ಕಾನ್ಪುರ:ಪೊಲೀಸ್ ಕಸ್ಟಡಿಯಲ್ಲಿ ದಲಿತ ಯುವಕನ ಶಂಕಾಸ್ಪದ ಸಾವು

Update: 2016-08-05 05:37 GMT

 ಕಾನ್ಪುರ, ಆ.5: ಪೊಲೀಸ್ ಕಸ್ಟಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ 26ರ ಪ್ರಾಯದ ದಲಿತ ಯುವಕ ಸಾವನ್ನಪ್ಪಿರುವ ಘಟನೆಯ ಹಿನ್ನೆಲೆಯಲ್ಲಿ ಐವರು ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಇತರ 12 ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಅಹಿರ್ವಾನ್ ಪೊಲೀಸ್ ಠಾಣೆಯಲ್ಲಿ ಕಮಲ್ ವಾಲ್ಮೀಕಿ ಎಂಬಾತ ಸಾವನ್ನಪ್ಪಿದ್ದಾನೆಂಬ ಸುದ್ದಿ ಹರಡುತ್ತಲ್ಲೇ ಚಕೇರಿ ಪ್ರದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು.

ಪೊಲೀಸರು ಕಮಲ್‌ಗೆ ಅತ್ಯಂತ ಅಮಾನವೀಯವಾಗಿ ಹಿಂಸೆ ನೀಡಿರುವ ಕಾರಣ ಆತ ಸಾವನ್ನಪ್ಪಿದ್ದಾನೆ ಎಂದು ಕಮಲ್‌ನ ಸಹೋದರಿ ರೇಖಾ ಹೇಳಿದ್ದಾರೆ.

ಗುರುವಾರ ಮಧ್ಯಾಹ್ನ ರೇಖಾ ಸಹೋದರರನ್ನು ನೋಡಲು ಪೊಲೀಸ್ ಸ್ಟೇಶನ್‌ಗೆ ತೆರಳಿದ್ದಾಗ ವಾಲ್ಮೀಕಿ ಸಾವನ್ನಪ್ಪಿರುವ ವಿಷಯ ಬಹಿರಂಗವಾಗಿತ್ತು. ಎರಡು ದಿನಗಳ ಹಿಂದೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಾಲ್ಮೀಕಿ ಹಾಗೂ ಆತನ ಸ್ನೇಹಿತ ರಾಜೂ ಮಿಸ್ತ್ರಿ ಎಂಬಾತನನ್ನು ವಶಕ್ಕೆ ಪಡೆದಿದ್ದರು.

ವಾಲ್ಮೀಕಿಯನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದ ಐವರು ಕಾನ್‌ಸ್ಟೇಬಲ್‌ಗಳ ವಿರುದ್ಧ ಕೊಲೆ ಕೇಸು ದಾಖಲಿಸಲಾಗಿದೆ. ಸಬ್ ಇನ್‌ಸ್ಪೆಕ್ಟರ್ ಯೋಗೇಂದ್ರ ಸೋಳಂಕಿ ಹಾಗೂ 11 ಕಾನ್‌ಸ್ಟೇಬಲ್ ಸಹಿತ ಅಹಿರ್ವಾನ್ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಾಲ್ಮೀಕಿ ಶಂಕಾಸ್ಪದ ಸಾವಿನಿಂದ ರೊಚ್ಚಿಗೆದ್ದ ಜನರು ಕಲ್ಲುತೂರಾಟ ನಡೆಸಿದ್ದಲ್ಲದೆ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ್ದರು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ-2ರಲ್ಲಿ ಪ್ರತಿಭಟನೆ ನಡೆಸಿದ್ದ ಕಾರಣ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಅಶ್ರುವಾಯು ಸಿಡಿಸಿದ ಪೊಲೀಸರು ಉದ್ರಿಕ್ತ ಗುಂಪನ್ನು ಚದುರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News