ಚುನಾವಣೆಯ ಮೊದಲೇ ಕಾಂಗ್ರೆಸ್, ಬಿಜೆಪಿ, ಎಸ್ಪಿಗೆ ಮಾಯಾವತಿ ಪಕ್ಷದಿಂದ ಭಾರೀ ಪ್ರಹಾರ!

Update: 2016-08-10 11:27 GMT

ಲಖ್ನೊ,ಆ.10: ಉತ್ತರ ಪ್ರದೇಶದಲ್ಲಿ ಈ ಬಾರಿ ಸರಕಾರ ರಚಿಸಬೇಕೆಂದು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್‌ಗೆ ಬಹುದೊಡ್ಡ ಹೊಡೆತವನ್ನು ಬಿಎಸ್ಪಿ ನೀಡಿದೆ. ಕಾಂಗ್ರೆಸ್‌ನ ಮೂವರು ಶಾಸಕರು ಬಹುಜನ ಸಮಾಜವಾದಿ ಪಕ್ಷದ ನೀತಿಯಲ್ಲಿ ವಿಶ್ವಾಸವಿಟ್ಟು ಪಕ್ಷಕ್ಕೆ ಸೇರಿದ್ದಾರೆಂದು ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ನಸೀಮುದ್ದೀನ್ ಸಿದ್ದೀಕಿ ಪ್ರಕಟಿಸಿದ್ದಾರೆಂದು ವರದಿಯಾಗಿದೆ.

 ನವಾಬ್ ಕಾಸಿಮ್ ಅಲಿ ಖಾನ್, ಡಾ.ಮುಸ್ಲಿಮ್ ಖಾನ್ ಹಾಗೂ ದಿಲ್‌ನವಾರ್ ಖಾನ್ ಬಿಎಸ್ಪಿ ಸೇರಿದ ಕಾಂಗ್ರೆಸ್ ಶಾಸಕರು ಎಂದು ತಿಳಿದು ಬಂದಿದೆ. ಸಮಾಜವಾದಿ ಪಾರ್ಟಿಯ ಶಾಸಕ ನವಾಜಿಶ್ ಆಲಮ್ ಖಾನ್, ಮತ್ತು ಬಿಜೆಪಿಯ ನಾಯಕ ಹಾಗೂ ಮಾಜಿ ಸಚಿವ ಅವಧೇಶ್ ವರ್ಮಾ ಕೂಡಾ ಬಿಎಸ್ಪಿ ಸೇರಿದ್ದಾರೆ ಎಂದು ನಸೀಮುದ್ದೀನ್ ಸಿದ್ದೀಕಿ ತಿಳಿಸಿದ್ದಾರೆ. ಬಿಎಸ್ಪಿಗೆ ಪಕ್ಷಾಂತರಗೊಂಡ ಈ ನಾಯಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದೇ ಎಂದು ಕೇಳಿದಾಗ ಸಿದ್ದೀಕಿ "ಈಗ ಏನನ್ನೂ ಹೇಳಲಾಗದು. ಕಾದು ನೋಡಬೇಕಿದೆ" ಎಂದು ಹೇಳಿದ್ದಾರೆಂದು ವರದಿ ತಿಳಿಸಿದೆ.

 ಕಾಂಗ್ರೆಸ್‌ಗಂತೂ ತನ್ನ ಮೂವರು ಶಾಸಕರು ಬಿಎಸ್ಪಿಯತ್ತ ಸಾಗಿರುವುದು ಬಹುದೊಡ್ಡ ಹೊಡೆತವಾಗಿ ಪರಿಣಮಿಸಲಿದೆ ಎನ್ನಲಾಗಿದ್ದು ಅದು ಮುಂದಿನ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಶತಪ್ರಯತ್ನದಲ್ಲಿರುವ ಪಕ್ಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News