ಇರೋಮ್ ಶರ್ಮಿಳಾ : ಯಾರಿಗೂ ಬೇಡವಾಗಿ ಮತ್ತೆ ಆಸ್ಪತ್ರೆ ಸೇರಿದ ಹೋರಾಟದ ಹೆಗ್ಗುರುತು

Update: 2016-08-10 18:03 GMT

ಇಂಫಾಲ್,ಆ.10: ಬದಲಾವಣೆ ಎಷ್ಟೊಂದು ಚುರುಕಿನದಾಗಿತ್ತೋ ಅಷ್ಟೇ ಕ್ರೂರವೂ ಆಗಿದೆ. ಇದು ಇರೋಮ್ ಶರ್ಮಿಳಾ ಅನುಭವಕ್ಕೆ ಬಂದಿರುವ ಕಟುಸತ್ಯ. ತನ್ನ 16 ವರ್ಷಗಳ ಸುದೀರ್ಘ ಉಪವಾಸದಿಂದಾಗಿ ಹೋರಾಟದ ಹೆಗ್ಗುರುತು ಆಗಿ ಗುರುತಿಸಿಕೊಂಡಿರುವ,ಅದರಿಂದಾಗಿಯೇ ತಾಯ್ನೆಡಿನಲ್ಲಿ ಮತ್ತು ವಿಶ್ವಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದ ಶರ್ಮಿಳಾ ಮಂಗಳವಾರ ತನ್ನ ಉಪವಾಸವನ್ನು ಅಂತ್ಯಗೊಳಿಸಿದ ಕೆಲವೇ ಗಂಟೆಗಳಲ್ಲಿ ಯಾರಿಗೂ ಬೇಡವಾಗಿಬಿಟ್ಟಿದ್ದಾರೆ.

ಸಾಮಾನ್ಯ ಬದುಕನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಭಾರೀ ದುಬಾರಿ ಬೆಲೆಯನ್ನು ಅವರು ತೆತ್ತಿರುವಂತಿದೆ. ತನ್ನವರಿಂದಲೇ ತಿರಸ್ಕರಿಸಲ್ಪಟ್ಟಿರುವ ಮತ್ತು ಉಪವಾಸದ ಅವಧಿಯಲ್ಲಿ ತನ್ನ ಬೆಂಬಲಕ್ಕೆ ನಿಂತಿದ್ದ ಸಾಮಾಜಿಕ ಕಾರ್ಯಕರ್ತರ ಮನೆಗಳಿಂದ ಹೊರದಬ್ಬಲ್ಪಟ್ಟಿರುವ 44ರ ಹರೆಯದ ಶರ್ಮಿಳಾ ಕಳೆದ 16 ವರ್ಷಗಳಿಂದಲೂ ತನ್ನ ಜೈಲುಕೋಣೆಯೂ ಆಗಿದ್ದ ಆಸ್ಪತ್ರೆಯಲ್ಲಿನ 8 ಅಡಿ ಅಗಲ 12 ಅಡಿ ಉದ್ದದ ಕೊಠಡಿಗೇ ವಾಪಸಾಗಿದ್ದಾರೆ ಮತ್ತು ಭವಿಷ್ಯವನ್ನೂ ಅಲ್ಲಿಯೇ ಕಳೆಯಬಹುದೇನೋ?

 ಹಾಗಾದರೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರದ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸಲು ರಾಜಕೀಯ ಮಾರ್ಗವನ್ನನುಸರಿಸಲು ಅವರು ಉಪವಾಸವನ್ನು ಅಂತ್ಯಗೊಳಿಸಿದಾಗ ತೆಗೆಯಲಾಗಿದ್ದ,ಮೂಗಿಗೆ ಅಳವಡಿಸಿದ್ದ ಆಹಾರ ನಳಿಕೆ ಮಾತ್ರ ಇನ್ನು ಮುಂದೆ ಕಂಡುಬರುವುದಿಲ್ಲ. ಉಳಿದಂತೆಲ್ಲ ಅದೇ ಬದುಕನ್ನು ಅವರು ಸಾಗಿಸಬೇಕಾಗಬಹುದು.

ಶರ್ಮಿಳಾರ ತಾಯಿ ಸಾಖಿ,ಅಣ್ಣ ಸಿಂಘಜಿತ್ ಮತ್ತು ಕುಟುಂಬದ ಇತರ ಸದಸ್ಯರು ಇಂಫಾಲದ ಕೊಂಗ್‌ಖಾಮ್ ಪ್ರದೇಶದಲ್ಲಿ ್ಲ ಒಟ್ಟೂ ಏಳು ಮನೆಗಳನ್ನು ಹೊಂದಿದ್ದಾರೆ. ಆದರೆ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಶರ್ಮಿಳಾರನ್ನು ಬಿಡುಗಡೆಗೊಳಿಸಿದ ಬಳಿಕ ಯಾರೂ ಅವರನ್ನು ಮನೆಗೆ ಸೇರಿಸಿಕೊಳ್ಳಲೇ ಇಲ್ಲ.

ಬಳಿಕ ಪೊಲೀಸರು ಅವರನ್ನು ಕೀಶಮ್‌ಥಾಂಗ್ ಲೈಸಮ್ ಪ್ರದೇಶದಲ್ಲಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಮಾಜಿ ಆರೋಗ್ಯ ನಿರ್ದೇಶಕ ಥಿಯುಮ್ ಸುರೇಶ್ ಅವರ ನಿವಾಸಕ್ಕೆ ಕರೆದೊಯ್ದಿದ್ದರು. ಆದರೆ ಅಲ್ಲಿಯ ಕೆಲವು ಹೆಂಗಸರು ಶರ್ಮಿಳಾರನ್ನು ಹೊರಗಿನಿಂದಲೇ ಸಾಗಹಾಕಿದ್ದರು.
ಪೊಲೀಸರು ಬಳಿಕ ಅವರನ್ನು ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಎಲ್ಲಿಯೂ ಹೋಗಲಾಗದೆ ಶರ್ಮಿಳಾ ಸ್ಥಳೀಯ ಇಸ್ಕಾನ್ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ರಾತ್ರಿ 10 ಗಂಟೆಯ ಬಳಿಕ ಅದೇ ಆಸ್ಪತ್ರೆಯ ಕೊಠಡಿಗೆ ವಾಪಸಾಗಿದ್ದಾರೆ.

ಶರ್ಮಿಳಾ ಆಸ್ಪತ್ರೆಯಲ್ಲಿಯೇ ಸುರಕ್ಷಿತರಾಗಿರುತ್ತಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದರು.

ತನ್ನ ಪ್ರತಿಭಟನೆಯನ್ನು ಅಂತ್ಯಗೊಳಿಸುವುದಾಗಿ ಶರ್ಮಿಳಾ ಜುಲೈ 26ರಂದು ಪ್ರಕಟಿಸಿದಾಗಿನಿಂದಲೂ ಅವರ ವಿರುದ್ಧ ಜನರ ಕ್ರೋಧ ಹೆಚ್ಚುತ್ತಿದೆ. ಹೋರಾಟವನ್ನು ಕೈಬಿಟ್ಟರೆ ಕೊಲ್ಲುವುದಾಗಿ ಮೂಲಭೂತ ಗುಂಪುಗಳು ಅವರಿಗೆ ಎಚ್ಚರಿಕೆಯನ್ನೂ ನೀಡಿವೆ.

ಮಂಗಳವಾರ ಜಾಮೀನು ಪಡೆದು ನ್ಯಾಯಾಲಯದಿಂದ ಹೊರಕ್ಕೆ ಬರುತ್ತಿದ್ದಂತೆ ಶರ್ಮಿಳಾ ಕಾನ್ಬಾ ಲಪ್(ಶರ್ಮಿಳಾ ರಕ್ಷಿಸಿ ಅಭಿಯಾನ)ನ ಸದಸ್ಯರು ತಮ್ಮ ‘ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಕ್ಕಾಗಿ ’ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಬ್ರಿಟಿಷ್-ಭಾರತೀಯ ಸ್ನೇಹಿತ ಡೆಸ್ಮಂಡ್ ಕುಟಿನ್ಹೋರನ್ನು ವಿವಾಹವಾಗುವ ಶರ್ಮಿಳಾರ ಬಯಕೆಗೂ ಈ ಪ್ರತಿಭಟನಾಕಾರರು ವಿರುದ್ಧವಾಗಿದ್ದಾರೆ. ಕುಟಿನ್ಹೋ ಶರ್ಮಿಳಾರನ್ನು ಪ್ರತಿಭಟನೆಯಿಂದ ವಿಮುಖಗೊಳಿಸಲು ಭಾರತ ಸರಕಾರವು ನಿಯೋಜಿಸಿದ್ದ ಹೊರಗಿನ ವ್ಯಕ್ತಿ ಎನ್ನುತ್ತಾರೆ ಅವರು.
ಮಗಳ ನಿರ್ಧಾರ ತನಗೆ ಸಂತಸವನ್ನೂ ಉಂಟು ಮಾಡಿಲ್ಲ,ದುಃಖವನ್ನೂ ಉಂಟು ಮಾಡಿಲ್ಲ. ಆದರೆ ಅವಳು 16 ವರ್ಷಗಳ ಹಿಂದೆ ಉಪವಾಸವನ್ನು ಕೈಗೊಳ್ಳುವ ಮುನ್ನ ಮಾಡಿದ್ದಂತೆ ನನ್ನೊಂದಿಗೆ ಸಮಾಲೋಚಿಸಿ ನನ್ನ ಆಶೀರ್ವಾದಗಳನ್ನು ಪಡೆದುಕೊಳ್ಳಬೇಕಾಗಿತ್ತು ಎಂದು ಶರ್ಮಿಳಾರ ತಾಯಿ ಸಾಖಿ(94)ಇತ್ತೀಚಿಗೆ ಹೇಳಿದ್ದರು.

ಅಂದ ಹಾಗೆ ಈ 16 ವರ್ಷಗಳಲ್ಲಿ ಸಾಖಿ ಒಮ್ಮೆಯೂ ಮಗಳನ್ನು ಭೇಟಿಯಾಗಿರಲಿಲ್ಲ.

ಆದರೆ ಶರ್ಮಿಳಾರ ನಿರ್ಧಾರವನ್ನು ಗೌರವಿಸಬೇಕು ಎನ್ನುವವರೂ ಬಹಳಷ್ಟು ಜನರಿದ್ದಾರೆ. ಅವರು ನಮಗಾಗಿ 16ವರ್ಷಗಳ ಕಾಲ ಹೋರಾಟ ನಡೆಸಿದರು. ಪ್ರತಿಯಾಗಿ ನಾವು ಅವರಿಗೆ ತಿರಸ್ಕಾರವನ್ನು ನೀಡಿದೆವು.ಅವರ ರಾಜಕೀಯ ಪ್ರವೇಶ ಮತ್ತು ಮದುವೆ ಬೇರೆ ವಿಷಯ.ಅದನ್ನು ಬಿಟ್ಟುಬಿಡಿ. ಆದರೆ ಅವರೊಂದಿಗೆ ಈ ನೆಲದಲ್ಲಿ ವಾಸವಾಗಿರುವ ಮನುಷ್ಯರಾಗಿ ಕನಿಷ್ಠ ಅವರ ಬಿಡುಗಡೆಯ ಮೊದಲ ದಿನವದರೂ ನಾವು ಅವರ ಬಗ್ಗೆ ಸೌಜನ್ಯವನ್ನು ಪ್ರದರ್ಶಿಸಬೇಕಿತ್ತು ಎಂದು ಖ್ಯಾತ ಸಂಗೀತಕಾರ ಅಖು ಚಿಂಗಾಂಗ್‌ಬಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News