ಹಳ್ಳಿಗರಿಗೆ ಮೊದಲ ಆದ್ಯತೆ ಎಂದ ಅರಸು -ಬಿ.ಎನ್.ಗರುಡಾಚಾರ್
ಬಯಲುಸೀಮೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಬರದ ಬೆಂಗಾಡು. ಈ ಹಳ್ಳಿಯ ಕೃಷಿ ಕುಟುಂಬದಲ್ಲಿ 1929ರಲ್ಲಿ ಹುಟ್ಟಿದ ಬಿ.ಎನ್. ಗರುಡಾಚಾರ್, ಹುಟ್ಟುತ್ತಲೇ ಕಷ್ಟವನ್ನು ಬೆನ್ನಿಗೆ ಕಟ್ಟ್ಟಿಕೊಂಡು ಬಂದವರು. ಎಮ್ಮೆ ದನ ಕಾದು, ಸಗಣಿ ಬಾಚಿ ಬೇಸಾಯದ ಬಾಳುವೆ ಕಲಿತವರು. ತಂದೆಯ ಅಕಾಲಿಕ ಮರಣದ ನಂತರ ಕಡು ಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಅಮ್ಮ ಆಸರೆಯಾದರು. ಬಂಧುಗಳ, ಹಿತೈಷಿಗಳ ನೆರವಿನಲ್ಲಿ ಬೆಳೆದ, ಹಳ್ಳಿಯ ಕೂಲಿ ಮಠದಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಬಾಲಕ ಗರುಡಾಚಾರ್, ಗೊರೂರು, ಹಾಸನ, ಮೈಸೂರುಗಳಲ್ಲಿ ಅಲೆದಾಡಿ, ಅವರಿವರ ಮನೆಯಲ್ಲಿ ಆಶ್ರಯ ಪಡೆದು, ವಾರಾನ್ನ ಉಂಡು ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಮುಂದುವರಿದು, 1953ರಲ್ಲಿ ಐಪಿಎಸ್ ಪಾಸ್ ಮಾಡಿ, ಮೊದಲಿಗರೆನಿಸಿಕೊಂಡರು. ಓದಿನ ನಂತರ ಸರ್ವೇಯರ್, ಅಬಕಾರಿ ಇನ್ಸ್‌ಪೆಕ್ಟರ್ ಕೆಲಸಕ್ಕೆ ಸೇರಿದರು. ಅಲ್ಲಿಂದ ನೇರವಾಗಿ ಐಪಿಎಸ್ ಮಾಡಿ, ತಿರುವನ್ವೇಲಿಯಲ್ಲಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಹುದ್ದೆ ಅಲಂಕರಿಸಿದ ಗುರುಡಾಚಾರ್‌ಗೆ, ಬಿಂಡಿಗನವಿಲೆಯ ಬಡತನ, ಹಸಿವು, ಅವಮಾನ, ಹಿಂಜರಿಕೆ, ಮುಗ್ಧತೆ, ಪ್ರಾಮಾಣಿಕತೆ ಎಲ್ಲವೂ ಬೆನ್ನಿಗಿದ್ದವು. ಅವುಗಳ ಅಗಾಧ ಅನುಭವ ಅವರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವಲ್ಲಿ; ಪ್ರಶಸ್ತಿ, ಪುರಸ್ಕಾರ, ಪ್ರಶಂಸೆ ಪಡೆಯುವಲ್ಲಿ ಉದ್ದಕ್ಕೂ ಸಹಕರಿಸಿದ್ದವು. ಪೊಲೀಸ್ ವೃತ್ತಿಯಲ್ಲಿ ಶಿಸ್ತು ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಗರುಡಾಚಾರ್ ಬಹಳ ಬೇಗ ಉನ್ನತ ಸ್ಥಾನಗಳನ್ನು ಅಲಂಕರಿಸಿ, ಅಧಿಕಾರಸ್ಥ ರಾಜಕಾರಣಿಗಳ ಕಣ್ಣಿಗೆ ಬಿದ್ದಿದ್ದರು. ಕೊಪ್ಪಳ, ಹುಮ್ನಾಬಾದ್, ತುಮಕೂರು, ಬಳ್ಳಾರಿ, ಬೆಂಗಳೂರು ಜಿಲ್ಲಾ ಎಸ್ಪಿಯಾಗಿ ಉತ್ತಮ ಸೇವೆ ಸಲ್ಲಿಸಿ ಹೆಸರಾಗಿದ್ದರು. 1972ರಲ್ಲಿ ಡಿಐಜಿಯಾಗಿದ್ದಾಗ, 1975ರಲ್ಲಿ ಇಂಟಲಿಜೆನ್ಸ್ ಡಿಐಜಿ ಆದಾಗ, 1976ರಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಾಗ- ಮುಖ್ಯಮಂತ್ರಿ ದೇವರಾಜ ಅರಸರ ಆಡಳಿತವಿತ್ತು. ಆನಂತರ ಅಡಿಷನಲ್ ಐಜಿ, ಡಿಜಿ ಮತ್ತು ಐಜಿಪಿಯಾಗಿ ನಿವೃತ್ತರಾದರು. ಖಡಕ್ ಅಧಿಕಾರಿ ಎಂದೇ ಹೆಸರು ಪಡೆದ ಗರುಡಾಚಾರ್ ವೀರೇಂದ್ರ ಪಾಟೀಲ್, ದೇವರಾಜ ಅರಸು, ಗುಂಡೂರಾವ್, ಹೆಗಡೆಯವರೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದರು. 1975ರ ತುರ್ತು ಪರಿಸ್ಥಿತಿಯಲ್ಲಿ ಇಂಟಲಿಜೆನ್ಸ್ ಐಜಿಯಾಗಿ, ರಾಷ್ಟ್ರಮಟ್ಟದ ರಾಜಕೀಯ ನಾಯಕರನ್ನು ಬಂಧಿಸಿ, ಜೈಲಿಗೆ ಹಾಕುವ ಮೂಲಕ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದರು. ದೇವರಾಜ ಅರಸರನ್ನು 1962ರಿಂದ ಬಲ್ಲವರಾಗಿದ್ದು, ಅವರು ಮುಖ್ಯಮಂತ್ರಿಯಾಗಿದ್ದಾಗ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡು, ನಾಲ್ಕು ವರ್ಷಗಳ ಕಾಲ ಕಮಿಷನರ್ ಹುದ್ದೆಯಲ್ಲಿದ್ದು, ಪ್ರತಿದಿನ ಅರಸು ಅವರೊಂದಿಗೆ ಮುಖಾಮುಖಿಯಾಗುತ್ತಿದ್ದರು.
60ರ ದಶಕದಲ್ಲಿ ಹೈದರಾಬಾದ್‌ನಲ್ಲಿ ಕಲಿತ ಉರ್ದುವನ್ನು ಇಂದಿಗೂ ಬಿಡದೆ, ಪ್ರತಿದಿನ ಡೈಲಿ ಸಾಲಾರ್ ಉರ್ದು ಪತ್ರಿಕೆಯನ್ನು ತಪ್ಪದೆ ಓದುವ 87ರ ಹರೆಯದ ಗುರುಡಾಚಾರ್, ಮಗನ ಪ್ರತಿಷ್ಠಿತ ಗರುಡಾ ಮಾಲ್‌ನಲ್ಲಿ, ಏಳನೆ ಮಹಡಿಯಲ್ಲಿ ಯುವಕರನ್ನೂ ನಾಚಿಸುವ ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇವರಾಜ ಅರಸು ಬಗ್ಗೆ ಕೇಳಿದರೆ ‘‘ಬಹಳ ದೊಡ್ಡ ಮನುಷ್ಯ’’ ಎಂದು ಆ ಕಾಲಕ್ಕೇ ಹೋಗಿ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ಹಳ್ಳಿ ಜನಗಳಿಗೆ ಆದ್ಯತೆ
ದೇವರಾಜ ಅರಸು ಹಳ್ಳಿಯಿಂದ ಬಂದವರು, ಕೃಷಿ ಕುಟುಂಬದ ಕಷ್ಟ-ಸುಖ ಉಂಡವರು. ಆ ಕಾಲಕ್ಕೇ ಪದವಿ ಪಡೆದಿದ್ದರೂ, ಸರಕಾರಿ ಕೆಲಸಕ್ಕೆ ಹೋಗದೆ, ಹಳ್ಳಿಗೆ ಮರಳಿ ಮಣ್ಣಿನೊಂದಿಗೆ ಬೆರೆತು ಬದುಕಿದವರು. ಹಾಗಾಗಿ ಹಳ್ಳಿಯವರ ಸಹಜ ಹಿಂಜರಿಕೆ, ಮುಗ್ಧತೆ ಮತ್ತು ನೇರವಾಗಿ ಮಾತನಾಡುವ ಗುಣ ಅರಸರಲ್ಲಿತ್ತು. ಅವರಲ್ಲಿ ಹಳ್ಳಿ ಎನ್ನುವುದು ಮೈ ಮನಗಳೊಂದಿಗೆ ಬೆರೆತಿತ್ತು. ಹಾಗಾಗಿಯೇ ಮುಖ್ಯಮಂತ್ರಿ ಅರಸರಿಗೆ ನಮ್ಮಂತಹ ಅಧಿಕಾರಿಗಳು ಎದುರಾದರೆ, ಹೊಸ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ವಿವರಿಸಿದರೆ, ‘‘ಹಳ್ಳಿ ಜನಗಳ ಬಗ್ಗೆ ಅನುಕಂಪ ಇರಲಿ’’ ಎಂದು ಒತ್ತಿ ಹೇಳುತ್ತಿದ್ದರು. ಇದವರ ಸ್ಟಾಂಡಿಂಗ್ ಇನ್ಸ್‌ಟ್ರಕ್ಷನ್ ಆಗಿತ್ತು.
ಒಮ್ಮೆ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಅರಸರು, ‘‘ಹಳ್ಳಿಗಾಡಿನ ಮಕ್ಕಳಿಗೆ ದೊಡ್ಡ ದೊಡ್ಡ ಪ್ರಶ್ನೆ ಹಾಕಬೇಡಿ, ಭಯ ಬೀಳಿಸಿ ಕೆಲಸ ಕೊಡದೆ ವಂಚಿಸಬೇಡಿ, ಅವರಿಗೆ ಅನುಕೂಲ ಮಾಡಿಕೊಡಿ’’ ಎಂದಿದ್ದರು. ಅಧಿಕಾರದಲ್ಲಿರುವವರು ಹೀಗೆ ಹೇಳುವುದು ಕಡಿಮೆ. ಹೆಚ್ಚಿಗೆ ಅಂದರೆ ಒಬ್ಬಿಬ್ಬರ ಕೆಲಸಕ್ಕೆ ಶಿಫಾರಸ್ಸು ಮಾಡಬಹುದು. ಆದರೆ ಸರಕಾರಿ ನೇಮಕಾತಿಯಲ್ಲಿ ಹಳ್ಳಿಗಾಡಿನ ಜನರ ಬಗ್ಗೆ ರಿಯಾಯಿತಿ ತೋರಿಸಿ ಎಂದು ಮುಖ್ಯಮಂತ್ರಿಗಳೇ ಖುದ್ದಾಗಿ ಹೇಳಿದ್ದು, ಅರಸು ಮಾತ್ರ.
‘‘ಹಳ್ಳಿಗಾಡಿನಿಂದ ಬಂದ ಬಡ ಪ್ರತಿಭಾವಂತರಿಗೆ ಅವಕಾಶ ಮತ್ತು ಅಧಿಕಾರ ನೀಡಿ. ನಾನು ಕೂಡ ಅಂಥ ಸ್ಥಿತಿಯಿಂದ ಬಂದವನು. ನೀವೂ ಕೂಡ ಹಳ್ಳಿಯಿಂದ ಬಂದು, ಐಪಿಎಸ್ ಪಾಸ್ ಮಾಡಿ ಉನ್ನತ ಹುದ್ದೆಯಲ್ಲಿದ್ದೀರಿ. ಈ ಅಧಿಕಾರ ನಿಮಗೆ ಕೊಟ್ಟಿರುವ ಧೈರ್ಯ ಮತ್ತು ಸೌಲಭ್ಯಗಳ ಅರಿವಿದೆಯಲ್ಲ, ಇದನ್ನು ಇನ್ನಷ್ಟು ಜನರಿಗೆ ವಿಸ್ತರಿಸಿ. ಆ ನಂತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಾಗುವ ಬದಲಾವಣೆಯನ್ನು ಗಮನಿಸಿ’’ ಎಂದ ದೊಡ್ಡ ಮನುಷ್ಯ ಅರಸು. ಅವರ ಮಾತಿನಲ್ಲಿ, ವರ್ತನೆಯಲ್ಲಿ ಪ್ರೀತಿ ಕಾಳಜಿ ಅನುಕಂಪ ಹಾಸುಹೊಕ್ಕಾಗಿತ್ತು.
ಔದಾರ್ಯದ ಪರಮಾವಧಿ
ಮುಖ್ಯಮಂತ್ರಿ ನಿವಾಸದ ಗೇಟಿನಲ್ಲಿ ನಿಂತ ಪೇದೆಯತ್ತ ಮುಖ್ಯಮಂತ್ರಿಗಳು ಗಮನ ಹರಿಸುವುದು ಕಡಿಮೆ. ಕಾರಿನಲ್ಲಿ ಹೋಗಿ ಬರುವ ಅವರಿಗೆ ನಿಂತಿದ್ದ ಪೇದೆ ಕಾಣಬಹುದೆ ಹೊರತು, ಕಾರಿನಿಂದ ಕೆಳಕ್ಕಿಳಿದು ಅವರ ಯೋಗಕ್ಷೇಮ ವಿಚಾರಿಸಿದ ಉದಾಹರಣೆಯೇ ಇಲ್ಲ. ಆದರೆ ದೇವರಾಜ ಅರಸು ಆ ಪೇದೆಯನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಮನೆ, ಮಡದಿ, ಮಕ್ಕಳ ಬಗ್ಗೆ ಕಕ್ಕುಲತೆಯಿಂದ ಕೇಳುತ್ತಿದ್ದರು. ಒಂದು ಸಲ ಹೀಗೆಯೇ ಅರಸರು ಒಬ್ಬ ಪೇದೆಯನ್ನು, ‘ಏನಪ್ಪ, ಬಟ್ಟೆ ಹೇಗಿದೆ’ ಎಂದರು. ‘ಬಟ್ಟೇನೆ ಕೊಟ್ಟಿಲ್ಲ ಬುದ್ಧಿ’ ಅಂದ. ತಕ್ಷಣ ನನ್ನ ಕರೆದು ‘ಯಾಕ್ರಿ ಕೊಟ್ಟಿಲ್ಲ’ ಎಂದು ಕೂಗಾಡಿದರು. ಅಷ್ಟೇ ಅಲ್ಲ, ‘ನೀವೇನೋ ದೊಡ್ಡ ಅಧಿಕಾರಿಗಳು, ಬೆಳೆದುಬಿಟ್ಟಿದ್ದೀರಿ, ನಿಮಗಾದರೆ ಆಳು-ಕಾಳು, ಸುಸಜ್ಜಿತ ಮನೆ, ಸವಲತ್ತು, ಸೌಲಭ್ಯ, ಸೌಕರ್ಯ ಎಲ್ಲವೂ ಇದೆ. ಇಎಸ್‌ಐ, ವರ್ಗಾವಣೆ, ಬಡ್ತಿಯೂ ಇದೆ. ಅವರಿಗೇನಿದೆ. 18 ಗಂಟೆ ಕೆಲಸ ಮಾಡ್ತರಪ್ಪ ಅವರು, ಅವರಿಗೆ ಅನುಕೂಲ ಮಾಡಿ ಕೊಡಬೇಕು. ಅವರಿಗೆ ಕ್ವಾಟ್ರರ್ಸ್ ಇದೆಯಾ?’’ ಎಂದು ಪ್ರಶ್ನಿಸಿದರು. ನಾನು ಹೂಂಗುಟ್ಟ ನಂತರ, ‘‘ಅವರಿಗೆ ಇರಬಾರದ? ಅವರು ಚೆನ್ನಾಗಿದ್ರೆ ನಾವು ಚೆನ್ನಾಗಿರದಪ್ಪ’’ ಎಂದಿದ್ದರು. ತಕ್ಷಣ ಏನನ್ನೋ ನೆನಪು ಮಾಡಿಕೊಂಡು, ‘‘ಪೇದೆಯಾಗಿ 20-25 ವರ್ಷ ಕೆಲಸ ಮಾಡ್ತರೆ, ಅವರು ನಿವೃತ್ತಿಯಾಗುವ ಸಮಯಕ್ಕಾದರೂ ಸಬ್ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಪಡೆಯುವಂತಾದರೆ, ಅವರಿಗೆ ಅವರ ವೃತ್ತಿಯ ಬಗ್ಗೆ ಗೌರವ ಬರುತ್ತದೆ, ಸಮಾಜದಲ್ಲಿ ಅವರಿಗೊಂದು ಸ್ಥಾನಮಾನ ಸಿಗುತ್ತದೆ, ಮತ್ತೊಬ್ಬರಿಗೆ ಮಾದರಿಯಾಗುತ್ತದೆ’’ ಎಂದರು. ಮುಂದುವರಿದು, ‘‘ನಿಮ್ಮ ಇಲಾಖೆಯಲ್ಲಿ ಮಹಿಳಾ ಪೊಲೀಸ್ ಎಷ್ಟು ಜನ ಇದಾರೆ’’ ಎಂದರು. ನಾನು ‘‘30 ಸಾವಿರ ಇರಬಹುದು ಸಾರ್’’ ಎಂದೆ. ‘‘ಸಾಲದು, ಸಾಲದು, ಮಹಿಳೆ ಮತ್ತು ಪುರುಷರು ಜನಸಂಖ್ಯೆಯಲ್ಲಿ ಹೆಚ್ಚೂಕಡಿಮೆ ಸಮನಾಗಿದ್ದಾರೆ. ಹಾಗಾಗಿ ಇಲಾಖೆಯಲ್ಲಿಯೂ ಮಹಿಳಾ ಪೊಲೀಸ್ ಸಂಖ್ಯೆ ಹೆಚ್ಚು ಮಾಡಿ’’ ಎಂದರು. ಒಟ್ಟಿನಲ್ಲಿ ಪೊಲೀಸ್ ಪೇದೆಯಿಂದ ಹಿಡಿದು ಐಜಿಪಿವರೆಗೆ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು. ಎಲ್ಲರ ಬಗ್ಗೆಯೂ ಕಾಳಜಿ ಹೊಂದಿದ್ದರು. ಕಾಯ್ದೆ ಕಾನೂನಿಗೆ ಬೆಲೆ ಕೊಡುತ್ತಿದ್ದರು. ಅವರ ಕಾಲದಲ್ಲಿ ಲಾ ಅಂಡ್ ಆರ್ಡರ್ ಪ್ರಾಬ್ಲಂ ಇರಲಿಲ್ಲ. ಇಲಾಖೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪವಿರಲಿಲ್ಲ.
ಸಂಕಷ್ಟದಲ್ಲೂ ಸಹನೆ
1975ರಲ್ಲಿ, ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರ ಗೆಲುವನ್ನು ಅಸಿಂಧುಗೊಳಿಸಿತು. ಇಂದಿರಾ ಗಾಂಧಿ ಆಗ ಪ್ರಧಾನ ಮಂತ್ರಿ, ಕಾಂಗ್ರೆಸ್ಸಿನ ಅಧಿನಾಯಕಿ. ದೇಶದಲ್ಲಿ ರಾಜಕೀಯ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ಜರಗತೊಡಗಿದ್ದ ಕಾಲವದು. ಇಂದಿರಾ ಗಾಂಧಿಯವರು ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳ ಮುಖ್ಯಮಂತ್ರಿಗಳ ತುರ್ತು ಸಭೆಯನ್ನು ಕರೆದಿದ್ದರು. ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಈ ವಿಷಯ ಮುಟ್ಟಿಸಬೇಕಿತ್ತು. ತುಂಬ ಸೆನ್ಸಿಟಿವ್ ಇಷ್ಯೂ, ಅರಸರ ಮೂಡ್ ನೋಡಿಕೊಂಡು, ಅವರಿಗೆ ಆಘಾತವಾಗದಂತೆ ಬಹಳ ಎಚ್ಚರಿಕೆಯಿಂದ ಸುದ್ದಿಯನ್ನು ಮುಟ್ಟಿಸಬೇಕೆಂದು ನನ್ನ ಮೇಲಾಧಿಕಾರಿ ರಾಮಲಿಂಗಂ ಆ ಜವಾಬ್ದಾರಿಯನ್ನು ನನಗೆ ವಹಿಸಿದರು. ನಾನಾಗ ಬೆಳಗಾವಿಯ ಡಿಐಜಿಯಾಗಿದ್ದು, ಬಾಗಲಕೋಟೆ ಐಬಿಯಲ್ಲಿ ತಂಗಿದ್ದೆ. ದೇವರಾಜ ಅರಸು ಅದಾಗ ತಾನೆ ಗುಳೇದಗುಡ್ಡಕ್ಕೆ ಭೇಟಿ ನೀಡಿ, ಬೆಳಗಿನ ಜಾವ 4 ಗಂಟೆಗೆ ಬಂದು ಬಾಗಲಕೋಟೆ ಐಬಿಯಲ್ಲಿ ಮಲಗಿದ್ದರು. ನಾನು ಮೊದಲಿಗೆ ಅರಸರ ಆಪ್ತ ಗೆಳೆಯ ಆರ್.ಎಂ.ದೇಸಾಯಿಗೆ ವಿಷಯ ತಿಳಿಸಿದೆ. ಅವರ ಮೂಲಕ ಅರಸು ಅವರನ್ನು ಕಂಡು ಪರಿಸ್ಥಿತಿಯ ಗಂಭೀರತೆಯನ್ನು, ದಿಲ್ಲಿಗೆ ತೆರಳಬೇಕಾದ ತುರ್ತನ್ನು ವಿವರಿಸಿದೆ. ಅರಸು ವಿಚಲಿತರಾಗಲಿಲ್ಲ. ಏನೋ ಯೋಚಿಸುತ್ತ, ‘‘ಹೌದಾ, ನೀವೂ ಬಂದ್ಬಿಡಿ ಹೈದರಾಬಾದ್‌ಗೆ, ಅಲ್ಲಿಂದ ನಾನು ದಿಲ್ಲಿಗೆ ಹೋಗ್ತೇನೆ’’ ಎಂದರು. ಅರಸರೊಂದಿಗೆ ಕಾರಿನಲ್ಲಿ ಹೈದರಾಬಾದ್‌ಗೆ ಪ್ರಯಾಣ. ಅಂತಹ ಸಮಯದಲ್ಲೂ ಅವರು ನನ್ನ ಯೋಗಕ್ಷೇಮ ವಿಚಾರಿಸಿ, ಹೈದರಾಬಾದ್‌ನಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರು. ನಾನವರನ್ನು ಏರ್‌ಪೋರ್ಟ್‌ವರೆಗೆ ಬಿಟ್ಟು, ವಾಪಸ್ ಬಂದೆ. ಕೆಲಸ ಮಾಡುವ ಅಧಿಕಾರಿಗಳನ್ನು ಕಂಡರೆ ಅರಸರಿಗೆ ತುಂಬಾ ಇಷ್ಟ. ಅವರಿಗೆ ಸಹಕಾರ ನೀಡಿ ಸೌಲಭ್ಯ ಕಲ್ಪಿಸಿಕೊಡುತ್ತಿದ್ದರು. ಸರಕಾರ ನಿಮ್ಮ ಜೊತೆ ಇದೆ ಎಂದು ಧೈರ್ಯ ತುಂಬುತ್ತಿದ್ದರು. ಅಂತಹ ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದು ನನ್ನ ಭಾಗ್ಯ.
ಬಾಗಲಕೋಟೆಯ ಐಬಿಯಲ್ಲಿ ಅರಸರನ್ನು ಭೇಟಿಯಾದ 15 ದಿನಕ್ಕೆ ಸರಿಯಾಗಿ ಬೆಂಗಳೂರಿನ ಐಜಿಯಿಂದ ಫೋನ್ ಬಂತು, ‘‘ಅರ್ಜೆಂಟ್ ಹೊರಟು ಬನ್ನಿ, ಹೆಂಡತಿಗೂ ವಿಷಯ ತಿಳಿಸಬೇಡಿ’’ ಎಂದು. ಇಲ್ಲಿಗೆ ಬಂದರೆ, ನನಗಾಗಿಯೇ ಇಂಟಲಿಜೆನ್ಸ್ ಡಿಐಜಿ ಎಂಬ ಹೊಸ ಹುದ್ದೆ ಸೃಷ್ಟಿಸಿ, ಮೊದಲ ಬಾರಿಗೆ ನನ್ನನ್ನು ನೇಮಿಸಿ, ಆ ತಕ್ಷಣವೇ ಕೆಲಸಕ್ಕೆ ಹಾಜರಾಗಿ ಎಂದರು. ಅದು ಏನಪ್ಪಾ ಅಂದರೆ, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಕೇಂದ್ರ ಸರಕಾರದ ವಿರುದ್ಧವಿರುವ ರಾಜಕೀಯ ನಾಯಕರನ್ನು ಸುಳಿವು ನೀಡದೆ, ಬಂಧಿಸುವ ಸೀಕ್ರೆಟ್ ಕೆಲಸವಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ದಿಲ್ಲಿಯ ರಾಜಕೀಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ಎಸ್.ಎನ್.ಮಿಶ್ರಾ ಇನ್ನು ಮುಂತಾದವರು ಬೆಂಗಳೂರಿನಲ್ಲಿದ್ದರು. ವಾರೆಂಟ್ ಹಿಡಿದು ಹೋಗಿ ಅವರನ್ನು ಬಂಧಿಸಿದ್ದಾಯಿತು. ಜೈಲಿನಲ್ಲಿಟ್ಟಿದ್ದೂ ಆಯಿತು. ಆಗ ದೇವರಾಜ ಅರಸು ಮತ್ತೆ ಬಂದರು. ‘‘ಅವರು ರಾಜಕೀಯ ಕೈದಿಗಳು. ನಮ್ಮ ಅತಿಥಿಗಳು. ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ನಮ್ಮನ್ನು ಹೇಗೆ ನೋಡ್ಕೋತೀರೋ ಹಾಗೆ ಅವರನ್ನು ನೋಡ್ಕೋಬೇಕು’’ ಎಂದು ತಾಕೀತು ಮಾಡಿದರು. ದ್ವೇಷಾಸೂಯೆಗಳೇ ಇಲ್ಲದ ನಿರ್ಮಲ ಮನಸ್ಸಿನ ಅಪ್ಪಟ ಮನುಷ್ಯ ಅರಸು.
ಸಿಪಿ ಮಾಡಿದ್ದೇ ಅರಸು
1.11.1976ರಲ್ಲಿ ನನ್ನನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಆಯ್ಕೆ ಮಾಡಿದ್ದೇ ದೇವರಾಜ ಅರಸು. ಅವತ್ತಿನಿಂದ 1980ರವರೆಗೆ, ಅಂದರೆ ಅವರ ಮುಖ್ಯಮಂತ್ರಿಯ ಅವಧಿ ಮುಗಿಯುವವರೆಗೂ ನಾನು ಸಿಟಿ ಕಮಿಷನರ್ ಆಗಿದ್ದೆ. ನಾಲ್ಕು ವರ್ಷ ಮೂರು ತಿಂಗಳು. ಇಲ್ಲಿಯವರೆಗೆ ನನ್ನದೇ ಅತಿ ಹೆಚ್ಚಿನ ಸೇವಾವಧಿ ಅಂತ ಕಾಣುತ್ತದೆ.
ಸಿಟಿ ಕಮಿಷನರ್ ಆಗಿದ್ದಾಗ ಪ್ರತಿದಿನ ದೇವರಾಜ ಅರಸು ಅವರನ್ನು ಭೇಟಿ ಮಾಡುತ್ತಿದ್ದೆ. ನಗರದ ಆಗುಹೋಗುಗಳ ಕುರಿತು ವರದಿ ಒಪ್ಪಿಸುತ್ತಿದ್ದೆ. ಒಂದು ಸಲ, ನಗರದ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಕ್ಯಾಬರೆ ಡಾನ್ಸ್ ಮಿತಿಯ ಗಡಿ ದಾಟಿದೆ, ಅದು ಸಮಾಜದ ಸ್ವಾಸ್ಥ ಕೆಡಿಸುತ್ತಿದೆ ಎಂಬ ದೂರು ಬಂತು. ಶಾಂತಿ ಸುವ್ಯವಸ್ಥೆಗೆ ಭಂಗ ಬರುತ್ತದೆ ಎಂಬ ಕಾರಣಕ್ಕಾಗಿ ನಾನು ಕ್ಯಾಬರೆ ಡಾನ್ಸ್ ಅನ್ನು ನಿಷೇಧಿಸಿದೆ. ಕ್ಯಾಬರೆಯನ್ನೇ ಮುಖ್ಯ ಕಸುಬನ್ನಾಗಿ ಮಾಡಿಕೊಂಡ ಡಾನ್ಸರ್‌ಗಳು ನೇರವಾಗಿ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಭೇಟಿ ಮಾಡಿ, ತಮ್ಮ ಅಳಲನ್ನು ತೋಡಿಕೊಂಡರು. ಆಗ ಅವರಿಗೆ ‘‘ಪೊಲೀಸ್ ಅಧಿಕಾರಿಗಳಿಗೆ ತಿಳಿಸುತ್ತೇನೆ’’ ಎಂದು ಹೇಳಿ ಕಳುಹಿಸಿದರು. ಆ ನಂತರ ಅರಸು, ತಮ್ಮ ಆಪ್ತರನ್ನು ಕರೆದು ‘‘ಕ್ಯಾಬರೆ ಡಾನ್ಸ್ ಅಂದರೆ ಏನು, ನೋಡಬೇಕಲ್ಲ’’ ಎಂದರಂತೆ. ಮುಖ್ಯಮಂತ್ರಿಗಳು ಕೇಳಿದರೆ, ಸುತ್ತಲಿದ್ದವರು ಸುಮ್ಮನಿರುವುದಕ್ಕಾಗುತ್ತದೆಯೇ? ಅವರಿಗಾಗಿಯೇ ಗುಪ್ತವಾಗಿ ಅರೇಂಜ್ ಮಾಡಲಾಗಿತ್ತಂತೆ. ಅದನ್ನು ನೋಡಿದ ಅರಸು ಮಹಿಳೆಯರ ಬಗ್ಗೆ ಕನಿಕರ ಉಂಟಾಗಿ, ಮನನೊಂದು ಮಾತನಾಡಿದ್ದರಂತೆ.
ಎಂದಿನಂತೆ ನಾನು ಹೋಗಿ ಅವರಿಗೆ ವರದಿ ಒಪ್ಪಿಸುವಾಗ, ‘‘ಅದೇನೋ ಕ್ಯಾಬರೆ ಡಾನ್ಸ್ ನಿಷೇಧ ಮಾಡಿದ್ದೀರಂತೆ. ಪಾಪ, ಮಹಿಳೆಯರು. ಅವರಿಗೆ ಅದು ಉದ್ಯೋಗ, ಜೀವನೋಪಾಯ. ಮಿತಿ ಮೀರದಂತೆ ಅವರಿಗೆ ಹೇಳಿದ್ದೇನೆ. ನೀವೂ ಅಷ್ಟೇ, ಅವರಿಗೆ ತೊಂದರೆ ಕೊಡಬೇಡಿ. ನೀವೂ ಬದುಕಿ ಅವರನ್ನೂ ಬದುಕಲು ಬಿಡಿ’’ ಎಂದರು. ನಾನು ಸಮಾಜದ ಸ್ವಾಸ್ಥದ ಬಗ್ಗೆ ಯೋಚಿಸಿದರೆ, ಅವರು ಅವರ ಬದುಕಿನ ಬಗ್ಗೆ ಯೋಚಿಸಿದ್ದರು. ಕರುಣಾಮಯಿ, ಮತ್ತೆ ಸಿಗಲ್ಲ ಅಂಥೋರು.
ಷಾ ಕಮಿಷನ್ ಮುಂದೆ...
ದೇವರಾಜ ಅರಸು ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ರೌಡಿಗಳ ಉಪಟಳ ಮಿತಿಮೀರಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಗಳನ್ನು ವಿರೋಧ ಪಕ್ಷದ ನಾಯಕರು ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ, ಸಿಟಿ ಸಿವಿಲ್ ಕೋರ್ಟ್‌ನಿಂದ ನಮ್ಮ ಕಚೇರಿಗೊಂದು ಫೋನ್, ರೌಡಿಯೊಬ್ಬ ದಾಂಧಲೆ ಎಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾನೆ, ಇಲ್ಲಿರುವ ಪೊಲೀಸರಿಗೆ ನಿಯಂತ್ರಿಸುವುದು ಕಷ್ಟವಾಗುತ್ತಿದೆ, ತಕ್ಷಣ ಬನ್ನಿ ಎಂದು ಕೇಳಿಕೊಂಡಿದ್ದರು. ನಾನು ತಕ್ಷಣ ಅಲರ್ಟ್ ಆಗಿ ಕೋರ್ಟ್ ಆವರಣಕ್ಕೆ ಹೋದೆ. ಒಂದು ಕಡೆಯಿಂದ ನಾನು, ಮತ್ತೊಂದು ಕಡೆಯಿಂದ ಕೋದಂಡರಾಮಯ್ಯ, ಅಟ್ಯಾಕ್ ಮಾಡಿ, ಹಿಡಿದು ಅವನನ್ನು ಒಳಕ್ಕೆ ಹಾಕಿದೆವು. ಆತ ಕುಖ್ಯಾತ ರೌಡಿ ಜಯರಾಜ್. ಆತನಿಗೆ ಅರಸು ಅಳಿಯ ಡಾ.ನಟರಾಜ್‌ನ ಬೆಂಬಲವಿತ್ತಂತೆ.
ರೌಡಿಯ ದಾಂಧಲೆ ವಿಷಯ ಮುಖ್ಯಮಂತ್ರಿ ಅರಸು ಅವರ ಗಮನಕ್ಕೆ ಬಂದಿತ್ತು. ನಾನು ಪ್ರತಿದಿನ ಭೇಟಿ ನೀಡುವ ಸಮಯದಲ್ಲಿ, ‘‘ದಯಾ ದಾಕ್ಷಿಣ್ಯ ಇಟ್ಕೋಬೇಡಿ, ಒದ್ದುಬಿಡಿ, ಲಾಠಿ ರುಚಿ ತೋರಿಸಿ’’ ಎಂದು ಖಡಕ್ಕಾಗಿ ಹೇಳಿದ್ದರು. ಆಶ್ಚರ್ಯ ಅಂದರೆ, ರೌಡಿಯನ್ನು ಒದ್ದು ಒಳಕ್ಕೆ ಹಾಕಿದಾಗ ಅರಸು ಖುಷಿಯಾಗಿದ್ದರು. ವಿಪರ್ಯಾಸ ಅಂದರೆ, ನನ್ನನ್ನು ‘ಕಾಂಗ್ರೆಸ್ ಕಮಿಷನರ್’ ಎಂದು ಕರೆಯುತ್ತಿದ್ದರು; ಅರಸರು ರೌಡಿಗಳನ್ನು ಸಾಕುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರು. ದೇವರಾಜ ಅರಸು ಅವರ ಮೇಲೆ ಕೇಂದ್ರ ಸರಕಾರ ಷಾ ಕಮಿಷನ್ ನೇಮಿಸಿ ತನಿಖೆಗೊಳಪಡಿಸಿದಾಗ, ಆ ಸಮಯದಲ್ಲಿ ನಗರ ಪೊಲೀಸ್ ಕಮಿಷನರ್ ಆಗಿದ್ದ ನನಗೂ ಸಮನ್ಸ್ ಜಾರಿಯಾಗಿತ್ತು. ಅರಸು ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು, ಪೊಲೀಸ್ ಅಟ್ರಾಸಿಟಿ ಅತಿಯಾಗಿತ್ತು ಎನ್ನುವುದು ಅವರ ಮುಖ್ಯ ಆರೋಪವಾಗಿತ್ತು. ಎನ್‌ಕ್ವಯಿರಿ ಕಮಿಟಿ ಟೌನ್ ಹಾಲ್‌ನಲ್ಲಿ ಬೀಡುಬಿಟ್ಟಿತ್ತು. ನಾನು ಹೋಗಿ, ಕೋರ್ಟ್‌ನಲ್ಲಿ ನಡೆದ ರೌಡಿ ದಾಂಧಲೆಯನ್ನೂ ಒಳಗೊಂಡಂತೆ, ಆ ರೌಡಿಗಳ ಸುಲಿಗೆ, ನಗರದ ವಿವಿಧ ಠಾಣೆಗಳಲ್ಲಿದ್ದ ಕೇಸುಗಳು... ಎಲ್ಲವನ್ನು ಅವರ ಮುಂದಿಟ್ಟು ವಿವರಿಸಿದೆ. ಆಲಿಸಿದ ಜಸ್ಟೀಸ್ ಷಾ ಅವರಿಗೆ, ನಾನು ಮಾಡಿದ್ದು ಸರಿ ಅನ್ನಿಸಿ, ಆ ತನಿಖೆಯಿಂದ ನನ್ನನ್ನು ಕೈಬಿಟ್ಟರು. ಹಾಗೆಯೇ ಅರಸು ಅವರ ಮೇಲೂ ಒಂದೆರಡು ಆರೋಪ ಹೊರಿಸಿ ಮುಕ್ತರನ್ನಾಗಿಸಿದರು. ನಾನು ಕಮಿಷನರ್ ಆಗಿದ್ದಾಗಲೇ, ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಆಗ ಬೆಂಗಳೂರು ಪ್ರಕ್ಷುಬ್ಧವಾಗಿತ್ತು. ಅದರ ನಡುವೆಯೂ ಶಾಂತಿ ಕಾಪಾಡಿದ್ದು, ಅದಕ್ಕೆ ಅರಸು ಕಾರಣರಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದಾದ ನಂತರ ವಿಧಾನಸಭಾ ಚುನಾವಣೆ ನಡೆಯಿತು, ಅರಸು ಮತ್ತೊಂದು ಅವಧಿಗೆ ಗೆದ್ದು ಮುಖ್ಯಮಂತ್ರಿಯಾದರು. ಹಾಗೆಯೇ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಗೆ ಇಂದಿರಾ ಗಾಂಧಿ ಸ್ಪರ್ಧಿಸಿ ಗೆದ್ದರು. ಗೆದ್ದ ನಂತರ ಇಂದಿರಾ ಗಾಂಧಿ ಬೆಂಗಳೂರಿಗೆ ಬಂದುಹೋಗುವುದು ಹೆಚ್ಚಾಯಿತು. ಅವರಿಗೆ ಭದ್ರತೆ, ರಕ್ಷಣೆ ನೀಡುವಲ್ಲಿ ನನ್ನ ಪಾತ್ರ ಪ್ರಮುಖವಾಗಿತ್ತು. ಅದು ಕೂಡ ಅರಸರಿಗೆ ನನ್ನ ಕಂಡರೆ ಇಷ್ಟಪಡಲು ಮುಖ್ಯ ಕಾರಣವಾಗಿತ್ತು. ದೇವರಾಜ ಅರಸು ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದಪ್ಪ. ಮ್ಯಾಗ್ನಾನಿಮಸ್ ಪರ್ಸನ್. ಮತ್ತೆ ಹುಟ್ಟಲ್ಲ...