ಬಾರಿಗೆ ಅಧಿಕಾರವನ್ನು ಹಿಡಿದಿದೆ.
ಕಳೆದ ಚುನಾವಣೆಯಲ್ಲಿ ಗೋ ಹತ್ಯೆ ನಿಷೇಧ ಮಸೂದೆಯನ್ನು ದೇಶಾದ್ಯಂತ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ದೇಶಾದ್ಯಂತ ಗೋ ಹತ್ಯೆ ನಿಷೇಧ ಮಾಡುವ ಯಾವುದೇ ಪ್ರಸ್ತಾಪ ಕೇಂದ್ರ ಸರಕಾರಕ್ಕಿಲ್ಲ ಎಂದು ಹೇಳುತ್ತಾರೆ. ಚುನಾವಣಾ ಭಾಷಣ ಮಾಡುವಾಗ ನರೇಂದ್ರ ಮೋದಿಯವರು ನವೆಂಬರ್ 30, 2013ರಂದು ಖಾಂಡ್ವಾದಲ್ಲಿ ಆವೇಶದಿಂದ ಆಡಿದ ಮಾತುಗಳಿವು. ‘‘ಲಾಲ್ ಬಹದ್ದೂರ್ ಶಾಸ್ತ್ರಿ ಹಸಿರು ಕ್ರಾಂತಿಯ ಕುರಿತು ಮಾತಾಡಿದ್ದಾರೆ. ಯುಪಿಎ ಸರಕಾರ ಗೋಮಾಂಸ ರಫ್ತು ಮಾಡುವ ಮೂಲಕ ಗುಲಾಬಿ ಕ್ರಾಂತಿಯನ್ನು ಪ್ರೋತ್ಸಾಹಿಸಿದೆ. ಕಾಂಗ್ರೆಸ್ ಸರಕಾರ ಕಸಾಯಿಖಾನೆಗಳಿಗೆ ಸಬ್ಸಿಡಿ ನೀಡಿ ದನಗಳ ಹಾಗೂ ಪ್ರಾಣಿಗಳನ್ನು ಅಪಾರ ಪ್ರಮಾಣದಲ್ಲಿ ಹತ್ಯೆ ಮಾಡುತ್ತಿದೆ. ಆದರೆ ನಾವು (ಬಿಜೆಪಿ) ಗೋ ವಂಶದ ರಕ್ಷಣೆಗಾಗಿ ಅತ್ಯಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ’’
ಆದರೆ ಈಗ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಮಾಡಿರುವುದಾದರೂ ಏನು? 2013ರಲ್ಲಿ ಯುಪಿಎ ಸರಕಾರ 17 ದಶಲಕ್ಷ ಟನ್ ಜಾನುವಾರು ಮಾಂಸ ರಫ್ತು ಮಾಡಿ ಬ್ರೆಝಿಲ್ ನಂತರದ ಸ್ಥಾನ ಪಡೆದಿತ್ತು. 2015ರಲ್ಲಿ ಮೋದಿಯವರ ಸರಕಾರ 24 ದಶಲಕ್ಷ ಟನ್‌ನಷ್ಟು ಜಾನುವಾರು ಮಾಂಸ ರಫ್ತು ಮಾಡಿ ಬ್ರೆಝಿಲನ್ನು ಮೀರಿಸಿ ವಿಶ್ವದಲ್ಲಿಯೇ ಪ್ರಥಮ ಸ್ಥಾನ ಹೊಂದಿದೆ. ಗುಲಾಬಿ ಕ್ರಾಂತಿಯನ್ನು ಯಶಸ್ವಿಯಾಗಿ ಮಾಡುತ್ತಿದೆ.
ಗೋ ರಕ್ಷಣೆಯೇ ತನ್ನ ಪರಮ ಧ್ಯೇಯ ಎಂದು ಬೀಗುವ ಆರೆಸ್ಸೆಸ್ ಸಂಘಟನೆಯ ಕಥೆಯೂ ಇಷ್ಟೆ. ಅರುಣಾಚಲ ಪ್ರದೇಶದ ಆರೆಸ್ಸೆಸ್ ಮುಖ್ಯಸ್ಥ ಮನಮೋಹನ್ ವೈದ್ಯ ‘‘ಗೋವು ತಿನ್ನುವವರು ಆರೆಸ್ಸೆಸ್ ಸದಸ್ಯತ್ವ ಪಡೆಯಬಹುದು’’ ಎಂದಿದ್ದಾರೆೆ. ಒಂದು ಸಮೀಕ್ಷೆಯ ಪ್ರಕಾರ ಅರುಣಾಚಲ ಪ್ರದೇಶದಲ್ಲಿ ಸುಮಾರು 3,000 ಆರೆಸ್ಸೆಸ್ ಸದಸ್ಯರು ಗೋ ಮಾಂಸ ಸೇವಿಸುತ್ತಾರೆ. ಅದೇ ಪ್ರದೇಶದ ಬಿಜೆಪಿಯ ಕೇಂದ್ರ ಸಚಿವ ಕಿರಣ್ ರಿಜಿಜು ‘‘ನಾನು ಗೋ ಮಾಂಸ ಸೇವಿಸುತ್ತೇನೆ, ಯಾರಾದರೂ ನಿಲ್ಲಿಸುತ್ತೀರಾ?’’ ಎಂದು ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
 ಹಾಗಾಗಿ ಗೋರಕ್ಷಕರ ಗೋ ರಾಜಕಾರಣವನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದಾಗಿದೆ. ಎಲ್ಲೆಲ್ಲಿ ದಲಿತರು ಮತ್ತು ಮುಸ್ಲಿಮರ ವಿರುದ್ಧ ಓಟು ಒಂದುಗೂಡಿಸಿಕೊಳ್ಳಬೇಕೋ ಅಲ್ಲಿ ಗೋ ರಾಜಕಾರಣವನ್ನು ಮಾಡುತ್ತಾರೆ. ಎಲ್ಲೆಲ್ಲಿ ದಲಿತರು ಮತ್ತು ಮುಸ್ಲಿಮರ ಓಟುಗಳು ಬೇಕೋ ಅಲ್ಲಿ ಗೋ ರಾಜಕಾರಣವನ್ನು ಕೈ ಬಿಡುತ್ತಾರೆ. ಈ ರೀತಿಯ ಅನೈತಿಕ ರಾಜಕಾರಣವನ್ನು ಜಮ್ಮು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯೊಂದಿಗಿನ ಬಿಜೆಪಿ ಸಖ್ಯದಿಂದಲೂ ದೃಢೀಕರಿಸಬಹುದಾಗಿದೆ. ಏಕೆಂದರೆ ಪಿಡಿಪಿ ಗೋ ಮಾಂಸ ಸೇವಿಸುವವರ ಪರ ಸದಾ ನಿಂತಿದೆ.
ಒಟ್ಟಾರೆ, ಗೋವನ್ನು ಮುಂದಿಟ್ಟುಕೊಂಡು ಬಲಪಂಥೀಯರು ಯಶ ಗಳಿಸಿದ್ದಾರೆ. ಆದರೆ ಅವರ ಈ ದ್ವಂದ್ವಾತ್ಮಕ ನಿಲುವನ್ನು ಗ್ರಹಿಸದೇ ಹೋದರೆ ದೇಶದಲ್ಲಿ ಗೋವಿನ ಹೆಸರಿನಲ್ಲಿ ಮನುಷ್ಯರನ್ನು ಹೆಣವಾಗಿಸುವ ಕಾರ್ಖಾನೆಗಳು ಗಲ್ಲಿ ಗಲ್ಲಿಗಳಲ್ಲಿ ಹುಟ್ಟಿಕೊಳ್ಳುತ್ತವೆ. ಆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಯುವ ಪಡೆ ಬಲಪಂಥೀಯ ನಾಯಕರಾಗಲಿ, ಅವರ ಮಕ್ಕಳಾಗಲಿ ಆಗಿರದೆ ಏನೂ ಅರಿಯದ ಅಮಾಯಕ ಶೂದ್ರ, ದಲಿತ, ತಳ ಸಮುದಾಯದವರಾಗಿರುತ್ತಾರೆ.
ಗೋ ರಕ್ಷಕರೆಂದು ಹೇಳಿಕೊಂಡೇ ಹೊಸ ಕಸಾಯಿಖಾನೆಗಳಿಗೆ ಲೈಸೆನ್ಸ್ ನೀಡುತ್ತಾ, ಕಸಾಯಿಖಾನೆಗಳ ಯಾಂತ್ರೀಕರಣಕ್ಕೆ ನೂರಾರು ಕೋಟಿ ಅನುದಾನವನ್ನು ಬಿಡುಗಡೆ ಮಾಡುತ್ತಾ, ಸ್ವತಃ ಬೀಫ್ ಕಂಪೆನಿಗಳನ್ನು ನಡೆಸುತ್ತಿರುವವರಿಂದ ದೇಣಿಗೆ ಪಡೆಯುತ್ತಾ, ಅವರನ್ನು ಸದಸ್ಯರನ್ನಾಗಿ ಹೊಂದುತ್ತಾ ಸಾಗಿರುವ ಬಲಪಂಥೀಯರ ಒಳಮರ್ಮವನ್ನು ಗೋವಿನ ಹೆಸರಿನಲ್ಲಿ ಮೂರ್ಖರಾಗಿರುವ ಯುವಕರಿಗೆ ತಿಳಿಸುವ ಕೆಲಸವಾಗಬೇಕಿದೆ. ಇಲ್ಲದಿದ್ದರೆ ದೇವನೂರ ಮಹಾದೇವರವರು ಹೇಳುವಂತೆ ‘‘ಇಂದು ಮುಸ್ಲಿಮರನ್ನು ಗುರಿಮಾಡಿಕೊಂಡಿರುವ ಹಿಂದೂ ಮತಾಂಧತೆ ನಾಳೆ ಅಸ್ಪಶ್ಯರನ್ನು ಬಲಿ ಕೇಳಬಹುದು. ನಾಳಿದ್ದು ಶೂದ್ರರು. ಇದಾದ ಮೇಲೆ ಪ್ರಗತಿಪರ ಬ್ರಾಹ್ಮಣರೂ ಬಲಿ ವಸ್ತುಗಳಾಗಬೇಕಾಗುತ್ತದೆ.’’

Writer - ವಿಕಾಸ್ ಆರ್. ಮೌರ್ಯ

contributor

Editor - ವಿಕಾಸ್ ಆರ್. ಮೌರ್ಯ

contributor

Similar News