ತಮ್ಮ ಹೇಳಿಕೆಯನ್ನೇ ಮೋದಿ ನುಂಗಿಕೊಂಡದ್ದು ಏಕೆ?

Update: 2016-08-11 18:27 GMT

ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಹತ್ಯೆ ಮಾಡಿದ ಶಂಕೆಯಿಂದ ಮುಹಮ್ಮದ್ ಅಖ್ಲಾಕ್ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿದ ಘಟನೆ ನಡೆದ ಹನ್ನೊಂದು ತಿಂಗಳ ಬಳಿಕ ಕೊನೆಗೂ ಪ್ರಧಾನಿ ನರೇಂದ್ರ ಮೋದಿ, ಗೋರಕ್ಷಕರ ಹಿಂಸಾಚಾರದ ಬಗ್ಗೆ ಮೌನ ಮುರಿದಿದ್ದಾರೆ. ಇದು ದೇಶಾದ್ಯಂತ ಗೋರಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.
‘‘ಕೆಲ ಮಂದಿ ಗೋಸಂರಕ್ಷಣೆ ಹೆಸರಿನಲ್ಲಿ ಅಂಗಡಿಗಳನ್ನು ತೆರೆದಿರುವುದು ನನಗೆ ನಿಜಕ್ಕೂ ಸಿಟ್ಟು ತಂದಿದೆ. ಕೆಲ ಮಂದಿ ರಾತ್ರಿಯ ವೇಳೆ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಹಗಲು ಗೋರಕ್ಷಕರಂತೆ ನಟಿಸುವುದು ನನ್ನ ಗಮನಕ್ಕೆ ಬಂದಿದೆ’’ ಎಂದು ಮೋದಿ ತಮ್ಮ ಟೌನ್‌ಹಾಲ್ ಶೈಲಿಯ, ಆಹ್ವಾನಿತ ಶ್ರೋತೃಗಳ ಜತೆಗಿನ ಸಂವಾದದಲ್ಲಿ ಹೇಳಿದ್ದಾರೆ.
ಮೋದಿ ಜಾಗರೂಕರಾಗಿ ಯಾವುದೇ ನಿರ್ದಿಷ್ಟ ಘಟನೆಯನ್ನು ಉಲ್ಲೇಖಿಸಿಲ್ಲವಾದರೂ, ಗುಜರಾತ್‌ನ ಉನಾದಲ್ಲಿ ಸತ್ತ ಹಸುವಿನ ಚರ್ಮ ಸುಲಿಯುತ್ತಿದ್ದ ದಲಿತರ ವಿರುದ್ಧ ಗೋರಕ್ಷಕರು ನಡೆಸಿದ ಅಮಾನವೀಯ ಹಲ್ಲೆ ಘಟನೆ ಹಿನ್ನೆಲೆಯಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾಗಿ ವಿಶ್ಲೇಷಿಸಲಾಗು ತ್ತಿದೆ. ಈ ಹಲ್ಲೆ ಕುರಿತ ವೀಡಿಯೊ ದೃಶ್ಯಾವಳಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟದ್ದು ದೇಶಾದ್ಯಂತ ತೀವ್ರ ಪ್ರತಿರೋಧ ವ್ಯಕ್ತವಾಗಲು ಕಾರಣವಾಯಿತು. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಹಾಗೂ ಪಂಜಾಬ್ ವಿಧಾನಸಭಾ ಚುನಾವಣೆಗಳಲ್ಲಿ ದಲಿತರನ್ನು ಓಲೈಸಲು ತಂತ್ರ ಹೂಡಿರುವ ಬಿಜೆಪಿಗೆ ದಲಿತರ ಆಕ್ರೋಶ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ವಾಸ್ತವವಾಗಿ ಮೋದಿ, ಇಂಥ ಗೋರಕ್ಷಕರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತೆ ರಾಜ್ಯ ಸರಕಾರಗಳಿಗೆ ಸೂಚಿಸುವ ಬದಲು ಇಂಥವರನ್ನು ಹಿಡಿದು ಶಿಕ್ಷಿಸುವಂತೆ ಕರೆ ನೀಡಬೇಕಿತ್ತು. ‘‘ಶೇ. 70 ರಿಂದ 80ರಷ್ಟು ಮಂದಿ, ಇಂಥ ಕೆಟ್ಟ ಕೆಲಸಗಳನ್ನು ಮಾಡುವುದನ್ನು ಸಮಾಜ ಸ್ವೀಕರಿಸುವುದಿಲ್ಲ. ಈ ಕೆಟ್ಟ ಕೆಲಸಗಳನ್ನು ಮುಚ್ಚಿಕೊಳ್ಳಲು ಇವರು ಗೋಸಂರಕ್ಷಕರ ಮುಖವಾಡ ಧರಿಸಿಕೊಂಡಿದ್ದಾರೆ’’ ಎಂದು ಮೋದಿ ಹೇಳಿದ್ದರು.
‘‘ಇಂತಹ ಸ್ವಯಂಸೇವಕ ಸಂಘಟನೆಗಳು ಭಯ ಹುಟ್ಟಿಸಲು, ಜನರ ವಿರುದ್ಧ ದೌರ್ಜನ್ಯ ಎಸಗಲು ಇರುವುದಲ್ಲ. ಬದಲಾಗಿ ಸಾಮಾಜಿಕ ಸೇವೆಯತ್ತ ಗಮನ ಹರಿಸಲಿ. ಕಸಾಯಿಖಾನೆಯಲ್ಲಿ ಬಲಿಯಾಗುವ ಹಸುಗಳಿಗಿಂತ ಹೆಚ್ಚು ಜಾನುವಾರುಗಳು ಪ್ಲಾಸ್ಟಿಕ್ ಸೇವಿಸಿ ಸಾಯುತ್ತಿವೆ. ಗೋಸಂರಕ್ಷಣೆ ಬಗ್ಗೆ ನಿಜವಾಗಿಯೂ ಕಾಳಜಿ ಇರುವವರು, ಹಸುಗಳು ಪ್ಲಾಸ್ಟಿಕ್ ತಿನ್ನುವುದನ್ನು ತಡೆಯಲು ಕ್ರಮ ಕೈಗೊಳ್ಳಲಿ’’ ಎಂದು ಸೂಚಿಸಿದ್ದರು. ಮೋದಿ ಎತ್ತಿರುವ ಅಂಶ ತೀರಾ ಮಹತ್ವದ್ದು. ಈ ಹೇಳಿಕೆಯನ್ನು ಹಿಂದೆ ಏಕೆ ಮಾಡಿಲ್ಲ ಎಂದು ಜನ ಅಚ್ಚರಿಪಡಬೇಕು.

ಪ್ಲಾಸ್ಟಿಕ್ ರಾಜಕೀಯ
ಕುನಾಲ್ ವೋರಾ ಅವರು ‘ಕರುಣಾ ಸೊಸೈಟಿ ಫಾರ್ ಅನಿಮಲ್ಸ್ ಅಂಡ್ ನೇಚರ್’ ಎಂಬ ಸಂಘಟನೆಗಾಗಿ ಸಿದ್ಧಪಡಿಸಿದ ‘ಪ್ಲಾಸ್ಟಿಕ್ ಕೌ’ ಎಂಬ ಸಾಕ್ಷ್ಯಚಿತ್ರದಲ್ಲಿ, ಹಸುಗಳು ಹಾಲು ನೀಡುವುದು ನಿಲ್ಲಿಸಿದ ಬಳಿಕ ಅವುಗಳ ಸ್ಥಿತಿ ಏನಾಗುತ್ತದೆ ಎನ್ನುವುದನ್ನು ಹೃದಯವಿದ್ರಾವಕವಾಗಿ ಚಿತ್ರಿಸಿದ್ದಾರೆ. ‘‘ರಾಜಕಾರಣಿಗಳ ಹೇಳಿಕೆ, ಟಿವಿ ಚರ್ಚೆ, ಪತ್ರಿಕಾ ವರದಿಗಳಲ್ಲಿ ಗೋಸಂರಕ್ಷಣೆಯ ಅನಿವಾರ್ಯತೆ ಪ್ರತಿಪಾದಿಸುವುದು ನೋಡಿದಾಗ ನನಗೆ ಬೂಟಾಟಿಕೆ ಎಂದು ಅಸಹ್ಯ ಹುಟ್ಟಿಸುತ್ತದೆ. ಈ ವಿವಾದದಲ್ಲಿ ದೊಡ್ಡ ಪ್ರಮಾಣದ ನಷ್ಟ ಅನುಭವಿಸುವುದು ಪ್ರಾಣಿಗಳು. ಬಡ ಪ್ರಾಣಿಗಳು ಈ ಚರ್ಚೆಗಳ ವಸ್ತುವಾಗುತ್ತವೆಯೇ ವಿನಃ ಯಾರೂ ನಿಜವಾಗಿಯೂ ಅವುಗಳ ಆರೈಕೆ ಮಾಡುವುದಿಲ್ಲ’’ ಎಂದು ಸಾಕ್ಷ್ಯ ಚಿತ್ರದಲ್ಲಿ ತೊಡಗಿಸಿಕೊಂಡಿದ್ದ ರುಕ್ಮಿಣಿ ಶೇಖರ್ ಹೇಳಿದ್ದರು.
ಮೋದಿ 2014ರಿಂದೀಚೆಗೆ, ಹೇಗೆ ಹಸುಗಳನ್ನು ಮಾಂಸಕ್ಕಾಗಿ ಹತ್ಯೆ ಮಾಡುವುದು ಭಾರತಕ್ಕೆ ಹೇಗೆ ಅಪಾಯಕಾರಿ ಎಂಬ ಬಗ್ಗೆ ಹಲವು ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ್ದರು. ‘‘ಗೋವಧೆ ಮೂಲಕ ದೇಶದಲ್ಲಿ ಕಾಂಗ್ರೆಸ್, ದೇಶದಲ್ಲಿ ತಿಳಿಗುಲಾಬಿ ಕ್ರಾಂತಿ ಮಾಡಿದೆ’’ ಎಂದು ಮೋದಿ ಕಳೆದ ಲೋಕಸಭಾ ಚುನಾವಣೆ ವೇಳೆ ವಾಗ್ದಾಳಿ ಮಾಡಿದ್ದರು. 2015ರ ಬಿಹಾರ ವಿಧಾನಸಭಾ ಚುನಾವಣೆ ವೇಳೆಯೂ ಮೋದಿ ಮತ್ತೆ ಗೋಹತ್ಯೆ ವಿಚಾರವನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದ್ದರು. ರಾಜ್ಯದಲ್ಲಿ ಗೋಸಂರಕ್ಷಣೆಯಾಗಬೇಕಿದ್ದರೆ, ಬಿಜೆಪಿಯನ್ನು ಬೆಂಬಲಿಸಿ ಎಂಬ ಚುನಾವಣಾ ಜಾಹೀರಾತುಗಳು ಬಿಜೆಪಿ ಪ್ರಚಾರ ತಂತ್ರದ ಭಾಗವಾಗಿದ್ದವು.
ಹಸುಗಳಿಗೆ ಇರುವ ಪ್ಲಾಸ್ಟಿಕ್ ಅಪಾಯದ ಬಗ್ಗೆ ಮೋದಿ ಯಾವುದೇ ರ್ಯಾಲಿಗಳಲ್ಲಿ ಭಾಷಣ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಹಸುಗಳು ಪ್ಲಾಸ್ಟಿಕ್ ತಿನ್ನುವುದನ್ನು ತಡೆಯುವಂತೆ ಟೌನ್‌ಹಾಲ್ ಭಾಷಣಕ್ಕೆ ಮುನ್ನ ಎಲ್ಲೂ ಮೋದಿ ಹೇಳಿರುವುದು ಗೂಗಲ್‌ನಲ್ಲಿ ಹುಡುಕಿದಾಗಲೂ ಸಿಗಲಿಲ್ಲ.
ಗೋಸೇವೆಯಲ್ಲಿ ತಮ್ಮ ಸಾಧನೆಯನ್ನು ಹೇಳಿಕೊಂಡ ಮೋದಿ, ತಾನು ಜಾನುವಾರುಗಳಿಗೆ ಆಯೋಜಿಸಿದ್ದ ಆರೋಗ್ಯ ಶಿಬಿರವೊಂದರಲ್ಲಿ ಕನಿಷ್ಠ ಎರಡು ಬಕೆಟ್ ಪ್ಲಾಸ್ಟಿಕನ್ನು ಹಸುಗಳ ಹೊಟ್ಟೆಯಿಂದ ತೆಗೆಯಲಾಗಿತ್ತು ಎಂದು ವಿವರಿಸಿದ್ದರು. ಆದರೆ ಈ ಶಿಬಿರವನ್ನು ಎಲ್ಲಿ ಯಾವಾಗ ಸಂಘಟಿಸಿ ದ್ದಾಗಿ ಮೋದಿ ಹೇಳಿಲ್ಲ. ಹಸುಗಳ ಹೊಟ್ಟೆಯಿಂದ ಪ್ಲಾಸ್ಟಿಕ್ ತೆಗೆದ ಬಗೆಗಿನ ಮೋದಿ ಬಣ್ಣನೆ, ‘ಪ್ಲಾಸ್ಟಿಕ್ ಕೌ’ ಸಾಕ್ಷ್ಯಚಿತ್ರದ ಶಸ್ತ್ರಚಿಕಿತ್ಸೆಯಂತೆಯೇ ಸಂಶಯ ಮೂಡಿಸುತ್ತದೆ.
ಮೋದಿಗೆ ನಿಜವಾಗಿಯೂ ಕಸಾಯಿಖಾನೆಗಳಿಂದ ರಕ್ಷಿಸುವ ಬದಲು ಪ್ಲಾಸ್ಟಿಕ್‌ನಿಂದ ಹಸುಗಳನ್ನು ರಕ್ಷಿಸದ ಗೋರಕ್ಷಕರ ಕೃತ್ಯದಿಂದ ಹತಾಶೆ ಯಾಗಿದ್ದರೆ, ಮೋದಿ ತಮ್ಮ ಕೋಮುವಿಷಕಾರಿ ಭಾಷಣದ ಬಗ್ಗೆ ತಮ್ಮನ್ನೇ ತಾವು ದೂಷಿಸಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ಅವರ ಭಾಷಣಗಳ ಬಗೆಗೊಮ್ಮೆ ಕಣ್ಣು ಹಾಯಿಸಿ. ಮೋದಿ ‘ತಿಳಿಗುಲಾಬಿ ಕ್ರಾಂತಿ’ ಬಗ್ಗೆ ಮಾತನಾಡಿದ್ದಾರೆಯೇ ವಿನಃ ಪ್ಲಾಸ್ಟಿಕ್ ಬಗ್ಗೆ ಮಾತನಾಡಿಲ್ಲ. ಇದರ ಹಿಂದಿನ ಕಾರಣ ಸುಸ್ಪಷ್ಟ. ಕಸಾಯಿಖಾನೆ ಬಗ್ಗೆ ಮಾತನಾಡಿದಾಗ ಸಹಜವಾಗಿಯೇ ಧಾರ್ಮಿಕ ಹಿನ್ನೆಲೆಯಲ್ಲಿ ಮತದಾರರನ್ನು ಧ್ರುವೀಕರಿಸಲು ಸಾಧ್ಯವಾಗು ತ್ತದೆ. ಆದರೆ ಪ್ಲಾಸ್ಟಿಕ್‌ನಿಂದ ಹಸುಗಳಿಗೆ ಇರುವ ಅಪಾಯದ ಬಗ್ಗೆ ಮಾತನಾಡುವುದರಿಂದ ಒಡೆದು ಆಳುವ ನೀತಿಗೆ ಯಾವ ನೆರವೂ ಆಗುವುದಿಲ್ಲ.

ಬಿಜೆಪಿ ಆದ್ಯತೆ ಏನು?
ಮೋದಿ ಹಾಗೂ ಅವರ ಸಹೋದ್ಯೋಗಿಗಳು ಜಾರಿಗೆ ತಂದ ಗೋಹತ್ಯೆ ನಿಷೇಧದ ಕಾನೂನುಗಳು ಕೂಡಾ ಗೋರಕ್ಷಕರಿಗೆ ಸ್ಪಷ್ಟವಾದ ಸಂದೇಶವನ್ನು ನೀಡಿವೆ. ಮೋದಿ ಅಥವಾ ಬಿಜೆಪಿ ಸರಕಾರ ತಂದ ಯಾವ ಕಾಯ್ದೆಗಳನ್ನೂ ಪ್ಲಾಸ್ಟಿಕ್‌ನಿಂದ ಗೋವುಗಳನ್ನು ರಕ್ಷಿಸುವ ಬಗ್ಗೆ ಉಲ್ಲೇಖವಿಲ್ಲ. ಕರುಣಾ ಸೊಸೈಟಿ 2012ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಳೆದ ತಿಂಗಳು ಸುಪ್ರೀಂಕೋರ್ಟ್ ಇತ್ಯರ್ಥಪಡಿಸಿದೆ. ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಿ ಗೋವುಗಳನ್ನು ಸಂರಕ್ಷಿಸುವಂತೆ ಕೋರಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಸಮಸ್ಯೆಯ ತೀವ್ರತೆಯ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಪ್ಲಾಸ್ಟಿಕ್ ಚೀಲಗಳ ಬಳಕೆ, ಮಾರಾಟ ಹಾಗೂ ವಿಲೇವಾರಿಯ ನಿಷೇಧದ ಸಾಧ್ಯತೆ ಪರಿಶೀಲಿಸುವಂತೆ ಆದೇಶ ನೀಡಿದೆ. ಆದರೆ ಮೋದಿ ಸರಕಾರ ಈ ಬಗ್ಗೆ ಯಾವ ಕ್ರಮವನ್ನೂ ಇದುವರೆಗೆ ಕೈಗೊಂಡಿಲ್ಲ.
ಬಿಜೆಪಿ ಕೇಂದ್ರದಲ್ಲಿ ಹಾಗೂ ಮಹಾರಾಷ್ಟ್ರ, ಹರ್ಯಾಣ ಮತ್ತು ಜಾರ್ಖಂಡ್ ಮುಂತಾದ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವುದರಿಂದ ಪಕ್ಷದ ಸರಕಾರಗಳು ಗೋಹತ್ಯೆ ನಿಷೇಧ ಕಾನೂನುಗಳನ್ನು ಬಿಗಿಗೊಳಿಸಿವೆ. ಜತೆಗೆ ಪಕ್ಷದ ಹಿರಿಯ ಮುಖಂಡರು ಗೋಮಾಂಸ ವಿವಾದವನ್ನು ಪ್ರಬಲ ಭಾವನಾತ್ಮಕ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಾಗಲೂ ಮೋದಿ ಅದನ್ನು ಖಂಡಿಸಿರಲಿಲ್ಲ.
ಅಖ್ಲಾಕ್ ಹೊರತಾಗಿಯೂ, ಗೋರಕ್ಷಕರ ದಾಳಿಗೆ ಹಲವು ಮಂದಿ ಮುಸ್ಲಿಮರು ಬಲಿಯಾಗಿದ್ದಾರೆ. ಜಾರ್ಖಂಡ್‌ನಲ್ಲಿ ಒಬ್ಬ ಜಾನುವಾರು ವ್ಯಾಪಾರಿ ಹಾಗೂ ಬಾಲಕನನ್ನು ಹತ್ಯೆ ಮಾಡಿ ಮರಕ್ಕೆ ನೇತುಹಾಕಿದ್ದು, ಕಾಶ್ಮೀರಿ ಟ್ರಕ್ ಚಾಲಕನೊಬ್ಬನನ್ನು ಹತ್ಯೆ ಮಾಡಿದ್ದು ಕೆಲ ನಿದರ್ಶನಗಳು. ಈ ಯಾವ ಘಟನೆಗಳಲ್ಲೂ ಮೋದಿ ಈ ಹಿಂಸಾಚಾರವನ್ನು ಖಂಡಿಸಿ ಬಹಿರಂಗ ಹೇಳಿಕೆ ನೀಡಲಿಲ್ಲ. ಕೇಂದ್ರ ಸಂಸ್ಕೃತಿ ಖಾತೆ ಸಚಿವ ಮಹೇಶ್ ಶರ್ಮಾ, ಜಾರ್ಖಂಡ್ ಹಾಗೂ ಹರ್ಯಾಣದ ಮುಖ್ಯಮಂತ್ರಿಗಳು, ರಾಜ್ಯ ಸಚಿವ ಸಂಜೀವ್ ಬಲಿಯಾನ್ ಇವುಗಳನ್ನು ಸಮರ್ಥಿಸಿಕೊಂಡಿದ್ದರು ಅಥವಾ ಈ ಬಗ್ಗೆ ಮೃದು ಧೋರಣೆ ಪ್ರದರ್ಶಿಸಿದ್ದರು. ಆದರೆ ಗೋರಕ್ಷಕರ ಆಕ್ರೋಶ ದಲಿತರತ್ತ ತಿರುಗಿದಾಗ ಮಾತ್ರ ಮೋದಿ ಹಾಗೂ ಅವರ ಸಲಹೆಗಾರರು, ಗೋಮಾಂಸ ವಿಚಾರದ ಬಗೆಗಿನ ತಮ್ಮ ನಿಲುವಿನಿಂದ ದೂರಕ್ಕೆ ಸರಿದರು. ಏಕೆಂದರೆ ಮುಂದಿನ ಚುನಾವಣೆಗಳಲ್ಲಿ ದಲಿತ ಮತಗಳ ಮೇಲೆ ಬಿಜೆಪಿ ವ್ಯಾಪಕವಾಗಿ ಕಣ್ಣಿಟ್ಟಿದೆ. ಈ ಕಾರಣದಿಂದ ಗೋರಕ್ಷಕರ ಕೃತ್ಯದಿಂದಾಗಬಹುದಾದ ರಾಜಕೀಯ ಪತನವನ್ನು ಲೆಕ್ಕಾಚಾರ ಹಾಕಿದರು.
ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಪದಚ್ಯುತಿ, ಹಾನಿ ತಡೆ ಕಾರ್ಯಾಚರಣೆ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಬೆನ್ ಪದಚ್ಯುತಿ ಬಿಜೆಪಿಯ ಆಂತರಿಕ ಸಂಘರ್ಷದ ಪರಿಣಾಮವಾಗಿ ಆಗಿದ್ದರೂ, ಉನಾ ಘಟನೆ ಹಿನ್ನೆಲೆಯಲ್ಲಿ ಗುಜರಾತ್‌ನ ಮುಖ್ಯಮಂತ್ರಿಯನ್ನೂ ಶಿಕ್ಷಿಸಿದ್ದೇವೆ ಎಂದು ದಲಿತರಿಗೆ ಬಿಂಬಿಸಲು ಇದೇ ಸಮಯವನ್ನು ಇದಕ್ಕಾಗಿ ಬಳಸಿಕೊಳ್ಳಲಾಯಿತು. ಮೋದಿಯವರ ಈ ಆಕ್ರೋಶಭರಿತ ಹತಾಶ ಹೇಳಿಕೆಗಳು, ದಲಿತ ಮತಬುಟ್ಟಿಗೆ ಕೈಹಾಕುವ ಹುನ್ನಾರ ಮತ್ತು ಗೋರಕ್ಷಕ ಗುಂಪುಗಳಿಗೆ ಸ್ಪಷ್ಟ ಸಂದೇಶ ಸಾರುವ ಪ್ರಯತ್ನ. ಗೋರಕ್ಷಕರು ತಮ್ಮ ಕೃತ್ಯಗಳನ್ನು ಎಸಗುವಾಗ, ಕನಿಷ್ಠ ಬಿಜೆಪಿಯ ರಾಜಕೀಯ ಅವಕಾಶಗಳಿಗೆ ಯಾವುದೇ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಸಂಘ ಪರಿವಾರಕ್ಕೆ ಸಂದೇಶ ರವಾನಿಸುವ ಪ್ರಯತ್ನ.
ಮೋದಿಯವರ ಟೌನ್‌ಹಾಲ್ ಸಭೆ ಬಳಿಕ, ಟ್ವಿಟರ್‌ನಲ್ಲಿ ‘‘ಗೋವುಗಳನ್ನು ಪೂಜಿಸುವ ಪವಿತ್ರ ಪದ್ಧತಿ ಹಾಗೂ ಗೋಸೇವೆಯ ಬಗೆಗಿನ ವಿಶೇಷ ಒಲವನ್ನು ಗೋರಕ್ಷಕರು ದುರ್ಬಳಕೆ ಮಾಡಿಕೊಳ್ಳಲಾಗದು. ಯಾರೂ ಕಾನೂನನ್ನು ಕೈಗೆ ತೆಗೆದುಕೊಂಡು ಸಾಮರಸ್ಯ ಹಾಗೂ ಒಗ್ಗಟ್ಟಿನ ಭಾವನೆಗೆ ಧಕ್ಕೆ ತರುವಂತಿಲ್ಲ’’ ಎಂದು ಟ್ವೀಟ್ ಮಾಡಿದ್ದರು.
ಕಳೆದ ಜೂನ್‌ನಲ್ಲಿ ಮೋದಿ ಸಚಿವ ಸಂಪುಟದ ಸದಸ್ಯ ಬಲಿಯನ್, ಬಿಜೆಪಿ ಸಂಸದ ಆದಿತ್ಯನಾಥ್ ಮತ್ತು ಬಿಜೆಪಿ ಸಂಸದ ಸಂಗೀತ್‌ಸೋಮ್ ಅವರು, ಅಖ್ಲಾಕ್ ಹಂತಕರನ್ನು ಸಮರ್ಥಿಸಿಕೊಂಡಿದ್ದರು ಮತ್ತು ಅಖ್ಲಾಕ್ ಕುಟುಂಬ ಗೋಮಾಂಸ ಸೇವನೆಯ ಅಪರಾಧ ಎಸಗಿದ್ದಕ್ಕಾಗಿ ಕಟ್ಟುನಿಟ್ಟಿನ ಕ್ರಮವನ್ನು ಅವರ ವಿರುದ್ಧ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ‘‘ಒಂದು ಹಸು ಕನಿಷ್ಠ 150 ಕೆ.ಜಿ. ತೂಕ ಇರುತ್ತದೆ. ಒಬ್ಬನೇ ಅದನ್ನು ತಿನ್ನಲು ಸಾಧ್ಯವಿಲ್ಲ. ವಾಸ್ತವವಾಗಿ ಏನು ನಡೆಯಿತು ಹಾಗೂ ಅಪರಾಧದಲ್ಲಿ ಯಾರು ಒಳಗೊಂಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು’’ ಎಂದು ಬಲಿಯನ್ ಆಗ್ರಹಿಸಿದ್ದರು.
ಇಂಥ ಪೈಶಾಚಿಕ ಕೃತ್ಯವನ್ನು ಪಕ್ಷದ ಸಹೋದ್ಯೋಗಿಗಳು ಸಮರ್ಥಿಸಿ ಕೊಂಡಾಗ ಕೂಡಾ ಮೋದಿ ಇದನ್ನು ಖಂಡಿಸಿರಲಿಲ್ಲ. ಇಂದು ದಲಿತರ ಮೇಲೆ ದಾಳಿ ಎಸಗಿದವರು, ಈ ಇಡೀ ಸಂಚಿನ ಭಾಗವಾಗಲು ಹಿಂದೆ ಮುಂದೆ ನೋಡಬೇಕಾಗುತ್ತದೆ. ಇದರಿಂದ ಮುಸ್ಲಿಮರ ಮೇಲೆ ಗೋವಿನ ಹೆಸರಿನಲ್ಲಿ ಎರಗುವವರಿಗೆ ಕನಿಷ್ಠ ಅಂಜಿಕೆಯಾದರೂ ಉಂಟಾಗುತ್ತದೆ ಎಂದು ನನಗೆ ಅನಿಸುವುದಿಲ್ಲ.
ಕೃಪೆ: thewire.in

Writer - ಸಿದ್ಧಾರ್ಥ ವರದರಾಜನ್

contributor

Editor - ಸಿದ್ಧಾರ್ಥ ವರದರಾಜನ್

contributor

Similar News