ಕಲಬುರಗಿಯ ಖಡಕ್ ರೊಟ್ಟಿ ಆನ್‌ಲೈನ್‌ಗೂ ಎಂಟ್ರಿ

Update: 2024-10-29 07:30 GMT

ಕಲಬುರಗಿಯ ರೊಟ್ಟಿ ತಯಾರಿಕೆ ಕೇಂದ್ರವೊಂದಕ್ಕೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಭೇಟಿ ನೀಡಿ ಪರಿಶೀಲಿಸುತ್ತಿರುವುದು.

ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆ ಎಂದರೆ ಥಟ್ಟನೆ ನೆನಪಾಗುವ ಬೆಳೆಗಳು ತೊಗರಿ ಮತ್ತು ಜೋಳ. ತೊಗರಿಗೆ ಈಗಾಗಲೇ ಜಿಐ ಟ್ಯಾಗ್ ದೊರಕಿದ್ದು, ಅದರ ಬೇಳೆಯನ್ನು ‘ಭೀಮಾ ಪಲ್ಸ್’ ಎಂಬ ಬ್ರ್ಯಾಂಡ್‌ನೊಂದಿಗೆ ಮಾರುಕಟ್ಟೆಗೆ ಇಳಿದಿದೆ. ಇದೀಗ ಅದರಂತೆಯೇ ಜೋಳದ ಖಡಕ್ ರೊಟ್ಟಿಗೆ ಮಾನ್ಯತೆ ಹೆಚ್ಚಿಸಲು ಕಲಬುರಗಿ ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ.

ಜೋಳದ ರೊಟ್ಟಿ ಉತ್ತರ ಕರ್ನಾಟಕದ ಪ್ರಮುಖ ಆಹಾರವಾಗಿದೆ. ಅದರಲ್ಲೂ ಇಲ್ಲಿನ ಚಿತ್ತಾಪುರದ ಮಾಲ್ದಂಡಿ ಜೋಳದ ರೊಟ್ಟಿ ಬಹು ಉತ್ಕೃಷ್ಟವಾಗಿದೆ. ಇದನ್ನೇ ಇದೀಗ ‘ಕಲಬುರಗಿ ರೊಟ್ಟಿ’ ಎಂಬ ಬ್ರ್ಯಾಂಡ್ ಮೂಲಕ ರಾಜ್ಯದ ಮೂಲೆ ಮೂಲೆಗಳಿಗೆ, ದೇಶ- ವಿದೇಶಗಳಿಗೂ ಈ ಖಡಕ್ ರೊಟ್ಟಿಯನ್ನು ಆನ್‌ಲೈನ್‌ನಲ್ಲಿ ಸಿಗುವಂತೆ ಮಾಡಲಾಗುತ್ತಿದೆ. ಜಿಲ್ಲಾಡಳಿತದಿಂದಲೇ ರೊಟ್ಟಿ ಬಾಕ್ಸಿಂಗ್, ಪ್ಯಾಕಿಂಗ್ ಸೇರಿದಂತೆ ‘ಕಲಬುರಗಿ ರೊಟ್ಟಿ’ ಎಂಬ ಜಾಲತಾಣದ ಸೃಜನೆ, ಸಾಮಾಜಿಕ ಜಾಲತಾಣಗಳ ಮೂಲಕ ಮಾರ್ಕೆಟಿಂಗ್ ಮಾಡಲಾಗುತ್ತಿದೆ. ಈ ಮೂಲಕ ರೊಟ್ಟಿ ಮಾರಾಟಕ್ಕೆ ಈಗಾಗಲೇ ಮಾರುಕಟ್ಟೆ ಪ್ರಾರಂಭವಾಗಿದೆ.

ಆನ್‌ಲೈನ್‌ನಲ್ಲಿ ರೊಟ್ಟಿ ಮಾರಾಟಕ್ಕೆ ಇದೀಗ ಫ್ಲಿಪ್‌ಕಾರ್ಟ್, ಅಮೆಝಾನ್, ಬಿಗ್ ಬಾಸ್ಕೆಟ್ ಸೇರಿದಂತೆ ಇತರ ಕೊರಿಯರ್ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಲಬುರಗಿಯಲ್ಲಿ ರೊಟ್ಟಿಯನ್ನು ಖರೀದಿಸುವ ಬಗ್ಗೆ 2 ಹೊಟೇಲ್‌ಗಳೊಂದಿಗೂ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಇಲ್ಲಿನ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್.

ರೊಟ್ಟಿಗೆ ಬಾರ್ ಕೋಡ್, ವಿದೇಶಗಳಿಂದಲೂ ಬೇಡಿಕೆ: ಕಲಬುರಗಿ ರೊಟ್ಟಿ ಬ್ರ್ಯಾಂಡ್ ಮಾರಾಟಕ್ಕೆ ಬಾರ್ ಕೋಡ್ ರಚಿಸಲಾಗಿದ್ದು, ‘ಕ್ಯೂಆರ್’ ಕೋಡ್ ಮೂಲಕ ಗ್ರಾಹಕರು ಆರ್ಡರ್ ಮಾಡಬಹುದು. ಆನ್‌ಲೈನ್‌ನಲ್ಲಿ ರೊಟ್ಟಿ ಮಾರಾಟ ಪ್ರಾರಂಭಿಸುತ್ತಿದ್ದಂತೆ ಈಗಾಗಲೇ ದೇಶ ವಿದೇಶಗಳಿಂದಲೂ ಬೇಡಿಕೆ ಹೆಚ್ಚಾಗಿದೆ. ಅವರಿಗೂ ಈ ರೊಟ್ಟಿ ಸಿಗಲಿದೆ. ಈಗಾಗಲೇ 20 ಜನ ಸದಸ್ಯರನ್ನು ಒಳಗೊಂಡ ರೊಟ್ಟಿ ಉತ್ಪಾದಕರ ಸಂಘ ರಚಿಸಲಾಗಿದ್ದು, 2 ಪ್ರಮುಖ ಕೇಂದ್ರಗಳಲ್ಲಿ ರೊಟ್ಟಿ ಉತ್ಪಾದನೆ ನಡೆಯುತ್ತಿದೆ. ಕೃಷಿ ಇಲಾಖೆಯಿಂದ ಸಹಾಯಧನ ಮೂಲಕ 100 ಫಲಾನುಭವಿಗಳಿಗೆ ರೊಟ್ಟಿ ತಯಾರಿಸುವ ಯಂತ್ರ ನೀಡಲಾಗಿದೆ. ಅವರ ರೊಟ್ಟಿಗಳು ಸಹ ಮಾರುಕಟ್ಟೆಗೆ ಇಳಿಯಲಿವೆ.

ಎಲ್ಲೆಲ್ಲಿ ಸಿಗಲಿವೆ ಕಲಬುರಗಿ ರೊಟ್ಟಿ?

ಸದ್ಯ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಕಲಬುರಗಿ ರೊಟ್ಟಿಗಳನ್ನು ನಗರದ 3 ಪ್ರಮುಖ ಸ್ಥಳಗಳಲ್ಲಿ ಇರಿಸಲು ಕೆಲಸ ನಡೆಯುತ್ತಿದೆ. ಜಿಲ್ಲೆ ಬಿಟ್ಟರೆ ಮೊದಲ ಹಂತವಾಗಿ ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಮುಂಬೈಯಲ್ಲಿ ದೊರೆಯಲಿವೆ. ಖಡಕ್ ರೊಟ್ಟಿ ಜೊತೆಗೆ ಧಪಾಠಿ, ಹಪ್ಪಳ, ಶೇಂಗಾದ ಹಿಂಡಿ, ಸಜ್ಜೆ ರೊಟ್ಟಿ, ಕಾರ್ಯಳ ಹಿಂಡಿ ಮತ್ತಿತರ ಉತ್ಪನ್ನಗಳೂ ಸಿಗಲಿವೆ.

ರಾಜ್ಯದಲ್ಲೇ ಮೊದಲ ಪ್ರಯತ್ನ

ಜಿಲ್ಲಾಡಳಿತದಿಂದ ರೊಟ್ಟಿ ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರೊಟ್ಟಿಯನ್ನು ಬ್ರ್ಯಾಂಡ್ ಮಾಡಿಕೊಂಡು ಆನ್ ಲೈನ್‌ನಲ್ಲಿ ಮಾರಾಟ ಮಾಡುತ್ತಿರುವ ಕಾರ್ಯ ರಾಜ್ಯದಲ್ಲೇ ವಿನೂತನ ಪ್ರಯತ್ನವಾಗಿದೆ. ಇದರಿಂದ ಜೋಳ ಬೆಳೆಗಾರರಿಗೆ, ರೊಟ್ಟಿ ಉತ್ಪಾದಕರಿಗೆ ಹೆಚ್ಚಿನ ಲಾಭ ಬರುವುದರ ಜೊತೆಗೆ ಉದ್ಯೋಗ ಸೃಷ್ಟಿಯೂ ಆಗಲಿದೆ.

-ಸಮದ್ ಪಟೇಲ್, ಜಂಟಿ ಕೃಷಿ ನಿರ್ದೇಶಕ

ಈ ಭಾಗದ ಬಹುದಿನಗಳ ಆಶಯ ಇದೀಗ ಈಡೇರುತ್ತಿದ್ದು, ರೊಟ್ಟಿ ಖರೀದಿಯ ಒಪ್ಪಂದಕ್ಕೆ ಹಲವು ಕಂಪೆನಿಗಳು ಆಸಕ್ತಿ ತೋರುತ್ತಿವೆ, ರೊಟ್ಟಿಯು ಅಂತರ್‌ರಾಷ್ಟ್ರೀಯ ಮಾರುಕಟ್ಟೆಗೂ ಶೀಘ್ರದಲ್ಲೇ ಲಗ್ಗೆ ಇಡಲಿದೆ. ಮಹಿಳೆಯರಿಗೆ ಆರ್ಥಿಕ ಬಲ ನೀಡಲಿದೆ.

-ಫೌಝಿಯಾ ತರನ್ನುಮ್, ಜಿಲ್ಲಾಧಿಕಾರಿ


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ದಸ್ತಗೀರ ನದಾಫ್ ಯಳಸಂಗಿ

contributor

Similar News