ತೆರವಿನಲ್ಲೂ ತಾರತಮ್ಯ..!
ಮಾನ್ಯರೆ,
ಬೆಂಗಳೂರಲ್ಲಿ ಇತ್ತೀಚೆಗೆ ಒಂದು ಗಂಟೆ ಮಳೆ ಬಂದರೆ ಸಾಕು, ‘ಸಿಲಿಕಾನ್ ಸಿಟಿ’ ಮುಳುಗಡೆಯಾಗುತ್ತದೆ. ಇದಕ್ಕೆ ಸಾಕ್ಷಿ ಮೊನ್ನೆ ಕೋಡಿಚಿಕ್ಕನಹಳ್ಳಿ ಸುತ್ತ- ಮುತ್ತ ಬಿದ್ದ ಮಳೆ. ಪರಿಣಾಮ ನೆರೆ ಬಂದು ಈ ಪ್ರದೇಶ ಅಕ್ಷರಶಃ ದ್ವೀಪದಂತಾಯಿತು. ಸಣ್ಣ ಮಟ್ಟದಲ್ಲೂ ಬೆಂಗಳೂರಲ್ಲಿ ಮಳೆ ಬಂದ್ರೆ ಸಾಕು, ಅದ್ಯಾಕೆ ಪ್ರವಾಹ ಬರುತ್ತೆ ಎಂದು ಪರಿಶೀಲಿಸಿದಾಗ ಇದಕ್ಕೆಲ್ಲಾ ಕೆರೆ, ಕಾಲುವೆ ಒತ್ತುವರಿ ಕಾರಣ ಎಂಬ ಸತ್ಯ ಬಿಬಿಎಂಪಿಗೆ ಇದೀಗ ಗೊತ್ತಾಗಿದೆ. ಈ ಕಾರಣವನ್ನು ಬಿಬಿಎಂಪಿ ಮೊದಲೇ ಕಂಡುಹಿಡಿಯಲು ಪ್ರಯತ್ನಿಸಿಲ್ಲ ಯಾಕೆ..? ಅನ್ನುವುದೇ ಮೂಲ ಪ್ರಶ್ನೆ.
ಈಗ ಕೆಲವು ಕಡೆ ನೋಟಿಸ್ ನೀಡದೆ ಏಕಾಏಕಿ ಬಿಬಿಎಂಪಿ ಒತ್ತುವರಿದಾರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ. ಕಸವನಹಳ್ಳಿ, ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಸೇರಿ ವಿವಿಧ ಕಡೆ ತೆರವು ಕಾರ್ಯಾಚರಣೆ ನಡೆದಿದೆ. ಸರಕಾರಿ ಸ್ವತ್ತನ್ನು ಬೇಕಾಬಿಟ್ಟಿ ಒತ್ತುವರಿ ಮಾಡಿರುವುದು ಎಷ್ಟು ತಪ್ಪೋ ಅದೇ ರೀತಿ ಡಾಲರ್ಸ್ ಕಾಲನಿ, ಓರಾಯನ್ ಮಾಲ್‌ನಂತಹ ಪ್ರತಿಷ್ಟಿತ ಬಡಾವಣೆಯಲ್ಲೂ ಒತ್ತುವರಿ ಮಾಡಿದ್ದಾಗಿದೆ. ಇದನ್ನು ತೆರವು ಮಾಡಲು ಬಿಬಿಎಂಪಿ ಹಿಂದೇಟು ಹಾಕುತ್ತಿರುವುದು ಏಕೆ..?
ರಾಜಕಾಲುವೆ ಒತ್ತುವರಿ ಮಾಡಲಾಗಿದೆ ಎಂಬುದು ಮೊದಲೇ ಉಪನೋಂದಣಾಧಿಕಾರಿಗೆ ಗೊತ್ತಿರಲಿಲ್ಲವೇ..? ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಹೇಗೆ ವಾಸಯೋಗ್ಯ ಪತ್ರ ನೀಡಿದರು..? ನಕ್ಷೆಯನ್ನು ಅನುಮೋದಿಸಿದರು..? ನೀರು, ವಿದ್ಯುತ್ ಸೌಲಭ್ಯಗಳನ್ನು ಹೇಗೆ ನೀಡಿದರು ಹೀಗೆ ನೂರಾರು ಪ್ರಶ್ನೆಗಳಿಗೆ ಉತ್ತರವಿದೆಯೇ?.
ಒತ್ತುವರಿ ಕಾರ್ಯಾಚರಣೆ ವಿಚಾರದಲ್ಲಿ ಬಡವರಿಗೊಂದು ನ್ಯಾಯ ಹಾಗೂ ಪ್ರಭಾವಿಗಳಿಗೊಂದು ನ್ಯಾಯ ಸೂತ್ರವನ್ನು ಬಿಬಿಎಂಪಿ ಪಾಲಿಸಿದೆ. ‘‘ರಾಜಕಾಲುವೆ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲು ಸಹಕರಿಸಿದ ಅಧಿಕಾರಿಗಳ ಹಾಗೂ ಒತ್ತುವರಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ’’ ಎಂದು ಬಿಬಿಎಂಪಿ ಹೇಳಿದರೂ ಇದು ಸದ್ಯದ ಏಟಿನಿಂದ ಪಾರಾಗುವ ತಂತ್ರವಾಗಬಾರದು. ತಪ್ಪಿತಸ್ಥರಿಗೆ ಶಿಕ್ಷೆ ಕೊಟ್ಟಿದ್ದನ್ನು ಬಹಿರಂಗಪಡಿಸಬೇಕು. ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡಗಳ ಮೇಲೆ ಕಟ್ಟಡಗಳನ್ನು ಕಟ್ಟಿ ಹಣ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಗ ಬಿಬಿಎಂಪಿ ಬಗ್ಗೆ ಜನರಿಗೆ ಗೌರವ ಬರುತ್ತದೆ.