ಲೆಫ್ಟಿನೆಂಟ್ ಗವರ್ನರರೇ ದಿಲ್ಲಿಯ ಆಡಳಿತ ಮುಖ್ಯಸ್ಥ

Update: 2016-08-04 17:29 GMT

ಹೊಸದಿಲ್ಲಿ, ಆ.4: ರಾಷ್ಟ್ರ ರಾಜಧಾನಿ ವಲಯವು ಕೇಂದ್ರಾಡಳಿತ ಪ್ರದೇಶವಾಗಿಯೇ ಮುಂದುವರಿಯಲಿದೆ ಹಾಗೂ ಲೆಫ್ಟಿನೆಂಟ್ ಗವರ್ನರ್ ಅದರ ಆಡಳಿತ ಮುಖ್ಯಸ್ಥರಾಗಿದ್ದಾರೆಂದು ದಿಲ್ಲಿ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.

ಇದರಿಂದಾಗಿ ದಿಲ್ಲಿಗೆ ರಾಜ್ಯದ ಸ್ಥಾನಮಾನ ಹಾಗೂ ಅಧಿಕಾರ ನಿಯಂತ್ರಣಕ್ಕಾಗಿ ಸುಂಘರ್ಷ ನಡೆಸುತ್ತಿರುವ ಅಲ್ಲಿನ ಆಪ್ ಸರಕಾರಕ್ಕೆ ಭಾರೀ ಮುಖಭಂಗವಾಗಿದೆ.
ಇದರೊಂದಿಗೆ, ಲೆಫ್ಟಿನೆಂಟ್ ಗವರ್ನರ್‌ರ ಅನುಮೋದನೆ ಅಥವಾ ಅಭಿಪ್ರಾಯ ಪಡೆ ಯದೆ ದಿಲ್ಲಿ ಸರಕಾರ ಕೈಗೊಂಡಿದ್ದ, ಸಿಎನ್‌ಜಿ ಹಗರಣ, ಡಿಡಿಸಿಎ ಅವ್ಯವಹಾರಗಳ ತನಿಖೆಗೆ ಆಯೋಗಗಳ ನೇಮಕ, ವಿದ್ಯುತ್ ವ್ಯತ್ಯಯಕ್ಕಾಗಿ ಜನರಿಗೆ ಪರಿಹಾರ ನೀಡುವಂತೆ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ನೀತಿ ನಿರ್ದೇಶನದಂತಹ ಸರಣಿ ಕ್ರಮಗಳು ಕಾನೂನುಬಾಹಿರವೆಂದು ನ್ಯಾಯಾಲಯ ಘೋಷಿಸಿದೆ.
ದಿಲ್ಲಿಯ ಕೇಜ್ರಿವಾಲ್ ಸರಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ನಝೀಬ್ ಜಂಗ್‌ರ ನಡುವಿನ ಅಧಿಕಾರ ಸಂಘರ್ಷಕ್ಕೆ ಕೊನೆ ಹಾಡಿರುವ ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ನೇತೃತ್ವದ ಪೀಠವೊಂದು ಸೇವೆಗೆ ಸಂಬಂಧಿಸಿದ ವಿಷಯಗಳು ದಿಲ್ಲಿ ರಾಷ್ಟ್ರ ರಾಜಧಾನಿ ವಲಯದ ವಿಧಾನಸಭೆಯ ವ್ಯಾಪ್ತಿಯಿಂದ ಹೊರಗುಳಿಯಲಿವೆ. ಆದುದರಿಂದ, ಸೇವೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ದಿಲ್ಲಿ ಎನ್‌ಸಿಟಿಯ ಲೆಫ್ಟಿನೆಂಟ್ ಗವರ್ನರ್, ಸಮಯಾನುಸಾರ ರಾಷ್ಟ್ರಪತಿ ಅವರಿಗೆ ನೀಡಿರುವಷ್ಟು ಅಧಿಕಾರದಿಂದ ಕೇಂದ್ರ ಸರಕಾರದ ಕಾರ್ಯ ಹಾಗೂ ಅಧಿಕಾರವನ್ನು ನಡೆಸಲಿದ್ದಾರೆಂದು 2015ರ ಫೆಬ್ರವರಿಯಲ್ಲಿ ಕೇಂದ್ರ ಸರಕಾರವು ಅಧಿಸೂಚನೆಯಲ್ಲಿ ನೀಡಿದ್ದ ನಿರ್ದೇಶನ ಕಾನೂನುಬಾಹಿರ ಅಥವಾ ಅಸಾಂವಿಧಾನಿಕವಲ್ಲವೆಂದು ತೀರ್ಪು ನೀಡಿದೆ.
ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನ ಮೆಟ್ಟಲೇರಲು ಕೇಜ್ರಿವಾಲ್ ಸರಕಾರ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News