5 ಮೃತದೇಹ ಪತ್ತೆ; ಕಾಣೆಯಾಗಿರುವವರ ಆಸೆ ಕ್ಷೀಣ

Update: 2016-08-04 17:22 GMT

ಮಹಾಡ್, ಆ.4: ಇಲ್ಲಿನ ಸಾವಿತ್ರಿ ನದಿಯ ನೆರೆಗೆ ಶತಮಾನ ಹಳೆಯ ಸೇತುವೆಯೊಂದು ಕೊಚ್ಚಿ ಹೋಗಿ 2 ಬಸ್ ಸಹಿತ ಕೆಲವು ವಾಹನಗಳು ನೀರುಪಾಲಾದ 40 ತಾಸುಗಳ ಬಳಿಕ ಶೋಧ ಹಾಗೂ ರಕ್ಷಣಾ ತಂಡಗಳು ಬದುಕಿರುವವರನ್ನು ಪತ್ತೆ ಮಾಡುವ ಆಶಾವಾದವನ್ನು ಕಳೆದುಕೊಂಡಿವೆ. ಆದರೆ, ಕಾಣೆಯಾಗಿರುವವರ ಬಂಧುಗಳು ಇನ್ನೂ, ತಮ್ಮವರು ಜೀವಂತ ಬರಬಹುದೆಂಬ ಆಸೆಯಲ್ಲಿದ್ದಾರೆ.

ದುರಂತದಲ್ಲಿ ಕನಿಷ್ಠ 29 ಮಂದಿ ಕಾಣೆಯಾಗಿದ್ದು, ಅವರೆಲ್ಲ ಜಲ ಸಮಾಧಿಯಾಗಿರಬಹುದೆಂದು ಭೀತಿಪಡಲಾಗಿದೆ.
ಸ್ಥಳೀಯರೊಂದಿಗೆ ಶೋಧ ತಂಡಗಳು 5 ಮೃತದೇಹಗಳನ್ನು ಮೇಲೆತ್ತಿವೆ. ಅವರಲ್ಲಿ ಎಸ್‌ಯುವಿ ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಹಾಗೂ ಜೈಗಡ-ಮುಂಬೈ ಬಸ್‌ನ ಚಾಲಕ ಸೇರಿದ್ದಾರೆ.
ಶ್ರೀಕಾಂತ ಕಾಂಬ್ಳೆ ಎಂಬ ಹೆಸರಿನ ಬಸ್‌ಚಾಲಕನ ಶವವು ದುರಂತದ ಸ್ಥಳದಿಂದ ಸುಮಾರು 150 ಕಿ.ಮೀ. ದೂರದ ಅಂಜಾರ್ಲೆ ಬೀಚ್‌ನಲ್ಲಿ ಪತ್ತೆಯಾಯಿತೆಂದು ರಾಯಗಡದ ಜಿಲ್ಲಾಧಿಕಾರಿ ಶೀತಲ್ ಉಗಲೆ ತಿಳಿಸಿದ್ದಾರೆ.
ಮೃತ ಮಹಿಳೆಯರನ್ನು ರಂಜನಾ ವಝೆ ಹಾಗೂ ಅವರ ತಾಯಿ ಶ್ರೀಮತಿ ಮಿರ್ಗಲ್ ಎಂದು ಗುರುತಿಸಲಾಗಿದೆ. ಅವರ ಮೃತದೇಹಗಳು ಕ್ರಮವಾಗಿ ಕೆಂಬುರ್ಲಿ ಹಾಗೂ ಹರಿಹರೇಶ್ವರ ಗಳಲ್ಲಿ ಪತ್ತೆಯಾಗಿವೆಯೆಂದು ಅಧಿಕಾರಿಗಳು ಹೇಳಿದ್ದಾರೆ.
ದಾಡ್ಲಿ ಸೇತುವೆಯ ಬಳಿ ಒಬ್ಬ ಯುವಕನ ಶವ ಹಾಗೂ ದಾಸ್‌ಗಾಂವ್ ಬಳಿ ಒಬ್ಬ ಪುರುಷನ ಮೃತದೇಹ ತಮಗೆ ಕಾಣಿಸಿವೆ. ಆದರೆ, ಅವರ ಗುರುತು ಪತ್ತೆಯಾಗಿಲ್ಲವೆಂದು ಶೋಧ ಕಾರ್ಯದಲ್ಲಿ ತೊಡಗಿರುವ ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.
ಘಟನಾ ಸ್ಥಳದಿಂದ 4 ಕಿ.ಮೀ. ದೂರದಲ್ಲಿ ಬಸ್ಸೊಂದರ ಕೆಲವು ಲೋಹದ ಭಾಗಗಳು ಶೋಧ ತಂಡಗಳಿಗೆ ದೊರೆತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News