ನಾಳೆ ಇರೋಮ್ ನಿರಶನ ಅಂತ್ಯ

Update: 2016-08-08 16:47 GMT

ಇಂಫಾಲ್, ಆ.8: ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಫ್‌ಸ್ಪಾ)ಯನ್ನು ಹಿಂತೆಗೆದುಕೊಳ್ಳುವಂತೆ ಅಗ್ರಹಿಸಿ, ಕಳೆದ 16 ವರ್ಷಗಳಿಂದ ನಿರಾಹಾರ ಸತ್ಯಾಗ್ರಹ ನಡೆಸುತ್ತಿರುವ ಮಣಿಪುರದ ‘ಉಕ್ಕಿನ ಮಹಿಳೆ’ ಇರೊಮ್ ಚಾನು ಶರ್ಮಿಳಾ, ಮಂಗಳವಾರ ಬೆಳಗ್ಗೆ ತನ್ನ ಸುದೀರ್ಘ ನಿರಶನವನ್ನು ಅಂತ್ಯಗೊಳಿಸಲಿದ್ದಾರೆ.
ಮಾನವಹಕ್ಕುಗಳ ಹೋರಾಟಗಾರ್ತಿಯಾದ 44 ವರ್ಷ ವಯಸ್ಸಿನ ಇರೊಮ್ ಅವರು ಇಂಫಾಲದ ನ್ಯಾಯಾಲಯವೊಂದರಲ್ಲಿ ತನ್ನ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಲಿದ್ದಾರೆಂದು ಆಕೆಯ ಸಹೋದರ ಇರೊಮ್ ಸಿಂಗಜಿತ್ ತಿಳಿಸಿದ್ದಾರೆ. ಈಗ ಬಂಧೀಖಾನೆಯಾಗಿ ಪರಿವರ್ತಿತವಾಗಿರುವ ಇಂಫಾಲದ ಆಸ್ಪತೆಯೊಂದರ ಕೊಠಡಿಯಲ್ಲಿ ಇರೋಮ್ ಅವರನ್ನು ಇರಿಸಲಾಗಿದೆ. ಅವರನ್ನು ಜೀವಂತವಾಗಿಡುವ ಉದ್ದೇಶದಿಂದ, 2000ನೇ ಇಸವಿಯಿಂದೀಚೆಗೆ ಅವರಿಗೆ ಬಲವಂತವಾಗಿ ಮೂಗಿನ ಮೂಲಕ ನಳಿಕೆಯಲ್ಲಿ ದ್ರವಾಹಾರವನ್ನು ನೀಡಲಾಗುತ್ತಿದೆ.
ನಾಳೆ ಇರೋಮ್‌ನಾಳೆ ನ್ಯಾಯಾಂಗ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಲಾಗುವುದು.ಅವರು ಹದಿನೈದಿನಗಳ ಹಿಂದೆ ಘೋಷಿಸಿದ್ದಂತೆ,ಆಕೆ ತನ್ನ ಉಪವಾಸವನ್ನು ಕೈಬಿಟ್ಟ ಕೂಡಲೇ ನ್ಯಾಯಾಂಗ ಕಸ್ಟಡಿಯಿಂದ ಬಂಧಮುಕ್ತಗೊಳ್ಳಲಿದ್ದಾರೆಂದು ಎಂದು ಸಿಂಗಜಿತ್ ತಿಳಿಸಿದ್ದಾರೆ.
  ಉಪವಾಸ ಕೊನೆಗೊಳಿಸಿದ ಬಳಿಕ ಇರೋಮ್ ಅವರ ನೂತನ ನಡೆಯ ಬಗ್ಗೆ ಚರ್ಚಿಸಲು ಇಂಫಾಲದಲ್ಲಿ ಇಂದು ಆಕೆಯ ಭಾರೀ ಸಂಖ್ಯೆಯ ಬೆಂಬಲಿಗರು ಹಾಗೂ ಮಹಿಳಾ ಹೋರಾಟಗಾರ್ತಿಯರು ಇಂದು ಸಭೆ ನಡೆಸಿದರು. ಆದರೆ ಶರ್ಮಿಳಾ ಅವರ 84 ವರ್ಷ ವಯಸ್ಸಿನ ತಾಯಿ ಶಾಖಿ ದೇವಿ, ಸಭೆಗೆ ಗೈರುಹಾಜರಾಗಿರುವುದು ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News