ಸಚಿವ ಗಿರಿರಾಜ್ ಸಿಂಗ್ ಪ್ರಚೋದನಕಾರಿ ಹೇಳಿಕೆ

Update: 2016-08-03 18:13 GMT

ಹೊಸದಿಲ್ಲಿ, ಆ.3: ಹಿರಿಯ ಬಿಜೆಪಿ ನಾಯಕ ಹಾಗೂ ನರೇಂದ್ರ ಮೋದಿ ಸರಕಾರದಲ್ಲಿ ರಾಜ್ಯ ಸಚಿವರಾಗಿರುವ ಗಿರಿರಾಜ್ ಸಿಂಗ್ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘‘ಹಿಂದೂಗಳಂತಹ ನಪುಂಸಕರು ಯಾರೂ ಇಲ್ಲ’’ ಎಂದು ಗಿರಿರಾಜ್ ಸಿಂಗ್ ಹೇಳುವ ವೀಡಿಯೊವೊಂದನ್ನು ಕೋಬ್ರಾಪೋಸ್ಟ್.ಕಾಂ ಮಂಗಳವಾರದಂದು ಶೇರ್ ಮಾಡಿದೆ. ‘‘ಹಿಂದೂಗಳಿದ್ದಿದ್ದರೆ, ಅವರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಿದ್ದರೇನು? ಅವರಿಗೆಲ್ಲಾ ಚೆನ್ನಾಗಿ ಒದೆ ಬೀಳುತ್ತಿತ್ತು. ಕೆಲವು ಯುವಕರಿಗೆ ಈಗಲೂ ಸೆಂಟಿಮೆಂಟ್ ಇದೆ. ದೇಶದಲ್ಲಿರುವ ಕೇವಲ ಶೇ.20ರಷ್ಟು ಮಂದಿಯ ಬಳಿ ಸೆಂಟಿಮೆಂಟ್ ಇದೆ. ಮುಂದಿನ 20 ವರ್ಷಗಳಲ್ಲಿ ಹಿಂದೂಗಳಿಗೆ ಮತ್ತಷ್ಟು ದುರ್ಗತಿ ಬರಲಿದೆ’’ ಎಂದು ಗಿರಿರಾಜ್ ಸಿಂಗ್ ಹೇಳುವುದು ವೀಡಿಯೊದಲ್ಲಿ ದಾಖಲಾಗಿದೆ.

‘‘ಭೋಜಪುರದ ಆರಾದಲ್ಲಿ 28 ಮಳಿಗೆಗಳಿಗೆ ಹಾಡಹಗಲೇ ಪೊಲೀಸರೆದುರೇ ಬೆಂಕಿಯಿಡಲಾಗಿದೆ. ಅಲ್ಲಿ ಹತ್ತಿರದಲ್ಲೇ ದೊಡ್ಡ ದೊಡ್ಡ ಹಿಂದೂಗಳ ಮನೆಗಳಿದ್ದರೂ ಯಾರೂ ಹೊರಗೆ ಬರಲೇ ಇಲ್ಲ’’ ಎಂದಿದ್ದಾರೆ.
 ಗಿರಿರಾಜ್ ಸಿಂಗ್ ಈ ಹಿಂದೆ ಕೂಡ ಮತಾಂತರ, ಲವ್ ಜಿಹಾದ್, ಪಾಕಿಸ್ತಾನ ಶಾಲೆಯ ಮೇಲಿನ ದಾಳಿ ಹಾಗೂ ಜೆಎನ್‌ಯು ಹಗರಣ ಸಂಬಂಧ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಕಳೆದ ಲೋಕಸಭಾ ಚುನಾವಣೆಯ ಮೊದಲು ಜಾರ್ಖಂಡ್‌ನಲ್ಲಿ ಚುನಾವಣಾ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ್ದ ಅವರು ಮೋದಿಯ ವಿಜಯವನ್ನು ತಡೆಯಬಯಸುವವರು ಭಾರತ ಯಾ ಜಾರ್ಖಂಡ್‌ನಲ್ಲಿರದೆ ಪಾಕಿಸ್ತಾನದಲ್ಲಿರಬೇಕು ಎಂಬ ಹೇಳಿಕೆ ನೀಡಿ ಸಾಕಷ್ಟು ಟೀಕೆಗೊಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News