ಅಂಗನವಾಡಿಯಲ್ಲಿ ದಲಿತರು ತಯಾರಿಸಿದ ಆಹಾರ ತಿರಸ್ಕರಿಸಿದ ಮೇಲ್ವರ್ಗದ ಗರ್ಭಿಣಿಯರು

Update: 2016-08-05 04:22 GMT

ಲಕ್ನೋ, ಆ.5: ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಒದಗಿಸುವ ದೃಷ್ಟಿಯಿಂದ ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ಹೌಸ್ಲಾ ಪೋಷಣ್ ಯೋಜನೆ, ಜಾತಿಪದ್ಧತಿಯ ಅನಿಷ್ಟಕ್ಕೆ ಸಿಲುಕಿ ನಲುಗಿದೆ. ಅಂಗನವಾಡಿಗಳಲ್ಲಿ ಎಷ್ಟೇ ಪೌಷ್ಟಿಕ ಆಹಾರವನ್ನು ಸಿದ್ಧಪಡಿಸಿ ನೀಡಿದರೂ, ಅದು ಪರಿಶಿಷ್ಟ ಜಾತಿಯವರು ಸಿದ್ಧಪಡಿಸಿದ್ದು ಎಂಬ ಕಾರಣಕ್ಕೆ ಅದನ್ನು ಸೇವಿಸಲು ಗರ್ಭಿಣಿ ಮಹಿಳೆಯರು ನಿರಾಕರಿಸುವ ಹಲವು ನಿರ್ದಶನಗಳು ವರದಿಯಾಗಿವೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಜೂನ್ 20ರಂದು ಜಾರಿಯಾದ ಈ ಯೋಜನೆಯಡಿ ಗರ್ಭಿಣಿಯರಿಗೆ ಮತ್ತು ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಸಿದ್ಧಪಡಿಸಿ ನೀಡಲಾಗುತ್ತದೆ ಮತ್ತು ಒಂದು ಹಣ್ಣನ್ನೂ ನೀಡಲಾಗುತ್ತದೆ.
ಆದರೆ ಅಂಗನವಾಡಿಗಳಲ್ಲಿ ದಲಿತ ಮಹಿಳೆಯರು ಇದನ್ನು ತಯಾರಿಸುತ್ತಾರೆ ಎಂಬ ಕಾರಣಕ್ಕೆ ಧಂಕುನಾ ಗ್ರಾಮವೊಂದರಲ್ಲೇ 18 ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಲು ನಿರಾಕರಿಸಿದ್ದಾರೆ ಎಂದು ಫಿಲಿಬಿಟ್ ಜಿಲ್ಲಾ ಯೋಜನಾ ಅಧಿಕಾರಿ ರಾಜ್ ಕಪೂರ್ ಹೇಳಿದ್ದಾರೆ. ಇದೇ ರೀತಿ ಫಿಲಿಬಿಟ್‌ನ ಸರ್ಕಾರಿ ಶಾಲೆಯೊಂದರಲ್ಲಿ ಆರು ವಿದ್ಯಾರ್ಥಿಗಳು ಕೂಡಾ ಇದೇ ಕಾರಣಕ್ಕೆ ಆಹಾರ ಸೇವಿಸುತ್ತಿಲ್ಲ ಎಂದು ಅವರು ವಿವರಿಸಿದ್ದಾರೆ.
ಬಹುತೇಕ ಮೇಲ್ವರ್ಗಕ್ಕೆ ಸೇರಿದ ಗರ್ಭಿಣಿಯರು ಅಂಗನವಾಡಿಯಲ್ಲಿ ಅನ್ಯ ಜಾತಿಯವರು ಅಡುಗೆ ಮಾಡುತ್ತಾರೆ ಎಂಬ ಕಾರಣಕ್ಕೆ ಇದನ್ನು ಸೇವಿಸುತ್ತಿಲ್ಲ ಎಂಬ ಹಲವು ವರದಿಗಳು ಬೆಳಕಿಗೆ ಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News