ಬೇಳೆಕಾಳುಗಳು ಗಗನಕ್ಕೆ ಬಡವರು ಪಾತಾಳಕ್ಕೆ
ಬಡವ-ಬಲ್ಲಿದ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಅಗತ್ಯವಾಗಿ ದಿನನಿತ್ಯ ಆಹಾರ ದೊಂದಿಗೆ ಸೇವಿಸಬೇಕಾದ ಬೇಳೆಕಾಳುಗಳು ಮನುಷ್ಯನಿಗೆ ಅತ್ಯಧಿಕ ಪ್ರೊಟೀನ್ ನೀಡುವ ಸಾಮರ್ಥ್ಯ ಹೊಂದಿವೆ. ಶ್ರೀಮಂತರು ಮತ್ತು ಮಧ್ಯಮ ವರ್ಗದ ಜನರು ಬೆಲೆ ಏರಿಕೆಯಾದರೂ ಅತೃಪ್ತಿಯ ನಡುವೆಯೂ ಅಲ್ಪಪ್ರಮಾಣದಲ್ಲಿ ಸಾಂಬಾರ್ ಇಲ್ಲವೆ ಪಲ್ಯಗಳ ರೂಪದಲ್ಲಿ ಬೇಳೆ ಕಾಳುಗಳನ್ನು ಆಹಾರ ರೂಪದಲ್ಲಿ ಸೇವಿಸುತ್ತಿದ್ದಾರೆ. ಆದರೆ, ಅಗತ್ಯ ಆಹಾರ ವಸ್ತುಗಳಾದ ಗೋಧಿ, ಅಕ್ಕಿಯನ್ನು ಕೊಳ್ಳಲು ಅಸಹಾಯಕರಾದ ಬಡ ವರು ಉದ್ದು, ಕಡಲೆ, ತೊಗರಿ ಮುಂತಾದ ದ್ವಿದಳ ಧಾನ್ಯಗಳಿಂದ ವಂಚಿತರಾಗಿ ಅಪೌ ಷ್ಟಿಕತೆಯ ದವಡೆಗೆ ಸಿಲುಕಿದ್ದಾರೆ.
ಜಾಗತಿಕ ಮಟ್ಟದಲ್ಲಿ ಮನುಷ್ಯನೊಬ್ಬ ಅಗತ್ಯವಾದ ಪ್ರೊಟೀನ್ ಮತ್ತು ವಿಟಮಿನ್‌ಗಳಿಗಾಗಿ ದಿನನಿತ್ಯ ಕನಿಷ್ಠ 80 ಗ್ರಾಂ ಬೇಳೆಕಾಳುಗಳನ್ನು ಸೇವಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅತ್ಯಧಿಕ ಸಸ್ಯಹಾರಿಗಳು ಇದ್ದ ಪ್ರದೇಶದಲ್ಲಿ 1971ರಲ್ಲಿ ಮನುಷ್ಯನೊಬ್ಬ ಸರಾಸರಿ 51 ಗ್ರಾಂ ಬೇಳೆ ಕಾಳುಗಳನ್ನು ಸೇವಿಸುತ್ತಿದ್ದ. 2013ರ ವೇಳೆಗೆ ಅದು 42 ಗ್ರಾಂಗಳಿಗೆ ಕುಸಿದಿತ್ತು. ಇದೀಗ ಬೇಳೆಕಾಳುಗಳ ಬೆಲೆ ಗಗನಕ್ಕೇರಿದ ಪರಿಣಾಮವಾಗಿ ಇನ್ನಷ್ಟು ಕುಸಿದಿದೆ. ಕಾಳುಗಳ ಸೇವನೆಯಿಂದ ಮನುಷ್ಯನಿಗೆ ದಿನ ನಿತ್ಯ ಶೇ. 57ರಷ್ಟು ಕ್ಯಾಲೊರಿ ಮತ್ತು 55 ಪ್ರೊಟೀನ್‌ಗಳು ಲಭ್ಯವಾಗುತ್ತಿದ್ದವು. ಬೇಳೆಕಾಳು ಕೊರತೆಯಿಂದಾಗಿ ಭಾರತದಲ್ಲಿ ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರಲಿದ್ದು, ಈ ಕುರಿತು ಬೇಳೆಕಾಳುಗಳ ಉತ್ಪಾದನೆಗೆ ಮತ್ತು ಬೆಲೆ ನಿಯಂತ್ರಣಕ್ಕೆ ಭಾರತ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ವಿಶ್ವ ಆಹಾರ ಮತ್ತು ಕೃಷಿ ಸಂಘಟನೆಯ ಭಾರತದ ಪ್ರತಿನಿಧಿ ಶ್ಯಾಮ್ ಖಾಡ್ಕ ಅಭಿಪ್ರಾಯ ಪಟ್ಟಿದ್ದಾರೆ.
ಇವುಗಳಿಗೆ ಪರ್ಯಾಯವಾಗಿ ಸೋಯಾ ಬೀನ್ ಬಳಸಬಹುದಾದರೂ ಭಾರತದಲ್ಲಿ ಆಚರಣೆಯಲ್ಲಿರುವ ಆಹಾರ ಸಂಸ್ಕೃತಿಯನ್ನು ಬದಲಾಯಿಸುವುದು ಸುಲಭದ ಸಂಗತಿಯಲ್ಲ. 2015 ಮತ್ತು 2016ರಲ್ಲಿ ಬೇಳೆಕಾಳುಗಳ ಬೆಲೆಯು ವಾರ್ಷಿಕವಾಗಿ ಶೇ. 30 ಹೆಚ್ಚಾಗಿದೆ. ಕೈ ಕೊಟ್ಟ ಮಳೆಯಿಂದಾಗಿ ಬೇಳೆಕಾಳುಗಳ ಉತ್ಪಾದನೆ ಕುಂಠಿತಗೊಂಡಿದೆ. ಈ ಪರಿಸ್ಥಿಯ ಅರಿವಿದ್ದರೂ ಸಹ ಕೇಂದ್ರ ಸರಕಾರವು ವ್ಯಾಪಾರಸ್ಥರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ವಿದೇಶದಿಂದ ಆಮದು ಮಾಡಿಕೊಳ್ಳುವ ಬದಲು ಕಣ್ಣು ಮುಚ್ಚಿ ಕುಳಿತಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಇತ್ತೀಚೆಗೆ ಪ್ರಧಾನಿ ಮೋದಿಯವರು ಆಫ್ರಿಕಾ ದೇಶಗಳ ಪ್ರವಾಸ ಹೋಗಿದ್ದಾಗ ಮೊಜಾಂಬಿಯ ದೇಶ ದಿಂದ ಬೇಳೆಕಾಳು ಗಳನ್ನು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಬೆಲೆ ಮಾತ್ರ ಇಳಿಯದೆ ಸ್ಥಿರವಾಗಿದೆ. ಭಾರತ ಸರಕಾರ ಜಾಗತಿಕ ಮಟ್ಟದಲ್ಲಿ ಬೇಳೆ ಕಾಳುಗಳನ್ನು ಆಮದು ಮಾಡಿಕೊಳ್ಳಲು 46 ರಾಷ್ಟ್ರಗಳಲ್ಲಿ ಹುಡುಕಾಟ ನಡೆಸಿದರೂ ಅಗತ್ಯವಿರುವಷ್ಟು ದಾಸ್ತಾನು ಲಭ್ಯವಾಗಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ದ್ವಿದಳ ಧಾನ್ಯಗಳನ್ನು ಬಳಸುವ ಪ್ರಮಾಣ ಹೆಚ್ಚಾಗಿರುವುದರಿಂದ ಪ್ರತಿಯೊಂದು ರಾಷ್ಟ್ರಗಳು ತಮಗೆ ಅಗತ್ಯವಿರುವಷ್ಟು ಮಾತ್ರ ಉತ್ಪಾದಿಸಿಕೊಳ್ಳುತ್ತಿವೆ.
ಈ ವರ್ಷ ಭಾರತದಲ್ಲಿ ಮುಂಗಾರು ಮಳೆ ಆಶಾದಾಯಕವಾಗಿದ್ದು, ಅಧಿಕ ಪ್ರಮಾಣದಲ್ಲಿ ಅಂದರೆ 90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೇಳೆಕಾಳು, 131 ಹೆಕ್ಟೇರ್ ಲಕ್ಷ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆಗಾಗಿ ರೈತರು ಬಿತ್ತನೆ ಮಾಡಿದ್ದಾರೆ. ಈ ವರ್ಷ ಉತ್ತಮ ಮಳೆಯಾದರೆ, ಸುಮಾರು 27 ಕೋಟಿ ಟನ್ ನಷ್ಟು ಆಹಾರ ಧಾನ್ಯಗಳ ಉತ್ಪಾದನೆಯನ್ನು ನಿರೀಕ್ಷಿಸಬಹುದು ಎಂದು ಕೃಷಿ ತಜ್ಞರು ಅಂದಾಜು ಮಾಡಿದ್ದಾರೆ.